Mohammad Shami: ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲೇ ಇದೆ; ಮೊಹಮ್ಮದ್ ಶಮಿ ಖಡಕ್ ಮಾತು
Feb 09, 2024 03:21 PM IST
ಸಜ್ದಾ ವಿವಾದಕ್ಕೆ ಸಂಬಂಧಿಸಿ ಮೊಹಮ್ಮದ್ ಶಮಿ ಖಡಕ್ ಮಾತು
- Mohammad Shami : ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲೇ ಇದೆ ಎಂದು ಏಕದಿನ ವಿಶ್ವಕಪ್ ಸಮಯದಲ್ಲಿ ಅನಗತ್ಯ ಆರೋಪ ಮಾಡಿದ್ದ ಪಾಕ್ ಮಾಜಿಗಳಿಗೆ ವೇಗಿ ಮೊಹಮ್ಮದ್ ಶಮಿ ಖಡಕ್ ಆಗಿ ಹೇಳಿದ್ದಾರೆ.
ಏಕದಿನ ವಿಶ್ವಕಪ್ 2023ರ ಟೂರ್ನಿಯ (ODI World Cup 2023) ಅವಧಿಯಲ್ಲಿ ವಿಕೆಟ್ ಪಡೆದ ವೇಳೆ ಸಂಭ್ರಮಿಸಿದ್ದನ್ನು ಸಜ್ದಾ ಸೆಲೆಬ್ರೇಷನ್ ಎಂದು ಟೀಕಿಸಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟರ್ಗಳಿಗೆ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ತಿರುಗೇಟು ನೀಡಿದ್ದಾರೆ. ಅಲ್ಲದೆ, ಪಾಕ್ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿರುವ ವೇಗಿ, ಕ್ರಿಕೆಟ್ ಮೈದಾನ ಮತ್ತು ಸೋಷಿಯಲ್ ಮೀಡಿಯಾವಾಗಲಿ ಪಾಕಿಸ್ತಾನವನ್ನು ನಿಂದಿಸಲು ಮತ್ತು ಎದುರಿಸಲು ನಾನು ಹಿಂಜರಿಯುವುದಿಲ್ಲ. ಇದು ನನ್ನ ರಕ್ತದಲ್ಲೇ ಇದೆ ಎಂದು ಹೇಳಿದ್ದಾರೆ.
ನನ್ನ ರಕ್ತದಲ್ಲೇ ಇದೆ ಎಂದ ಶಮಿ
ಏಕದಿನ ವಿಶ್ವಕಪ್ ಟೂರ್ನಿಯ ನಂತರ ಕ್ರಿಕೆಟ್ ಮೈದಾನಕ್ಕೆ ಇನ್ನೂ ಬಾರದ ಮೊಹಮ್ಮದ್ ಶಮಿ, ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ನಿರೂಪಕರು ಪದೆಪದೇ ಪಾಕಿಸ್ತಾನವನ್ನು ಹೆಚ್ಚು ನಿಂದನೆ ಮಾಡುತ್ತೀರಿ ಎಂದು ಕೇಳಿದ್ದರು. ಇದಕ್ಕೆ ಒಂದು ಕ್ಷಣವೂ ಆಲೋಚಿಸದೆ, ಅದು ನನ್ನ ರಕ್ತದಲ್ಲೇ ಇದೆ (ವೋ ತೋ ಖೂನ್ ಮೇ ಹೈ) ಎಂದು ಖಡಕ್ ಆಗಿ ಹೇಳಿದ್ದಾರೆ.
ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶಮಿ, 7 ಪಂದ್ಯಗಳಲ್ಲಿ 24 ವಿಕೆಟ್ಗಳನ್ನು ಪಡೆದರು. ಪಾದದ ಗಾಯದಿಂದ ಪ್ರಸ್ತುತ ಭಾರತ ತಂಡದಿಂದ ಹೊರಗುಳಿದಿರುವ ಶಮಿ, ಇತ್ತೀಚೆಗೆ ಪಾಕ್ ಮಾಜಿ ಆಟಗಾರರ ವಿರುದ್ಧ ಗುಡುಗಿದ್ದರು. ಇತರರ ಯಶಸ್ಸಿನ ಬಗ್ಗೆ ಜನರು ಏಕೆ ಅಸೂಯೆಪಡುತ್ತಾರೆಂದು ಎಂದು ಅನಗತ್ಯ ಆರೋಪ ಮಾಡಿದ್ದ ಪಾಕ್ ಮಾಜಿಗಳಿಗೆ ತಿರುಗೇಟು ನೀಡಿದ್ದರು. ಅದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಈಗ ಉತ್ತರಿಸಿದ್ದಾರೆ.
ಹಸನ್ ರಾಜಾ ಹೇಳಿದ್ದೇನು?
ವಿಶ್ವಕಪ್ ಅವಧಿಯಲ್ಲಿ ಐಸಿಸಿ, ಬಿಸಿಸಿಐ ಟೀಮ್ ಇಂಡಿಯಾಗೆ ವಿಶೇಷ ಚೆಂಡು ಕೊಡುತ್ತಿದೆ. ಹೀಗಾಗಿ, ಭಾರತೀಯ ಬೌಲರ್ಸ್ ವಿಕೆಟ್ ಪಡೆಯುತ್ತಿದ್ದಾರೆ ಎಂದು ಇಲ್ಲ ಸಲ್ಲದ ಆರೋಪ ಮಾಡಿದ್ದ ಪಾಕ್ ಮಾಜಿ ಆಟಗಾರ ಹಸನ್ ರಾಜಾಗೆ ಈ ಹಿಂದೆ ತಿರುಗೇಟು ನೀಡಿದ್ದರು. ಅವರು (ಹಸನ್) ಇದು ಗಲ್ಲಿ ಕ್ರಿಕೆಟ್ ಎಂದುಕೊಂಡಿದ್ದಾರೆ. ವಿಶ್ವಕಪ್ ಎಂಬುದು ಗೊತ್ತಿಲ್ಲವೇ ಎಂದು ಶಮಿ ತರಾಟೆ ತೆಗೆದುಕೊಂಡಿದ್ದರು.
ಸಜ್ದಾ ವಿವಾದ ತಳ್ಳಿಹಾಕಿ ಶಮಿ
ಮೊಹಮ್ಮದ್ ಶಮಿ ಮೈದಾನದಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದರು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ 5 ವಿಕೆಟ್ ಕಿತ್ತ ನಂತರ ಮೊಣಕಾಲೂರಿ ಕೆಳಗೆ ಎರಡೂ ಕೈಗಳನ್ನು ನೆಲಕ್ಕೆ ತಾಗಿಸಿದ್ದರು. ತಕ್ಷಣವೇ ಆ ಚಿತ್ರವನ್ನು ಸಜ್ದಾ (ಮುಸ್ಲಿಂ ಪ್ರಾರ್ಥನೆ) ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬಗೆಬಗೆಯ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ ವಿವಾದವನ್ನು ತಳ್ಳಿ ಹಾಕಿದ್ದರು.
ಈ ಬಗ್ಗೆ ಮಾತಾಡಿದ್ದ ಶಮಿ, ಟ್ರೋಲಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದರು. ನಾನು ಪ್ರಾರ್ಥನೆ ಮಾಡಬೇಕೆಂದು ಬಯಸಿದರೆ, ನನ್ನನ್ನು ಯಾರೂ ತಡೆಯುವುದಿಲ್ಲ. ನಾನು ಮುಸ್ಲಿಂ ಮತ್ತು ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಸ್ಟಾರ್ ವೇಗಿ ಸ್ಪಷ್ಟಪಡಿಸಿದ್ದರು. ಇದು ವಿವಿಧ ವಲಯಗಳಿಂದ ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಮತ್ತು ನಕಾರಾತ್ಮಕ ಟೀಕೆ ಸೃಷ್ಟಿಯಾದ ಕುರಿತ ಆಜ್ ತಕ್ ನಿರೂಪಕ ಕೇಳಿದ ಪ್ರಶ್ನೆಗೆ ಶಮಿ ಹೀಗೆ ಉತ್ತರಿಸಿದ್ದರು.
ನಾನು ಪ್ರಾರ್ಥಿಸಲು ಬಯಸಿದರೆ, ಯಾರು ನನ್ನನ್ನು ತಡೆಯಬಹುದು? ನಾನು ಯಾರನ್ನೂ ಪ್ರಾರ್ಥಿಸುವುದನ್ನು ತಡೆಯುವುದಿಲ್ಲ. ನನಗೆ ಪ್ರಾರ್ಥನೆ ಮಾಡಬೇಕೆಂದು ಅನಿಸಿದರೆ ನಾನು ಪ್ರಾರ್ಥನೆ ಮಾಡುತ್ತೇನೆ. ಇದರಲ್ಲಿ ಸಮಸ್ಯೆ ಏನಿದೆ? ನಾನು ಮುಸ್ಲಿಂ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅದರಲ್ಲಿ ಸಮಸ್ಯೆ ಏನು? ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿ ಹೇಳಿದ್ದಾರೆ. ಅಲ್ಲದೆ, ತನ್ನ ಸ್ವಂತ ದೇಶದಲ್ಲಿ ಪ್ರಾರ್ಥನೆಗೆ ಅನುಮತಿ ಪಡೆಯುವ ಅಗತ್ಯವನ್ನು ಪ್ರಶ್ನಿಸಿದ್ದರು.