ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ; ಶುಭ್ಮನ್ ಗಿಲ್ ಉಪನಾಯಕ, ಮೊಹಮ್ಮದ್ ಸಿರಾಜ್ ಅಲಭ್ಯ
Jan 18, 2025 03:01 PM IST
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ
- Indian Cricket Team: ಫೆಬ್ರವರಿ 19ರಿಂದ ಆರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. 15 ಸದಸ್ಯರ ತಂಡವನ್ನು ಅಳೆದುತೂಗಿ ಆಯ್ಕೆ ಮಾಡಲಾಗಿದೆ.

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಇದೇ ತಂಡವನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆ ಮಾಡಲಾಗಿದೆ. ನಾಯಕ ರೋಹಿತ್ ಶರ್ಮಾ, ಹೆಡ್ಕೋಚ್ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಂಬೈನಲ್ಲಿ ಮಹತ್ವದ ಸಭೆ ನಡೆಸಿದ ಬಳಿಕ ತಂಡವನ್ನು ಅಂತಿಮಗೊಳಿಸಿದರು. 15 ಸದಸ್ಯರ ತಂಡವನ್ನು ಅಳೆದುತೂಗಿ ಆಯ್ಕೆ ಮಾಡಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಫೆಬ್ರವರಿ 19ರಿಂದ ಶುರುವಾಗುವಮಹತ್ವದ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಆದರೆ ಭಾರತದ ಪಂದ್ಯಗಳು ಮಾತ್ರ ಯುಎಇನಲ್ಲಿ ನಡೆಯಲಿವೆ.
ಶುಭ್ಮನ್ ಗಿಲ್ ಉಪನಾಯಕ, ಬುಮ್ರಾ ಲಭ್ಯವಾದರೂ ಫಿಟ್ನೆಸ್ ಸಮಸ್ಯೆ
ಅಚ್ಚರಿ ಎನ್ನುವಂತೆ ಉಪನಾಯಕನ ಸ್ಥಾನ ಶುಭ್ಮನ್ ಗಿಲ್ (Shubman Gill) ಆಯ್ಕೆಯಾಗಿದ್ದಾರೆ. ಏಕೆಂದರೆ ಈ ಸ್ಥಾನಕ್ಕೆ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೀಗ ಈ ಹಿಂದೆ ಸೀಮಿತ ಓವರ್ಗಳ ತಂಡಕ್ಕೆ ವೈಸ್ ಕ್ಯಾಪ್ಟನ್ ಆಗಿದ್ದ ಗಿಲ್ ಅವರನ್ನೇ ಮಹತ್ವ ಟೂರ್ನಿಗೂ ಮುಂದುವರೆಸಿದ್ದಾರೆ. ಮತ್ತೊಂದೆಡೆ ತಂಡಕ್ಕೆ ಆಯ್ಕೆಯಾಗಿದ್ದರೂ ಜಸ್ಪ್ರೀತ್ ಬುಮ್ರಾ ಇನ್ನೂ ಅನ್ಫಿಟ್ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ಕಣಕ್ಕಿಳಿಯುವುದು ಅನುಮಾನ ಎಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿದ್ದಾರೆ. ಅವರ ಬದಲಿಗೆ ಹರ್ಷಿತ್ ರಾಣಾ ಆಡಲಿದ್ದಾರೆ. ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಆಗಿದ್ದಾರೆ.
ನಿರೀಕ್ಷೆಯಂತೆ ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅವರು ಬ್ಯಾಕಪ್ ಆರಂಭಿಕರಾಗಲಿದ್ದಾರೆ. ಮೊಹಮ್ಮದ್ ಶಮಿ ಐಸಿಸಿ ಏಕದಿನ ವಿಶ್ವಕಪ್ ನಂತರ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಆಡಲಿದ್ದಾರೆ. ಶ್ರೇಯಸ್ ಅಯ್ಯರ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಲ್ರೌಂಡರ್ ಕೋಟಾದಲ್ಲಿ ನಾಲ್ವರು ಸ್ಥಾನ ಪಡೆದಿದ್ದಾರೆ. ಈ ಪೈಕಿ ಒಬ್ಬರು ವೇಗದ ಆಲ್ರೌಂಡರ್. ವೇಗದ ಬೌಲರ್ಗಳಾಗಿ ಬುಮ್ರಾ, ಶಮಿ, ಅರ್ಷದೀಪ್ ಅವಕಾಶ ಪಡೆದಿದ್ದಾರೆ. ಆದರೆ ಮೊಹಮ್ಮದ್ ಸಿರಾಜ್ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇನ್ನು ವಿಜಯ್ ಹಜಾರೆಯಲ್ಲಿ ಅಬ್ಬರಿಸಿದ ಕರುಣ್ ನಾಯರ್ಗೂ ಸ್ಥಾನ ಸಿಕ್ಕಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಫೆಬ್ರವರಿ 20ರಿಂದ ತನ್ನ ಅಭಿಯಾನ ಆರಂಭಿಸಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್. (ಹರ್ಷಿತ್ ರಾಣಾ - ಇಂಗ್ಲೆಂಡ್ ಸರಣಿಗೆ ಆಯ್ಕೆ)