ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕೆಕೆಆರ್ ಮೆಂಟರ್‌ಗೆ ಗಾಳ ಹಾಕಲು ಮುಂದಾದ ಬಿಸಿಸಿಐ; ಆಫರ್ ಒಪ್ತಾರಾ 2011ರ ವಿಶ್ವಕಪ್ ವಿಜೇತ?
May 18, 2024 10:49 AM IST
ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್‌ಗೆ ಗಾಳ ಹಾಕಲು ಮುಂದಾದ ಬಿಸಿಸಿಐ
- ರಾಹುಲ್ ದ್ರಾವಿಡ್ ಅವರಿಂದ ತೆರವಾದ ಬಿಸಿಸಿಐ ಹೆಡ್ ಕೋಚ್ ಸ್ಥಾನಕ್ಕೆ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಸಂಪರ್ಕಿಸಿದೆ. ಆದರೆ, ಸದ್ಯ ಐಪಿಎಲ್‌ನಲ್ಲಿ ಕರ್ತವ್ಯ ನಿರತರಾಗಿರುವ ಗೌತಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಹೆಡ್ ಕೋಚ್ ಹುಡುಕಾಟದಲ್ಲಿದೆ. ಮುಂಬರುವ ಜೂನ್ ತಿಂಗಳಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿಯುತ್ತಿದ್ದಂತೆ ಹಾಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಮುಗಿಯಲಿದೆ. ಅಷ್ಟರಲ್ಲಿ ನೂತನ ಕೋಚ್ ನೇಮಕವಾಗಬೇಕಿದೆ. ಹೀಗಾಗಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನ ವಹಿಸಿಕೊಳ್ಳಲು ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಿದೆ. ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ನೇಮಿಸಲು ಬಿಸಿಸಿಐ ಗೌತಮ್ ಗಂಭೀರ್ ಅವರ ಮೇಲೆ ಇಚ್ಛೆ ತೋರಿದೆ.
ಸದ್ಯ 17ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಗೌತಮ್ ಗಂಭೀರ್ ಬ್ಯುಸಿ ಆಗಿದ್ದಾರೆ. ಮೊದಲ ತಂಡವಾಗಿ ಪ್ಲೇಆಫ್ ಹಂತಕ್ಕೆ ಲಗ್ಗೆ ಹಾಕಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗಂಭೀರ್ ಮೆಂಟರ್ ಆಗಿದ್ದಾರೆ. ಈ ನಡುವೆ, ಬಿಸಿಸಿಐ ಹೆಡ್ ಕೋಚ್ ಹುದ್ದೆ ಅಲಂಕರಿಸಲು ಗೌತಿ ಅವರ ಆಸಕ್ತಿ ಕುರಿತು ತಿಳಿಯಲು ಬಿಸಿಸಿಐ ಅವರನ್ನು ಸಂಪರ್ಕಿಸಿದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಕೆಕೆಆರ್ ತಂಡವು ಈಗಾಗಲೇ ಐಪಿಎಲ್ ಪ್ಲೇಆಪ್ ಪ್ರವೇಶಿಸಿದೆ. ಟೂರ್ನಿಯು ಮೇ 26ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಪಂದ್ಯಾವಳಿಯಲ್ಲಿ ಕೆಕೆಆರ್ ತಂಡವು ಅಭಿಯಾನ ಅಂತ್ಯಗೊಳಿಸಿದ ನಂತರವೇ, ಈ ಕುರಿತು ಹೆಚ್ಚಿನ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸತತ ಎರಡನೇ ಅವಧಿಗೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರು. ಹೀಗಾಗಿ ಮತ್ತೊಂದು ಅವಧಿಗೆ ಅವರು ಅಧಿಕಾರ ವಹಿಸಲು ಇಚ್ಛೆ ವ್ಯಕ್ತಪಡಿಸಿಲ್ಲ ಎಂಬ ನಿರ್ಧಾರವನ್ನು ಈಗಾಗಲೇ ಬಿಸಿಸಿಐಗೆ ತಿಳಿಸಿದ್ದಾರೆ. ದ್ರಾವಿಡ್ ನಂತರ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದ್ದ ವಿವಿಎಸ್ ಲಕ್ಷ್ಮಣ್ ಕೂಡಾ, ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದರು.
ಅರ್ಜಿ ಸಲ್ಲಿಕೆಗೆ ಮೇ 27 ಕೊನೆಯ ದಿನ
ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಈಗಾಗಾಲೇ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಹಲವು ದಿಗ್ಗಜ ಆಟಗಾರರು ಅರ್ಜಿ ಸಲ್ಲಿಕೆ ಮಾಡಿರುವ ನಿರೀಕ್ಷೆ ಇದೆ. ಅಲ್ಲದೆ ಬಿಸಿಸಿಐ ಕೂಡಾ ಕೆಲವೊಬ್ಬರು ಆಟಗಾರರ ಮೇಲೆ ಆಸಕ್ತಿ ಹೊಂದಿದೆ ಎನ್ನುವ ಸುಳಿವು ಸಿಕ್ಕಿದೆ. ಅರ್ಜಿ ಸಲ್ಲಿಕೆಗೆ ಮೇ 27ರವರೆಗೆ ಅವಕಾಶವಿದೆ. ಅಷ್ಟರಲ್ಲಿ ಮಹತ್ವದ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ. ಇತ್ತ, ಗಂಭೀರ್ ಅವರನ್ನು ಬಿಸಿಸಿಐ ಸಂಪರ್ಕಿಸಿದ ಕುರಿತಾಗಿ, ಗೌತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಂಭಾವ್ಯ ವ್ಯಕ್ತಿಗಳ ಪಟ್ಟಿಯಲ್ಲಿ ಗಂಭಿರ್ ಇರುವುದು ಸತ್ಯ.
ಗೌತಮ್ ಗಂಭೀರ್ ಅವರಿಗೆ ಅಂತಾರಾಷ್ಟ್ರೀಯ ಅಥವಾ ದೇಶೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಿದ ಅನುಭವ ಇಲ್ಲ. ಆದರೆ, ಎರಡು ಐಪಿಎಲ್ ತಂಡಗಳಿಗೆ ಮೆಂಟರ್ ಆಗಿ ಕರ್ತವ್ಯ ವಹಿಸಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನ 2022 ಹಾಗೂ 2023ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗಂಭೀರ್, ಈ ಎರಡೂ ಸೀಸನ್‌ಗಳಲ್ಲಿ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸುವಲಿ ನೆರವಾಗಿದ್ದರು. ಈ ಬಾರಿ ಕೆಕೆಆರ್ ಮೆಂಟರ್ ಆಗಿ ಮತ್ತೆ ತಮ್ಮ ಹಳೆಯ ತಂಡವನ್ನು ಸೇರಿಕೊಂಡ ಅವರು, ತಂಡದ ಯಶಸ್ವಿ ಪ್ರದರ್ಶನದಲ್ಲಿ ಪಾಲು ಪಡೆದಿದ್ದಾರೆ.
ಹೆಡ್ ಕೋಚ್ ಆಗಲು ಮಾನದಂಡಗಳೇನು
ಬಿಸಿಸಿಐ ನಿಯಮಗಳ ಪ್ರಕಾರ, ಬಿಸಿಸಿಐ ಹೆಡ್ ಕೋಚ್ ಆಗುವವರು ಕನಿಷ್ಠ 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳಲ್ಲಿ ಆಡಿರಬೇಕು. 2007 ಮತ್ತು 2011ರಲ್ಲಿ ಭಾರತ ತಂಡದ ಪರ ಆಡಿದ ಎರಡು ವಿಶ್ವಕಪ್ ಗೆದ್ದಿರುವ ಗಂಭೀರ್, ಈ ಮಾನದಂಡಗಳನ್ನು ಪೂರೈಸಿದ್ದಾರೆ. ನಾಯಕನಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ ಅನುಭವ ಅವರಿಗಿದೆ. ಇವರ ನಾಯಕತ್ವದಲ್ಲಿ ತಂಡವು ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)