ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ 4ನೇ ದಿನದಾಟಕ್ಕೆ ಶುಭ್ಮನ್ ಗಿಲ್ ಅಲಭ್ಯ; ಭಾರತಕ್ಕೆ ಸತತ ಗಾಯದ ಹೊಡೆತ
Feb 05, 2024 11:30 AM IST
ಇಂಗ್ಲೆಂಡ್ ವಿರುದ್ಧದ 4ನೇ ದಿನದಾಟಕ್ಕೆ ಶುಭ್ಮನ್ ಗಿಲ್ ಅಲಭ್ಯ
- Shubman Gill Injury: ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಅಂತಿಮ ಇನ್ನಿಂಗ್ಸ್‌ನಲ್ಲಿ ಶುಭ್ಮನ್ ಗಿಲ್ ಭಾರತದ ಪರ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಿಲ್ಲ. ಗಿಲ್ ಗಾಯದ ಕುರಿತು ಬಿಸಿಸಿಐ ಅಪ್ಡೇಟ್ ನೀಡಿದೆ.
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ (India vs England 2nd Test) ಪಂದ್ಯದ 4ನೇ ದಿನದಂದು ಭಾರತ ತಂಡವು ಶುಭ್ಮನ್ ಗಿಲ್ (Shubman Gill) ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಗಿಲ್, ಫೆಬ್ರವರಿ 05ರ ಸೋಮವಾರ ನಾಲ್ಕನೇ ದಿನದಾಟದ ಆರಂಭಕ್ಕೂ ಮುಂಚಿತವಾಗಿ ಗಾಯಕ್ಕೆ ಒಳಗಾಗಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಎರಡನೇ ದಿನ ಫೀಲ್ಡಿಂಗ್ ಮಾಡುವಾಗ ಗಿಲ್ ಅವರ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅವರು ಮೈದಾನಕ್ಕಿಳಿಯಲಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ, “2ನೇ ದಿನ ಫೀಲ್ಡಿಂಗ್ ಮಾಡುವಾಗ ಶುಬ್ಮನ್ ಗಿಲ್ ಅವರ ಬಲ ತೋರುಬೆರಳಿಗೆ ಗಾಯವಾಗಿತ್ತು. ಹೀಗಾಗಿ ಅವರು ಇಂದು ಮೈದಾನಕ್ಕಿಳಿಯುವುದಿಲ್ಲ,” ಎಂದು ತಿಳಿಸಿದೆ.
ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಲ್ಲದ ಭಾರತ ತಂಡವನ್ನು ನೋಡುವುದೇ ಕಷ್ಟ ಕಷ್ಟ!
ಸದ್ಯ, ಗಿಲ್ ಗಾಯದ ತೀವ್ರತೆ ಕುರಿತು ಸ್ಪಷ್ಟ ಮಾಹಿತಿಯನ್ನು ಕ್ರಿಕೆಟ್ ಮಂಡಳಿ ನೀಡಿಲ್ಲ. ಮೇಲ್ನೋಟಕ್ಕೆ ಗಾಯವು ಗಂಭೀರ ಸ್ವರೂಪ ಪಡೆದಿರುವ ಸಾಧ್ಯತೆ ಇಲ್ಲ. ಏಕೆಂದರೆ, ಎರಡನೇ ದಿನದಾಟದ ವೇಳೆ ಗಾಯವಾದರೂ, 3ನೇ ದಿನದಂದು ಬ್ಯಾಟಿಂಗ್ ಮಾಡಿದ್ದ ಗಿಲ್ ನಿರಾಯಾಸವಾಗಿ ಬ್ಯಾಟ್ ಬೀಸಿದ್ದರು. ಯಾವುದೇ ಸಮಸ್ಯೆಗಳನ್ನು ಎದುರಿಸದೆ ಅವರು ತಮ್ಮ 3ನೇ ಟೆಸ್ಟ್ ಶತಕವನ್ನು ಕೂಡಾ ಸಿಡಿಸಿದರು.
ಭಾರತಕ್ಕೆ ಸತತ ಗಾಯಗಳ ಹೊಡೆತ
ಗಿಲ್ ಗಾಯವು ಭಾರತ ತಂಡವನ್ನು ತೀರಾ ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಅವರ ಅಲಭ್ಯತೆಯಿಂದ ತಂಡದ ಬಳಲುತ್ತಿದೆ. ಈ ನಡುವೆ ಗಿಲ್ ಅಲಭ್ಯತೆ ತಂಡಕ್ಕೆ ಮತ್ತಷ್ಟು ಸಂಕಟಕ್ಕೆ ತಳ್ಳುವ ಸಾಧ್ಯತೆ ಇದೆ. ಫೆಬ್ರವರಿ 15ರಿಂದ ಆರಂಭವಾಗಲಿರುವ ರಾಜ್‌ಕೋಟ್ ಟೆಸ್ಟ್ ಪಂದ್ಯಕ್ಕೆ ಕನ್ನಡಿಗ ಕೆಎಲ್ ರಾಹುಲ್ ಮರಳುವ ಸಾಧ್ಯತೆಯಿದೆ. ಆದರೆ, ಜಡೇಜಾ ಮರಳುವಿಕೆ ಬಹುತೇಕ ಕಷ್ಟ. ಸತತ 11 ತಿಂಗಳು ಶತಕವಿಲ್ಲದೆ ಫಾರ್ಮ್‌ಗಾಗಿ ಪರದಾಡುತ್ತಿದ್ದ ಗಿಲ್ ಕೊನೆಗೂ ಮೂರಂಕಿ ಮೊತ್ತ ಗಳಿಸಿದ್ದಾರೆ.
ಇದನ್ನೂ ಓದಿ | ಡಬ್ಲ್ಯುಟಿಸಿಯಲ್ಲಿ ಅಧಿಕ ರನ್; ಕಳಪೆ ಪ್ರದರ್ಶನದ ನಡುವೆಯೂ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ
ಇದೇ ವೇಳೆ ಸ್ಲಿಪ್ ಭಾಗದಲ್ಲಿ ಗಿಲ್ ಅವರ ಉಪಸ್ಥಿತಿಯನ್ನು ಭಾರತ ಕಳೆದುಕೊಳ್ಳುತ್ತಿದೆ. ಆ ಸ್ಥಾನದಲ್ಲಿ ತಂಡದ ಅತ್ಯುತ್ತಮ ಫೀಲ್ಡರ್ ಆಗಿದ್ದ ಗಿಲ್ ಆಗಿದ್ದಾರೆ. ಅವರು 21 ಟೆಸ್ಟ್ ಪಂದ್ಯಗಳಲ್ಲಿ 15 ಕ್ಯಾಚ್ ಪಡೆದಿದ್ದಾರೆ.
ಇದನ್ನೂ ಓದಿ | 11 ತಿಂಗಳ ನಂತರ ಶುಭ್ಮನ್ ಗಿಲ್ ಶತಕ; ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕ್ಲಬ್ ಸೇರಿದ ಪ್ರಿನ್ಸ್
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ತಮ್ಮ ಮೂರನೇ ಟೆಸ್ಟ್ ಶತಕ ಸಿಡಿಸಿ ಗಿಲ್ ಸಂಭ್ರಮಿಸಿದ್ದಾರೆ. 132 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ ಅವರು 100ರ ಗಡಿ ದಾಟಿದರು. ಆ ಮೂಲಕ 10 ತಿಂಗಳು 26 ದಿನಗಳ ನಂತರ ಮೂರಂಕಿ ಗಡಿ ದಾಟಿದರು. ಇದು ಇಂಗ್ಲೆಂಡ್ ವಿರುದ್ಧ ಗಿಲ್ ಸಿಡಿಸಿದ ಚೊಚ್ಚಲ ಶತಕವೂ ಆಗಿದೆ. ಅಂತಿಮವಾಗಿ 147 ಎಸೆತಗಳನ್ನು ಎದುರಿಸಿದ ಗಿಲ್ 11 ಬೌಂಡರಿ, 2 ಸಿಕ್ಸರ್ ಸಹಿತ 104 ರನ್ ಗಳಿಸಿ ಶೋಯೆಬ್ ಬಶೀರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
(This copy first appeared in Hindustan Times Kannada website. To read more like this please logon to kannada.hindustantime.com)