IND vs ENG Test: ತಂಡಕ್ಕೆ ಮರಳುವ ಕುರಿತು ವಿರಾಟ್ ಕೊಹ್ಲಿ ಈವರೆಗೆ ಏನೂ ತಿಳಿಸಿಲ್ಲ; ಬಿಸಿಸಿಐ ಅಧಿಕಾರಿ ಹೊಸ ಟ್ವಿಸ್ಟ್
Feb 08, 2024 02:37 PM IST
ತಂಡಕ್ಕೆ ಮರಳುವ ಕುರಿತು ವಿರಾಟ್ ಕೊಹ್ಲಿ ಈವರೆಗೆ ಏನೂ ತಿಳಿಸಿಲ್ಲ
- Virat Kohli: ವಿರಾಟ್ ಕೊಹ್ಲಿ ತಮ್ಮ ಲಭ್ಯತೆಯ ಬಗ್ಗೆ ಬಿಸಿಸಿಐ ಅಥವಾ ಟೀಮ್ ಮ್ಯಾನೇಜ್‌ಮೆಂಟ್‌ಗೆ ಇನ್ನೂ ಏನೂ ತಿಳಿಸಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಆಡುವುದು ಅನುಮಾನವಾಗಿದೆ.
ಇಂಗ್ಲೆಂಡ್ ವಿರುದ್ಧದ ಮುಂಬರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ (Virat Kohli) ಆಡುವ ಕುರಿತು ಇನ್ನೂ ಸ್ಪಷ್ಟನೆ ಇಲ್ಲ. ಅದರಲ್ಲೂ ರಾಜ್‌ಕೋಟ್ ಹಾಗೂ ರಾಂಚಿಯಲ್ಲಿ ನಡೆಯಲಿರುವ ಮೂರು ಹಾಗೂ ನಾಲ್ಕನೇ ಟೆಸ್ಟ್ ಪಂದ್ಯಗಳಲ್ಲಿಯೂ ಅವರು ಆಡದೇ ಇರುವುದು ಬಹುತೇಕ ಖಚಿತವಾಗಿದೆ. ಮುಂಬರುವ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಇನ್ನೂ ಬಿಸಿಸಿಐ ಅಂತಿಮಗೊಳಿಸಿಲ್ಲ. ಗುರುವಾರ ಸಭೆ ಸೇರಲಿರುವ ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆದಾರರು, ತಂಡವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಆದರೆ, ವಿರಾಟ್ ಕೊಹ್ಲಿ ತಂಡ ಸೇರಿಕೊಳ್ಳುವ ಭರವಸೆಯಲ್ಲಿರುವ ಕ್ರಿಕೆಟ್ ಮಂಡಳಿಯು ಅವರ ಸ್ಪಷ್ಟನೆಗಾಗಿ ಕಾಯುತ್ತಿದೆ.
ವಿರಾಟ್ ಕೊಹ್ಲಿ ತಮ್ಮ ಲಭ್ಯತೆ ಬಗ್ಗೆ ಬಿಸಿಸಿಐಗೆ ಇನ್ನೂ ಸ್ಪಷ್ಟನೆ ನೀಡಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಕೊಹ್ಲಿ ಇನ್ನೂ ಮಂಡಳಿ ಅಥವಾ ತಂಡದ ಮ್ಯಾನೇಜ್‌ಮೆಂಟ್‌ಗೆ ಏನನ್ನೂ ತಿಳಿಸಿಲ್ಲ. ಆದರೆ ಅವರು ಆಯ್ಕೆಗೆ ಲಭ್ಯವಾದಾಗಲೆಲ್ಲಾ ಅವರನ್ನು ನೇರವಾಗಿ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಆಂಗ್ಲರ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಹೊರಗುಳಿದಿದ್ದರು. ಜನವರಿ 22ರಂದು ಹೈದರಾಬಾದ್‌ನಲ್ಲಿ ಆರಂಭವಾದ ಸರಣಿಯ ಮೊದಲ ಪಂದ್ಯಕ್ಕೂ ಮೂರು ದಿನ ಮುಂಚಿತವಾಗಿ ಆರ್‌ಸಿಬಿ ಆಟಗಾರ ತಂಡದಿಂದ ಹೊರ ನಡೆದರು. ಟೀಮ್ ಇಂಡಿಯಾ ಮಾಜಿ ನಾಯಕನ ನಿರ್ಗಮನದ ಬಗ್ಗೆ ಗೌಪ್ಯತೆ ಕಾಪಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಾಧ್ಯಮಗಳು ಮತ್ತು ಅಭಿಮಾನಿಗಳಲ್ಲಿ ವಿನಂತಿಸಿತು.
ಇದನ್ನೂ ಓದಿ | ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ; ಟೆಸ್ಟ್‌ನಿಂದ ವಿರಾಟ್ ಹಿಂದೆ ಸರಿಯಲು ಕಾರಣ ಬಹಿರಂಗಪಡಿಸಿದ ಎಬಿಡಿ
ವಿರಾಟ್ ಅನುಪಸ್ಥಿತಿಯಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲು ಹಾಗೂ ಗೆಲುವನ್ನು ಅನುಭವಿಸಿದೆ. ಸದ್ಯ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಕೊಹ್ಲಿ ಅನುಪಸ್ಥಿತಿಗೆ ಸಂಭಾವ್ಯ ಕಾರಣಗಳ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಈ ನಡುವೆ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಹಾಗೂ ಕೊಹ್ಲಿ ಸ್ನೇಹಿತ ಎಬಿ ಡಿವಿಲಿಯರ್ಸ್ ಮಾಹಿತಿಯೊಂದನ್ನು ನೀಡಿದ್ದಾರೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಆರ್‌ಸಿಬಿ ಮಾಜಿ ಕ್ರಿಕೆಟಿಗ ಹೇಳಿದ್ದಾರೆ
ಎಬಿ ಡಿವಿಲಿಯರ್ಸ್ ಹೇಳಿದ್ದೇನು?
“ಅವರು ಚೆನ್ನಾಗಿದ್ದಾರೆ ಎಂದು ನನಗೆ ಗೊತ್ತು . ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅದಕ್ಕಾಗಿಯೇ ಅವರು ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ನಾನು ಬೇರೆ ಏನನ್ನೂ ಖಚಿತಪಡಿಸಲು ಹೋಗುತ್ತಿಲ್ಲ. ಅವರು ಸಂತೋಷವಾಗಿದ್ದಾರೆ” ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ | ಭಾರತೀಯ ಕ್ರಿಕೆಟ್ನ ಅತ್ಯುತ್ತಮ ನಾಯಕ ಯಾರು; ಕೊಹ್ಲಿ-ರೋಹಿತ್ರನ್ನು ಕೈಬಿಟ್ಟು ಅಚ್ಚರಿ ಉತ್ತರ ನೀಡಿದ ಮೊಹಮ್ಮದ್ ಶಮಿ
ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಕುಟುಂಬದೊಂದಿಗೆ ಸಮಯ ಕಳೆಯಬೇಕಾದ ದಿನಗಳು. ಅವರಿಗೆ ಈ ಸಮಯ ತುಂಬಾ ಮುಖ್ಯ. ಹೆಚ್ಚಿನ ಎಲ್ಲಾ ಜನರ ಮೊದಲ ಆದ್ಯತೆಯೇ ಕುಟುಂಬ ಎಂದು ನಾನು ಭಾವಿಸುತ್ತೇನೆ ಎಂದು ಎಬಿಡಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಇನ್ನೂ ಏನ್ನೂ ತಿಳಿಸಿಲ್ಲ ಎಂದ ಬಿಸಿಸಿಐ ಅಧಿಕಾರಿ
ಕೊಹ್ಲಿ ಮೂರು ಮತ್ತು ನಾಲ್ಕನೇ ಟೆಸ್ಟ್‌ಗೆ ಅಲಭ್ಯರಾಗಲಿದ್ದಾರೆ. ಅಲ್ಲದೆ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟೆಸ್ಟ್ ವೇಳೆಯೂ ತಂಡಕ್ಕೆ ಮರಳುವುದು ಅನುಮಾನ ಎಂದು ಇಎಸ್‌ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಈ ನಡುವೆ, ಕೊಹ್ಲಿ ತಮ್ಮ ಲಭ್ಯತೆ ಕುರಿತು ಯಾವುದೇ ರೀತಿಯ ದೃಢವಾದ ಮಾಹಿತಿ ನೀಡಿಲ್ಲ ಎಂದು ಬಿಸಿಸಿಐ ಅಧಿಕಾರಿಯನ್ನು ಉಲ್ಲೇಖಿಸಿ ಗುರುವಾರ ಬೆಳಿಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ; 5ನೇ ಪಂದ್ಯಕ್ಕೂ ಮರಳೋದು ಅನುಮಾನ
“ಭಾರತ ತಂಡಕ್ಕೆ ಯಾವಾಗ ಮರಳಬೇಕು ಎಂಬುದನ್ನು ವಿರಾಟ್ ಅವರೇ ನಿರ್ಧರಿಸುತ್ತಾರೆ. ಅವರು ಇಲ್ಲಿಯವರೆಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅವರು ಆಡಲು ನಿರ್ಧರಿಸಿದಾಗಲೆಲ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು” ಎಂದು ಬಿಸಿಸಿಐ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)