ಐಪಿಎಲ್ ವೇಳೆ ಭದ್ರತೆ ದಾಟಿ ಮೈದಾನಕ್ಕೆ ನುಗ್ಗಿದರೆ ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ; ಬೆಂಗಳೂರು ಪೊಲೀಸರ ಎಚ್ಚರಿಕೆ
Published May 17, 2025 08:06 PM IST
ಮೈದಾನಕ್ಕೆ ನುಗ್ಗಿದರೆ ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ; ಬೆಂಗಳೂರು ಪೊಲೀಸರ ಎಚ್ಚರಿಕೆ
- ಆರ್‌ಸಿಬಿ vs ಕೆಕೆಆರ್ ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ಮೈದಾನಕ್ಕೆ ನುಗ್ಗುವುದಾಗಿ ಸವಾಲು ಹಾಕಿದ್ದ ವಿಡಿಯೋವನ್ನು ತಮ್ಮದೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಇಬ್ಬರನ್ನು, ಸವಾಲು ಪೂರೈಸುವ ಮೊದಲೇ ಪೊಲೀಸರು ಕ್ಯಾಚ್ ಹಾಕಿ ಬುದ್ದಿ ಹೇಳಿ ಕಳಿಸಿದ್ದಾರೆ.

ಐಪಿಎಲ್ ಸೇರಿದಂತೆ ಕ್ರಿಕೆಟ್ ಪಂದ್ಯ ನಡೆಯುವ ಸಮಯದಲ್ಲಿ ಕ್ರಿಕೆಟಿಗರ ಅಭಿಮಾನಿಗಳು ಮೈದಾನಕ್ಕೆ ನುಗ್ಗುವುದು ಹೊಸದೇನಲ್ಲ. ಈ ಹಿಂದೆ ಹಲವು ಬಾರಿ ಇಂಥಾ ಪ್ರಸಂಗಗಳು ನಡೆದಿದೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿಯಂತಾ ಆಟಗಾರರು ಹಲವು ಬಾರಿ ಇಂಥಾ ಸನ್ನಿವೇಶ ಎದುರಾಗಿದೆ. ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಆಟಗಾರರನ್ನು ಅಪ್ಪಿಕೊಂಡು ಖುಷಿಪಡುತ್ತಾರೆ. ಇದು ಭದ್ರತೆಯನ್ನು ಉಲ್ಲಂಘಿಸಿ ಅಭಿಮಾನಿಗಳು ಮಾಡುವ ಕೆಲಸ. ಈ ರೀತಿ ಭದ್ರತಾ ನಿಯಮ ಉಲ್ಲಂಘನೆಗೆ ಅವಕಾಶವಿಲ್ಲ. ಆದರೂ, ಭಂಡಧೈರ್ಯ ಮಾಡಿ ಮೈದಾನಕ್ಕೆ ನುಗ್ಗುತ್ತಾರೆ. ಆನಂತರ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಪಂದ್ಯದ ಸಮಯದಲ್ಲಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಳ್ಳುವುದಾಗಿ ಸವಾಲು ಹಾಕಿದ್ದ ವ್ಯಕ್ತಿಯೊಬ್ಬನನ್ನು, ಪೊಲೀಸರು ಠಾಣೆಗೆ ಕರೆತಂದು ಬುದ್ದಿ ಹೇಳಿ ಕಳಿಸಿದ್ದಾರೆ.
"ನನ್ನಿಂದ ತಪ್ಪಾಗಿದೆ. ನನ್ನನ್ನು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್‌ಗೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ನಾನು ಅವರಲ್ಲಿ ಕ್ಷಮೆ ಕೇಳಿದ್ದೇನೆ. ಮುಂದೆ ಯಾವತ್ತಿಗೂ ಇಂಥಾ ತಪ್ಪು ಮಾಡಲ್ಲ" ಎಂದು ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಬಯಸಿದ್ದ ವ್ಯಕ್ತಿ (kabzaa sharan), ಬೆಂಗಳೂರು ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕ್ಷಮೆ ಯಾಚಿಸಿದ್ದಾನೆ. ಈತನಿಗೆ ಸಾಥ್ ಕೊಟ್ಟ ಮತ್ತೊಬ್ಬ ವ್ಯಕ್ತಿಯನ್ನು ಕೂಡಾ ಠಾಣೆಗೆ ಕರೆತಂದಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ kabzaa sharan ಹೆಸರಿನ ಐಡಿ ಹೊಂದಿರುವ ಶರಣಬಸಪ್ಪ ಹಾಗೂ ಬಾಲಾಜಿ ಎಂಬ ವ್ಯಕ್ತಿಗಳನ್ನು ಪೊಲೀಸರು ಕ್ಯಾಚ್ ಹಾಕಿಕೊಂಡಿದ್ದಾರೆ. ಇವರಿಬ್ಬರೂ, ಆರ್‌ಸಿಬಿ vs ಕೆಕೆಆರ್ ನಡುವಿನ ಪಂದ್ಯದ ಸಮಯದಲ್ಲಿ ಮೈದಾನಕ್ಕೆ ನುಗ್ಗುವುದಾಗಿ ಸವಾಲು ಹಾಕಿದ ವಿಡಿಯೋವನ್ನು ತಮ್ಮದೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಅದು ಖಾಕಿ ಕಣ್ಣಿಗೆ ಬಿದ್ದಿದ್ದು, ಸವಾಲು ಪೂರೈಸುವ ಮೊದಲೇ ಪೊಲೀಸರು ಕ್ಯಾಚ್ ಹಾಕಿ ಬುದ್ದಿ ಹೇಳಿ ಕಳಿಸಿದ್ದಾರೆ. ಅಲ್ಲದೆ ಈ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ.
ಕ್ಯಾಚ್ ಹಿಡಿಯುವುದರಲ್ಲಿ ಖಾಕಿ ಪಡೆ ಫೀಲ್ಡರ್‌ಗಳು ಎತ್ತಿದ ಕೈ
ಈ ಕುರಿತ ವಿಡಿಯೋವನ್ನು ಬೆಂಗಳೂರು ಪೊಲೀಸರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. “ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮುನ್ನ ಎಚ್ಚರ! ಐಪಿಎಲ್ ಪಂದ್ಯದ ವೇಳೆ ಭದ್ರತೆ ದಾಟಿ ಮೈದಾನಕ್ಕೆ ನುಗ್ಗುವುದು ಪವರ್ ಪ್ಲೇ ಆಟವಲ್ಲ. ಹೀಗೆ ಮಾಡಿದರೆ ನೀವು ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ! ಮೈದಾನದ ಒಳಗೆ ಹಾಗೂ ಹೊರಗೆ ಕ್ಯಾಚ್ ಹಿಡಿಯುವುದರಲ್ಲಿ ನಮ್ಮ ಖಾಕಿ ಪಡೆಯ ಫೀಲ್ಡರ್‌ಗಳು ಎತ್ತಿದ ಕೈ!” ಎಂದು ತುಸು ಹಾಸ್ಯಾಸ್ಪದವಾಗಿ ಬರೆದುಕೊಂಡಿದ್ದಾರೆ.