ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಹೆಚ್ಚಿದ ಆತಂಕ; ಪ್ಲೇಆಫ್ ಕನಸಿಗೆ ವಿಲನ್ ಆಗುತ್ತಾ ಮಳೆ?
May 11, 2024 10:38 PM IST
ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಹೆಚ್ಚಿದ ಆತಂಕ; ಪ್ಲೇಆಫ್ ಕನಸಿಗೆ ವಿಲನ್ ಆಗುತ್ತಾ ಮಳೆ?
- Bengaluru Weather Report : ಬೆಂಗಳೂರಿನಲ್ಲಿ ಮಳೆ ಸುರಿಯುವ ಸಾಧ್ಯತೆ ಇರುವ ಕಾರಣ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ಆತಂಕಕ್ಕೆ ಒಳಗಾಗಿದೆ.
ಮೇ 12ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪ್ಲೇಆಫ್ ದೃಷ್ಟಿಯಿಂದ ನಿರ್ಣಾಯಕ ಎನಿಸಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಆತಂಕ ಹೆಚ್ಚಿಸಿದೆ. ಏಕೆಂದರೆ ಮಹತ್ವದ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವ ನಿರೀಕ್ಷೆ ಇದೆ.
ಡೆಲ್ಲಿ ತಂಡವನ್ನು ಮಣಿಸಿದರೆ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವ ಅವಕಾಶ ಮತ್ತಷ್ಟು ವಿಸ್ತರಿಸಿಕೊಳ್ಳಲಿದೆ. ಆದರೆ, ಬೆಂಗಳೂರು ಮತ್ತು ತಂಡದ ಅಭಿಮಾನಿಗಳ ಕನಸಿಗೆ ಮಳೆಯೇ ವಿಲನ್ ಆಗುವ ಸಾಧ್ಯತೆ ಇದೆ. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅದರ ಆರ್ಭಟ ಇನ್ನೂ 4-5 ದಿನಗಳ ಕಾಲವೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಹವಾಮಾನ ಇಲಾಖೆ ಹೇಳಿದ್ದೇನು?
ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಇರಲಿದೆ. ಹಗಲೊತ್ತು ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇರಲಿದ್ದರೆ, ಸಂಜೆ ಮತ್ತು ರಾತ್ರಿ ವೇಳೆ ಜೋರು ಮಳೆ ಸುರಿಯಾಗಲಿದೆ ಎಂದು ಹವಾಮಾನ ಇಲಾಖೆ, ಬೆಂಗಳೂರಿನ ಜನತೆಗೆ ಎಚ್ಚರಿಕೆ ನೀಡಿದೆ. ಈ ಮುಂದಿನ ದಿನಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ 50 ರಿಂದ 70 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಹಾಗಾಗಿ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ, ಹಾಸನಗಲ್ಲಿ ಭಾರಿ ಮಳೆಯಾಗುವ ಸೂಚನೆ ಇದ್ದು ಮೇ 12ರಂದು ನಡೆಯುವ ಪಂದ್ಯ ಜರುಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಮಳೆ ಬಂದರೆ ಆರ್ಸಿಬಿ ಕಥೆ ಏನು?
ಒಂದು ವೇಳೆ ನಿರ್ಣಾಯಕ ಪಂದ್ಯ ಮಳೆ ಕಾರಣದಿಂದ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಆದರಿದು ಆರ್ಸಿಬಿಗೆ ಭಾರಿ ಹಿನ್ನಡೆ ತಂದೊಡ್ಡಲಿದೆ. ಏಕೆಂದರೆ ಪ್ಲೇಆಫ್ ಸಾಧ್ಯತೆಯಿಂದ ಫಾಫ್ ಪಡೆ ವಂಚಿತವಾದರೆ, ಡೆಲ್ಲಿಗೆ ಲಾಭ ತಂದುಕೊಡಲಿದೆ. ಆದರೂ ಬೆಂಗಳೂರು ತಂಡಕ್ಕಿರಲಿದೆ ಕೊನೆಯ ಅವಕಾಶ. ಉಳಿದೊಂದು ಪಂದ್ಯ ಆರ್ಸಿಬಿ ಗೆಲ್ಲಬೇಕು.
ಚೆನ್ನೈ ಮತ್ತು ಗುಜರಾತ್ ಎಲ್ಲಾ ಪಂದ್ಯ ಸೋಲಬೇಕು. ಮತ್ತೊಂದೆಡೆ ಡೆಲ್ಲಿ ಮತ್ತು ಲಕ್ನೋ ಪಂದ್ಯ ಡ್ರಾ ಸಾಧಿಸಬೇಕು. ಆಗ ಗರಿಷ್ಠ ಡಿಸಿ, ಲಕ್ನೋ, ಆರ್ಸಿಬಿ ತಲಾ 13 ಅಂಕ ಪಡೆಯಲಿವೆ. ಆದರೆ, ಈ ಮೂರು ತಂಡಗಳ ಪೈಕಿ ಉತ್ತಮ ನೆಟ್ರನ್ರೇಟ್ ಕಾಯ್ದುಕೊಂಡ ತಂಡವು ನಾಲ್ಕನೇ ಸ್ಥಾನ ಪಡೆಯಲಿದೆ. ಹೀಗೆ ಸಂಭವಿಸಬೇಕೆಂದರೆ ಪವಾಡ ನಡೆಯಬೇಕು. ಒಂದು ವೇಳೆ ಗೆದ್ದರೆ ಪ್ಲೇಆಫ್ ಚಿತ್ರಣ ಬದಲಾಗಲಿದೆ.
ಆರ್ಸಿಬಿ ಪ್ಲೇಆಫ್ ಸಾಧ್ಯತೆ ಏನಿದೆ?
ಪ್ರಸ್ತುತ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಉತ್ತಮ ಅವಕಾಶ ಇದೆ. 12 ಪಂದ್ಯಗಳಲ್ಲಿ 5 ಗೆಲುವು, 7 ಸೋತಿರುವ ಆರ್ಸಿಬಿ, ತನ್ನ ಎರಡೂ ಪಂದ್ಯಗಳಲ್ಲಿ (ಡೆಲ್ಲಿ ಮತ್ತು ಸಿಎಸ್ಕೆ) ಗೆದ್ದರೆ ಗರಿಷ್ಠ 14 ಅಂಕ ಪಡೆದು ಅಗ್ರ-4ರಲ್ಲಿ ಅವಕಾಶ ಪಡೆಯಬಹುದು. ಆದರೆ ಸಿಎಸ್ಕೆ ಮತ್ತು ಜಿಟಿ ಎಲ್ಲಾ ಪಂದ್ಯ ಸೋಲಬೇಕು. ಲಕ್ನೋ, ಡೆಲ್ಲಿ ವಿರುದ್ಧ ಸೋಲಬೇಕು. ಹೀಗಾದಾಗ ಮಾತ್ರ ಎಲ್ಲವೂ ಸಾಧ್ಯ. ಆದರೆ ಆರ್ಸಿಬಿ ಸೋತರೆ ಅಧಿಕೃತವಾಗಿ ಎಲಿಮಿನೇಟ್ ಆಗುತ್ತದೆ.
ಡೆಲ್ಲಿ ಪ್ಲೇಆಫ್ ಸಾಧ್ಯತೆ ಹೇಗಿದೆ?
12 ಪಂದ್ಯಗಳಲ್ಲಿ 6 ಸೋಲು, 6 ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಉಳಿದೆರಡು ಪಂದ್ಯಗಳಲ್ಲಿ (ಲಕ್ನೋ ಮತ್ತು ಆರ್ಸಿಬಿ) ಗೆದ್ದರೆ 16 ಅಂಕ ಪಡೆಯಲಿದೆ. ಆದರೆ ಆದರೆ ಸಿಎಸ್ಕೆ ಕೊನೆಯ ಎರಡು ಪಂದ್ಯಗಳಲ್ಲಿ ಸೋಲಬೇಕು. ಆಗ ಯಾವುದೇ ಆತಂಕ ಇಲ್ಲದೆ ಪ್ಲೇಆಫ್ ಪ್ರವೇಶಿಸಲಿದೆ.