Pakistan Cricket: ತತ್ತರಿಸಿದ ಪಾಕಿಸ್ತಾನ ಕ್ರಿಕೆಟ್; ಮೂವರು ವಿದೇಶಿ ಕೋಚ್‌ಗಳು ರಾಜೀನಾಮೆ
Jan 19, 2024 07:46 AM IST
ಮೂವರು ವಿದೇಶಿ ಕೋಚ್‌ಗಳು ರಾಜೀನಾಮೆ
- Pakistan Cricket: ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಮೂವರು ವಿದೇಶಿ ಕೋಚ್‌ಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂವರು ಸಹ ಮೊದಲು ಪಾಕಿಸ್ತಾನ ತಂಡದ ಕೋಚ್ಗಳಾಗಿದ್ದರು.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಸೋತಿರುವ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಲಾಹೋರ್‌ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ಗಳಾಗಿದ್ದ ಮಿಕ್ಕಿ ಆರ್ಥರ್ (Mickey Arthur), ಗ್ರಾಂಟ್ ಬ್ರಾಡ್‌ಬರ್ನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರು (Grant Bradburn Andrew Puttick) ತಮ್ಮ ಸ್ಥಾನಗಳಿಗೆ ಗುರುವಾರ (ಜನವರಿ 17) ರಾಜೀನಾಮೆ ನೀಡಿದ್ದಾರೆ. ಈ ಮೂವರು ಎನ್ಸಿಎಗೆ ಬರುವುದಕ್ಕೂ ಮುನ್ನ ಪಾಕ್ ರಾಷ್ಟ್ರೀಯ ತಂಡದ ಕೋಚ್ಗಳಾಗಿದ್ದರು.
ಯಾರು ಯಾವ ಪಾತ್ರವನ್ನು ಹೊಂದಿದ್ದರು?
2023ರ ಏಪ್ರಿಲ್ನಲ್ಲಿ ಆರ್ಥರ್ ಅವರನ್ನು ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಕಳೆದ ವರ್ಷದ ಆರಂಭದಲ್ಲಿ ಬ್ರಾಡ್‌ಬರ್ನ್ ಅವರನ್ನು ಪಾಕಿಸ್ತಾನ ರಾಷ್ಟ್ರೀಯ ಪುರುಷರ ತಂಡದ ಹೆಡ್ಕೋಚ್ ಘೋಷಿಸಲಾಯಿತು. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಪುಟ್ಟಿಕ್ ಅವರು 2023ರ ಏಪ್ರಿಲ್ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಆಗಿದ್ದರು.
ವಿಶ್ವಕಪ್ ಬಳಿಕ ಬದಲಾವಣೆ
ಆದರೆ ಕಳೆದ ವರ್ಷ ಪಾಕಿಸ್ತಾನ ನೀಡಿದ ಕಳಪೆ ಪ್ರದರ್ಶನದಿಂದ ಮೂವರನ್ನು ರಾಷ್ಟ್ರೀಯ ತಂಡದ ಸೇವೆಗಳಿಂದ ತಪ್ಪಿಸಿ ಎನ್ಸಿಎಗೆ ನಿಯೋಜನೆ ಮಾಡಲಾಗಿತ್ತು. ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ಬಾಬರ್ ನೇತೃತ್ವದ ತಂಡವು ತೀವ್ರ ವೈಫಲ್ಯ ಅನುಭವಿಸಿತ್ತು. ಹೀಗಾಗಿ ವಿಶ್ವಕಪ್ ಬೆನ್ನಲ್ಲೇ ತಂಡದ ನಾಯಕತ್ವ ಮತ್ತು ಕೋಚಿಂಗ್ ಸಿಬ್ಬಂದಿಯಲ್ಲಿ ಭಾರಿ ಬದಲಾವಣೆ ತಂದಿತು. ಮೊದಲಿದ್ದ ಕೋಚಿಂಗ್ ಸಿಬ್ಬಂದಿಯನ್ನು ಕೆಳಗಿಳಿಸಿ ಎನ್ಸಿಎನಲ್ಲಿ ಅವಕಾಶ ನೀಡಲಾಯಿತು.
ಪ್ರಸ್ತುತ ತಂಡದಲ್ಲಿರುವ ಕೋಚ್‌ಗಳು
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ತಂಡದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಮುಖ್ಯಕೋಚ್ ಪಾತ್ರವನ್ನು ವಹಿಸಿಕೊಂಡರು. ಆ್ಯಡಮ್ ಹೊಲಿಯೋಕ್ ಅವರನ್ನು ಸರಣಿಗೆ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದ್ದು, ಉಮರ್ ಗುಲ್ ಮತ್ತು ಸಯೀದ್ ಅಜ್ಮಲ್ ಕ್ರಮವಾಗಿ ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್‌ಗೆ ಬೌಲಿಂಗ್ ಕೋಚ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖ್ಯಕೋಚ್ ಆಗಿದ್ದ ಆರ್ಥರ್
ಆರ್ಥರ್ 2016 ರಿಂದ 2019ರವರೆಗೆ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಹೆಡ್ಕೋಚ್ ಆಗಿದ್ದರು. ಈ ಸಮಯದಲ್ಲಿ ಪಾಕಿಸ್ತಾನ ಐಸಿಸಿ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ನಂ 1 ಸ್ಥಾನಕ್ಕೂ ಲಗ್ಗೆ ಇಟ್ಟಿತು. ಅಲ್ಲದೆ 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಹ ಗೆಲ್ಲು ನೆರವಾಗಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರ್ಥರ್ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ ತಂಡಕ್ಕೂ ಹೆಡ್ಕೋಚ್ ಆಗಿದ್ದರು.
ಬ್ರಾಡ್‌ಬರ್ನ್ ಫೀಲ್ಡಿಂಗ್ ಕೋಚ್ ಆಗಿದ್ದರು
57 ವರ್ಷ ವಯಸ್ಸಿನ ಬ್ರಾಡ್‌ಬರ್ನ್ ಈ ಹಿಂದೆ 1990 ರಿಂದ 2001 ರವರೆಗೆ 18 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. 2018 ರಿಂದ 2020 ರವರೆಗೆ ಪಾಕಿಸ್ತಾನ ಪುರುಷರ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದರು. ಅವರು ಮುಖ್ಯ ಕೋಚ್ ಆಗಿದ್ದಾಗ ಪಾಕಿಸ್ತಾನ ಐಸಿಸಿ ಏಕದಿ ತಂಡ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರಿತು.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20ಐ ಸರಣಿಗೂ ಮುನ್ನ ಜನವರಿ 8ರಂದು ಗ್ರಾಂಟ್ ಬ್ರಾಡ್‌ಬರ್ನ್ ಎನ್‌ಸಿಎಯಲ್ಲಿ ಉನ್ನತ-ಕಾರ್ಯಕ್ಷಮತೆಯ ಕೋಚಿಂಗ್ ಪಾತ್ರದಿಂದ ಕೆಳಗಿಳಿದರು. 2023ರ ವಿಶ್ವಕಪ್ ನಂತರ ಪಾಕಿಸ್ತಾನದ ಕೋಚಿಂಗ್ ಸ್ಥಾನಗಳ ಪುನರ್ರಚನೆ ಭಾಗವಾಗಿ ಬ್ರಾಡ್ಬರ್ನ್ರನ್ನು ಎನ್ಸಿಎಗೆ ಸ್ಥಳಾಂತರ ಮಾಡಲಾಗಿತ್ತು.
2024ರ ಅಂತ್ಯದೊಳಗೆ ಈ ಮೂವರು ಸಹ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಿಳಿಸಿದರು. ಈ ನಿರ್ಧಾರವನ್ನು ಎಲ್ಲಾ ಮಧ್ಯಸ್ಥಗಾರರ ನಡುವೆ ಸೌಹಾರ್ದಯುತವಾಗಿ ತೆಗೆದುಕೊಳ್ಳಲಾಗಿದೆ. ಅವರ ರಾಜೀನಾಮೆ ಸ್ವೀಕರಿಸಿರುವ ಪಿಸಿಬಿ, ಮಿಕ್ಕಿ ಆರ್ಥರ್, ಗ್ರಾಂಟ್ ಬ್ರಾಡ್‌ಬರ್ನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರಿಗೆ ಶುಭಕೋರಿದೆ.