ಟೆಸ್ಟ್ ಕ್ರಿಕೆಟ್ನಲ್ಲಿ ಕೆಎಲ್ ರಾಹುಲ್ ಪಾಲಿಗೆ ಡಿಸೆಂಬರ್ 26 ವಿಶೇಷ ದಿನ; ಅದಕ್ಕಿದೆ ವಿಶೇಷ ಕಾರಣ
Dec 28, 2023 07:44 AM IST
ಶತಕ ಸಿಡಿಸಿ ಸಂಭ್ರಮಿಸಿದ ಕೆಎಲ್ ರಾಹುಲ್.
- KL Rahul: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಶತಕ ಸಿಡಿಸಿದ್ದು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಹುಲ್ ಪಾಲಿಗೆ ವಿಶೇಷವಾಗಿದೆ. ಯಾಕಂತೀರಾ ಇಲ್ಲಿದೆ ವಿವರ.
ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ (India vs South Africa 1st Test) ಏಕಾಂಗಿ ಹೋರಾಟ ನಡೆಸಿ ಅಬ್ಬರಿಸಿದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul), ಭರ್ಜರಿ ಶತಕ ಸಿಡಿಸಿ ಮಿಂಚಿದರು. ಅಲ್ಲದೆ ಅಪತ್ಭಾಂದವನಂತೆ ತಂಡಕ್ಕೆ ನೆರವಾಗಿ ಆಕರ್ಷಣೀಯ ಶತಕ ಸಿಡಿಸಿ ಹಲವು ದಾಖಲೆ ಕೂಡ ಬರೆದರು.
ದಾಖಲೆ ಬರೆದ ಕನ್ನಡಿಗ
ಡಿಸೆಂಬರ್ 26ರಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 121 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಬ್ಯಾಟಿಂಗ್ ನಡೆಸುತ್ತಿದ್ದ ರಾಹುಲ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಹರಿಣಗಳ ಮೇಲೆ ಸವಾರಿ ನಡೆಸಿ 133 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್ ಸಹಿತ ಶತಕ (101 ರನ್) ಪೂರೈಸಿದರು. ಸೆಂಚುರಿಯನ್ ಮೈದಾನದಲ್ಲಿ 2 ಶತಕ ಸಿಡಿಸಿದ ಮೊದಲ ವಿದೇಶಿ ಬ್ಯಾಟರ್ ಎನಿಸಿದರು.
ಬಾಕ್ಸಿಂಗ್ ಡೇ ಟೆಸ್ಟ್ ರಾಹುಲ್ ಪಾಲಿಗೆ ವಿಶೇಷ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ 70 ರನ್ ಗಳಿಸಿ ಅಜೇಯರಾಗಿದ್ದ ರಾಹುಲ್, ಎರಡನೇ ದಿನವೂ ಸೌತ್ ಆಫ್ರಿಕಾಗೆ ಸಖತ್ ಪಂಚ್ ಕೊಟ್ಟರು. ಈ ಹಿಂದೆಯೂ ಇದೇ ದಿನ ಅಬ್ಬರಿಸಿದ ಉದಾಹರಣೆ ಇದೆ ಎಂಬುದು ಮತ್ತೊಂದು ವಿಶೇಷ. ಹೌದು, ಡಿಸೆಂಬರ್ 26 ರಾಹುಲ್ ಪಾಲಿಗೆ ವಿಶೇಷ ದಿನ. ಹಾಗಾದರೆ ಕರ್ನಾಟಕದ ಆಟಗಾರನಿಗೆ ಯಾಕೆ ಬಾಕ್ಸಿಂಗ್ ಡೇ ವಿಶೇಷ ಎಂಬುದಕ್ಕೆ ವಿವರ ಇಲ್ಲಿದೆ.
2014ರ ಡಿಸೆಂಬರ್ 26ರಂದೇ ಟೆಸ್ಟ್ಗೆ ಪದಾರ್ಪಣೆ
ಹೌದು, ಕೆಎಲ್ ರಾಹುಲ್ ಡಿಸೆಂಬರ್ 26ರಂದು ವಿಶೇಷ ಎನ್ನಲು ಇದೇ ಕಾರಣಕ್ಕೆ. 2014ರ ಡಿಸೆಂಬರ್ 26ರಂದೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಆಡಿದ್ದರು. ಎಂಎಸ್ ಧೋನಿ, ರಾಹುಲ್ಗೆ ಕ್ಯಾಪ್ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. ಎರಡೂ ಇನ್ನಿಂಗ್ಸ್ ಸೇರಿ ಕೇವಲ 4 ರನ್ ಗಳಿಸಿದ್ದರು. ಅಲ್ಲದೆ, ಈ ಪಂದ್ಯ ಡ್ರಾ ಸಾಧಿಸಿತ್ತು. ಇದು ಬಾಕ್ಸಿಂಗ್ ಡೇ ಟೆಸ್ಟ್.
2021ರ ಡಿಸೆಂಬರ್ 26ರಂದು ಸೆಂಚುರಿಯನ್ನಲ್ಲಿ ಶತಕ
2014ರ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ್ದ ರಾಹುಲ್, 2021ರಲ್ಲೂ ಬಾಕ್ಸಿಂಗ್ ಡೇ ಟೆಸ್ಟ್ ಆಡಿದ್ದರು. ಈ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಸೌತ್ ಆಫ್ರಿಕಾ ವಿರುದ್ಧವವೇ ನಡೆದಿದ್ದ ಟೆಸ್ಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರಾಹುಲ್, 260 ಭರ್ಜರಿ ಎಸೆತಗಳಲ್ಲಿ 123 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ, 1 ಸಿಕ್ಸರ್ ಇತ್ತು. ಭಾರತ 113 ರನ್ಗಳ ಗೆಲುವು ಸಾಧಿಸಿತ್ತು. ಕೊಹ್ಲಿ ಕ್ಯಾಪ್ಟನ್.
2023ರ ಡಿಸೆಂಬರ್ 26ರಂದು ಟೆಸ್ಟ್ಗೆ ಕಂಬ್ಯಾಕ್
2023ರ ಡಿ. 26ರ ಬಾಕ್ಸಿಂಗ್ ಡೇ ಟೆಸ್ಟ್ ಸಹ ಸೌತ್ ಆಫ್ರಿಕಾ ವಿರುದ್ಧವೇ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಪರ ರಾಹುಲ್ ಅಜೇಯ 70 ರನ್ ಗಳಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಎರಡನೇ ದಿನ ಶತಕ ಪೂರೈಸಿದರು. ಟೆಸ್ಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಕನ್ನಡಿಗ, ಏಕದಿನದಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಮೊದಲ ಶತಕ ಪೂರೈಸಿದರು, ಅಲ್ಲದೆ, ಸತತ ವೈಫಲ್ಯ ಅನುಭವಿಸಿದ್ದ ರಾಹುಲ್ಗೆ ಇದು ಕಂಬ್ಯಾಕ್ ಪಂದ್ಯವೂ ಆಗಿದೆ ಎಂಬುದು ವಿಶೇಷ.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 245-10 (67.4): ಕೆಎಲ್ ರಾಹುಲ್ 101, ವಿರಾಟ್ ಕೊಹ್ಲಿ 38; ಕಗಿಸೊ ರಬಾಡ 59/5
ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ 256-5 (66): ಡೀನ್ ಎಲ್ಗರ್ 140*, ಡೇವಿಡ್ ಬೆಡಿಂಗ್ಹ್ಯಾಮ್ಬಿ 56; ಜಸ್ಪ್ರೀತ್ ಬುಮ್ರಾ 48/2, ಮೊಹಮ್ಮದ್ ಸಿರಾಜ್ 63/2