ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ನೋವು ನೆನಪಿಸಿದ ಹರ್ಮನ್ ವಿಲಕ್ಷಣ ರನೌಟ್; ದುರದೃಷ್ಟಕರ ಎಂದ ಫ್ಯಾನ್ಸ್
Dec 15, 2023 03:36 PM IST
ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ನೋವು ನೆನಪಿಸಿದ ಹರ್ಮನ್ ವಿಲಕ್ಷಣ ರನೌಟ್.
- Harmanpreet Kaur: ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ವಿಲಕ್ಷಣ ರನೌಟ್ ಆಗುವ ಮೂಲಕ 1 ರನ್ ಅಂತರದಿಂದ ಚೊಚ್ಚಲ ಟೆಸ್ಟ್ ಅರ್ಧಶತಕ ವಂಚಿತರಾದರು.
ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 14) ಭಾರತ ಮತ್ತು ಇಂಗ್ಲೆಂಡ್ (India Women vs England Women, Only Test) ನಡುವಿನ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯ ಮೊದಲ ದಿನದಾಟ ಮುಕ್ತಾಯದ ಅಂಚಿನಲ್ಲಿದ್ದ ವೇಳೆ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ವಿಚಿತ್ರ ರನೌಟ್ ಆಗುವ ಮೂಲಕ 1 ರನ್ನಿಂದ ಚೊಚ್ಚಲ ಟೆಸ್ಟ್ ಅರ್ಧಶತಕ ವಂಚಿತರಾದರು.
ಕೆಲವೇ ಇಂಚುಗಳ ಅಂತರದಿಂದ ಹರ್ಮನ್ ರನೌಟ್
ಹರ್ಮನ್ರ ಈ ವಿಲಕ್ಷಣ ರನೌಟ್ ಮತ್ತೆ ಪುನರಾವರ್ತನೆಯಾಗಿದೆ. ಭಾರತದ ಬ್ಯಾಟಿಂಗ್ ನಡೆಸುತ್ತಿದ್ದ 62.1ನೇ ಓವರ್ನಲ್ಲಿ ತಂಡದ ಮೊತ್ತ 306 ಆಗಿತ್ತು. ಅದಾಗಲೇ 5 ವಿಕೆಟ್ ಕಳೆದುಕೊಂಡಿತ್ತು. ಚಾರ್ಲಿ ಡೀನ್ ಎಸೆಯುತ್ತಿದ್ದ 62.1 ಓವರ್ನಲ್ಲಿ 49 ರನ್ ಗಳಿಸಿದ್ದ ಹರ್ಮನ್ ಪ್ರೀತ್, ರನ್ ಕದಿಯಲು ಯತ್ನಿಸಿದರು. ಆದರೆ ಹರ್ಮನ್ ಬಾರಿಸಿದ ಚೆಂಡು ನೇರವಾಗಿ ಇಂಗ್ಲೆಂಡ್ ಡೇನಿಯಲ್ ವ್ಯಾಟ್ ಅವರ ಕೈ ಸೇರಿತು.
ಆದರೆ ರನ್ ಕದಿಯಲು ಪ್ರಯತ್ನಿಸಿದ ಹರ್ಮನ್, ಚೆಂಡು 30 ಸರ್ಕಲ್ನಲ್ಲಿದ್ದ ಫೀಲ್ಡರ್ ಕೈ ಸೇರುತ್ತಿದ್ದಂತೆ ಅತ್ಯಂತ ಕ್ರೀಸ್ಗೆ ವಾಪಸ್ ಆದರು. ರನೌಟ್ ಹೊಡೆಯುವುದಿಲ್ಲ ಎಂಬ ಭಾವನೆಯಿಂದ ಮೆಲ್ಲನೇ ಕ್ರೀಸ್ಗೆ ಮರಳಿದರು. ಆದರೆ ಚುರುಕಿನ ಫೀಲ್ಡಿಂಗ್ ನಡೆಸಿದ ವ್ಯಾಟ್, ಸ್ಟಂಪ್ಸ್ಗೆ ಡೈರೆಕ್ಟ್ ಥ್ರೋ ಹಾಕಿದರು. ಚೆಂಡು ಬಂದದ್ದನ್ನು ಗಮನಿಸಿದ ಹರ್ಮನ್, ಕ್ರೀಸ್ ಒಳಗೆ ಬ್ಯಾಟ್ ಮುಟ್ಟುಲು ಪ್ರಯತ್ನಿಸಿದರು.
ಅಷ್ಟರಲ್ಲಾಗಲೇ ಸ್ಟಂಪ್ಸ್ ಬೇಲ್ ಎಗರಿತ್ತು. ಕೇವಲ ಇಂಚುಗಳ ಅಂತರದಿಂದ ಬಲಿಯಾದರು. ಕ್ರೀಸ್ ಪಟ್ಟಿಗೆ ತಾಗಿಸಲು ಮುಂದಾದ ಹರ್ಮನ್ ಬ್ಯಾಟ್ ಗೆರೆಗೂ ಮುನ್ನವೇ ಸಿಲುಕಿಕೊಂಡಿತ್ತು. ಅಲ್ಲದೆ, ಅವರು ತಮ್ಮ ಪಾದಗಳನ್ನೂ ಕ್ರೀಸ್ಗೆ ಮುಟ್ಟಿಸಲಿಲ್ಲ. ಇದರಿಂದ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ವಂಚಿತರಾದರು. 81 ಎಸೆತಗಳಲ್ಲಿ 49 ರನ್ ಗಳಿಸಿ ಡ್ರೆಸ್ಸಿಂಗ್ ರೂಮ್ಗೆ ಮರಳಿದರು.
ವಿಶ್ವಕಪ್ನಲ್ಲೂ ಇದೇ ರೀತಿ ಔಟ್ ಆಗಿದ್ದ ನಾಯಕಿ
ಈ ರೀತಿ ವಿಲಕ್ಷಣವಾಗಿ ಔಟಾಗಿದ್ದು ಇದೇ ಮೊದಲಲ್ಲ, ಇದೇ ವರ್ಷ ನಡೆದ ಮಹಿಳೆಯರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲೂ ಇದೇ ಔಟಾಗಿ ತಂಡಕ್ಕೆ ಹಿನ್ನಡೆಯುಂಟು ಮಾಡಿದ್ದರು. 34 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 52ರನ್ ಗಳಿಸಿ ಆ್ಯಶ್ಲೇ ಗಾರ್ಡನರ್ ಮಾಡಿದ ರನೌಟ್ಗೆ ಬಲಿಯಾಗಿದ್ದರು. ಇದೀಗ ಮತ್ತೆ ಆ ಸೋಲಿನ ನೋವನ್ನು ನೆನಪು ಮಾಡಿದೆ. ಅಂದು ಹರ್ಮನ್ ಈ ರೀತಿ ಔಟಾಗದೇ ಇದ್ದಿದ್ದರೆ ಭಾರತ ತಂಡವು ಸೆಮಿಫೈನಲ್ಗೆ ಹೋಗುವ ಸಾಧ್ಯತೆ ಹೆಚ್ಚಿತ್ತು. ಹರ್ಮನ್ ರನೌಟ್ ಅನ್ನು ದುರದೃಷ್ಟಕರ ಎಂದು ಹೇಳುತ್ತಿದ್ದಾರೆ ನೆಟ್ಟಿಗರು.
ಭಾರಿ ಮುನ್ನಡೆಯಲ್ಲಿ ಭಾರತ
ಏಕೈಕ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ವನಿತೆಯರು ಅತ್ಯದ್ಬುತ ಪ್ರದರ್ಶನ ನೀಡಿದರು. ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ನಿರಾಸೆ ಮೂಡಿಸಿದರೂ, ಕನ್ನಡತಿ ಶುಭಾ ಸತೀಶ್ (69), ಜಮೈಮಾ ರೋಡ್ರಿಗಸ್ (68), ಯಾಸ್ತಿಕಾ ಭಾಟಿಯಾ (66), ದೀಪ್ತಿ ಶರ್ಮಾ (67) ಅರ್ಧಶತಕ ಸಿಡಿಸಿದರೆ, ಹರ್ಮನ್ (49) ಮಾತ್ರ 1 ರನ್ನಿಂದ ಅರ್ಧಶತಕ ವಂಚಿತರಾದರು.
ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ 428 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಆದರೆ ಇಂಗ್ಲೆಂಡ್ 136 ರನ್ಗಳಿಗೆ ಆಲೌಟ್ ಆಗಿದೆ. ದೀಪ್ತೀ ಶರ್ಮಾ 5 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ 292 ರನ್ಗಳ ಮುನ್ನಡೆ ಪಡೆದ ಭಾರತ, ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದೆ. ಬೃಹತ್ ಮೊತ್ತವನ್ನು ಕಲೆ ಹಾಕಿ ಇಂಗ್ಲೆಂಡ್ಗೆ ಟಾರ್ಗೆಟ್ ನೀಡಲು ನಿರ್ಧರಿಸಿದೆ.