ರಣಜಿ ಕ್ರಿಕೆಟ್‌ನಲ್ಲಿ ಅಜೇಯ ದ್ವಿಶತಕ; ಆಯ್ಕೆದಾರರಿಗೆ ಸಾಮರ್ಥ್ಯ ಸಾಬೀತುಪಡಿಸಿದ ಚೇತೇಶ್ವರ ಪೂಜಾರ
Jan 07, 2024 03:17 PM IST
ಚೇತೇಶ್ವರ ಪೂಜಾರ
- Cheteshwar Pujara: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗದ ಚೇತೇಶ್ವರ ಪೂಜಾರ ಇದೀಗ ಇಂಗ್ಲೆಂಡ್ ವಿರುದ್ದದ ತವರಿನ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ರಣಜಿ ಕ್ರಿಕೆಟ್‌ನಲ್ಲಿ ತಮ್ಮ ಗುಣಮಟ್ಟದ ಪ್ರಥಮ ದರ್ಜೆ ಆಟವನ್ನು ಸೌರಾಷ್ಟ್ರ ಆಟಗಾರ ಪ್ರದರ್ಶಿಸಿದ್ದಾರೆ.
ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡ ಪ್ರಮುಖ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ (Cheteshwar Pujara), ರಣಜಿ ಟ್ರೋಫಿಯಲ್ಲಿ (Ranji Trophy) ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಇತ್ತೀಚೆಗಷ್ಟೇ ಅಂತ್ಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಿಂದ ಪೂಜಾರ ಅಚ್ಚರಿಯ ರೀತಿಯಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದರೆ, ಜನವರಿ 7ರ ಭಾನುವಾರ ರಣಜಿ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಸೌರಾಷ್ಟ್ರ ಬ್ಯಾಟರ್ ಪೂಜಾರ ಅಜೇಯ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
35 ವರ್ಷದ ಬ್ಯಾಟರ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ 2024ರ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ದೇಶೀಯ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಲು ತಮಗಿರುವ ಅರ್ಹತೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತೀಯ ಬ್ಯಾಟರ್‌ಗಳು ರನ್ ಕಲೆ ಹಾಕಲು ಹೆಣಗಾಡಿದ್ದರು. ಇದೀಗ ತವರಿನಲ್ಲಿ ಆಂಗ್ಲರ ಸವಾಲನ್ನು ಎದುರಿಸಲು ಪ್ರಬಲ ಹಾಗೂ ಕ್ರೀಸ್‌ಕಚ್ಚಿ ಆಡುವ ಬ್ಯಾಟರ್‌ಗಳ ಅಗತ್ಯವಿದೆ. ಉತ್ತಮ ಫಾರ್ಮ್‌ನಲ್ಲಿರುವ ಪೂಜಾರ ಅವರನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್‌ಅಪ್‌ಗೆ ಕರೆತರುವ ಸಾಧ್ಯತೆ ಇದೆ.
ಇದನ್ನೂ ಓದಿ | ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಧಿಕ ಶತಕ ಸಿಡಿಸಿದ ಭಾರತೀಯರು; ವಿಜಯ್ ಹಜಾರೆ ದಾಖಲೆ ಮುರಿದ ಪೂಜಾರ
ಸೌರಾಷ್ಟ್ರ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪೂಜಾರ, ಒಟ್ಟು 356 ಎಸೆತಗಳನ್ನು ಎದುರಿಸಿ ಅಜೇಯ 243 ರನ್ ಗಳಿಸಿದರು. ಒಟ್ಟು 30 ಬೌಂಡರಿಗಳೊಂದಿಗೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ 14ನೇ ಮತ್ತು ರಣಜಿ ಟ್ರೋಫಿಯಲ್ಲಿ ಆರನೇ ದ್ವಿಶತಕವಾಗಿದೆ.
ಲಕ್ಷ್ಮಣ್ ಹಿಂದಿಕ್ಕಿದ ಪೂಜಾರ
ಈ ಇನ್ನಿಂಗ್ಸ್‌ನೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವರ ರನ್ ಗಳಿಕೆಯನ್ನು ಮೀರಿಸಿದ್ದಾರೆ. ಲಕ್ಷ್ಮಣ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19,730 ರನ್ ಗಳಿಸಿದ್ದು, ಅದನ್ನು ಪೂಜಾರ ಹಿಂದಿಕ್ಕಿದ್ದಾರೆ. ಪೂಜಾರ ಒಟ್ಟು 61 ಶತಕಗಳು ಮತ್ತು 77 ಅರ್ಧಶತಕಗಳೊಂದಿಗೆ 19,799 ರನ್ ಕಲೆ ಹಾಕಿದ್ದಾರೆ. 35ರ ಹರೆಯದ ಆಟಗಾರ ಪ್ರಥಮ ದರ್ಜೆ ಕ್ರಿಕೆಟ್‌ನ ಸಾರ್ವಕಾಲಿಕ ಅಧಿಕ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಸುನಿಲ್ ಗವಾಸ್ಕರ್ ಅವರು ತಮ್ಮ ವೃತ್ತಿಜೀವನದಲ್ಲಿ 25,834 ರನ್ ಗಳಿಕೆಯೊಂದಿಗೆ ಅತಿ ಹೆಚ್ಚು ಪ್ರಥಮ ದರ್ಜೆ ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಕ್ರಮವಾಗಿ 2 ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ | ಸಮಯ ವ್ಯರ್ಥ, 2 ಪಂದ್ಯಗಳ ಸರಣಿ ಬೇಕಿರಲಿಲ್ಲ; ಇಂಡೋ-ಆಫ್ರಿಕಾ ಟೆಸ್ಟ್ ಸಿರೀಸ್ಗೆ ರವಿ ಶಾಸ್ತ್ರಿ ಕಟು ಟೀಕೆ
ಮುಂದೆ ಜನವರಿ 25ರಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ಹೈದರಾಬಾದ್‌ನಲ್ಲಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆತಿಥೇಯ ಭಾರತವನ್ನು ಎದುರಿಸಲಿದೆ. ಎರಡನೇ ಪಂದ್ಯವು ಫೆಬ್ರವರಿ 2ರಿಂದ 6ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಪಂದ್ಯವನ್ನು ರಾಜ್‌ಕೋಟ್‌ನಲ್ಲಿ ಫೆಬ್ರವರಿ 16ರಿಂದ 20ರವರೆಗೆ ನಡೆಯಲಿದೆ. ಕೊನೆಯ ಎರಡು ಪಂದ್ಯಗಳನ್ನು ರಾಂಚಿ ಮತ್ತು ಧರ್ಮಶಾಲಾದಲ್ಲಿ ನಡೆಯಲಿವೆ.
ವಿಡಿಯೋ ನೋಡಿ | Kere Bete : ನಮ್ಮ ನೆಲದ ಸಿನಿಮಾಗಳು ಯಾವಾಗಲೂ ಸೋಲಲ್ಲ, ಕೆರೆ ಬೇಟೆ ಗೆಲ್ಲುತ್ತೆ – ಡಾಲಿ ಧನಂಜಯ