logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18ನೇ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರ; ಈ ದಾಖಲೆ ಬರೆದ ಮೊದಲ ಭಾರತೀಯ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18ನೇ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರ; ಈ ದಾಖಲೆ ಬರೆದ ಮೊದಲ ಭಾರತೀಯ

Jayaraj HT Kannada

Oct 21, 2024 08:56 PM IST

google News

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18ನೇ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರ

    • Cheteshwar Pujara: ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18ನೇ ದ್ವಿಶತಕ ಬಾರಿಸಿದ್ದಾರೆ. ಛತ್ತೀಸ್‌ಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 234 ರನ್ ಸಿಡಿಸಿದ ಅವರು, ವಿಶೇಷ ದಾಖಲೆ ಬರೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18ನೇ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರ
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18ನೇ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರ (BCCI Domestic)

ಸೌರಾಷ್ಟ್ರ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಚೇತೇಶ್ವರ ಪೂಜಾರ, ದಾಖಲೆಯ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ರಣಜಿ ಟ್ರೋಫಿ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ರೆಕಾರ್ಡ್‌ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೌರಾಷ್ಟ್ರ ತಂಡದ ಬ್ಯಾಟಿಂಗ್ ಲೈನ್ಅಪ್‌ನ ಬೆನ್ನೆಲುಬಾಗಿರುವ ಪೂಜಾರ, ಪ್ರಸಕ್ತ ಋತುವಿನಲ್ಲಿ ಆಡಿದ ತಮ್ಮ ಎರಡನೇ ಪಂದ್ಯದಲ್ಲಿ ಬರೋಬ್ಬರಿ 234 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗದ ಪೂಜಾರ, ದೇಶಿಯ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಮೂಲಕ ಆಯ್ಕೆದಾರರಿಗೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಛತ್ತೀಸ್‌ಗಢ ವಿರುದ್ಧದ ರಣಜಿ ಪಂದ್ಯದಲ್ಲಿ ಪೂಜಾರ ಈ ದಾಖಲೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಛತ್ತೀಸ್‌ಗಢ 7 ವಿಕೆಟ್ ನಷ್ಟಕ್ಕೆ 578 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಸೌರಾಷ್ಟ್ರ ಕೂಡಾ ಸುದೀರ್ಘ ಅವಧಿಗೆ ಬ್ಯಾಟಿಂಗ್‌ ನಡೆಸಿತು. ಪೂಜಾರ ಅವರು ಆಕರ್ಷಕ ದ್ವಿಶತಕದ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಲು ಸಹಾಯ ಮಾಡಿದರು. 348 ಎಸೆತಗಳಲ್ಲಿ ದ್ವಿಶತಕದ ಗಡಿಯನ್ನು ತಲುಪಿದ ಅವರು, ಶಶಾಂಕ್ ಸಿಂಗ್ ಅವರ ಎಸೆತದಲ್ಲಿ ಔಟಾದರು. ಅಷ್ಟರಲ್ಲಿ 234 ರನ್ ಪೇರಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 25 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿವೆ.

ಇದು ರಣಜಿ ಕ್ರಿಕೆಟ್‌ನಲ್ಲಿ ಪೂಜಾರ ಅವರ ಒಂಬತ್ತನೇ ದ್ವಿಶತಕವಾಗಿದೆ. ಆ ಮೂಲಕ ರಣಜಿ ಟ್ರೋಫಿಯಲ್ಲಿ ಅವರು ಪರಾಸ್ ಡೋಗ್ರಾ ಅವರ ದಾಖಲೆಯನ್ನು ಸರಿಗಟ್ಟಿದರು. ರಣಜಿ ಪಂದ್ಯಾವಳಿಯಲ್ಲಿ ಡೋಗ್ರಾ ಕೂಡಾ ಒಂಬತ್ತು ಬಾರಿ 200 ರನ್‌ ಗಡಿ ದಾಟಿದ್ದಾರೆ.

ಅತ್ಯಧಿಕ ದ್ವಿಶತಕ ಬಾರಿಸಿದ ಭಾರತೀಯ

ಈ ನಡುವೆ ಪೂಜಾರ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕಗಳನ್ನು ಗಳಿಸಿದ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 18 ದ್ವಿಶತಕ ಇವರ ಬ್ಯಾಟ್‌ನಿಂದ ಸಿಡಿದಿವೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಬಾರಿ ಡಬಲ್‌ ಸೆಂಚುರಿ ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕಗಳನ್ನು ಸಿಡಿಸಿದ ಜಾಗತಿಕ ಕ್ರಿಕೆಟಿಗರ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದವರ ಪಟ್ಟಿಯಲ್ಲಿ ಎಲಿಯಾಸ್ ಹೆನ್ರಿ ಹೆಂಡ್ರೆನ್ (22) ಮೂರನೇ ಸ್ಥಾನದಲ್ಲಿದ್ದಾರೆ. ವಾಲಿ ಹ್ಯಾಮಂಡ್ (36) ಮತ್ತು ಡಾನ್ ಬ್ರಾಡ್ಮನ್ (37) ಎರಡು ಹಾಗೂ ಮೊದಲ ಸ್ಥಾನದಲ್ಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21,000 ರನ್

ಇದೇ ವೇಳೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21,000 ರನ್ ಗಳಿಸಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಚೇತೇಶ್ವರ ಪಾತ್ರರಾದರು. ಸುನಿಲ್‌ ಗವಾಸ್ಕರ್, ಸಚಿನ್‌ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಮೊದಲ ಮೂವರು ಆಟಗಾರರು. ಗವಾಸ್ಕರ್ ಪ್ರಸ್ತುತ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25834 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಸದ್ಯ ಪೂಜಾರ ಅವರ ಫಾರ್ಮ್‌ ಅವರನ್ನು ಮತ್ತೆ ಟೀಮ್‌ ಇಂಡಿಯಾಗೆ ಕರೆಸುವ ಸುಳಿವು ನೀಡಿದೆ. ಅತ್ತ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಸೋತಿದೆ. ಅದಾದ ಒಂದು ದಿನದ ನಂತರ ಪೂಜಾರ ಶತಕ ಬಂದಿದೆ. ಹೀಗಾಗಿ ಈ ಸರಣಿ ಅಲ್ಲದಿದ್ದರೂ, ಮುಂದೆ ನಡೆಯಲಿರುವ ಬಾರ್ಡರ್‌ -ಗವಾಸ್ಕರ್‌ ಟ್ರೋಫಿ ಸರಣಿಗೆ ಪೂಜಾರ ಹೆಸರು ಮುನ್ನೆಲೆಗೆ ಬಂದರೆ ಅಚ್ಚರಿ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ