ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ; ಪಾಕ್ ಅಭಿಮಾನಿ ಬಾಯಿ ಮುಚ್ಚಿಸಿದ ಪೊಲೀಸರು
Oct 21, 2023 11:06 AM IST
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ.
- Pakistan Zindabad During Aus vs Pak Match: ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ-ಪಾಕಿಸ್ತಾನ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI Cricket World Cup 2023) 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ (Australia vs Pakistan) ಹೀನಾಯ ಸೋಲನುಭವಿಸಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ (M.Chinnaswamy Stadium, Bengaluru) ನಡೆದ ಈ ಪಂದ್ಯದಲ್ಲಿ 62 ರನ್‌ಗಳ ಅಂತರದಿಂದ ಶರಣಾದ ಪಾಕ್, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಕೆಳಕ್ಕೆ ಜಾರಿದೆ.
ಆದರೆ ಈ ಪಂದ್ಯದ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ್ದಾರೆ. ಪೊಲೀಸರೊಬ್ಬರು ಆಗಮಿಸಿ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟಿದ್ದ ಅಭಿಮಾನಿ, ನಮ್ಮ ಕ್ರಿಕೆಟ್ ತಂಡವನ್ನು ಏಕೆ ಹುರಿದುಂಬಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
45 ಸೆಕೆಂಡ್‌ಗಳ ವಿಡಿಯೋ ವೈರಲ್
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಅಭಿಮಾನಿ, ಪೊಲೀಸರೊಂದಿಗೆ ವಾಗ್ವಾದ ನಡೆಸುವ 45 ಸೆಕೆಂಡ್‌ಗಳ ವಿಡಿಯೋ ಸಖತ್ ವೈರಲ್ ಆಗಿದೆ. ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗುವುದನ್ನು ನಿಲ್ಲಿಸಿದ ಕುರಿತು ಆರೋಪ ಮಾಡಿದ್ದಾರೆ. ಏಕೆ ಕೂಗಬಾರದು? ನಡೆಯುತ್ತಿರುವುದು ಆಸ್ಟ್ರೇಲಿಯಾ-ಪಾಕಿಸ್ತಾನ ಪಂದ್ಯ. ನಮ್ಮ ತಂಡಕ್ಕೆ ನಾವು ಬೆಂಬಲ ನೀಡುವುದು ತಪ್ಪೇ ಎಂದು ಯುವಕ ಪ್ರಶ್ನಿಸಿದ್ದಾರೆ.
ಭಾರತ್ ಮಾತಾಕಿ ಜೈ ಎನ್ನಬೇಕೇ?
ಪಾಕಿಸ್ತಾನ್ ಜಿಂದಾಬಾದ್ ಎಂದು ಏಕೆ ಕೂಗಬಾರದು. ಪಾಕಿಸ್ತಾನ ಪಂದ್ಯ ನಡೆಯುವಾಗ ಭಾರತ್ ಮಾತಾಕಿ ಜೈ ಎಂದು ಕೂಗಬೇಕೆ? ಪ್ರಶ್ನೆ ಹಾಕುತ್ತಾರೆ. ಅದಕ್ಕೆ ಉತ್ತರಿಸಿದ ಪೊಲೀಸರೊಬ್ಬರು, ನಿಮಗೆ ಘೋಷಣೆ ಕೂಗಬೇಕೆಂದು ಬಯಸಿದರೆ ಭಾರತ್ ಮಾತಾಕಿ ಜೈ ಎಂದು ಕೂಗಿ. ಆದರೆ ಪಾಕಿಸ್ತಾನ ಜಿಂದಾಬಾದ್ ಬೇಡ. ಹಾಗೆ ಕೂಗುವುದು ಒಳ್ಳೆಯದಲ್ಲ ಎಂದಿದ್ದಾರೆ.
ಕೋಪದಲ್ಲಿ ಮಾತನಾಡಿದ ಅಭಿಮಾನಿ, ನಾನು ಪಾಕಿಸ್ತಾನದಿಂದ ಬಂದಿದ್ದೇನೆ. ಪಾಕಿಸ್ತಾನ ಪಂದ್ಯ ನಡೆಯುತ್ತಿದೆ. ಇನ್ನೇನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಸರಿ, ನಾನು ವಿಡಿಯೋ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲು ಅವಕಾಶ ನೀಡುತ್ತಿಲ್ಲ ಎಂದು ವಿಡಿಯೋ ಮೂಲಕ ಎಲ್ಲರಿಗೂ ತಿಳಿಸುತ್ತೇನೆ ಎಂದಿದ್ದಾರೆ. ಆ ಬಳಿಕ ಅಲ್ಲಿಂದ ಹೊರಟ ಪೊಲೀಸ್ ಅಧಿಕಾರಿ, ನಮ್ಮ ಮೇಲಿನ ಅಧಿಕಾರಿಗೆ ತಿಳಿಸುತ್ತೇನೆ ಎಂದರು.
ಟ್ವಿಟರ್ ನಲ್ಲಿ ಆಕ್ರೋಶ
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲು ಅವಕಾಶ ನಿಡದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೊಮಿನ್ ಸಾಕಿಬ್ ಎಂಬಾತ ಟ್ವೀಟ್ ಮಾಡಿದ್ದು, ಪಂದ್ಯದ ವೇಳೆ ಅಭಿಮಾನಿಗಳು "ಪಾಕಿಸ್ತಾನ್ ಜಿಂದಾಬಾದ್" ಎಂದು ಕೂಗುವುದನ್ನು ತಡೆಯುತ್ತಿರುವುದು ಆಘಾತಕಾರಿ ಮತ್ತು ಅಸಮಾಧಾನವಾಗಿದೆ. ಆ ಅಧಿಕಾರಿ ಕೇವಲ ಭಾರತವನ್ನಷ್ಟೇ ಪ್ರತಿನಿಧಿಸುವಂತ ಹೇಳಿಕೆ ನೀಡುವಂತೆ ಒತ್ತಾಯಿಸಿದಂತಿದೆ. ಇದು ಸರಿಯಾದ ನಿರ್ಧಾರವಲ್ಲ. ಇದು ಯಾವ ಪುಸ್ತಕದಲ್ಲಿದೆ. ಭದ್ರತಾ ಸಿಬ್ಬಂದಿಯು ಅಭಿಮಾನಿಗಳು ಆಟವನ್ನು ಆನಂದಿಸಲು ಅನುವು ಮಾಡಿಕೊಡಬೇಕು ಎಂದು ಕಿಡಿಕಾರಿದ್ದಾರೆ.
ಇನ್ನೂ ಮುಂದುವರೆಸಿ ಕ್ರಿಕೆಟ್ ಜನರನ್ನು ಒಗ್ಗೂಡಿಸುವ ಮಾಧ್ಯಮವಾಗಿದೆ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಬೆಂಬಲಿಸುವ ಹಕ್ಕು ಪ್ರತಿಯೊಬ್ಬ ಅಭಿಮಾನಿಗೂ ಇದೆ ಎಂದು ನಾವು ಅರಿತುಕೊಳ್ಳಲು ಇದು ಒಂದು ಕ್ಷಣವಾಗಿದೆ. ಇದು ಕ್ರೀಡೆಯ ಬಗ್ಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಐಸಿಸಿ ಮತ್ತು ಬಿಸಿಸಿಐ ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಪ್ರತಿಯೊಬ್ಬರು ವಿಶ್ವಕಪ್ ಅನ್ನು ಆನಂದಿಸುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಈ ಹಿಂದೆಯೂ ಮೊಳಗಿತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆ
ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಹೈದರಾಬಾದ್ ನಲ್ಲಿ ನಡೆದ ಪಾಕಿಸ್ತಾನದ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಮಎಂದಿದ್ದಾರೆಆ ಮೂಲಕ ಬಾಬರ್ ಬಳಗಕ್ಕೆ ಹೆಚ್ಚು ಬೆಂಬಲ ಸಿಕ್ಕಿತ್ತು. ಶ್ರೀಲಂಕಾ ಎದುರಿನ ಪಂದ್ಯದಲ್ಲೂ ಪಾಕ್ಗೆ ಸಾಕಷ್ಟು ಬೆಂಬಲ ಸಿಕ್ಕಿತ್ತು. ಈ ಪಂದ್ಯದಲ್ಲಿ ಪಾಕ್ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಮೊತ್ತವನ್ನು ಬೆನ್ನಟ್ಟಿತು. ಮೈದಾನದ ಡಿಜೆನಲ್ಲಿ ಜಿತೇಗಾ ಜಿತೇಗಾ ಜಿತೇಗಾ ಎಂಬ ಪ್ರಶ್ನೆಗೆ ಪಾಕಿಸ್ತಾನ ಜಿತೇಗಾ ಎಂಬ ಘೋಷಣೆಗಳ ಉತ್ತರ ಸಿಗುತ್ತಿತ್ತು. ಇದು ಭಾರಿ ಸುದ್ದಿಯಾಗಿತ್ತು.
ಈ ಬೆಂಬಲ ಕಂಡು ಬಾಬರ್ ಬಳಗ ಅಚ್ಚರಿಗೆ ಒಳಗಾಗಿದ್ದರು. ತಮಗೆ ಬೆಂಬಲ ನೀಡಿದ ಜನಸಮೂಹಕ್ಕೆ ಬಾಬರ್ ಧನ್ಯವಾದ ಹೇಳಿದ್ದರು. ಕಳೆದ ತಿಂಗಳು ಟೂರ್ನಮೆಂಟ್‌ಗಾಗಿ ಭಾರತಕ್ಕೆ ಆಗಮಿಸಿದ ಪಾಕಿಸ್ತಾನ ತಂಡಕ್ಕೆ ಸಾಕಷ್ಟು ಸ್ವಾಗತ ನೀಡಲಾಯಿತು. ಅವರ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧ ಸೋಲು
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ 367 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಡೇವಿಡ್ ವಾರ್ನರ್ 163, ಮಿಚೆಲ್ ಮಾರ್ಷ್ 121 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಪಾಕ್ 305 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 62 ರನ್‌ಗಳಿಂದ ಶರಣಾಯಿತು.