logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಅಕ್ರಮ ಪ್ರಸಾರ ಪ್ರಕರಣ; ನಟಿ ತಮನ್ನಾ ಭಾಟಿಯಾಗೆ ಸಮನ್ಸ್, ಏಪ್ರಿಲ್ 29ರಂದು ವಿಚಾರಣೆಗೆ ಹಾಜರು

ಐಪಿಎಲ್ ಅಕ್ರಮ ಪ್ರಸಾರ ಪ್ರಕರಣ; ನಟಿ ತಮನ್ನಾ ಭಾಟಿಯಾಗೆ ಸಮನ್ಸ್, ಏಪ್ರಿಲ್ 29ರಂದು ವಿಚಾರಣೆಗೆ ಹಾಜರು

Prasanna Kumar P N HT Kannada

Apr 25, 2024 03:02 PM IST

google News

ಐಪಿಎಲ್ ಅಕ್ರಮ ಪ್ರಸಾರ ಪ್ರಕರಣ; ನಟಿ ತಮನ್ನಾ ಭಾಟಿಯಾಗೆ ಸಮನ್ಸ್

    • Tamannaah Bhatia : ಫೇರ್​ಪ್ಲೇ ಆ್ಯಪ್​ನಲ್ಲಿ ಅಕ್ರಮವಾಗಿ ಐಪಿಎಲ್ ಪ್ರಸಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಸೈಬರ್​ ಕ್ರೈಮ್ ಬ್ರಾಂಚ್ ವಿಭಾಗ ನಟಿ ತಮನ್ನಾ ಭಾಟಿಯಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಐಪಿಎಲ್ ಅಕ್ರಮ ಪ್ರಸಾರ ಪ್ರಕರಣ; ನಟಿ ತಮನ್ನಾ ಭಾಟಿಯಾಗೆ ಸಮನ್ಸ್
ಐಪಿಎಲ್ ಅಕ್ರಮ ಪ್ರಸಾರ ಪ್ರಕರಣ; ನಟಿ ತಮನ್ನಾ ಭಾಟಿಯಾಗೆ ಸಮನ್ಸ್

ಬಾಲಿವುಡ್​ ಮತ್ತು ದಕ್ಷಿಣ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾದ ನಟಿ ತಮನ್ನಾ ಭಾಟಿಯಾ (Tamannaah Bhatia) ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಐಪಿಎಲ್ (Illegal IPL Streaming Case) ಪಂದ್ಯಗಳ ಸ್ಟ್ರೀಮಿಂಗ್ ಪ್ರಕರಣಕ್ಕೆ ಸಂಬಂಧಿಸಿ ತಮನ್ನಾ ಹೆಸರು ತಳುಕು ಹಾಕಿಕೊಂಡಿದ್ದು, ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರದ ಸೈಬರ್​ ಕ್ರೈಮ್ ಬ್ರಾಂಚ್ ವಿಭಾಗ ನಟಿಗೆ ನೋಟಿಸ್ ಜಾರಿ ಮಾಡಿದೆ.

ಮಹದೇವ್ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಅಪ್ಲಿಕೇಶನ್‌ನ ಅಂಗಸಂಸ್ಥೆ ಫೇರ್‌ಪ್ಲೇ ಆ್ಯಪ್‌ನಲ್ಲಿ (FairPlay Betting App) ಅಕ್ರಮವಾಗಿ ಐಪಿಎಲ್ ಪ್ರಸಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಫೇರ್​ಪ್ಲೇ ಆ್ಯಪ್​ನ ಪ್ರಚಾರದಲ್ಲಿ ನಟಿಯೂ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಅದಕ್ಕಾಗಿ ನೋಟಿಸ್ ಜಾರಿಯಾಗಿದ್ದು, ಇದೇ 29ರಂದು ಮಹಾರಾಷ್ಟ್ರದ ಸೈಬರ್ ಭದ್ರತೆ ಮತ್ತು ಸೈಬರ್ ಕ್ರೈಮ್​ ತನಿಖೆಗೆ ನೋಡಲ್ ಏಜೆನ್ಸಿಯ ಮುಂದೆ ವಿಚಾರಣೆಗೆ ಹಾಜರಾಗಬೇಕು.

ತಮನ್ನಾ ಭಾಟಿಯಾ ಮಾತ್ರವಲ್ಲ, ನಟ ಸಂಜಯ್ ದತ್, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಗಾಯಕ ಬಾದ್​ಶಾ ಅವರು ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ ಸಂಜಯ್ ದತ್ ಅವರು ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಕಾರಣ ವಿಚಾರಣೆಗೆ ಸದ್ಯಕ್ಕೆ ಹಾಜರಾಗಲು ಸಾಧ್ಯವಾಗಲ್ಲ ಎಂದು ತಿಳಿಸಿದ್ದಾರಂತೆ ಎಂಬ ಮಾಹಿತಿ ಲಭ್ಯವಾಗಿದೆ. ಫೇರ್‌ಪ್ಲೇ ಅಪ್ಲಿಕೇಷನ್​ನಲ್ಲಿ 2023ರ ಐಪಿಎಲ್ ಅನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದರಿಂದ ವಯಾಕಾಮ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟವನ್ನುಂಟು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸೈಬರ್ ಸೆಲ್, ನಟಿ ತಮನ್ನಾ ಭಾಟಿಯಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಈ ಬಗ್ಗೆ ಎಎನ್​ಐ ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದೆ. ನಟ ಸಂಜಯ್ ದತ್ ಅವರಿಗೆ ಏಪ್ರಿಲ್ 23ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ಕೊಡಲಾಗಿತ್ತು. ಆದರೆ, ಬ್ಯುಸಿ ಶೆಡ್ಯೂಲ್​ನಿಂದಾಗಿ ಸಂಜಯ್ ದತ್ ಅವರು ವಿಚಾರಣೆಗೆ ಹಾಜರಾಗದೆ, ತಮ್ಮ ಹೇಳಿಕೆ ದಾಖಲಿಸಲು ಬೇರೆ ದಿನಾಂಕ ಮತ್ತು ಸಮಯ ಕೋರಿದ್ದಾರೆ.

ಐಪಿಎಲ್ ಪಂದ್ಯಗಳ ಪ್ರಸಾರದ ಹಕ್ಕನ್ನು ಹೊಂದಿರುವ ವಯಾಕಾಮ್ 18 ಸಂಸ್ಥೆಯು 2023ರ ಸೆಪ್ಟೆಂಬರ್​ನಲ್ಲಿ ನೀಡಿದ ದೂರಿನ ಪ್ರಕಾರ, ಐಪಿಎಲ್ ಪಂದ್ಯಗಳನ್ನು ಆ್ಯಪ್‌ನಲ್ಲಿ ಅಕ್ರಮವಾಗಿ ಸ್ಟ್ರೀಮ್ ಮಾಡಲಾಗಿದೆ. ಐಪಿಎಲ್ ಪ್ರಸಾರದ ಹಕ್ಕು ಪಡೆದಿದ್ದರ ಹೊರತಾಗಿಯೂ ಬೆಟ್ಟಿಂಗ್ ಅಪ್ಲಿಕೇಶನ್ ಫೇರ್​ಪ್ಲೇ ಆ್ಯಪ್​ನಲ್ಲಿ ಅಕ್ರಮವಾಗಿ ಪಂದ್ಯಗಳನ್ನು ಸ್ಟ್ರೀಮ್ ಮಾಡಲಾಗುತ್ತಿತ್ತು. ಈಗಾಗಲೇ ಪ್ರಕರಣದಲ್ಲಿ ಗಾಯಕ ಬಾದ್‌ಶಾ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿಕೆ ದಾಖಲಿಸಲಾಗಿದೆ.

ಫೇರ್​ಪ್ಲೇ ಬೆಟ್ಟಿಂಗ್ ಅಪ್ಲಿಕೇಶನ್

ಫೇರ್‌ಪ್ಲೇ ಎಂಬುದು ಬೆಟ್ಟಿಂಗ್ ವಿನಿಮಯ ವೇದಿಕೆಯಾಗಿದೆ. ಫೇರ್​ಪ್ಲೇನಲ್ಲಿ ಕ್ರಿಕೆಟ್ ಅತ್ಯಂತ ಪ್ರೀತಿಪಾತ್ರರ ಕ್ರೀಡೆಯಾಗಿದೆ. ಹಾಗಾಗಿ ಬೆಟ್ಟಿಂಗ್ ಆಡುವವರು ಒಂದೇ ಸಮಯದಲ್ಲಿ ವೀಕ್ಷಿಸಲು ಮತ್ತು ಗೆಲ್ಲುವವರಿಗೆ ಸುಲಭವಾಗಲೆಂದು ಎಲ್ಲಾ ಕ್ರೀಡಾ ಪಂದ್ಯಗಳನ್ನು ಫೇರ್​ಪ್ಲೇನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಕ್ರಿಕೆಟ್ ಮಾತ್ರವಲ್ಲದೆ, ಪೋಕರ್, ಬ್ಯಾಡ್ಮಿಂಟನ್, ಟೆನ್ನಿಸ್, ಫುಟ್‌ಬಾಲ್ ಸೇರಿದಂತೆ ವಿವಿಧ ಆಟಗಳ ಅಕ್ರಮ ಬೆಟ್ಟಿಂಗ್‌ಗೆ ವೇದಿಕೆ ಒದಗಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ