AB De Villiers: ತಿಲಕ್ ವರ್ಮಾ ಅರ್ಧಶತಕ ವಿವಾದ; ವೈಯಕ್ತಿಕ ಸಾಧನೆಯ ಗೀಳು ಬಿಡಿ ಎಂದ ಹರ್ಷ ಭೋಗ್ಲೆ ಬೆಂಬಲಿಸಿ ಹಾರ್ದಿಕ್ ಪರ ನಿಂತ ಎಬಿಡಿ
Aug 11, 2023 12:16 PM IST
ಹರ್ಷ ಭೋಗ್ಲೆ, ಹಾರ್ದಿಕ್ ಪಾಂಡ್ಯ, ಎಬಿ ಡಿವಿಲಿಯರ್ಸ್.
- AB De Villiers: ತಿಲಕ್ ವರ್ಮಾ ಅರ್ಧಶತಕ ಬಾರಿಸಲು ಅವಕಾಶ ನೀಡಲಿಲ್ಲ ಎಂದು ಹಾರ್ದಿಕ್ ಪಾಂಡ್ಯ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕಾಮೆಂಟೇಟರ್, ಕ್ರಿಕೆಟ್ ತಜ್ಞ ಹರ್ಷ ಭೋಗ್ಲೆ, ಆತನ ಬೆಂಬಲಕ್ಕೆ ನಿಂತಿದ್ದಾರೆ. ಟ್ವೀಟ್ ಮೂಲಕ ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ. ವೈಯಕ್ತಿಕ ಸಾಧನೆಗಳ ಗೀಳು ಬೇಡ ಎಂದು ಬುದ್ದಿ ಮಾತು ಹೇಳಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಿನ 3ನೇ ಟಿ20 ಸರಣಿಯಲ್ಲಿ ಯುವ ಆಟಗಾರ ತಿಲಕ್ ವರ್ಮಾ (Tilak Varma) ಅಜೇಯ 49 ರನ್ ಗಳಿಸಿದ್ದ ಸಂದರ್ಭದಲ್ಲಿ ಅರ್ಧಶತಕ ಸಿಡಿಸಿಲು ಅವಕಾಶ ನೀಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಾರ್ದಿಕ್ ಕ್ರೀಡಾ ಸ್ಫೂರ್ತಿಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಇದರ ನಡುವೆ ಟೀಕಾಕಾರರಿಗೆ ಹಿರಿಯ ಕ್ರಿಕೆಟ್ ಕಾಮೆಂಟೇಟರ್ ಹರ್ಷಾ ಭೋಗ್ಲೆ (Harsha Bhogle) ನೀಡಿರುವ ದಿಟ್ಟ ಉತ್ತರಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ (AB de Villiers), ಬೆಂಬಲ ಸೂಚಿಸಿದ್ದಾರೆ.
ಏನಿದು ಘಟನೆ?
49 ರನ್ ಗಳಿಸಿ ತಿಲಕ್ ಬ್ಯಾಟಿಂಗ್ ಮಾಡುತ್ತಿದ್ದರು. ಭಾರತಕ್ಕೆ ಪಂದ್ಯ ಗೆಲ್ಲಲು 14 ಎಸೆತಗಳಲ್ಲಿ ಗೆಲ್ಲಲು ಕೇವಲ 2 ರನ್ ಅಗತ್ಯ ಇತ್ತು. ಆದರೆ ಸ್ಟ್ರೈಕ್ನಲ್ಲಿದ್ದ ಹಾರ್ದಿಕ್, ರೋವ್‌ಮನ್ ಪೊವೆಲ್ ಅವರ ಬೌಲಿಂಗ್ನ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟರು. ಇನ್ನೂ 2 ಓವರ್ಗಳು ಬಾಕಿ ಇದ್ದರೂ ತಿಲಕ್ ಅರ್ಧಶತಕ ಸಿಡಿಸಲು ಒಂದು ರನ್ ಅವಶ್ಯಕ ಇದ್ದಾಗ ಸಿಕ್ಸರ್ ಬಾರಿಸಿದ ಹಾರ್ದಿಕ್ ನಡೆ ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿತು. 50 ತಪ್ಪಿಸಲು ಹಾರ್ದಿಕ್ ಪಾಂಡ್ಯನೇ ಕಾರಣ ಎಂದು ಕಿಡಿಕಾರಿದ್ದಾರೆ.
ಹಾರ್ದಿಕ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕಾಮೆಂಟೇಟರ್, ಕ್ರಿಕೆಟ್ ತಜ್ಞ ಹರ್ಷ ಭೋಗ್ಲೆ, ಆತನ ಬೆಂಬಲಕ್ಕೆ ನಿಂತಿದ್ದಾರೆ. ಟ್ವೀಟ್ ಮೂಲಕ ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ. ವೈಯಕ್ತಿಕ ಸಾಧನೆಗಳ ಗೀಳು ಬೇಡ ಎಂದು ಬುದ್ದಿ ಮಾತು ಹೇಳಿದ್ದಾರೆ. ಇನ್ನು ಬೆಂಬಲ ಸೂಚಿಸಿರುವ ಎಬಿ ಡಿವಿಲಿಯರ್ಸ್, ಹರ್ಷ ಭೋಗ್ಲೆ ಟ್ವೀಟ್ಗೆ ಪ್ರತಿಕ್ರಿಯಿಸಿ ಅವರ ಮಾತನ್ನು ಒಪ್ಪಿದ್ದಾರೆ. ಹಾರ್ದಿಕ್ ಪರ ನಿಂತು ಭೋಗ್ಲೆ ಮಾಡಿರುವ ಟ್ವೀಟ್ ಏನು? ಈ ಮುಂದೆ ನೋಡೋಣ.
ಹರ್ಷ ಭೋಗ್ಲೆ ಟ್ವೀಟ್
ಹಾರ್ದಿಕ್ ಪಾಂಡ್ಯ ಅವರಿಂದ ತಿಲಕ್ ವರ್ಮಾ ಅರ್ಧಶತಕ ಸಿಡಿಸಲಿಲ್ಲ ಎಂಬ ಚರ್ಚೆಯಿಂದ ನಾನು ಗೊಂದಲಕ್ಕೊಳಗಾಗಿದ್ದೇನೆ. ಶತಕ ಹೊರತುಪಡಿಸಿ ಇದೊಂದು ಹೆಗ್ಗುರುತೇನಲ್ಲ. ಟಿ20 ಕ್ರಿಕೆಟ್ನಲ್ಲಿ ಹೆಗ್ಗುರುತುಗಳಿಲ್ಲ. ವೈಯಕ್ತಿಕ ಸಾಧನೆಯ ಬಗ್ಗೆ ತುಂಬಾ ಗೀಳು ಹೊಂದಿದ್ದೇವೆ. ಟಿ20 ಕ್ರಿಕೆಟ್ನಲ್ಲಿ 50 ರನ್ ಗಳಿಸುವುದೇ ವೈಯಕ್ತಿಕ ದಾಖಲೆ ಎಂಬುದನ್ನು ನಾನು ನಂಬುವುದಿಲ್ಲ. ನೀವು ಸಾಕಷ್ಟು ರನ್‌ಗಳನ್ನು ತ್ವರಿತವಾಗಿ ಮಾಡಿದರೆ (ಸರಾಸರಿ ಮತ್ತು ಸ್ಟ್ರೈಕ್ರೇಟ್), ಅದು ಮುಖ್ಯವಾಗಿರುತ್ತದೆ ಎಂದು ಹರ್ಷಾ ಭೋಗ್ಲೆ ಟ್ವೀಟ್ ಮೂಲಕ ಹೇಳಿದ್ದಾರೆ.
ಎಬಿಡಿ ಪ್ರತಿಕ್ರಿಯೆ
ಇನ್ನು ಟ್ವೀಟ್ಗೆ ಪ್ರತಿಕ್ರಿಯಿಸಿರುವ ಎಬಿ ಡಿವಿಲಿಯರ್ಸ್ ಹಾರ್ದಿಕ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಹಾರ್ದಿಕ್ ವಿರುದ್ಧವೇ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹರ್ಷ ಭೋಗ್ಲೆ ಆತನ ಪರ ನಿಂತಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಧನ್ಯವಾದಗಳು, ಧನ್ಯವಾದಗಳು, ಧನ್ಯವಾದಗಳು.. ಕೊನೆಗೂ ಒಬ್ಬರಾದರೂ ಹೇಳಿದರಲ್ಲ ಎಂದು ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಂದರೆ ಕೊನೆಗೂ ಹಾರ್ದಿಕ್ ಪಾಂಡ್ಯ ಪರ ಒಬ್ಬರಾದರೂ ಮಾತನಾಡಿದರು ಎಂದು ಎಬಿಡಿ ಟ್ವೀಟ್ ಮಾಡಿದ್ದಾರೆ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳು ಮುಗಿದಿದ್ದು, ಉಳಿದೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಗೆಲುವು ಅನಿವಾರ್ಯವಾಗಿದೆ. ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಮುಗ್ಗರಿಸಿರುವ ಭಾರತ, 3ನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇದೀಗ ನಾಲ್ಕನೇ ಟಿ20 ಪಂದ್ಯವು ಆಗಸ್ಟ್ 12ರಂದು ನಡೆಯಲಿದೆ. ಸರಣಿ ಗೆಲುವಿನ ಆಸೆ ಜೀವಂತವಾಗಿರಬೇಕು ಅಂದರೆ ಈ ಪಂದ್ಯದ ಗೆಲುವು ಅನಿವಾರ್ಯ. ಈಗಾಗಲೇ ಭಾರತ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.