logo
ಕನ್ನಡ ಸುದ್ದಿ  /  ಕ್ರಿಕೆಟ್  /  Tanveer Sangha: ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ತಂಡಕ್ಕೆ ತನ್ವೀರ್‌ ಸಂಘ ಆಯ್ಕೆ, ಅಚ್ಚರಿ ಹುಟ್ಟಿಸಿದ ಭಾರತದ ಟ್ಯಾಕ್ಸಿ ಚಾಲಕನ ಸುಪುತ್ರ

Tanveer Sangha: ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ತಂಡಕ್ಕೆ ತನ್ವೀರ್‌ ಸಂಘ ಆಯ್ಕೆ, ಅಚ್ಚರಿ ಹುಟ್ಟಿಸಿದ ಭಾರತದ ಟ್ಯಾಕ್ಸಿ ಚಾಲಕನ ಸುಪುತ್ರ

Praveen Chandra B HT Kannada

Aug 10, 2023 12:34 PM IST

google News

Tanveer Sangha: ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ತಂಡಕ್ಕೆ ತನ್ವೀರ್‌ ಸಂಘ ಆಯ್ಕೆ

    • ICC World Cup 2023: ಭಾರತ ಆತಿಥ್ಯ ವಹಿಸುವ 2023ರ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಆಸ್ಟ್ರೇಲಿಯಾ ಪ್ರಕಟಿಸಿದ ತಂಡದಲ್ಲಿ ಮಾರ್ನಸ್‌ ಲಾಬುಶೇನ್‌ (Marnus Labuschagne) ಬದಲು ಭಾರತ ಮೂಲದ ಟ್ಯಾಕ್ಸಿ ಚಾಲಕನ ಪುತ್ರ ತನ್ವೀರ್‌ ಸಂಘ (Tanveer Sangha) ಆಯ್ಕೆಯಾಗಿದ್ದಾರೆ. ಯಾರೀದು ತನ್ವೀರ್‌ ಸಂಘ, ಇವರ ಸಾಧನೆಯೇನು, ಇಲ್ಲಿದೆ ವಿವರ.
Tanveer Sangha: ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ತಂಡಕ್ಕೆ ತನ್ವೀರ್‌ ಸಂಘ ಆಯ್ಕೆ
Tanveer Sangha: ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ತಂಡಕ್ಕೆ ತನ್ವೀರ್‌ ಸಂಘ ಆಯ್ಕೆ (Sydney Thunder Twitter )

2023ರ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ (ICC World Cup 2023 ) ಆಸ್ಟ್ರೇಲಿಯಾವು ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಆದರೆ, ಸೂಪರ್‌ ಸ್ಟಾರ್‌ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಬುಶೇನ್‌ (Marnus Labuschagne) ಬದಲಿಗೆ ಹೆಚ್ಚು ಜನರಿಗೆ ಪರಿಚಯವೇ ಇಲ್ಲದ ತನ್ವೀರ್‌ ಸಂಘ (Tanveer Sangha) ಎಂಬ ಯುವ ಆಟಗಾರನಿಗೆ ಮಣೆ ಹಾಕಿದೆ. ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಜತೆಗೆ ಕಣಕ್ಕಿಳಿಯಲಿರುವ ತನ್ವೀರ್‌ ಸಂಘ ಅವರ ಹೆಸರು ಕೇಳಿದಾಗ, ನಿಮಗೂ "ಇದು ಭಾರತೀಯರ ಹೆಸರಿನಂತೆ ಇದೆ" ಎಂದೆನಿಸಬಹುದು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹೌದು, ತನ್ವೀರ್‌ ಸಂಘ ಭಾರತ ಮೂಲದ ವ್ಯಕ್ತಿ. ಭಾರತ ಮೂಲದ ಟ್ಯಾಕ್ಸಿ ಚಾಲಕನ ಸುಪುತ್ರ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

2023ರ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಆಸ್ಟ್ರೇಲಿಯಾ ಹದಿನೆಂಟು ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮುಂತಾದ ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಚ್ಚರಿಗೆ ಕಾರಣವಾಗಿರುವುದು ಈ ತಂಡದಲ್ಲಿ ಸ್ಟಾರ್‌ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಹೆಸರು ಇಲ್ಲದೆ ಇರುವುದು. ಕ್ರಿಕೆಟ್‌ ಪ್ರೇಮಿಗಳಿಗೆ ಇನ್ನಷ್ಟು ಆಶ್ಚರ್ಯ ತಂದಿರುವುದು ಆ ತಂಡದಲ್ಲಿ ತನ್ವೀರ್‌ ಸಂಘ ಎಂಬ ಬಹುತೇಕರಿಗೆ ಅಪರಿಚಿತ ಹೆಸರೊಂದು ಕಾಣಿಸಿರುವುದು.

ಯಾರೀತ ತನ್ವೀರ್‌ ಸಂಘ?

ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಮಗನಾದ ತನ್ವೀರ್‌ ಸಂಘ ಹುಟ್ಟಿದ್ದು, ಬೆಳೆದದ್ದು ಎಲ್ಲಾ ಆಸ್ಟ್ರೇಲಿಯಾದಲ್ಲಿಯೇ. ಪಂಜಾಬ್‌ನ ಜಲಾಂಧರ್‌ನಿಂದ 1990ರ ಆಸುಪಾಸಿನಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋದ ಭಾರತೀಯ ಕುಟುಂಬದಲ್ಲಿ ತನ್ವೀರ್‌ ಸಂಘ ಜನಿಸಿದನು. ಇವರ ತಂದೆ ಆರಂಭದಲ್ಲಿ ಶಿಕ್ಷಣ ಪಡೆಯುವ ಉದ್ದೇಶದಿಂದ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಇವರ ತಾಯಿ ಅಕೌಂಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಆಸ್ಟ್ರೇಲಿಯಾದಲ್ಲಿ ಜನಿಸಿದರೂ ಇದೀಗ ಒಡಿಐ ವಿಶ್ವಕಪ್‌ ಮೂಲಕ ತನ್ವೀರ್‌ ಸಂಘ ತನ್ನ ಪೂರ್ವಜರ ನೆಲದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. 2020ರಲ್ಲಿ ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ ಆಡಲು ಆರಂಭಿಸಿದ ಸಂಘ, ತನ್ನ ಹಲವು ಅಮೋಘ ಆಟಗಳ ಮೂಲಕ ಎಲ್ಲರ ಗಮನ ಸೆಳೆದಿದ್ದ. ನ್ಯೂಜಿಲೆಂಡ್‌ ವಿರುದ್ಧ ತನ್ನ 19ನೇ ವಯಸ್ಸಿನಲ್ಲಿ ಟಿ20ಐ ಸರಣಿ ಕ್ರಿಕೆಟ್‌ ಆಡಿದ್ದ ಗರಿ ಈತನ ತಲೆ ಮೇಲಿದೆ. ಈತ ಒಂದು ವಿಶೇಷ ದಾಖಲೆಗೂ ಪಾತ್ರನಾಗಿದ್ದಾನೆ. ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದ ಐದನೇ ಭಾರತೀಯ ಮೂಲದ ಆಟಗಾರ ಎಂಬ ಕೀರ್ತಿಗೆ ಪಾತ್ರವಾಗಿದ್ದಾನೆ. ಇದಕ್ಕೂ ಮೊದಲು ಈತನಂತೆ ಗುರಿಂದರ್‌ ಸಂಧು, ಸ್ಟುವರ್ಟ್‌ ಕ್ಲಾರ್ಕ್‌ ಮತ್ತು ಬ್ರಾನ್ಸ್‌ಬೈ ಕೂಪರ್‌ ಈ ಅವಕಾಶ ಪಡೆದಿದ್ದರು.

ಬಿಗ್ ಬ್ಯಾಷ್ ಲೀಗ್‌ನಲ್ಲಿ ತನ್ನ ಚೊಚ್ಚಲ ಋತುವಿನಲ್ಲೇ 21 ವಿಕೆಟ್‌ ಕಬಳಿಸಿದ ಕೀರ್ತಿಯನ್ನು ತನ್ವೀರ್‌ ಹೊಂದಿದ್ದಾರೆ. ಹದಿಹರೆಯದಲ್ಲಿ ಹುಮ್ಮಸ್ಸಿನಿಂದ ಆಡುತ್ತಿದ್ದ ಇವರ ಪ್ರತಿಭೆಯನ್ನು ಮೊದಲು ಸ್ಪಿನ್ನರ್ ಫವಾರ್ಡ್ ಅಹ್ಮದ್ ಗುರುತಿಸಿದ್ರಂತೆ. ತನ್ನ ಹದಿಹರೆಯದಲ್ಲಿ ನಿಧಾನವಾಗಿ ಬೌಲಿಂಗ್‌ ಮಾಡುವ ಬದಲು ವೇಗದ ಬೌಲಿಂಗ್‌ನಿಂದಲೇ ಆಟ ಆರಂಭಿಸಿದರು. 2020 ರ ಅಂಡರ್-19 ವಿಶ್ವಕಪ್‌ನ ಪ್ರಮುಖ ವಿಕೆಟ್‌-ಟೇಕರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಕಳೆದ ಒಂದು ವರ್ಷದಿಂದ ಇವರು ಕೆಳ ಬೆನ್ನು ನೋವಿನಿಂದ ಆಟವಾಡಿರಲಿಲ್ಲ. ಈಗ ಚೇತರಿಸಿಕೊಂಡಿದ್ದು, ಭಾರತದಲ್ಲಿ ನಡೆಯುವ ಒಡಿಐ ಏಕದಿನದಲ್ಲಿ ತನ್ನ ಪ್ರತಿಭೆಯನ್ನು ಜಗತ್ತಿನ ಮುಂದಿಡಲು ಕಾಯುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ