logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡಲು ಧೋನಿಗೆ ಆಹ್ವಾನ ನೀಡಿದ ಅಭಿಮಾನಿ; ಹೀಗಿತ್ತು ನೋಡಿ ಮಾಹಿ ಉತ್ತರ, ವಿಡಿಯೋ

ಆರ್​​ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡಲು ಧೋನಿಗೆ ಆಹ್ವಾನ ನೀಡಿದ ಅಭಿಮಾನಿ; ಹೀಗಿತ್ತು ನೋಡಿ ಮಾಹಿ ಉತ್ತರ, ವಿಡಿಯೋ

Prasanna Kumar P N HT Kannada

Dec 21, 2023 12:58 PM IST

google News

ಆರ್​​ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡಲು ಧೋನಿಗೆ ಆಹ್ವಾನ ನೀಡಿದ ಅಭಿಮಾನಿ.

    • MS Dhoni: ಅಭಿಮಾನಿಯೊಬ್ಬರು, ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಎಂಎಸ್​ ಧೋನಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆರ್​ಸಿಬಿ ಸೇರಿ ಟ್ರೋಫಿ ಗೆದ್ದು ಪ್ರಶಸ್ತಿ ಬರ ನೀಗಿಸುವಂತೆ ಮನವಿ ಮಾಡಿದ್ದಾರೆ.
ಆರ್​​ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡಲು ಧೋನಿಗೆ ಆಹ್ವಾನ ನೀಡಿದ ಅಭಿಮಾನಿ.
ಆರ್​​ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡಲು ಧೋನಿಗೆ ಆಹ್ವಾನ ನೀಡಿದ ಅಭಿಮಾನಿ.

ಇಂಡಿಯನ್ ಪ್ರೀಮಿಯರ್ ಲೀಗ್​ 16 ಆವೃತ್ತಿಗಳನ್ನು (Indian Premier League) ಪೂರ್ಣಗಳಿಸಿ 17ನೇ ಆವೃತ್ತಿಗೆ ಕಾಲಿಡುತ್ತಿದೆ. ಆದರೂ ವಿಶ್ವದ ಜನಪ್ರಿಯ ಕ್ರಿಕೆಟ್​ ಫ್ರಾಂಚೈಸಿ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಇನ್ನೂ ಟ್ರೋಫಿ ಎತ್ತಿ ಹಿಡಿದಿಲ್ಲ. 3 ಬಾರಿ ಫೈನಲ್ ಪ್ರವೇಶಿಸಿದರೂ ಟ್ರೋಫಿ ಎಂಬುದು ಮರೀಚಿಕೆಯಾಗಿದೆ.

ಆರ್​​ಸಿಬಿ ಟ್ರೋಫಿ ಗೆಲ್ಲದಿದ್ದರೂ ವಿಶ್ವದಾದ್ಯಂತ ಮಿಲಿಯನ್​ಗಟ್ಟಲೇ ಅಭಿಮಾನಿಗಳನ್ನು ಸಂಪಾದಿಸಿದೆ. ಪ್ರತಿ ಸಲ ಈ ಸಲ ಕಪ್​ ನಮ್ದೇ ಎಂಬ ಘೋಷವಾಕ್ಯದೊಂದಿಗೆ ಕಣಕ್ಕಿಳಿದರೂ ನಿರಾಸೆಯೊಂದಿಗೆ ಟೂರ್ನಿ ಮುಗಿಸುತ್ತಿದೆ. ಹರಾಜಿನ ಬಳಿಕ ಮುಂದಿನ ಸಲ ಆರ್​ಸಿಬಿ ಕಪ್ ಗೆಲ್ಲುತ್ತದೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.

ಆರ್​​ಸಿಬಿಗೆ ಬರುವಂತೆ ಧೋನಿಗೆ ಆಹ್ವಾನ

ಇದರ ನಡುವೆ ಅಭಿಮಾನಿಯೊಬ್ಬರು, ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಎಂಎಸ್​ ಧೋನಿಗೆ (MS Dhoni), ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆರ್​ಸಿಬಿ ಸೇರಿ ಟ್ರೋಫಿ ಗೆದ್ದು ಪ್ರಶಸ್ತಿ ಬರ ನೀಗಿಸುವಂತೆ ಮನವಿ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾಹಿಗೆ ಈ ಪ್ರಶ್ನೆಗೆ ಎದುರಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂರು ಐಸಿಸಿ ಟ್ರೋಫಿ ಗೆದ್ದಿರುವ ಎಂಎಸ್ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಪರ ದಾಖಲೆಯ ಐದು ಟ್ರೋಫಿಗಳನ್ನು ಗೆದ್ದಿದ್ದಾರೆ. ಆ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಗಾಗಿ ಕಪ್​ ಗೆಲ್ಲದ ಆರ್​ಸಿಬಿಗೆ ಬರುವಂತೆ ಧೋನಿಗೆ ಆಹ್ವಾನ ನೀಡಿದ್ದಾರೆ.

ಅಭಿಮಾನಿ ಪ್ರಶ್ನೆ ಹೀಗಿತ್ತು!

ನಾನು 16 ವರ್ಷಗಳಿಂದ ಆರ್​ಸಿಬಿ ಕಟ್ಟಾ ಅಭಿಮಾನಿ. ನೀವು ಸಿಎಸ್​​ಕೆ 5 ಟ್ರೋಫಿ ಗೆದ್ದಿದ್ದಿರಿ. ನಮ್ಮ ತಂಡಕ್ಕೆ ಬಂದು ಬೆಂಬಲಿಸಿ, ಪ್ರಶಸ್ತಿ ಗೆಲ್ಲಿಸಿಕೊಡಿ ಎಂದು ಧೋನಿಗೆ ಪ್ರಶ್ನೆ ಹಾಕುತ್ತಾರೆ ಯುವಕನೊಬ್ಬ. ಅಭಿಮಾನಿಯ ಮನವಿ ಉತ್ತರಿಸಿದ ಧೋನಿ, ಜಾಣತನ ತೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

ಧೋನಿ ಕೊಟ್ಟ ಉತ್ತರ ಇಲ್ಲಿದೆ

ಇದಕ್ಕೆ ಉತ್ತರಿಸಿದ ಧೋನಿ, ಅವರದು (ಆರ್​ಸಿಬಿ) ತುಂಬಾ ಒಳ್ಳೆಯ ತಂಡ. ಕ್ರಿಕೆಟ್​ನಲ್ಲಿ ಬೇಕಿರುವಂತೆ ತಂಡದಲ್ಲಿ ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿಲ್ಲ. ನಾವು ಐಪಿಎಲ್ ಬಗ್ಗೆ ಮಾತಾಡುವುದಾದರೆ, 10 ತಂಡಗಳು ಪೂರ್ಣ ಪ್ರಮಾಣದ ಆಟಗಾರರನ್ನು ಹೊಂದಿದ್ದರೆ, ಆಗ ಎಲ್ಲಾ ತಂಡಗಳೂ ಸಹ ಬಲಿಷ್ಠ ತಂಡಗಳೇ ಎಂದಿದ್ದಾರೆ ಧೋನಿ.

ಆದರೆ ಗಾಯ ಸೇರಿದಂತೆ ಹಲವು ಕಾರಣಗಳಿಂದ ನೀವು ಕೆಲವು ಆಟಗಾರರನ್ನು ಕಳೆದುಕೊಂಡಿದ್ದು ಹಿನ್ನಡೆಯಾಗಿದೆ. ಆದರೆ, ಆರ್​ಸಿಬಿ ಕೂಡ ಉತ್ತಮ ತಂಡ. ಐಪಿಎಲ್‌ನಲ್ಲಿ ಎಲ್ಲರಿಗೂ ಉತ್ತಮ ಅವಕಾಶ ಇದೆ. ಸದ್ಯಕ್ಕೆ ನಾನು ನನ್ನ ಸ್ವಂತ ತಂಡದ (ಸಿಎಸ್​ಕೆ) ಬಗ್ಗೆ ಚಿಂತಿಸಲು ಹಲವು ವಿಷಯಗಳಿವೆ ಎಂದು ಹೇಳಿದ್ದಾರೆ ಮಾಹಿ.

ಆದರೆ, ಐಪಿಎಲ್​ನ ಪ್ರತಿ ತಂಡಕ್ಕೂ ಶುಭ ಹಾರೈಸುತ್ತೇನೆಯೇ ಹೊರತು ಸದ್ಯಕ್ಕೆ ನಾನು ಹೆಚ್ಚಿನದ್ದನ್ನು ಮಾಡಲು ಸಾಧ್ಯವಿಲ್ಲ. ಇನ್ನೊಂದು ತಂಡವನ್ನು ಬೆಂಬಲಿಸಲು ಅಥವಾ ಸಹಾಯ ಮಾಡಲು ನಾನು ಯತ್ನಿಸಿದರೆ, ನಮ್ಮ ಅಭಿಮಾನಿಗಳು ಏನನ್ನುತ್ತಾರೆ. ನೀವೇ ಹೇಳಿ ಎಂದು ಧೋನಿ ಉತ್ತರಿಸಿ ನಕ್ಕರು.

ಮಾಹಿ ಸಜ್ಜು

2024ರ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಧೋನಿ ಸಜ್ಜಾಗಿದ್ದಾರೆ. ಆದರೆ 2023ರ ಟೂರ್ನಿ ಅವರ ಪಾಲಿಗೆ ಕೊನೆಯದು ಎಂದು ಹಲವರು ಭಾವಿಸಿದ್ದರು. ಈ ವರ್ಷ ಸಿಎಸ್​ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಧೋನಿ, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಫಿಟ್ ಆಗಿದ್ದು ಸಿಎಸ್​ಕೆಗೆ ಮತ್ತೊಂದು ಪ್ರಶಸ್ತಿ ಗೆಲ್ಲಿಸಿಕೊಡುವ ಇರಾದೆಯಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ