Video: ಹರ್ಷಲ್ ಪಟೇಲ್ ಓವರ್‌ನಲ್ಲಿ 25 ರನ್ ಸಿಡಿಸಿದ ಅಭಿಷೇಕ್ ಪೊರೆಲ್; ಇಂಪ್ಯಾಕ್ಟ್ ಮೂಡಿಸಿದ 21ರ ಹರೆಯದ ಡೆಲ್ಲಿ ಆಟಗಾರ
Mar 23, 2024 07:51 PM IST
ಹರ್ಷಲ್ ಪಟೇಲ್ ಓವರ್‌ನಲ್ಲಿ 25 ರನ್ ಸಿಡಿಸಿದ ಅಭಿಷೇಕ್ ಪೊರೆಲ್
- Abhishek Porel: ಐಪಿಎಲ್ 2024ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇಂಪ್ಯಾಕ್ಸ್ ಆಟಗಾರ ಅಭಿಷೇಕ್ ಪೊರೆಲ್ ಅಬ್ಬರಿಸಿದ್ದಾರೆ. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್‌ನಲ್ಲಿ ಒಟ್ಟು 25 ರನ್ ಸಿಡಿಸಿ ಭಾರಿ ನಿರೀಕ್ಷೆ ಮೂಡಿಸಿದ್ದಾರೆ.
ಐಪಿಎಲ್ ಎಂಬುದು ದುಡ್ಡಿನ ವಿಷಯದಲ್ಲಿ ಮಾತ್ರವೇ ಶ್ರೀಮಂತ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲಿ ತೆರೆಮರೆಯಲ್ಲಿರುವ ಪ್ರತಿಭಾವಂತ ಆಟಗಾರರನ್ನು ಜಗತ್ತಿಗೆ ಪರಿಚಯಿಸುವ ಅತಿ ಶ್ರೀಮಂತ ಕ್ರೀಡಾಕೂಟವೂ ಹೌದು. ಈಗಾಗಲೇ ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ಆಟಗಾರರನ್ನು ಗುರುತಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್, ಪ್ರಸ್ತುತ ಆರಂಭವಾಗಿರುವ 2024ರ ಆವೃತ್ತಿಯಲ್ಲೂ ಅದೇ ಸಂಪ್ರದಾಯ ಮುಂದುವರೆಸಿದೆ. ಚಂಡೀಗಢದಲ್ಲಿ ಮಾರ್ಚ್ 23ರ ಶನಿವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Punjab Kings vs Delhi Capitals) ತಂಡಗಳ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತೋರ್ವ ಯುವ ಪ್ರತಿಭೆ ಜಗತ್ತಿಗೆ ಪರಿಚಿತರಾಗಿದ್ದಾರೆ. ಅವರೇ 21 ವರ್ಷದ ಅಭಿಷೇಕ್ ಪೊರೆಲ್.
ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಆಟಗಾರ, ಡೆಲ್ಲಿ ತಂಡದ ಮೊತ್ತವನ್ನು ಹಿಗ್ಗಿಸುವ ಮೂಲಕ ಪಂಜಾಬ್‌ಗೆ ಸ್ಪರ್ಧಾತ್ಮಕ ಪೈಪೋಟಿ ನೀಡುವಲ್ಲಿ ನೆರವಾದರು. ಪಂದ್ಯದಲ್ಲಿ ಟಾಸ್ ಗೆದ್ದ ಶಿಖರ್ ಧವನ್ ನೇತೃತ್ವದ ಪಂಜಾಬ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡವು, ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು.
ತಂಡದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ 29 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 20 ರನ್ ಕಲೆ ಹಾಕಿದರು. 3ನೇ ಕ್ರಮಾಂಕದ ಆಟಗಾರ ಶಾಯ್ ಹೋಪ್ 25 ಎಸೆತಗಳಲ್ಲಿ 33 ರನ್ ಸಿಡಿಸಿ ಔಟಾದರು. ರಿಷಭ್ ಪಂತ್ 18 ರನ್ ಸಿಡಿಸಿದರೆ, ರಿಕಿ ಭುಯಿ (3), ಟ್ರಿಸ್ಟಾನ್ ಸ್ಟಬ್ಸ್ (5) ವಿಫಲರಾದರು. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅಕ್ಷರ್ ಪಟೇಲ್ 13 ಎಸೆತಗಳಲ್ಲಿ 21 ರನ್ ಗಳಿಸಲಷ್ಟೇ ಶಕ್ತರಾದರು. ಸುಮಿತ್ ಕುಮಾರ್ ಕೂಡಾ 2 ರನ್ ಗಳಿಸಿ ನಿರ್ಗಮಿಸಿದರು.
ಇದನ್ನೂ ಓದಿ | IPL 2024: ಸ್ಯಾಮ್ ಕರನ್, ಲಿವಿಂಗ್‌ಸ್ಟನ್ ಅಬ್ಬರಕ್ಕೆ ಬೆದರಿದ ಡೆಲ್ಲಿ; ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಶುಭಾರಂಭ
ಈ ವೇಳೆ ಬದಲಿ ಆಟಗಾರನಾಗಿ (ಇಂಪ್ಯಾಕ್ಸ್ ಸಬ್ಸ್ಟಿಟ್ಯೂಟ್) ಅಭಿಷೇಕ್ ಪೊರೆಲ್ ಕಣಕ್ಕಿಳಿದರು. 18ನೇ ಓವರ್‌ನ ಮೊದಲ ಎಸೆತದಲ್ಲಿ ಅಕ್ಷರ್ ಔಟಾದ ನಂತರ ಇಂಪ್ಯಾಕ್ಟ್ ಆಟಗಾರನಾಗಿ ಅಭಿಷೇಕ್ ಪೊರೆಲ್ ಮೈದಾನಕ್ಕಿಳಿದರು. ಈ ವೇಳೆ ಡೆಲ್ಲಿ ತಂಡದ ಮೊತ್ತವು 17.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 137 ರನ್ ಆಗಿತ್ತು. ತಂಡದ ಮೊತ್ತವನ್ನು ಹಿಗ್ಗಿಸಿ ಸ್ಪರ್ದಾತ್ಮಕ ಗುರಿ ನೀಡುವ ಸವಾಲು ಪೊರೆಲ್ ಮುಂದಿತ್ತು. ಆ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ಶುಭಾರಂಭ ಮಾಡಿದರು. ಅರ್ಷದೀಪ್ ಸಿಂಗ್ ಎಸೆದ 19ನೇ ಓವರ್‌ನಲ್ಲಿ ಅಭಿಷೇಕ್‌ಗೆ ಒಂದೂ ಎಸೆತ ಸಿಗಲಿಲ್ಲ. ಆದರೆ, ಕೊನೆಯ ಓವರ್‌ನ ಮೊದಲ ಎಸೆತದಿಂದಲೇ ಸ್ಟ್ರೈಕ್ ಪಡೆದುಕೊಂಡರು.
ಹರ್ಷಲ್ ಪಟೇಲ್ ಎಸೆದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಪೊರೆಲ್, ಎರಡನೇ ಎಸತವನ್ನು ಸಿಕ್ಸರ್‌ಗಟ್ಟಿದರು. ಮೂರನೇ ಮತ್ತು ನಾಲ್ಕನೇ ಎಸೆತವನ್ನು ಮತ್ತೆ ಬೌಂಡರಿ ಲೈನ್ ಗೆರೆ ದಾಟಿಸಿದರು. ಈ ವೇಳೆ ಹರ್ಷಲ್ ಪಟೇಲ್ ಒತ್ತಡವೂ ಹೆಚ್ಚಾಯ್ತು. ಐದನೇ ಎಸೆತವನ್ನು ಮತ್ತಷ್ಟು ಬಲವಾಗಿ ಹೊಡೆದ ಪೊರೆಲ್, ಮತ್ತೆ ಸ್ಕ್ವಾರ್ ಲೆಗ್‌ನತ್ತ ಬಾರಿಸಿ ಆರು ರನ್ ಕಲೆ ಹಾಕಿದರು. ಅಂತಿಮ ಎಸೆತದಲ್ಲಿ ಪೊರೆಲ್ ಒಂದು ರನ್ ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ರನ್ ಓಡುವ ವೇಳೆ ಕುಲ್ದೀಪ್ ಯಾದವ್ ರನ್ ಔಟ್ ಆದರು.
ಎದುರಿಸಿದ ಕೇವಲ 10 ಎಸೆತಗಳಲ್ಲಿ ಪೊರೆಲ್ ಅಜೇಯ 32 ರನ್ ಸಿಡಿಸಿದರು. ನಾಲ್ಕು ಬೌಂಡರಿಗಳು ಮತ್ತು ಎರಡು ಸ್ಫೋಟಕ ಸಿಕ್ಸರ್‌ಗಳ ನೆರವಿಂದ, ಡೆಲ್ಲಿ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್‌ನಲ್ಲಿ ಪೊರೆಲ್ ಬರೋಬ್ಬರಿ 25 ರನ್ ಕಲೆ ಹಾಕಿದರು.