logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಇಂಗ್ಲೆಂಡ್; ಪಾಕಿಸ್ತಾನ ವಿರುದ್ಧ‌ ಟಿ20 ಸರಣಿ ಜಯ

ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಇಂಗ್ಲೆಂಡ್; ಪಾಕಿಸ್ತಾನ ವಿರುದ್ಧ‌ ಟಿ20 ಸರಣಿ ಜಯ

Jayaraj HT Kannada

May 31, 2024 10:43 AM IST

google News

ಪಾಕಿಸ್ತಾನ ವಿರುದ್ಧ‌ ಟಿ20 ಸರಣಿ ಗೆದ್ದ ಇಂಗ್ಲೆಂಡ್

    • ಪಾಕಿಸ್ತಾನ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ವಶಪಡಿಸಿಕೊಂಡಿದೆ. ಮಳೆಯಿಂದಾಗಿ ಎರಡು ಪಂದ್ಯಗಳು ರದ್ದಾಗಿದ್ದು, ಎರಡನೇ ಮತ್ತು ನಾಲ್ಕನೇ ಟಿ20 ಪಂದ್ಯಗಳು ಮಾತ್ರ ನಡೆದಿವೆ. ಸರಣಿ ಗೆಲುವಿನೊಂದಿಗೆ ಆಂಗ್ಲರು ನ್ಯೂಯಾರ್ಕ್‌ಗೆ ಹಾರಲಿದ್ದಾರೆ.
ಪಾಕಿಸ್ತಾನ ವಿರುದ್ಧ‌ ಟಿ20 ಸರಣಿ ಗೆದ್ದ ಇಂಗ್ಲೆಂಡ್
ಪಾಕಿಸ್ತಾನ ವಿರುದ್ಧ‌ ಟಿ20 ಸರಣಿ ಗೆದ್ದ ಇಂಗ್ಲೆಂಡ್ (Action Images via Reuters)

ಮಹತ್ವದ ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ‌ಅಭ್ಯಾಸ ಸರಣಿಯಾಗಿ ನಡೆದ ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟಿ20 ಸರಣಿಯಲ್ಲಿ ಪಾಕ್‌ ಮುಗ್ಗರಿಸಿದೆ. ತವರಿನಲ್ಲಿ ನಡೆದ ಸರಣಿಯ ನಾಲ್ಕನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್‌, 2-0 ಅಂತರದಿಂದ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯ ಮಳೆಯಿಂದ ರದ್ದಾಯಿತು. ಉಳಿದ ಎರಡು ಪಂದ್ಯಗಳಲ್ಲಿ ಗೆದ್ದ ಆಂಗ್ಲರು ಸರಣಿ ವಶಪಡಿಸಿಕೊಂಡಿದ್ದಾರೆ. ಆ ಮೂಲಕ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡುವುದಕ್ಕೂ ಮುನ್ನ ಆಂಗ್ಲರ ಆತ್ಮವಿಶ್ವಾಸ ಹೆಚ್ಚಿದೆ.

ಗುರುವಾರ ರಾತ್ರಿ ಲಂಡನ್‌ನಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಏಳು ವಿಕೆಟ್‌ಗಳಿಂದ ಸೋಲು ಕಂಡಿತು. ಬೌಲಿಂಗ್‌ನಲ್ಲಿ ವೇಗಿ ಮಾರ್ಕ್ ವುಡ್ ಮತ್ತು ಸ್ಪಿನ್ನರ್ ಆದಿಲ್ ರಶೀದ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ನಿರ್ಣಾಯಕ ವಿಕೆಟ್‌ ಕಬಳಿಸಿದರು. ಅತ್ತ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಆರಂಭದಲ್ಲೇ ಸ್ಫೋಟಕ ಆಟವಾಡುವ ಮೂಲಕ ತಂಡದ ಸರಣಿ ಗೆಲುವಿಗೆ ನೆರವಾದರು.

ಅಂತಿಮ ಟಿ20 ಪಂದ್ಯದಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ಬೌಲರ್‌ಗಳು, ಆರಂಭದಲ್ಲಿ ಭಾರಿ ರನ್‌ ಬಿಟ್ಟುಕೊಟ್ಟರು. ಪಾಕ್‌ ಆರಂಭಿಕ ಜೋಡಿಯಾದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್, ಉತ್ತಮ ಆಟವಾಡಿದರು. ಇವರಿಬ್ಬರು ಕೇವಲ 5.3 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿಸಿದರು. ಪವರ್‌ಪ್ಲೇ ಕೊನೆಯ ಎಸೆತದಲ್ಲಿ, ಈ ಜೊತೆಯಾಟ ಕೊನೆಗೊಂಡಿತು. 22 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 36 ರನ್ ಗಳಿಸಿದ್ದ ನಾಯಕ ಬಾಬರ್, ಜೋಫ್ರಾ ಆರ್ಚರ್ ಎಸೆತದಲ್ಲಿ ಔಟಾದರು.

ಆ ಬಳಿಕ ಸ್ಪಿನ್ನರ್‌ಗಳಾದ ರಶೀದ್ ಹಾಗೂ ಮೊಯೀನ್ ಅಲಿ ಪಾಕಿಸ್ತಾನದ ಬ್ಯಾಟಿಂಗ್‌ ಲೈನಪ್‌ಗೆ ಅಡ್ಡಿಯಾದರು. ಒಂದು ಹಂತದಲ್ಲಿ ಬೃಹತ್‌ ರನ್‌ ಪೇರಿಸುವ ಸುಳಿವು ನೀಡಿದ್ದ ಪಾಕಿಸ್ತಾನ 10.2 ಓವರ್ ಗಳಲ್ಲಿ 86 ರನ್ ವೇಳೆಗೆ 5 ವಿಕೆಟ್ ಕಳೆದುಕೊಂಡಿತು. ರಿಜ್ವಾನ್ ಮತ್ತು ಶದಾಬ್ ಖಾನ್ ವಿಕೆಟ್‌ ಪಡೆಯುವ ಮೂಲಕ ರಶೀದ್ ಪಾಕಿಸ್ತಾನ ಬ್ಯಾಟರ್‌ಗಳಿಗೆ ಬೇಲಿ ಹಾಕಿದರು.

ಪಾಕ್‌ ಆಲೌಟ್

ಉಸ್ಮಾನ್ ಖಾನ್ ಹಾಗೂ ಇಫ್ತಿಕರ್ ಅಹ್ಮದ್ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡ 100 ರನ್ ಗಡಿ ದಾಟಿತು. ಉಸ್ಮಾನ್ 21 ಎಸೆತಗಳಲ್ಲಿ 38 ರನ್‌ ಗಳಿಸಿದರು. ತಂಡದ ಕೆಳ ಕ್ರಮಾಂಕದಿಂದಲೂ ನಿರೀಕ್ಷಿತ ರನ್‌ ಬರದ ಕಾರಣ ಅಂತಿಮವಾಗಿ ಪಾಕ್‌ 19.5 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲೌಟ್ ಆಯಿತು.

ಮಾರ್ಕ್ ವುಡ್ 4 ಓವರ್ ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ. ಆರ್ಚರ್, ಜೋರ್ಡಾನ್ ಮತ್ತು ಮೊಯೀನ್ ತಲಾ ಒಂದು ವಿಕೆಟ್ ಪಡೆದರು.

ರನ್ ಚೇಸಿಂಗ್‌ ವೇಳೆ ಇಂಗ್ಲೆಂಡ್ ಆರಂಭಿಕ ಆಟಗಾರರಾದ ಸಾಲ್ಟ್ ಮತ್ತು ಬಟ್ಲರ್ ಅಬ್ಬರಿಸಿದರು. ಪವರ್‌ಪ್ಲೇ ಮೊದಲ ಆರು ಓವರ್‌ಗಳಲ್ಲಿಯೇ ಗುರಿಗೆ ಬೇಕಾದ ಅರ್ಧದಷ್ಟು ರನ್‌ ಹರಿದು ಬಂತು. ನಸೀಮ್ ಶಾ ಅವರು ತಮ್ಮ ಎರಡು ಓವರ್‌ಗಳಲ್ಲಿ 33 ರನ್ ಬಿಟ್ಟುಕೊಟ್ಟರು. ಪವರ್‌ಪ್ಲೇನ ಮೊದಲ 6 ಓವರ್‌ಗಳಲ್ಲಿ ಇಂಗ್ಲೆಂಡ್ 78/0 ರನ್‌ ಗಳಿಸಿತು. ಸಾಲ್ಟ್ 4 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 45 ರನ್ ಗಳಿಸಿ ರೌಫ್‌ಗೆ ವಿಕೆಟ್‌ ನೀಡಿದರು. ಇಂಗ್ಲೆಂಡ್ ನಾಯಕ ಬಟ್ಲರ್‌ 21 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 39 ರನ್ ಗಳಿಸಿದರು. ಆರ್‌ಸಿಬಿ ಆಟಗಾರ ವಿಲ್ ಜಾಕ್ಸ್ 20 ರನ್‌ ಕಲೆ ಹಾಕಿದರು. ಅಂತಿಮವಾಗಿ ಜಾನಿ ಬೇರ್‌ಸ್ಟೋ ಮತ್ತು ಹ್ಯಾರಿ ಬ್ರೂಕ್ ಜೋಡಿ 15.3 ಓವರ್‌ಗಳಲ್ಲಿ ತಂಡವನ್ನು ಗುರಿ ತಲುಪಿಸಿದರು.

ಆದಿಲ್ ರಶೀದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ನಾಯಕ ಜಾಸ್‌ ಬಟ್ಲರ್‌ ಸರಣಿ ಶ್ರೇಷ್ಠರಾದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ