ಅಫ್ಘನ್ ಬೇಟೆ ನಂತರ ಇಂಗ್ಲೆಂಡ್ ಶಿಕಾರಿಗೆ ಭಾರತ ಸಿದ್ಧ; ತಂಡಗಳು, ವೇಳಾಪಟ್ಟಿ, ನೇರಪ್ರಸಾರ, ಮುಖಾಮುಖಿ ದಾಖಲೆ ವಿವರ ಹೀಗಿದೆ
Jan 19, 2024 09:05 PM IST
ಭಾರತ ತಂಡ.
- India vs England Test Series: ಅಫ್ಘಾನಿಸ್ತಾನ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ನಂತರ ಭಾರತ ತಂಡ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಸರಣಿ ಆರಂಭ ಯಾವಾಗ? ನೇರ ಪ್ರಸಾರ, ಮುಖಾಮುಖಿ ದಾಖಲೆ ವಿವರ ಇಲ್ಲಿದೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡ ಟೀಮ್ ಇಂಡಿಯಾ ಇದೀಗ ಜನವರಿ 25ರಿಂದ ಪ್ರಾರಂಭವಾಗುವ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ (India vs England Test) ಸರಣಿಗೆ ಸಜ್ಜಾಗುತ್ತಿದೆ. ತವರಿನಲ್ಲಿ ಕ್ರಿಕೆಟ್ ಜನಕರನ್ನು ಬಗ್ಗುಬಡಿದು ಐತಿಹಾಸಿಕ ಸರಣಿಗೆ ಮುತ್ತಿಕ್ಕಲು ರೋಹಿತ್ ಪಡೆ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಬಳಿಕ ಪ್ರಮುಖ ಆಟಗಾರರು ತಂಡಕ್ಕೆ ಮರಳಲಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಲಯನ್ಸ್ ವಿರುದ್ಧ ಸತತ ಶತಕ ಸಿಡಿಸಿ ಮಿಂಚಿದ 30 ವರ್ಷದ ಆರ್ಸಿಬಿ ಸ್ಟಾರ್ ಬ್ಯಾಟರ್
ಬ್ರಿಟಿಷರ ಬೇಟೆಗೆ ಎದುರು ನೋಡುತ್ತಿರುವ ಟೀಮ್ ಇಂಡಿಯಾ, ಕೊನೆಯದಾಗಿ ತನ್ನ ಟೆಸ್ಟ್ ಪಂದ್ಯದಲ್ಲಿ ಇದೇ ವರ್ಷ ಜನವರಿ 4ರಂದು ಆಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದ್ದ ಭಾರತ, ಸರಣಿಯನ್ನು 1-1ರಲ್ಲಿ ಡ್ರಾ ಸಾಧಿಸಿತ್ತು. ಇದೀಗ ಮುಂದಿನ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿದೆ. ಹಾಗಾದರೆ ಕ್ರಿಕೆಟ್ ಜಗತ್ತೇ ಕಾಯುತ್ತಿರುವ ಹೈವೋಲ್ಟೇಜ್ ಸೀರೀಸ್ ನೇರ ಪ್ರಸಾರ ಹೇಗೆ? ವೇಳಾಪಟ್ಟಿ ಹೇಗಿದೆ? ತಂಡಗಳು, ಮುಖಾಮುಖಿ ಸಾಧನೆ ಎಲ್ಲ ವಿವರ ಇಲ್ಲಿದೆ.
ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ
ಬಹುನಿರೀಕ್ಷಿತ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಜ. 25ರಿಂದ ಆರಂಭವಾಗಲಿದ್ದು, ಈ ಸರಣಿ ಮಾರ್ಚ್ 11ರವರೆಗೆ ನಡೆಯುತ್ತದೆ. ಒಟ್ಟು 5 ಪಂದ್ಯಗಳಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ. ಒಂದೂವರೆ ತಿಂಗಳ ಕಾಲ ಪ್ರವಾಸದಲ್ಲಿ ಇಂಗ್ಲೆಂಡ್, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಪಕ್ಕಾ ಯೋಜನೆ ಹಾಕಿಕೊಳ್ಳುತ್ತಿದೆ. ಈಗಾಗಲೇ ಇಂಗ್ಲೆಂಡ್ ಲಯನ್ಸ್ ಮತ್ತು ಭಾರತ ಎ ನಡುವೆ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ.
ಐದು ಟೆಸ್ಟ್ಗಳ ವೇಳಾಪಟ್ಟಿ ಇಲ್ಲಿದೆ
ಮೊದಲನೇ ಟೆಸ್ಟ್: ಜನವರಿ 25-29, ಹೈದರಾಬಾದ್ (ಬೆಳಿಗ್ಗೆ 9.30)
ಎರಡನೇ ಟೆಸ್ಟ್: ಫೆಬ್ರವರಿ 2-6, ವಿಶಾಖಪಟ್ಟಣಂ (ಬೆಳಿಗ್ಗೆ 9.30)
ಮೂರನೇ ಟೆಸ್ಟ್: ಫೆಬ್ರವರಿ 15-19, ರಾಜ್ಕೋಟ್ (ಬೆಳಿಗ್ಗೆ 9.30)
ನಾಲ್ಕನೇ ಟೆಸ್ಟ್: ಫೆಬ್ರವರಿ 23-27, ರಾಂಚಿ (ಬೆಳಿಗ್ಗೆ 9.30)
ಐದನೇ ಟೆಸ್ಟ್: ಮಾರ್ಚ್ 7-11, ಧರ್ಮಶಾಲಾ (ಬೆಳಿಗ್ಗೆ 9.30)
ನೇರ ಪ್ರಸಾರ
ಸ್ಪೋರ್ಟ್ಸ್ 18 ನೆಟ್ವರ್ಕ್ ಚಾನೆಲ್ನಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ ಮೊಬೈಲ್ ಅಪ್ಲಿಕೇಷನ್ ಜಿಯೋ ಸಿನಿಮಾದಲ್ಲೂ ಲೈವ್ಸ್ಟ್ರೀಮಿಂಗ್ ನೋಡಬಹುದು.
ಉಭಯ ತಂಡಗಳ ನಡುವಿನ ಇತ್ತೀಚಿನ ಟೆಸ್ಟ್ ಫಲಿತಾಂಶ
2021ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್, ಪರಾಭವಗೊಂಡಿತ್ತು. 3-1ರಲ್ಲಿ ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಇನ್ನು ಅದೇ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಐದು ಪಂದ್ಯಗಳನ್ನು 2-2ರಲ್ಲಿ ಡ್ರಾಗೊಳಿಸಿತ್ತು. ಇದೀಗ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಅವರ ನೇತೃತ್ವದಲ್ಲಿ ಬಜ್ಬಾಲ್ ಮೂಲಕ ಭಾರತ ತಂಡಕ್ಕೆ ಆಘಾತ ನೀಡಲು ಭರ್ಜರಿ ತಯಾರಿ ನಡೆಸಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 131
ಭಾರತ ಗೆಲುವು - 31
ಇಂಗ್ಲೆಂಡ್ ಗೆಲುವು - 50
ಡ್ರಾ ಪಂದ್ಯಗಳು - 50
ಭಾರತದ ಸರಣಿಗೆ ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ (ವಿಕೆಟ್ ಕೀಪರ್), ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಆಲಿ ಪೋಪ್, ಆಲ್ಲಿ ರಾಬಿನ್ಸನ್, ಜೋ ರೂಟ್ಸನ್, ಮಾರ್ಕ್ ವುಡ್.
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಆವೇಶ್ ಖಾನ್.