logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್‌ ವಿರುದ್ಧ ಪವಾಡದ ನಿರೀಕ್ಷೆಯಲ್ಲಿ ಪಾಕಿಸ್ತಾನ; ಚಾಂಪಿಯನ್ಸ್‌ ಟ್ರೋಫಿ ಅರ್ಹತೆಗೆ ಆಂಗ್ಲರಿಗೂ ಬೇಕು ಗೆಲುವು

ಇಂಗ್ಲೆಂಡ್‌ ವಿರುದ್ಧ ಪವಾಡದ ನಿರೀಕ್ಷೆಯಲ್ಲಿ ಪಾಕಿಸ್ತಾನ; ಚಾಂಪಿಯನ್ಸ್‌ ಟ್ರೋಫಿ ಅರ್ಹತೆಗೆ ಆಂಗ್ಲರಿಗೂ ಬೇಕು ಗೆಲುವು

Jayaraj HT Kannada

Nov 11, 2023 08:42 AM IST

google News

ಇಂಗ್ಲೆಂಡ್ vs ಪಾಕಿಸ್ತಾನ

    • England vs Pakistan ICC ODI World Cup 2023: ಏಕದಿನ ವಿಶ್ವಕಪ್‌ 2023ರ‌ 44ನೇ ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳು ಕೋಲ್ಕತ್ತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.
ಇಂಗ್ಲೆಂಡ್ vs ಪಾಕಿಸ್ತಾನ
ಇಂಗ್ಲೆಂಡ್ vs ಪಾಕಿಸ್ತಾನ

ಒಂದು ತಂಡಕ್ಕೆ ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇಡುವ ತವಕ. ಮತ್ತೊಂದು ತಂಡಕ್ಕೆ ಮುಂಬರುವ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಉಳಿಸಿಕೊಳ್ಳಬೇಕಾದ ಒತ್ತಡ. ವಿಶ್ವದ ಎರಡು ಬಲಿಷ್ಠ ತಂಡಗಳು ನವೆಂಬರ್‌ 11ರ ಶನಿವಾರ ಮಹತ್ವದ ಮುಖಾಮುಖಿಯಲ್ಲಿ ಕಾದಾಡುತ್ತಿವೆ. ಏಕದಿನ ವಿಶ್ವಕಪ್‌ 2023ರ‌ (ICC ODI World Cup 2023) 44ನೇ ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ (England vs Pakistan) ತಂಡಗಳು ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ (Eden Gardens) ಮೈದಾನದಲ್ಲಿ ಪೈಪೋಟಿ ನಡೆಸುತ್ತಿವೆ.

ಕೊನೆಯ ಆವೃತ್ತಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ, ಪಾಕಿಸ್ತಾನ ತಂಡವು ನೆಟ್‌ ರನ್‌ ರೇಟ್‌ನಿಂದಾಗಿ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿತ್ತು. ಈ ಬಾರಿಯೂ ಬಹುತೇಕ ಅದೇ ವಾತಾವರಣ ಇದೆ. ಮೇಲ್ನೋಟಕ್ಕೆ ಅಸಾಧ್ಯ ಎಂಬಂತೆ ಕಾಣುತ್ತಿರುವಂತೆ ಆಂಗ್ಲರನ್ನು ಭಾರಿ ಅಂತರದಿಂದ ಸೋಲಿಸಿದರೆ ಮಾತ್ರ ಭಾರತದೊಂದಿಗೆ ಸಮಿಫೈನಲ್‌ ಆಡುವ ಅವಕಾಶ ಬಾಬರ್‌ ಪಡೆಗೆ ಸಿಗಲಿದೆ. ಇತ್ತ ಇಂಗ್ಲೆಂಡ್‌ ತಂಡವೂ ಅಷ್ಟೆ. ಟೂರ್ನಿಯುದ್ದಕ್ಕೂ ತೀರಾ ಕಳಪೆ ಪ್ರದರ್ಶನ ನೀಡುತ್ತಿರುವ ಬಟ್ಲರ್‌ ಬಳಗ 2025ರ ಆವೃತ್ತಿಯ ಚಾಂಪಿಯನ್ಸ್‌ ಟ್ರೋಫಿಗೆ ಲಗ್ಗೆ ಇಡಬೇಕಾದರೆ, ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ.

ಪಾಕಿಸ್ತಾನ ಗೆಲ್ಲಲು ಏನು ಮಾಡಬೇಕು?

ಒಂದು ವೇಳೆ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಿದರೆ ಗೆಲ್ಲಬೇಕಾದ ಲೆಕ್ಕಾಚಾರ ಹೀಗಿರಲಿದೆ

  • ಪಾಕಿಸ್ತಾನ 300 ರನ್‌ ಗಳಿಸಿದರೆ -ಇಂಗ್ಲೆಂಡ್‌ ತಂಡವನ್ನು 13 ರನ್‌ಗೆ ಕಟ್ಟಿಹಾಕಬೇಕು
  • 350 ರನ್‌ ಗಳಿಸಿದರೆ -63 ರನ್‌ಗೆ ಕಟ್ಟಿಹಾಕಬೇಕು
  • 400 ರನ್‌ ಗಳಿಸಿದರೆ- 112 ರನ್‌ಗೆ ಕಟ್ಟಿಹಾಕಬೇಕು
  • 450 ರನ್‌ ಗಳಿಸಿದರೆ- 162 ರನ್‌ಗೆ ಕಟ್ಟಿಹಾಕಬೇಕು
  • 500 ರನ್‌ ಗಳಿಸಿದರೆ- 211 ರನ್‌ಗೆ ಕಟ್ಟಿಹಾಕಬೇಕು

ಮತ್ತೊಂದು ಲೆಕ್ಕಾಚಾರದ ಪ್ರಕಾರ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡಿ ಪಾಕಿಸ್ತಾನ ಚೇಸಿಂಗ್‌ ಮಾಡಿದರೆ

  • ಇಂಗ್ಲೆಂಡ್ 50 ರನ್‌ ಗಳಿಸಿದರೆ- ಪಾಕಿಸ್ತಾನ 2 ಓವರ್‌ ಒಳಗೆ ಚೇಸಿಂಗ್‌ ಮಾಡಬೇಕು
  • 100 ರನ್‌ ಗಳಿಸಿದರೆ- 2.5 ಓವರ್‌ ಒಳಗೆ ಚೇಸ್‌ ಮಾಡಬೇಕು
  • 150 ರನ್‌ ಗಳಿಸಿದರೆ- 3.4 ಓವರ್‌ ಒಳಗಡೆ ಚೇಸ್‌ ಮಾಡಬೇಕು
  • 200 ರನ್‌ ಗಳಿಸಿದರೆ- 4.3 ಓವರ್‌ಗಳ ಒಳಗೆ ಚೇಸ್‌ ಮಾಡಬೇಕು
  • 300 ರನ್‌ ಗಳಿಸಿದರೆ- 6.1 ಓವರ್‌ಗಳ ಒಳಗೆ ಚೇಸ್‌ ಮಾಡಬೇಕು

ಇಂಗ್ಲೆಂಡ್‌ ತಂಡದ ಚಾಂಪಿಯನ್ಸ್ ಟ್ರೋಫಿ ಅರ್ಹತಾ ಸನ್ನಿವೇಶ

ಇಂದು ಪಾಕಿಸ್ತಾನವನ್ನು ಸೋಲಿಸಿದರೆ ಇಂಗ್ಲೆಂಡ್‌ ಒಟ್ಟು 6 ಅಂಕ ಪಡೆಯಲಿದೆ. ಹೀಗಾಗಿ ಬಾಂಗ್ಲಾದೇಶ ಅಥವಾ ನೆದರ್ಲೆಂಡ್‌ನಲ್ಲಿ ತಂಡಗಳಲ್ಲಿ ಕನಿಷ್ಠ ಒಂದು ತಂಡ ತಮ್ಮ ಅಂತಿಮ ಪಂದ್ಯವನ್ನು ಸೋಲುವಂತೆ ಪ್ರಾರ್ಥಿಸಬೇಕು.

ಒಂದು ವೇಳೆ ಪಾಕ್ ವಿರುದ್ಧ ಸೋತರೂ, ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್ ತನ್ನ ಅಂತಿಮ ಪಂದ್ಯವನ್ನು ಸೋಲಬೇಕು.

ಇಂಗ್ಲೆಂಡ್‌ ತಂಡ ಪಾಕಿಸ್ತಾನದ ವಿರುದ್ಧ ಸೋತ ಬಳಿಕ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಎರಡೂ ತಮ್ಮ ಅಂತಿಮ ಪಂದ್ಯಗಳಲ್ಲಿ ಗೆದ್ದರೆ, ಇಂಗ್ಲೆಂಡ್ ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬೀಳಲಿದೆ.

ಮುಖಾಮುಖಿ ದಾಖಲೆ

ಪಾಕ್‌ ಮತ್ತು ಇಂಗ್ಲೆಂಡ್‌ ತಂಡಗಳು ಏಕದಿನ ಪಂದ್ಯಗಳಲ್ಲಿ ಈವರೆಗೆ ಒಟ್ಟು 88 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಾಕಿಸ್ತಾನವು 32ರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ ಒಟ್ಟು 56 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಕೋಲ್ಕತ್ತಾ ಪಿಚ್‌ ಮತ್ತು ಹವಾಮಾನ ವರದಿ

ಕೋಲ್ಕತ್ತಾ ಪಿಚ್‌ ಸವಾಲಿನದ್ದು. ಒಣ ಪಿಚ್‌ನಂತೆ ಕಾಣುವ ಇಲ್ಲಿನ ಪಿಚ್‌ ಮೇಲೆ ಸ್ವಲ್ಪ ಹುಲ್ಲು ಇದೆ. ಇಲ್ಲಿಯವರೆಗೆ ನಡೆದ ವಿಶ್ವಕಪ್‌ ಪಂದ್ಯಗಳಲ್ಲಿ ಇಲ್ಲಿನ ಪಿಚ್‌ಗಳು ನಿಧಾನವಾಗಿದ್ದು, ವೇಗವಾಗಿ ಮತ್ತು ಹೆಚ್ಚು ರನ್‌ ಕಲೆ ಹಾಕುವುದು ಕಷ್ಟಕರವಾಗಿದೆ. ಮೈದಾನದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಟಾಸ್‌ ಗೆದ್ದ ತಂಡ ಬ್ಯಾಟಿಂಗ್‌ ಮಾಡುವುದೇ ಉತ್ತಮ ಆಯ್ಕೆ. ಚೇಸಿಂಗ್‌ ವೇಳೆ ಪಿಚ್‌ ತುಂಬಾ ನಿಧಾನವಾಗುತ್ತದೆ. ಕೋಲ್ಕತ್ತಾದಲ್ಲಿ ಇಂದು ಬಿಸಿಲಿನ ವಾತಾವರಣ ಇರುತ್ತದೆ. ಹೀಗಾಗಿ ಮಳೆಯ ಸಾಧ್ಯತೆ ಇಲ್ಲ.

ಪಾಕಿಸ್ತಾನ ಸಂಭಾವ್ಯ ಆಡುವ ಬಳಗ

ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಾಮ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಉಸಾಮಾ ಮಿರ್/ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹಾರಿಸ್ ರೌಫ್.

ಇಂಗ್ಲೆಂಡ್‌ ಸಂಭಾವ್ಯ ಆಡುವ ಬಳಗ

ಜಾನಿ ಬೇರ್‌ಸ್ಟೋ, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ