logo
ಕನ್ನಡ ಸುದ್ದಿ  /  ಕ್ರಿಕೆಟ್  /  10 ರನ್ ಅಂತರದಲ್ಲಿ 6 ವಿಕೆಟ್ ಪತನ, ಕೇವಲ 136 ರನ್‌ಗೆ ಇಂಗ್ಲೆಂಡ್ ಆಲೌಟ್; ಮುನ್ನಡೆಯಲ್ಲಿ ಭಾರತ ವನಿತೆಯರು

10 ರನ್ ಅಂತರದಲ್ಲಿ 6 ವಿಕೆಟ್ ಪತನ, ಕೇವಲ 136 ರನ್‌ಗೆ ಇಂಗ್ಲೆಂಡ್ ಆಲೌಟ್; ಮುನ್ನಡೆಯಲ್ಲಿ ಭಾರತ ವನಿತೆಯರು

Jayaraj HT Kannada

Dec 15, 2023 03:13 PM IST

google News

ಭಾರತ ವನಿತೆಯರ ತಂಡದ ಸಂಭ್ರಮ

    • India Women vs England Women: ಆಂಗ್ಲ ವನಿತೆಯರ ವಿರುದ್ಧ ಭಾರತ ಅಬ್ಬರಿಸಿದೆ. ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ, ಎರಡನೇ ದಿನದಾಟದಲ್ಲಿ ಕೇವಲ 136 ರನ್‌ಗಳಿಗೆ ಆಂಗ್ಲರನ್ನು ಆಲೌಟ್‌ ಮಾಡಿದೆ.
ಭಾರತ ವನಿತೆಯರ ತಂಡದ ಸಂಭ್ರಮ
ಭಾರತ ವನಿತೆಯರ ತಂಡದ ಸಂಭ್ರಮ (PTI)

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ (India Women vs England Women) ಭಾರತ ವನಿತೆಯರು ಅಬ್ಬರಿಸಿದ್ದಾರೆ. ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ, ಎರಡನೇ ದಿನದಾಟದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದೆ. ಕೇವಲ 136 ರನ್‌ಗಳಿಗೆ ಆಂಗ್ಲರನ್ನು ಆಲೌಟ್‌ ಮಾಡಿ ಮಿಂಚಿದೆ.

2014ರ ಬಳಿಕ ತವರಿನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ಮೊದಲ ದಿನದ ಅಂತ್ಯಕ್ಕೆ 410/7 ರನ್‌ ಗಳಿಸಿತ್ತು. ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ವನಿತೆಯರು, ಹೆಚ್ಚು ಹೊತ್ತು ಆಡಲಿಲ್ಲ. 428 ರನ್‌ಗಳಿಗೆ ತಂಡ ಆಲೌಟ್‌ ಆಯ್ತು. ತನ್ನ ಪಾಲಿನ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳುತ್ತಾ ಸಾಗಿತು.

ಆರಂಭಿಕ ಆಟಗಾರ್ತಿ ಡಂಕ್ಲೆ 11 ರನ್‌ ಗಳಿಸಿದ್ದಾಗ ರೇಣುಕಾ ಸಿಂಗ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ನಾಯಕಿ ಹೀದರ್‌ ನೈಟ್‌ ಕೂಡಾ 11 ರನ್‌ ಗಳಿಸಿದ್ದಾಗ ಪೂಜಾ ವಸ್ತ್ರಾಕರ್‌ಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಸಿವರ್‌ ಬ್ರಂಟ್‌ ಮತ್ತು ಬ್ಯೂಮಾಂಟ್ ಅರ್ಧಶತಕದ ಜೊತೆಯಾಟವಾಡಿದರು. ತಂಡದ ಪರ ಅಧಿಕ ರನ್‌ ಗಳಿಸಿದವರು ಸಿವರ್‌ ಬ್ರಂಟ್‌ ಮಾತ್ರ. ಏಕೈಕ ಅರ್ಧಶತಕ ಸಿಡಿಸಿದ ಅವರು 59 ರನ್‌ ಗಳಿಸಿ ಸ್ನೇಹಾ ರಾಣಾ ಎಸೆತದಲ್ಲಿ ಔಟಾದರು.

ಇದನ್ನೂ ಓದಿ | ವನಿತೆಯರ ಬೊಂಬಾಟ್ ಬ್ಯಾಟಿಂಗ್; ಟೆಸ್ಟ್‌ನಲ್ಲಿ ಒಂದೇ ದಿನ 400ಕ್ಕೂ ಅಧಿಕ ರನ್ ಗಳಿಸಿದ ಎರಡನೇ ತಂಡವಾದ ಭಾರತ

126 ರನ್‌ ವೇಳೆಗೆ ಆಮಿ ಜೋನ್ಸ್‌ ಐದನೇಯವರಾಗಿ ಔಟಾಗುತ್ತಿದ್ದಂತೆಯೇ ತಂಡದ ಪೆವಿಲಿಯನ್‌ ಪರೇಡ್‌ ಆರಂಭವಾಯ್ತು. ಕೊನೆಯ 6 ವಿಕೆಟ್‌ಗಳು ಕೇವಲ 10 ರನ್‌ ಅಂತರದಲ್ಲಿ ಪತನಗೊಂಡವು. ಕೇವಲ 5.3 ಓವರ್‌ ಎಸೆದ ದೀಪ್ತಿ ಶರ್ಮಾ 7 ರನ್‌ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿದರು. ಸ್ನೇಹಾ ರಾಣಾ 2 ವಿಕೆಟ್‌ ಪಡೆದರೆ, ರೇಣುಕಾ ಸಿಂಗ್‌ ಮತ್ತು ಪೂಜಾ ತಲಾ ಒಂದು ವಿಕೆಟ್‌ ಕಬಳಿಸಿದರು.

ಸದ್ಯ 292 ರನ್‌ ಲೀಡ್‌ನೊಂದಿಗೆ ಭಾರತ ಎರಡನೇ ಇನ್ನಿಂಗ್ಸ್‌ ಆರಂಭಿಸಿದೆ. ಬೃಹತ್‌ ಮೊತ್ತ ಕಲೆ ಹಾಕಿ ಆಂಗ್ಲರಿಗೆ ಬೃಹತ್‌ ರನ್‌ ಟಾರ್ಗೆಟ್‌ ನೀಡುವ ಗುರಿ ಹೊಂದಿದೆ.

ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತವು ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಮೌಲ್ಯಯುತ ಕಾಣಿಕೆ ನೀಡಿದರು. ಆರಂಭಿಕ ಆಟಗಾರ್ತಿ ಶುಭಾ ಸತೀಶ್, ಪದಾರ್ಪಣೆ ಪಂದ್ಯದಲ್ಲೇ 69 ರನ್‌ ಸಿಡಿಸಿದರು. ಅನುಭವಿ ಜೆಮಿಮಾ ರೋಡ್ರಿಗಸ್ 68 ರನ್‌ ಕಲೆ ಹಾಕಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 115 ರನ್‌ಗಳ ಜೊತೆಯಾಟವಾಡಿದರು.

ಇದನ್ನೂ ಓದಿ | ವಿಶ್ವ ಚಾಂಪಿಯನ್ನರಿಗೆ ಮತ್ತೆ ಮುಖಭಂಗ; ಇಂಗ್ಲೆಂಡ್ ವಿರುದ್ಧ 2ನೇ ಟಿ20ಯಲ್ಲೂ ಗೆದ್ದ ವೆಸ್ಟ್ ಇಂಡೀಸ್

ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕನ್ನಡತಿ ಶುಭಾ ಸತೀಶ್, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ 24 ವರ್ಷ ಹರೆಯದ ಕನ್ನಡತಿ, 49 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆಕರ್ಷಕ ಹೊಡೆತಗಳಿಂದ ಎಡಗೈ ಆಟಗಾರ್ತಿ ಒಟ್ಟು 69 ರನ್‌ ಕಲೆ ಹಾಕಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ತಲುಪಿದ ಭಾರತದ ಎರಡನೇ ವನಿತೆ ಎಂಬ ದಾಖಲೆ ನಿರ್ಮಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ