logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಬ್ಬರಿಸಿದ ಸ್ಪಿನ್ನರ್ಸ್, ತಿಣುಕಾಡಿದ ಬ್ಯಾಟರ್ಸ್; ಭಾರತಕ್ಕೆ ಆಘಾತಕಾರಿ ಸೋಲುಣಿಸಿದ ಇಂಗ್ಲೆಂಡ್

ಅಬ್ಬರಿಸಿದ ಸ್ಪಿನ್ನರ್ಸ್, ತಿಣುಕಾಡಿದ ಬ್ಯಾಟರ್ಸ್; ಭಾರತಕ್ಕೆ ಆಘಾತಕಾರಿ ಸೋಲುಣಿಸಿದ ಇಂಗ್ಲೆಂಡ್

Prasanna Kumar P N HT Kannada

Jan 28, 2024 06:00 PM IST

google News

ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಗೆಲುವು.

    • India vs England 1st Test Day 4: ಹೈದರಾಬಾದ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 0-1ರಲ್ಲಿ ಮುನ್ನಡೆ ಪಡೆದಿದೆ. 
ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಗೆಲುವು.
ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಗೆಲುವು. (PTI)

ಇಂಗ್ಲೆಂಡ್​​ನ ಟಾಮ್ ಹಾರ್ಟ್ಲೆ ಸ್ಪಿನ್​ ಬೌಲಿಂಗ್​ನಲ್ಲಿ​ ವಿರುದ್ಧ ಬ್ಯಾಟರ್ಸ್ ದಯನೀಯ ವೈಫಲ್ಯ ಅನುಭವಿಸಿದ ಕಾರಣ ಟೀಂ ಇಂಡಿಯಾ, ತನ್ನ ಮೊದಲ ಟೆಸ್ಟ್​​ ಪಂದ್ಯವನ್ನು ಕಳೆದುಕೊಂಡಿದೆ. ಹೈದರಾಬಾದ್​​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಪಡೆ, 28 ರನ್​ಗಳಿಂದ ಶರಣಾಗಿದೆ. ಈ ಜಯನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 0-1ರಲ್ಲಿ ಮುನ್ನಡೆ ಸಾಧಿಸಿದೆ.

ಕಳಪೆ ದಾಖಲೆ ಬರೆದ ಭಾರತ

ಪ್ರವಾಸಿ ತಂಡ ನೀಡಿದ 231 ರನ್​ಗಳ ಸುಲಭ ಗುರಿಯನ್ನು ಬೆನ್ನಟ್ಟಲು ವಿಫಲವಾದ ಭಾರತ, 202 ರನ್​ಗಳಿಗೆ ಆಲೌಟ್​ ಆಯಿತು. ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಟೀಮ್ ಇಂಡಿಯಾ, ತವರಿನಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಅಲ್ಲದೆ, ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಇಂಗ್ಲೆಂಡ್ ಎದುರು ಮಂಡಿಯೂರಿದೆ. ಇಂಗ್ಲೆಂಡ್​ ಭರ್ಜರಿ ಗೆಲುವು ಜೊತೆ ಐತಿಹಾಸಿಕ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ.

ಆದರೆ ಈ ಸೋಲಿನೊಂದಿಗೆ ರೋಹಿತ್ ಪಡೆ ಅತ್ಯಂತ ಕಳಪೆ ದಾಖಲೆಯನ್ನು ಬರೆದಿದೆ. ಮೊದಲ ಇನ್ನಿಂಗ್ಸ್​​ನಲ್ಲಿ 100ಕ್ಕೂ ಅಧಿಕ ರನ್​​ಗಳ ಮುನ್ನಡೆ ಪಡೆದರೂ ಇದೇ ಮೊದಲ ಬಾರಿಗೆ ಭಾರತ ತವರಿನಲ್ಲಿ ಸೋಲು ಕಂಡಿದೆ. ಇಂಗ್ಲೆಂಡ್ ಪರ ಬ್ಯಾಟಿಂಗ್​ನಲ್ಲಿ ಒಲ್ಲಿ ಪೋಪ್ 196 ರನ್ ಸಿಡಿಸಿ ಮಿಂಚಿದರೆ, ಬೌಲಿಂಗ್​​ನಲ್ಲಿ ಟಾಮ್ ಹಾರ್ಟ್ಲೆ 7 ವಿಕೆಟ್​ ಕಬಳಿಸಿ ಗೆಲುವಿನ ರೂವಾರಿಗಳಾದರು ಎಂಬುದು ವಿಶೇಷ.

ಭಾರತದ ಬ್ಯಾಟಿಂಗ್ ವೈಫಲ್ಯ

ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ 80 ರನ್ ಚಚ್ಚಿದ್ದ ಯಶಸ್ವಿ ಜೈಸ್ವಾಲ್ 15 ರನ್​ಗಳಿಗೆ ಆಟ ಮುಗಿಸಿದರು. ಶುಭ್ಮನ್ ಗಿಲ್ ಡಕೌಟ್​ ಆಗಿ ಮತ್ತೆ ನಿರಾಸೆ ಮೂಡಿಸಿದರು. ಮತ್ತೊಂದೆಡೆ ತಂಡಕ್ಕೆ ಭರವಸೆ ಮೂಡಿಸುತ್ತಿದ್ದ ರೋಹಿತ್, 39 ರನ್ ಸಿಡಿಸಿ ಔಟಾದರು. ಅಗ್ರ ಕ್ರಮಾಂಕದ ಈ ಮೂವರು ಸಹ ಹಾರ್ಟ್ಲೆ ಬೌಲಿಂಗ್​ನಲ್ಲಿ ಔಟಾಗಿ ಆರಂಭಿಕ ಕುಸಿತಕ್ಕೆ ಕಾರಣರಾದರು.

ಆ ಬಳಿಕ ಜೊತೆಯಾದ ಕೆಎಲ್ ರಾಹುಲ್ 22 ರನ್ ಗಳಿಸಿದರೆ, ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಕ್ಷರ್​ ಪಟೇಲ್ 15 ರನ್​ಗಳಿಗೆ ಸುಸ್ತಾದರು. ಶ್ರೇಯಸ್ ಅಯ್ಯರ್ 13, ರವೀಂದ್ರ ಜಡೇಜಾ 2 ರನ್ ಗಳಿಸಿ ಔಟಾದರು. 119 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಅಶ್ವಿನ್ ಮತ್ತು ಭರತ್ ಅರ್ಧಶತಕದ ಜೊತೆಯಾಟವಾಡಿ ಗೆಲುವಿನ ಆಸೆ ಹೆಚ್ಚಿಸಿದರು.

ಆದರೆ ಉತ್ತಮ ಹಾದಿಯಲ್ಲಿ ಸಾಗುತ್ತಿದ್ದ ಅವಧಿಯಲ್ಲಿ ಮತ್ತೆ ಅಟ್ಯಾಕ್ ಮಾಡಿದ ಟಾಮ್ ಹಾರ್ಟ್ಲೆ, ಮಹತ್ವದ 28 ರನ್ ಭರತ್​ಗೆ ಗೇಟ್​ ಪಾಸ್​ ನೀಡಿದರು. ಇದರೊಂದಿಗೆ ಭಾರತದ ಸೋಲು ಖಚಿತವಾಯಿತು. ಇದರ ಬೆನ್ನಲ್ಲೇ ಅಮೂಲ್ಯ 28 ರನ್ ಸಿಡಿಸಿದ್ದ ಅಶ್ವಿನ್ ಸಹ ಟಾಮ್​ಗೆ ಬಲಿಯಾದರು. ಕೊನೆಯಲ್ಲಿ ಸಿರಾಜ್ 12, ಬುಮ್ರಾ 6 ರನ್ ಗಳಿಸಿ ಹೋರಾಟ ನೀಡಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.

ಓಲ್ಲಿ ಪೋಪ್​ ಅವರ ಭರ್ಜರಿ 195 ರನ್​ಗಳ ನೆರವಿನಿಂದ ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ತಂಡ, 420 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿ ಆಲೌಟ್​ ಆಯಿತು. 3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್​​ ನಷ್ಟಕ್ಕೆ 316 ರನ್ ಗಳಿಸಿತ್ತು. ಈ ಮೊತ್ತದೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಆಂಗ್ಲರು, ಭೋಜನ ವಿರಾಮಕ್ಕೂ ಮುನ್ನ ಅಂದರೆ ಮೊದಲ ಸೆಷನ್​​ನಲ್ಲಿ 104 ರನ್ ಕಲೆ ಹಾಕಿತು. ಅದ್ಭುತ ಪ್ರದರ್ಶನ ನೀಡಿದ ಪೋಪ್​ 196 ರನ್​ಗಳಿಗೆ ಔಟಾಗಿ ದ್ವಿಶತಕ ವಂಚಿತರಾದರು.

ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್, 246 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 436 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಅಲ್ಲದೆ, ರೋಹಿತ್ ಪಡೆ 190 ರನ್​ಗಳ ಉತ್ತಮ ಮುನ್ನಡೆ ಸಾಧಿಸಿತು. ಈ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೀಷರು 420 ರನ್ ಗಳಿಸಿ 230 ರನ್​ಗಳ ಗುರಿ ನೀಡಿದರು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಭಾರತ 69.2 ಓವರ್​​​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 202 ರನ್​ಗಳಿಗೆ ಆಲೌಟ್​ ಆಯಿತು.

ದ್ವಿತೀಯ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ಪ್ರದರ್ಶನ

ಹಿನ್ನೆಡೆಯೊಂದಿಗೆ ಎರಡನೇ ಇನ್ನಿಂಗ್ಸ್​​ ಆರಂಭಿಸಿದ ಇಂಗ್ಲೆಂಡ್​, ಉತ್ತಮ ಪ್ರದರ್ಶನ ತೋರಿತು. ಬಜ್​ಬಾಲ್ ಕಾರ್ಯತಂತ್ರವನ್ನು ಕಾರ್ಯರೂಪಕ್ಕಿಳಿಸಿತು. ಪರಿಣಾಮ ಜಾಕ್ ಕ್ರಾವ್ಲಿ 31, ಬೆನ್​ ಡಕೆಟ್ 47 ರನ್ ಗಳಿಸಿ ಔಟಾದರು. ವೇಗವಾಗಿ ಬ್ಯಾಟ್​ ಬೀಸಿ ರನ್ ಕಲೆ ಹಾಕಿದ್ದು ವಿಶೇಷ. ಆದರೆ ಪ್ರಮುಖ ಬ್ಯಾಟ್ಸ್​​ಮನ್​ಗಳು ನಿರಾಸೆ ಮೂಡಿಸಿದರು.

ಜೋ ರೂಟ್ 2, ಜಾನಿ ಬೈರ್​ಸ್ಟೋ 10, ಸ್ಟೋಕ್ಸ್​ 6 ರನ್ ಗಳಿಸಿ ತೀವ್ರ ನಿರಾಸೆ ಮೂಡಿಸಿದರು. ಆದರೂ ಪೋಪ್ ಎದುರಾಳಿಗೆ ತೀವ್ರ ಒತ್ತಡ ಹೇರಿದರು. ಅಲ್ಲದೆ, ಬೆನ್​ಫೋಕ್ಸ್ (34) ಜೊತೆಗೆ 6 ವಿಕೆಟ್​ಗೆ 112 ರನ್​ಗಳ ಜೊತೆಯಾಟವಾಡಿದರು. ರೆಹಾನ್ ಅಹ್ಮದ್ (28) ಜೊತೆಗೆ 64 ರನ್, ಟಾಮ್ ಹಾರ್ಟ್ಲೀ (34) ಜೊತೆಗೆ 80 ರನ್​ಗಳ ಪಾಲುದಾರಿಕೆ ನೀಡಿದರು. ಆ ಮೂಲಕ ಭಾರತಕ್ಕೆ ದೊಡ್ಡ ಸವಾಲಾದರು.

196 ರನ್ ಚಚ್ಚಿದ ಪೋಪ್​

ಭಾರತೀಯ ಬೌಲರ್​​​ಗಳಿಗೆ ಬೆಂಡೆತ್ತಿದ ಒಲ್ಲಿ ಪೋಪ್​, ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಕುಸಿಯುವ ತಂಡಕ್ಕೆ ಆಪತ್ಭಾಂಧವನಂತೆ ಕ್ರೀಸ್ ಕಚ್ಚಿ ನಿಂತರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆವರೆಗೂ ಕ್ರೀಸ್​ನಲ್ಲಿದ್ದರು. ಪರಿಣಾಮ ಶತಕ ಸಿಡಿಸುವಲ್ಲಿ ಯಶಸ್ಸು ಕಂಡರು. 278 ಎಸೆತಗಳಲ್ಲಿ 21 ಬೌಂಡರಿ ಸಹಿತ 196 ರನ್ ಗಳಿಸಿದರು. ಆದರೆ ದ್ವಿಶತಕ ಅಂಚಿನಲ್ಲಿ ರಿವರ್ಸ್ ಸ್ವೀಪ್​ ಶಾಟ್​ಗೆ ಯತ್ನಿಸಿ ಔಟಾದರು.

ಬುಮ್ರಾಗೆ 4, ಅಶ್ವಿನ್ 3 ವಿಕೆಟ್

ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ 6 ವಿಕೆಟ್ ಉರುಳಿಸಿದ್ದ ಭಾರತೀಯ ಬೌಲರ್​​ಗಳು ನಾಲ್ಕನೇ ದಿನದಾಟದ ಭೋಜನ ವಿರಾಮಕ್ಕೂ ಮುನ್ನ 4 ವಿಕೆಟ್​ಗಳನ್ನು ಉರುಳಿಸಿದರು. ಜಸ್ಪ್ರೀತ್ ಬುಮ್ರಾ 4 ವಿಕೆಟ್, ಆರ್​ ಅಶ್ವಿನ್ 3, ರವೀಂದ್ರ ಜಡೇಜಾ 2, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

(This copy first appeared in Hindustan Times Kannada website. To read more like this please logon to kannada.hindustantime.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ