ರೊವ್ಮನ್ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ
May 03, 2024 06:14 PM IST
ರೊವ್ಮನ್ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ
- IPL 2024 DRS Controversy : ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 1 ರನ್ನಿಂದ ಸೋತಿದೆ. ಆದರೆ ಕೊನೆಯ ಎಸೆತದಲ್ಲಿ ಔಟಾದ ರೊವ್ಮನ್ ಪೊವೆಲ್ ನಾಟೌಟ್ ಆಗಿದ್ದರೂ ಆರ್ಆರ್ ಸೋಲುತ್ತಿತ್ತು. ಅದ್ಹೇಗೆ? ಇಲ್ಲಿದೆ ವಿವರ.
ಲಾರ್ಡ್ಸ್ನಲ್ಲಿ ನಡೆದ 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ (ODI World Cup 2019) ಪಂದ್ಯದ ಸೂಪರ್ ಓವರ್ನಲ್ಲಿ ಬೌಂಡರಿ ಕೌಂಟ್ ನಿಮಯದಿಂದ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಹೃದಯವಿದ್ರಾವಕ ಸೋಲು ಕಂಡಿದ್ದನ್ನು ನೆನಪಿಸಿಕೊಳ್ಳಿ. ಇದು ವಿಶ್ವಮಟ್ಟದಲ್ಲಿ ಚರ್ಚೆ ನಡೆದಿತ್ತು. ಐಸಿಸಿ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ ಈ ನಿಯಮ ಬದಲಿಸಿತು. ಈಗ ಅಂತಹದ್ದೇ ಲೋಪ ದೋಷ ಬೆಳಕಿಗೆ ಬಂದಿದೆ.
2024ರ ಐಪಿಎಲ್ನಲ್ಲಿ ಮೇ 2ರ ಗುರುವಾರ ಸನ್‌ರೈಸರ್ಸ್ ಹೈದರಾಬಾದ್-ರಾಜಸ್ಥಾನ್ ರಾಯಲ್ಸ್ (SRH vs RR) ನಡುವಿನ ಪಂದ್ಯವು ನಿಯಮಗಳ ಪುಸ್ತಕದಲ್ಲಿನ ಮತ್ತೊಂದು ದೊಡ್ಡ ಲೋಪದೋಷ ಬಹಿರಂಗಪಡಿಸಿದೆ. ಈ ನಿಯಮಕ್ಕೆ ಈಗಲೇ ತಿದ್ದುಪಡಿ ತರದಿದ್ದರೆ ಮುಂದೊಂದು ದಿನ 2019ರ ವಿಶ್ವಕಪ್ ಫೈನಲ್ ವಿವಾದ ಮರುಕಳಿಸಿದರೂ ಅಚ್ಚರಿ ಇಲ್ಲ. ಇಷ್ಟಕ್ಕೂ ಆ ನಿಯಮ ಯಾವುದು? ಇಲ್ಲಿದೆ ವಿವರ.
ಪಂದ್ಯದಲ್ಲಿ ನಡೆದಿದ್ದೇನು?
ಪಂದ್ಯದ ಕೊನೆಯ ಎಸೆತದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 2 ರನ್ ಬೇಕಿತ್ತು. ಸ್ಟ್ರೈಕ್ನಲ್ಲಿ ರೊವ್ಮನ್ ಪೊವೆಲ್, ವೇಗಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಲೋ ಫುಲ್ಟಾಸ್ಗೆ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಅದಾಗಿಯೂ ಪೊವೆಲ್ ಒಂದು ರನ್ ಪೂರ್ಣಗೊಳಿಸಿದ ತಕ್ಷಣವೇ ರಿವ್ಯೂ ಮೊರೆಹೋದರು. ಆನ್ಫೀಲ್ಡ್ ಅಂಪೈರ್ ಕೊಟ್ಟ ತೀರ್ಪು ಸರಿಯಾಗಿದೆ. ಚೆಂಡು ನೇರವಾಗಿ ಸ್ಟಂಪ್ಸ್ಗೆ ಬಡಿದಿದೆ ಎಂದು 3ನೇ ಅಂಪೈರ್ ಹೇಳಿದ್ದಾರೆ. ಇದರೊಂದಿಗೆ ಎಸ್ಆರ್ಹೆಚ್ 1 ರನ್ನಿಂದ ರೋಚಕ ಗೆಲುವು ಸಾಧಿಸಿತು.
ಆದರೆ ಈ ತೀರ್ಪು ಕೋಲಾಹಲ ಸೃಷ್ಟಿಸಿತು. ಚೆಂಡು ಸ್ಟಂಪ್ಸ್ ತಪ್ಪಿ ಹೋಗಿದ್ದರೆ ಡಿಆರ್‌ಎಸ್ ರದ್ದಾಗುತ್ತಿತ್ತು. ಪೊವೆಲ್ ಒಂದು ರನ್ ಪೂರ್ಣಗೊಳಿಸಿದ್ದ ಕಾರಣ ಪಂದ್ಯವು ಸೂಪರ್ ಓವರ್ಗೆ ಹೋಗುತ್ತಿತ್ತು ಎಂದು ಕ್ರಿಕೆಟ್ ಪ್ರಿಯರು ಭಾವಿಸಿದ್ದರು. ಆದಾಗ್ಯೂ, ಕ್ರಿಕೆಟ್ ಅಭಿಮಾನಿಗಳು ಭಾವಿಸಿದಂತೆ ಆಗುತ್ತಿರಲಿಲ್ಲ. ಆನ್-ಫೀಲ್ಡ್ ಅಂಪೈರ್ ಔಟ್ ನೀಡಿದ್ದರಿಂದ ಒಂದು ವೇಳೆ ಡಿಆರ್‌ಎಸ್ ನಾಟ್-ಔಟ್ ತೀರ್ಪು ಕೊಟ್ಟಿದ್ದರೂ ಎಸ್ಆರ್ಹೆಚ್ ತಂಡವೇ ಜಯ ಸಾಧಿಸುತ್ತಿತ್ತು. ಅದ್ಹೇಗೆ?
ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ಆರ್ಆರ್
ಐಸಿಸಿ ನಿಮಯಗಳ ಪ್ರಕಾರ, ಒಮ್ಮೆ ಮೈದಾನದಲ್ಲಿ ಔಟ್ ಎಂದು ನೀಡಿದರೆ ಆ ಬಾಲ್ ಡೆಡ್ ಬಾಲ್ ಎಂದು ಘೋಷಿಸಲ್ಪಡುತ್ತದೆ. ಒಂದು ವೇಳೆ ನಾಟೌಟ್ ಎಂದು ತೀರ್ಪು ಕೊಟ್ಟು ನಿರ್ಧಾರವನ್ನು ಬದಲಿಸಿದರೂ ಬ್ಯಾಟಿಂಗ್ ತಂಡದ ಖಾತೆಗೆ ಯಾವುದೇ ರನ್ ಸೇರುವುದಿಲ್ಲ. ಅಷ್ಟೇ ಅಲ್ಲದೆ, ಪೊವೆಲ್ ಎದುರಿಸಿದ ಚೆಂಡು ಬ್ಯಾಟ್ಗೆ ತಾಗಿದ್ದರೂ ಮತ್ತು ಆ ಸಂದರ್ಭದಲ್ಲಿ ಅಂಪೈರ್ ಗುರುತಿಸಲು ವಿಫಲರಾದರೂ ಹಾಗೂ ಡಿಆರ್‌ಎಸ್ ನಿರ್ಧಾರವನ್ನು ಸರಿಪಡಿಸಿದರೂ ಆರ್ಆರ್ ಪಂದ್ಯವನ್ನು ಕಳೆದುಕೊಳ್ಳುತ್ತಿತ್ತು.
ಹೌದು, ಪ್ರಸ್ತುತ ಕ್ರಿಕೆಟ್ ವಲಯದಲ್ಲಿ ಇದೇ ದೊಡ್ಡ ಚರ್ಚೆಯಾಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಕೆಲವರು ವಾದಿಸುತ್ತಿದ್ದಾರೆ. ಬ್ಯಾಟರ್ ರಿವ್ಯೂ ಮೊರೆ ಹೋದರೆ, 'ಔಟ್'ನ ಮೂಲ ನಿರ್ಧಾರವನ್ನು 'ನಾಟ್ ಔಟ್' ಎಂದು ಬದಲಿಸಿದದರೂ ಅದನ್ನು ಡೆಡ್ ಬಾಲ್ ಎಂದೇ ಪರಿಗಣಿಸಲಾಗುತ್ತದೆ. ಔಟ್ ಅನ್ನು ನಾಟೌಟ್ ಕೊಟ್ಟ ಸಂದರ್ಭ ನೀವೇಷ್ಟೇ ರನ್ ಗಳಿಸಿದ್ದರೂ ಪ್ರಯೋಜನವಿಲ್ಲ ಎಂಬುದನ್ನು ಐಸಿಸಿ ನಿಯಮ ಹೇಳುತ್ತದೆ.
ನಿಯಮ ಬದಲಾವಣೆ ಮಾಡಬೇಕೆಂದ ಫ್ಯಾನ್ಸ್
ಆದರೆ ಇದು ದೊಡ್ಡ ಲೋಪದೋಷ ಎಂದರೂ ತಪ್ಪಾಗಲ್ಲ. ಉದಾಹರಣೆಗೆ; ಆರ್ಆರ್ ಮತ್ತು ಎಸ್ಆರ್ಹೆಚ್ ಪಂದ್ಯದ ಕುರಿತೇ ಮಾತನಾಡೋಣ. ಒಂದು ವೇಳೆ ರೊವ್ಮನ್ ಪೊವೆಲ್ ಎಲ್ಬಿಡಬ್ಲ್ಯು ನಾಟೌಟ್ ಆಗಿದ್ದರೂ ಆರ್ಆರ್ ಸೋಲುತ್ತಿತ್ತು. ಏಕೆಂದರೆ ಅವರು ರನ್ ಓಡಿದ್ದರೂ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ, ತಂಡಕ್ಕೆ ರನ್ ಸೇರ್ಪಡೆ ಆಗುತ್ತಿರಲಿಲ್ಲ. ಆದರೆ ಆ ರನ್ ಸೇರ್ಪಡೆಯಾಗಿದ್ದರೆ ಹೇಗಿರುತ್ತಿತ್ತು. ಪಂದ್ಯವು ಸೂಪರ್ ಓವರ್ಗೆ ಹೋಗುತ್ತಿತ್ತು.
ಈ ನಿಮಯಕ್ಕೆ ತಿದ್ದುಪಡಿ ತರಬೇಕು. ಏಕೆಂದರೆ ಔಟ್, ನಾಟೌಟ್ ಎಂದು ತೀರ್ಪು ಬಂದಾಗ ಆಟಗಾರರು ಗಳಿಸಿದ್ದ ರನ್ ಆ ತಂಡದ ಖಾತೆಗೆ ಸೇರಬೇಕು. ಇದು ಲೀಗ್ ಪಂದ್ಯವಾದ ಕಾರಣ ದೊಡ್ಡ ವಿವಾದಕ್ಕೆ ಕಾರಣವಾಗಿಲ್ಲ. ಆದರೆ, ವಿಶ್ವಕಪ್ನಂತಹ ಟೂರ್ನಿಗಳಲ್ಲಿ ಇಂತಹದ್ದೇ ಘಟನೆ ಸಂಭವಿಸಿದರೆ ದೊಡ್ಡ ವಿವಾದ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗಿನಿಂದಲೇ ನಿಯಮ ಸರಿಪಡಿಸಲು ಮುಂದಾಗಬೇಕು. ಇದು ಎಚ್ಚರಿಕೆಯ ಕರೆಗಂಟೆಯಾಗಲಿ ಎಂದು ಫ್ಯಾನ್ಸ್, ಐಸಿಸಿಗೆ ಒತ್ತಾಯಿಸಿದ್ದಾರೆ.