ಬೆಂಗಳೂರಿನ ಗಲ್ಲಿಗಳಲ್ಲಿ ಅಭಿಮಾನಿಗಳ ಜೊತೆಗೆ ಕ್ರಿಕೆಟ್ ಆಡಿದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್; ವಿಡಿಯೋ ಇಲ್ಲಿದೆ
Mar 16, 2024 04:31 PM IST
ಬೆಂಗಳೂರಿನ ಗಲ್ಲಿಗಳಲ್ಲಿ ಅಭಿಮಾನಿಗಳ ಜೊತೆಗೆ ಕ್ರಿಕೆಟ್ ಆಡಿದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್
- Faf Du Plessis: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡಿರುವ ನಾಯಕ ಫಾಫ್ ಡು ಪ್ಲೆಸಿಸ್, ಬೆಂಗಳೂರಿನಲ್ಲಿ ರೌಂಡ್ಸ್ ಹಾಕುತ್ತಿದ್ದಾರೆ. ಅದರ ವಿಡಿಯೋ ವೈರಲ್ ಆಗುತ್ತಿದೆ.
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಮಾರ್ಚ್ 22ರಿಂದ ಆರಂಭಗೊಳ್ಳುವ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗೆ ಎಲ್ಲಾ 10 ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸವಾಲೆಸೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಯಾರಿ ನಡೆಸುತ್ತಿದೆ.
ಐಪಿಎಲ್ ಆರಂಭಕ್ಕೆ ಮೂರು ದಿನಗಳ ನಂತರ ಮುಂಚೆ ಆರ್ಸಿಬಿ ’ಅನ್ಬಾಕ್ಸ್ ಈವೆಂಟ್‘ ಕಾರ್ಯಕ್ರಮ (RCB Unbox Event) ನಡೆಸಲಿದ್ದು, ಅದಕ್ಕಾಗಿ ಫ್ರಾಂಚೈಸಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾವಣೆಯನ್ನು ಮಾಡುವ ಸಾಧ್ಯತೆ ಇದೆ. ಆಟಗಾರರು ಸಹ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ.
ಈ ಎಲ್ಲದರ ಮಧ್ಯೆ ತಂಡವನ್ನು ಕೂಡಿಕೊಂಡಿರುವ ನಾಯಕ ಫಾಫ್ ಡು ಪ್ಲೆಸಿಸ್, ಬೆಂಗಳೂರಿನಲ್ಲಿ ರೌಂಡ್ಸ್ ಹಾಕುತ್ತಿದ್ದಾರೆ. ಬೆಂಗಳೂರಿನ ಗಲ್ಲಿಗಳಲ್ಲಿ ಅಭಿಮಾನಿಗಳ ಜೊತೆಗೆ ಡು ಪ್ಲೆಸಿಸ್ ಕ್ರಿಕೆಟ್ ಆಡಿದ್ದಾರೆ. ಗಲ್ಲಿಯೊಂದರಲ್ಲಿ ಅಭಿಮಾನಿಗಳೊಂದಿಗೆ ಫಾಫ್ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹಂಚಿಕೊಂಡಿದೆ. ಬ್ಯಾಟಿಂಗ್ ಜತೆಗೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಆರ್ಸಿಬಿ... ಆರ್ಸಿಬಿ.. ಘೋಷಣೆ ಕೂಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈಗಾಗಲೇ ಆರ್ಸಿಬಿ ಕ್ಯಾಂಪ್ಗೆ ಫಾಫ್ ಜೊತೆಗೆ ಗ್ಲೆನ್ ಮ್ಯಾಕ್ಸ್‌ವೆಲ್, ವಿಕ್ ಜಾಕ್ಸ್, ಆಕಾಶ್ ದೀಪ್, ರೀಸ್ ಟೋಪ್ಲಿ, ದಿನೇಶ್ ಕಾರ್ತಿಕ್, ಯಶ್ ದಯಾಳ್, ಮಾಯಾಂಕ್ ಡಾಗರ್, ಅನೂಜ್ ರಾವತ್, ಮನೋಜ್ ಭಾಂಡಗೆ, ಅಲ್ಜಾರಿ ಜೋಸೆಫ್, ಮಹಿಪಾಲ್ ಲೊಮ್ರೊರ್ ಸೇರಿದಂತೆ ಕೋಚ್, ಸಹಾಯಕ ಕೋಚ್ ಮತ್ತು ಕೋಚಿಂಗ್ ಸ್ಟಾಫ್ ಎಲ್ಲರೂ ನೆಟ್ಸ್ನಲ್ಲಿ ಭರ್ಜರಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಅನ್ಬಾಕ್ಸ್ ಈವೆಂಟ್ನಲ್ಲಿ ರಘು ದೀಕ್ಷಿತ್ ಗಾನಬಜಾನ
ಕಳೆದ ಬಾರಿಯಂತೆ ಈ ಸಲವೂ ನಡೆಯುವ ಅನ್ಬಾಕ್ ಈವೆಂಟ್ನಲ್ಲಿ ಪ್ರಸಿದ್ಧ ಗಾಯಕರು ಪ್ರದರ್ಶನ ನೀಡಲಿದ್ದಾರೆ. ಅಲಾನ್ ವಾಕರ್, ರಘು ದೀಕ್ಷಿತ್ ಮತ್ತು ನೀತಿ ಮೋಹನ್ ಅವರು ಪ್ರದರ್ಶನ ನೀಡಲಿದ್ದಾರೆ. ಈ ಸಮಾರಂಭದ ಟಿಕೆಟ್ಗಳು ಈಗಾಗಲೇ ಸೋಲ್ಡ್ಔಟ್ ಆಗಿವೆ. ಆದರೆ ಈವರೆಗೂ ಸುದ್ದಿಯಲ್ಲಿರದ ವಿರಾಟ್ ಕೊಹ್ಲಿ ಈವೆಂಟ್ನಲ್ಲಿ ಪಾಲ್ಗೊಳ್ಳುತ್ತಾರಾ ಇಲ್ಲವೆ ಎಂಬುದರ ಕುರಿತು ಸ್ಪಷ್ಟನೆ ಸಿಕ್ಕಿಲ್ಲ.
ಕಳೆದ ಬಾರಿ ನಡೆದಿದ್ದ ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ಗೇಲ್ ಅವರ ಜೆರ್ಸಿಯನ್ನು ಶಾಶ್ವತವಾಗಿ ವಿದಾಯಗೊಳಿಸಲಾಗಿತ್ತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಸಹ ಈ ದೊಡ್ಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಈವೆಂಟ್ಗೆ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಆರ್ಸಿಬಿ.. ಆರ್ಸಿಬಿ ಎಂಬ ಘೋಷಣೆ ಇಡೀ ಸ್ಟೇಡಿಯಂಲ್ಲಿ ರಿ ಸೌಂಡ್ ಕೇಳಿಸುತ್ತಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನೂಜ್ ರಾವತ್, ಸುಯಾಶ್ ಪ್ರಭುದೇಸಾಯಿ, ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೊಮ್ರರ್, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ಮಯಾಂಕ್ ಡಾಗರ್, ಕರ್ಣ್ ಶರ್ಮಾ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ರೀಸ್ ಟೋಪ್ಲಿ, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಟಾಮ್ ಕರನ್, ಸೌರವ್ ಚೌಹಾನ್, ಸ್ವಪ್ನಿಲ್ ಸಿಂಗ್.