logo
ಕನ್ನಡ ಸುದ್ದಿ  /  ಕ್ರಿಕೆಟ್  /  Video: ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ ಫ್ಯಾನ್; ವಿರಾಟ್‌ ಕೊಹ್ಲಿ ಪಾದಕ್ಕೆ ನಮಸ್ಕರಿಸಿ ತಬ್ಬಿಕೊಂಡ ಅಭಿಮಾನಿ

Video: ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ ಫ್ಯಾನ್; ವಿರಾಟ್‌ ಕೊಹ್ಲಿ ಪಾದಕ್ಕೆ ನಮಸ್ಕರಿಸಿ ತಬ್ಬಿಕೊಂಡ ಅಭಿಮಾನಿ

Jayaraj HT Kannada

Mar 26, 2024 12:13 AM IST

google News

ವಿರಾಟ್‌ ಕೊಹ್ಲಿ ಪಾದಕ್ಕೆ ನಮಸ್ಕರಿಸಿ ತಬ್ಬಿಕೊಂಡ ಅಭಿಮಾನಿ

    • Virat Kohli: ವಿರಾಟ್‌ ಕೊಹಿ ಬ್ಯಾಟಿಂಗ್‌ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಭದ್ರತೆಯನ್ನು ಉಲ್ಲಂಘಿಸಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್‌ಗೆ ಬಂದಿದ್ದಾನೆ. ಪಿಚ್‌ ಬಳಿ ಇದ್ದ ವಿರಾಟ್‌ ಪಾದಗಳನ್ನು ಮುಟ್ಟಿ, ಅವರನ್ನು ತಬ್ಬಿಕೊಂಡಿದ್ದಾನೆ. ಈ ದೃಶ್ಯಗಳು ವೈರಲ್‌ ಆಗಿವೆ.
ವಿರಾಟ್‌ ಕೊಹ್ಲಿ ಪಾದಕ್ಕೆ ನಮಸ್ಕರಿಸಿ ತಬ್ಬಿಕೊಂಡ ಅಭಿಮಾನಿ
ವಿರಾಟ್‌ ಕೊಹ್ಲಿ ಪಾದಕ್ಕೆ ನಮಸ್ಕರಿಸಿ ತಬ್ಬಿಕೊಂಡ ಅಭಿಮಾನಿ

ಪಂದ್ಯಗಳ ವೇಳೆ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ತಮ್ಮ ನೆಚ್ಚಿನ ಆಟಗಾರರನ್ನು ಭೇಟಿಯಾಗುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಅದು ಕೂಡಾ ವಿರಾಟ್‌ ಕೊಹ್ಲಿಯಂಥ (Virat Kohli) ಜನಪ್ರಿಯ ಆಟಗಾರರಿದ್ದಾಗ ಇಂಥಾ ಸಂಭಾವ್ಯತೆ ಹೆಚ್ಚು. ಮಾರ್ಚ್ 25ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru vs Punjab Kings) ತಂಡದ ನಡುವಿನ ಪಂದ್ಯದ ವೇಳೆ ಇಂತಹದೇ ಘಟನೆ ನಡೆದಿದೆ. ಶಿಖರ್‌ ಧವನ್‌ ಪಡೆ ನೀಡಿದ ಸವಾಲನ್ನು ಬೆನ್ನಟ್ಟುವ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾನೆ.

ಆರ್‌ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನದಲ್ಲಿ ವ್ಯಾಪಕ ಭದ್ರತೆ ನೀಡಲಾಗಿತ್ತು. ಆದರೂ, ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಮಾಡುತ್ತಿದ್ದಾಗ ಅಭಿಮಾನಿ ಭದ್ರತೆಯನ್ನು ಉಲ್ಲಂಘಿಸಿ ಮೈದಾನ ಪ್ರವೇಶಿಸಿದ್ದಾನೆ. ಪಿಚ್‌ ಬಳಿ ಇದ್ದ ವಿರಾಟ್‌ ಬಳಿ ಬಂದು ಭಾರತದ ಸ್ಟಾರ್‌ ಆಟಗಾರನ ಪಾದಗಳನ್ನು ಮುಟ್ಟಿದ್ದಾನೆ. ಅಲ್ಲದೆ, ಕಿಂಗ್‌ ತಬ್ಬಿಕೊಂಡು ತನ್ನ ಆಸೆ ಹಾಗೂ ಕನಸನ್ನು ನನಸಾಗಿಸಿದ್ದಾನೆ.

ಫ್ಯಾನ್‌ ಕೊಹ್ಲಿಯನ್ನು ಮುಟ್ಟುತ್ತಿದ್ದಂತೆಯೇ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ಯಲು ಸೆಕ್ಯುರಿಟಿ ಓಡಿ ಬಂದಿದ್ದಾರೆ. ಅಷ್ಟರಲ್ಲೇ ಆತ ವಿರಾಟ್‌ರನ್ನು ತಬ್ಬಿಕೊಂಡಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಹೊರಕ್ಕೆ ಕರೆದೊಯ್ದಿದ್ದಾರೆ. ‌

ಈ ದೃಶ್ಯಗಳು ಪಂದ್ಯದ ನೇರಪ್ರಸಾರದ ವೇಳೆ ಪ್ರಸಾರವಾಗಿಲ್ಲ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ದೃಶ್ಯವನ್ನು ಸೆರೆಹಿಡಿದಿದ್ದಾರೆ. ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆಕರ್ಷಕ ಅರ್ಧಶತಕ ಸಿಡಿಸಿದ ಕೊಹ್ಲಿ

ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದರು. ಆರಂಭದಿಂದಲೇ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಈ ನಡುವೆ ಎರಡೆರಡು ಬಾರಿ ಜೀವದಾನ ಪಡೆದರು. ಎರಡು ಬಾರಿಯೂ ಸ್ಯಾಮ್‌ ಕರನ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ಡ್ರಾಪ್‌ನಿಂದಾಗಿ ಬದುಕುಳಿದರು. ಮೊದಲ ಓವರ್‌ನಲ್ಲಿ ಬೇರ್‌ಸ್ಟೋ ಕ್ಯಾಚ್‌ ಡ್ರಾಪ್‌ ಮಾಡಿದರೆ, ಎರಡನೇ ಬಾರಿ ಚಹಾರ್‌ ಕ್ಯಾಚ್‌ ಕೈಬಿಟ್ಟರು. ಸಿಕ್ಕ ಜೀವದಾನವನ್ನು ಸದ್ಬಳಕೆ ಮಾಡಿದ ವಿರಾಟ್‌ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ ಸಹಿತ 77 ರನ್ ಕಲೆ ಹಾಕಿದರು. ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆರ್‌ಸಿಬಿಗೆ ಭರ್ಜರಿ ಜಯ

ವಿರಾಟ್‌ ಆಕರ್ಷಕ ಅರ್ಧಶತಕ ಹಾಗೂ ದಿನೇಶ್‌ ಕಾರ್ತಿಕ್‌ ಬೊಂಬಾಟ್ ಫಿನಿಶಿಂಗ್‌ ನೆರವಿಂದ ಆರ್‌ಸಿಬಿ ತಂಡವು ‌ಐಪಿಎಲ್ 2024ರ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿದೆ. ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಶಿಖರ್‌ ಧವನ್‌ ಪಡೆ, 6 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 19.2 ಓವರ್‌ಗಳಲ್ಲಿ178 ರನ್‌ ಗಳಿಸಿ ಗುರಿ ಸಾಧಿಸಿತು.

ಆರ್‌ಸಿಬಿಯು ಮುಂದೆ ಮಾರ್ಚ್‌ 29ರ ಶುಕ್ರವಾರ ಕೆಕೆಆರ್‌ ತಂಡವನ್ನು ಇದೇ ಮೈದಾನದಲ್ಲಿ ಎದುರಿಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ