ವಿಶ್ವಕಪ್ ಅಧಿಕೃತ ಗೀತೆಗೆ ಅಭಿಮಾನಿಗಳ ಟೀಕೆ, ತಿರಸ್ಕಾರ; ಐಸಿಸಿಯನ್ನು ಹುರಿದು ತಿಂದ ನೆಟ್ಟಿಗರು
Dec 22, 2023 05:48 PM IST
ವಿಶ್ವಕಪ್ 2023ರ ಗೀತೆಯಲ್ಲಿ ರಣವೀರ್ ಸಿಂಗ್ ಮತ್ತು ಧನಶ್ರೀ ವರ್ಮಾ
- World Cup 2023 Anthem: 2023ರ ವಿಶ್ವಕಪ್ ಅಧಿಕೃತ ಗೀತೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಂದ ಟೀಕೆಗಳು ವ್ಯಕ್ತವಾಗಿದೆ.
ವಿಶ್ವದಲ್ಲೇ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಕ್ರಿಕೆಟ್ ಹಬ್ಬಕ್ಕೆ ಭಾರತ ಸಜ್ಜಾಗಿದೆ. ಅಕ್ಟೋಬರ್ 5ರಂದು ಭಾರತ ಆತಿಥ್ಯದಲ್ಲಿ ಆರಂಭವಾಗುವ 2023 ರ ಐಸಿಸಿ ಏಕದಿನ ವಿಶ್ವಕಪ್‌ಗೆ (World Cup 2023) ಐಸಿಸಿ ಸಜ್ಜಾಗಿದೆ. ಟೂರ್ನಿಯ ಅಧಿಕೃತ ಗೀತೆಯನ್ನುಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇಂದು (ಬುಧವಾರ) ಬಿಡುಗಡೆ ಮಾಡಿದೆ.
'ದಿಲ್ ಜಶ್ನ್ ಬೋಲೆ(Dil Jashn Bole)' ಎಂಬ ಈ ಗೀತೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಅತ್ಯಂತ ಜನಪ್ರಿಯ ಗೀತೆ ಸಂಯೋಜಕರಲ್ಲಿ ಒಬ್ಬರಾದ ಪ್ರೀತಮ್ ಅವರು ಸಂಗೀತ ರಚಿಸಿದ್ದಾರೆ. ಈ ಗೀತೆಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಆಗಿರುವ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಹಾಗೂ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕೂಡ ಇದ್ದಾರೆ. ಒಟ್ಟು ಮೂರು ನಿಮಿಷ ಹಾಗೂ 22 ಸೆಕೆಂಡುಗಳ ಈ ಗೀತೆಯಲ್ಲಿ 'ವನ್ ಡೇ ಎಕ್ಸ್‌ಪ್ರೆಸ್' ಥೀಮ್‌ನಲ್ಲಿ ಭಾರತದಲ್ಲಿ ಪ್ರಯಾಣ ಮಾಡುವುದನ್ನು ಕಾಣಬಹುದು.
ಐಸಿಸಿಯ ಅವಿರತ ಪ್ರಯತ್ನಗಳ ಹೊರತಾಗಿಯೂ, ಹಾಡಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೆ ಅಭಿಮಾನಿಗಳಿಂದ ಆತ್ಮೀಯ ಸ್ವಾಗತ ಸಿಗಲಿಲ್ಲ. 2011 ಮತ್ತು 2015ರ ಈ ಹಿಂದಿನ ಆವೃತ್ತಿಗಳ ಗೀತೆಗಳಂತೆ ಕ್ರಿಕೆಟ್ ಅಭಿಮಾನಿಗಳ ನಾಡಿಮಿಡಿತವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಗೀತೆ ವಿಫಲವಾಗಿದೆ ಎಂದು ಐಸಿಸಿಯನ್ನು ಕಟುವಾಗಿ ಟೀಕಿಸಲಾಗಿದೆ.
2011ರ ವಿಶ್ವಕಪ್ ಗೀತೆಯನ್ನು ಶಂಕರ್ ಮಹಾದೇವನ್ ಸಂಯೋಜಿಸಿದ್ದರು. "ದೇ ಘುಮಾಕೆ" ಎಂಬ ಹಾಡು ಭಾರಿ ಜನಮನ್ನಣೆ ಗಳಿಸಿತ್ತು. ಆ ಹಾಡಿಗೆ ಈ ಬಾರಿಯ ಗೀತೆ ಸಾಟಿ ಅಲ್ಲ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ. ಈ ಹಾಡು ವೈರಲ್ ಆದರೂ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಗೀತೆಯ ಸಂಗೀತ ಸಂಯೋಜಕ ಪ್ರೀತಮ್, “ಕ್ರಿಕೆಟ್ ಭಾರತದ ಅತಿ ದೊಡ್ಡ ಸಂಭ್ರಮವಾಗಿದೆ. ಇದುವರೆಗಿನ ಅತಿದೊಡ್ಡ ವಿಶ್ವಕಪ್‌ಗಾಗಿ 'ದಿಲ್ ಜಶ್ನ್ ಬೋಲೆ' ಗೀತೆ ರಚಿಸುವುದು ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ. ಈ ಹಾಡು ಕೇವಲ 140 ಕೋಟಿ ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲ. ಇಡೀ ಜಗತ್ತೇ ಭಾರತಕ್ಕೆ ಬಂದು ಆಚರಿಸುವ ಅತಿದೊಡ್ಡ ಹಬ್ಬವಾಗಿದೆ,” ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿಯ ವಿಶ್ವಕಪ್‌ಗೆ ಚಾಲನೆ ಸಿಗಲಿದೆ. ಕಳೆದ ಆವೃತ್ತಿಯ ರನ್ನರ್ ಅಪ್ ನ್ಯೂಜಿಲೆಂಡ್ ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಅಕ್ಟೋಬರ್ 8 ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಅಭಿಯಾನವನ್ನು ಆರಂಭಿಸುತ್ತದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.