logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾರಿಸಿದ್ದು 137 ರನ್, ಬೌಂಡರಿಗಳಿಂದ ಬಂದದ್ದೇ 116 ರನ್; ಪಾಕ್ ವಿರುದ್ಧ ಫಿನ್ ಅಲೆನ್ ದಾಖಲೆಯ ಶತಕ

ಬಾರಿಸಿದ್ದು 137 ರನ್, ಬೌಂಡರಿಗಳಿಂದ ಬಂದದ್ದೇ 116 ರನ್; ಪಾಕ್ ವಿರುದ್ಧ ಫಿನ್ ಅಲೆನ್ ದಾಖಲೆಯ ಶತಕ

Prasanna Kumar P N HT Kannada

Jan 17, 2024 10:12 AM IST

google News

ಫಿನ್ ಅಲೆನ್.

    • Finn Allen: ಪಾಕಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಅಲೆನ್, ಸ್ಫೋಟಕ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.
ಫಿನ್ ಅಲೆನ್.
ಫಿನ್ ಅಲೆನ್.

ಬುಧವಾರ (ಜನವರಿ 17) ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ ಮೈದಾನದಲ್ಲಿ ನಡೆದ ಮೂರನೇ ಟಿ20ಐ ಪಂದ್ಯದಲ್ಲಿ ನ್ಯೂಜಿಲೆಂಡ್‌ ಆರಂಭಿಕ ಆಟಗಾರ ಫಿನ್ ಅಲೆನ್ (Finn Allen), ವಿಶ್ವ ಟಿ20 ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ತಂಡದ ವಿರುದ್ಧ ಆರ್ಭಟದ ಇನ್ನಿಂಗ್ಸ್ ಕಟ್ಟಿದ ಅಲೆನ್, ಸಿಕ್ಸರ್​​ಗಳ ಮೂಲಕವೇ 96 ರನ್ ಸಿಡಿಸಿದ್ದಾರೆ.

ವಿಶ್ವದಾಖಲೆಯ ಆಕ್ರಮಣಕಾರಿ ಆಟವಾಡಿದ ಫಿನ್ ಅಲೆನ್, ಪಾಕ್ ಬೌಲರ್​​ಗಳ ವಿರುದ್ಧ ಚಿಂದಿ ಉಡಾಯಿಸಿದ್ದಾರೆ. 62 ಎಸೆತಗಳಲ್ಲಿ 137 ರನ್ ಗಳಿಸಿದ ಬಲಗೈ ಬ್ಯಾಟರ್, ಬರೋಬ್ಬರಿ 16 ಸಿಕ್ಸರ್‌, 5 ಬೌಂಡರಿಗಳನ್ನು ಚಚ್ಚಿದ್ದಾರೆ. ಆತ ಸಿಡಿಸಿದ 137 ರನ್​ಗಳ ಪೈಕಿ  ಸಿಕ್ಸರ್​-ಬೌಂಡರಿಗಳಿಂದಲೇ 116 ರನ್ ಹರಿದು ಬಂದಿದೆ. ಇದು ಆತನ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕವಾಗಿದೆ.

ಉಳಿದಂತೆ ಇನ್ನು 21 ರನ್​ಗಳನ್ನು ಸಿಂಗಲ್ಸ್ ಮತ್ತು ಡಬಲ್ಸ್​ ಮೂಲಕ ಪಡೆಯಲಾಗಿದೆ. ಪಾಕ್ ಬೌಲರ್​ಗಳಾದ ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ, ಮೊಹಮ್ಮದ್ ನವಾಜ್​ಗೆ ಬೆಂಡತ್ತುವ ಮೂಲಕ ಟಿ20 ಇನ್ನಿಂಗ್ಸ್​​ವೊಂದರಲ್ಲಿ ಅತ್ಯಧಿಕ ಸಿಕ್ಸರ್​​ಗಳನ್ನು ಚಚ್ಚಿ ವಿಶ್ವ ದಾಖಲೆಯೊಂದನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವದಾಖಲೆ ಸಮ

ಒಂದೇ ಇನ್ನಿಂಗ್ಸ್​​ನಲ್ಲಿ 16 ಸಿಕ್ಸರ್ ಬಾರಿಸಿದ ಅಲೆನ್, ಅಫ್ಘಾನಿಸ್ತಾನದ ಹಜರುತುಲ್ಲಾ ಜಜೈ ಅವರ ದಾಖಲೆ ಸಮಗೊಳಿಸಿದ್ದಾರೆ. 2019ರ ಫೆಬ್ರವರಿ 23ರಂದು ಡೆಹ್ರಾಡೂನ್​ನಲ್ಲಿ ಐರ್ಲೆಂಡ್ ವಿರುದ್ಧ ಜಜೈ ಕಟ್ಟಿದ್ದ 162 ರನ್​ಗಳ ಇನ್ನಿಂಗ್ಸ್​​ನಲ್ಲಿ ಗರಿಷ್ಠ 16 ಸಿಕ್ಸರ್​ ಬಾರಿಸಿ ದಾಖಲೆ ಬರೆದಿದ್ದರು. ಈಗ ಆ ದಾಖಲೆಯನ್ನು ಫಿನ್ ಅಲೆನ್ ಸರಿಗಟ್ಟಿದ್ದಾರೆ.

ನ್ಯೂಜಿಲೆಂಡ್ ಪರ ಗರಿಷ್ಠ ಸ್ಕೋರ್

137 ರನ್ ಗಳಿಸಿದ ಅಲೆನ್ ಈಗ ನ್ಯೂಜಿಲೆಂಡ್‌ ಪರ ಟಿ20ಐ ಕ್ರಿಕೆಟ್​ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. 2012ರ ಸೆಪ್ಟೆಂಬರ್ 21ರಂದು ಪಲ್ಲೆಕೆಲೆಯಲ್ಲಿ ಬಾಂಗ್ಲಾದೇಶದ ವಿರುದ್ಧ 123 ರನ್ ಗಳಿಸಿದ್ದ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಮುರಿದಿದ್ದಾರೆ. 

ಗರಿಷ್ಠ ಸಿಕ್ಸರ್​​ಗಳ ದಾಖಲೆ

ನ್ಯೂಜಿಲೆಂಡ್ ಬ್ಯಾಟರ್ ಒಬ್ಬರು ಟಿ20ಐ ಇನ್ನಿಂಗ್ಸ್​ವೊಂದರಲ್ಲಿ 10ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಬ್ಯಾಟರ್​ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಕೋರಿ ಆಂಡರ್ಸನ್ ಮತ್ತು ಕಾಲಿನ್ ಮುನ್ರೊ ಅವರು 2017 ಮತ್ತು 2018 ರಲ್ಲಿ ಕ್ರಮವಾಗಿ ತಲಾ 10 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ಅವರನ್ನೂ ಹಿಂದಿಕ್ಕಿದ್ದಾರೆ. 

ಆರ್​ಸಿಬಿ ಮಾಜಿ ಆಟಗಾರ

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಫಿನ್ ಅಲೆನ್​​ಗೆ ಆಡುವ ಅವಕಾಶವೇ ಸಿಕ್ಕಿರಲಿಲ್ಲ. ಆದರೀಗ ಟಿ20 ಕ್ರಿಕೆಟ್​ನಲ್ಲಿ ಸುನಾಮಿಯಂತೆ ಅಬ್ಬರಿಸುವ ಮೂಲಕ ಟಾಂಗ್ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 34 ರನ್, 2ನೇ ಟಿ20ಯಲ್ಲಿ 74 ರನ್ ಸಿಡಿಸಿದ್ದ ಅಲೆನ್, ಈಗ ಶತಕ ಸಿಡಿಸಿದ್ದಾರೆ.

ಹ್ಯಾಟ್ರಿಕ್ ಗೆಲುವು, ಸರಣಿ ಕೈವಶ

ಮೂರನೇ ಟಿ20 ಪಂದ್ಯದಲ್ಲೂ ನ್ಯೂಜಿಲೆಂಡ್​ 45 ರನ್​ಗಳ ಭರ್ಜರಿ ಗೆಲುವು ದಾಖಲಿಸಿ 2 ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಸತತ ಮೂರನೇ ಪಂದ್ಯದಲ್ಲೂ ಸೋತ ಪಾಕ್ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದು ಮುಖಭಂಗದಿಂದ ಪಾರಾಗಲು ಸಿದ್ಧತೆ ನಡೆಸುತ್ತಿದೆ.

ಮೂರನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್, ಫಿನ್ ಅಲೆನ್ ಅಬ್ಬರದ ಆಟದ ನೆರವಿನಿಂದ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕ್ 7 ವಿಕೆಟ್ ಕಳೆದುಕೊಂಡು 179 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ ಪಂದ್ಯವನ್ನು ಕೈಚೆಲ್ಲಬೇಕಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ