logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ Vs ಸಿಎಸ್‌ಕೆ; ಐಪಿಎಲ್‌ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ

ಆರ್‌ಸಿಬಿ vs ಸಿಎಸ್‌ಕೆ; ಐಪಿಎಲ್‌ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ

Jayaraj HT Kannada

Mar 22, 2024 04:08 PM IST

google News

ಐಪಿಎಲ್‌ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ

    • CSK vs RCB: ಐಪಿಎಲ್ 2024ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತೆ ಮೈದಾನಕ್ಕೆ ಮರಳದ್ದು, ಸಿಎಸ್‌ಕೆ ತಂಡದ ನಾಯಕನಾಗಿ ಋತುರಾಜ್ ಗಾಯಕ್ವಾಡ್ ಬಡ್ತಿ ಪಡೆದಿದ್ದಾರೆ.
ಐಪಿಎಲ್‌ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ
ಐಪಿಎಲ್‌ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ

ಐಪಿಎಲ್ 2024ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಸಿಎಸ್‌ಕೆ ತಂಡವು ನೂತನ ನಾಯಕನೊಂದಿಗೆ ಅಖಾಡಕ್ಕೆ ಇಳಿಯುತ್ತಿದ್ದು, ಹೊಸ ಸವಾಲು ಋತುರಾಜ್‌ ಮುಂದಿದೆ. ಟೂರ್ನಿಯ ಇತಿಹಾಸದಲ್ಲಿ ಉಭಯ ತಂಡಗಳು ಈವರೆಗೆ ಒಟ್ಟು 31 ಬಾರಿ ಮುಖಾಮುಖಿಯಾಗಿದ್ದು, ಆರ್‌ಸಿಬಿ ವಿರುದ್ಧ ಹಳದಿ ಆರ್ಮಿಯು 20-10 ಅಂತರದಲ್ಲಿ ಗೆಲುವಿನ ಮುನ್ನಡೆ ಸಾಧಿಸಿದೆ. ಪ್ರಸಕ್ತ ಆವೃತ್ತಿಯು ಎರಡು ಬಲಿಷ್ಠ ತಂಡಗಳ ಪಂದ್ಯದೊಂದಿಗೆ ಆರಂಭವಾಗುತ್ತಿದ್ದು, ಪಂದ್ಯದಲ್ಲಿ ಹೆಚ್ಚು ಗಮನ ಸೆಳೆಯಲಿರುವ ಐವರು ಆಟಗಾರರನ್ನು ನೋಡೋಣ.

ಕಳೆದ ಋತುವಿನ ಫೈನಲ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಸಿಎಸ್‌ಕೆ, ದಾಖಲೆಯ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತು. ತಂಡದ ಡಿವೊನ್ ಕಾನ್ವೇ 16 ಪಂದ್ಯಗಳಿಂದ 672 ರನ್ ಗಳಿಸಿ, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದರು. ಅತ್ತ ತುಷಾರ್ ದೇಶಪಾಂಡೆ 16 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿ ಮಿಂಚಿದರು. ಮತ್ತೊಂದೆಡೆ, ಪ್ಲೇಆಫ್‌ ಪ್ರವೇಶಿಸಲು ವಿಫಲವಾದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಆದರೂ, ಬ್ಯಾಟಿಂಗ್ ವಿಭಾಗದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತು. ನಾಯಕ ಫಾಫ್ ಡು ಪ್ಲೆಸಿಸ್ 14 ಪಂದ್ಯಗಳಲ್ಲಿ 730 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆದರು. ವಿರಾಟ್ ಕೊಹ್ಲಿ 639 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರು.

ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಗಮನ ಸೆಳೆಯಲಿರುವ ಆಟಗಾರರರು

ರಚಿನ್‌ ರವೀಂದ್ರ

ಐಪಿಎಲ್ 2024ರ ಹರಾಜಿನಲ್ಲಿ ಆರ್‌ಸಿಬಿ ತಂಡ ಖರೀದಿಸಬಹುದು ಎಂದುಕೊಂಡದ್ದ ಆಟಗಾರ ರಚಿನ್‌ ರವೀಂದ್ರ. ಆದರೆ, ನ್ಯೂಜಿಲ್ಯಾಂಡ್‌ ಆಲ್ರೌಂಡರ್ ರವೀಂದ್ರ ಅವರನ್ನು ಸಿಎಸ್‌ಕೆ ತಂಡ 1.8 ಕೋಟಿ ರೂಪಾಯಿಗೆ ಖರೀದಿಸಿತು. ಏಕದಿನ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ರಚಿನ್‌, ಇದೀಗ ತಮ್ಮ ಚೊಚ್ಚಲ ಐಪಿಎಲ್ ಪಂದ್ಯಾವಳಿಯಲ್ಲಿ ಛಾಪು ಮೂಡಿಸಲು ಸಜ್ಜಾಗಿದ್ದಾರೆ. 24 ವರ್ಷದ ಆಟಗಾರ, ವಿಶ್ವಕಪ್ ಇತಿಹಾಸದಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಮೂರು ಶತಕಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನ್ಯೂಜಿಲ್ಯಾಂಡ್‌ ತಂಡದ ಆಡುವ ಬಳಗದಲ್ಲಿ ಕಾಯಂ ಸದಸ್ಯರಾಗಿರುವ ರವೀಂದ್ರ, ಸಿಎಸ್‌ಕೆ ತಂಡದಲ್ಲೂ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ.

ಅಲ್ಜಾರಿ ಜೋಸೆಫ್

ಐಪಿಎಲ್ 2024 ಹರಾಜಿನಲ್ಲಿ ಆರ್‌ಸಿಬಿ ತಂಡವು ಅಲ್ಜಾರಿ ಜೋಸೆಫ್ ಅವರನ್ನು ಬರೋಬ್ಬರಿ 11.50 ಕೋಟಿ ರೂಪಾಯಿಗೆ ಖರೀದಿಸಿತು. ವೆಸ್ಟ್ ಇಂಡೀಸ್ ವೇಗಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 19 ಪಂದ್ಯಗಳಲ್ಲಿ ಈವರೆಗೆ 20 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ 2019ರಲ್ಲಿ ಎಸ್ಆರ್‌ಎಚ್ ವಿರುದ್ಧ ಅವರ 6/12 ಪ್ರದರ್ಶನವು, ಐಪಿಎಲ್‌ನ ಅತ್ಯುತ್ತಮ ಅಂಕಿ-ಅಂಶವಾಗಿದೆ.

ಇದನ್ನೂ ಓದಿ | CSK SWOT Analysis: ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೌರ್ಬಲ್ಯಕ್ಕಿಂತ ಸಾಮರ್ಥ್ಯವೇ ಜಾಸ್ತಿ; ಸಿಎಸ್​ಕೆ ಬಲಾಬಲ ವಿಶ್ಲೇಷಣೆ

ಆರ್‌ಸಿಬಿ ತಂಡದಲ್ಲಿ ಲಾಕಿ ಫರ್ಗುಸನ್ ಮತ್ತು ಮೊಹಮ್ಮದ್ ಸಿರಾಜ್ ಇರುವುದರಿಂದ, ತಮ್ಮ ಸ್ಥಾನಕ್ಕಾಗಿ ಅವರು ಭರವಸೆ ಮೂಡಿಸಬೇಕಾಗಿದೆ. ರೀಸ್ ಟಾಪ್ಲೆ ಮತ್ತು ಆಕಾಶ್ ದೀಪ್ ಅವರಂಥ ವೇಗಿಗಳ ನಡುವೆ ಆಡುವ ಬಳಗ ಸೇರಿಕೊಂಡರೂ, ತಾವು ಪಡೆದ ಬೃಹತ್ ಬೆಲೆಯನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಜೋಸೆಫ್‌ ಮೇಲೆ ಭಾರಿ ನಿರೀಕ್ಷೆಗಳಿವೆ.

ಋತುರಾಜ್ ಗಾಯಕ್ವಾಡ್

ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್‌ಕೆ ತಂಡದ ನಾಯಕತ್ವದ ಜವಾಬ್ದಾರಿ ಪಡೆದಿರುವ ಋತುರಾಜ್ ಗಾಯಕ್ವಾಡ್ ಮೇಲೆ, ಈ ಬಾರಿ ಹೆಚ್ಚುವರಿ ಒತ್ತಡವಿದೆ. ಸಿಎಸ್‌ಕೆ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಲ್ಲದೆ ಅಲ್ಜಾರಿ ಜೋಸೆಫ್ ಮತ್ತು ಲಾಕಿ ಫರ್ಗ್ಯುಸನ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಗಾಯಕ್ವಾಡ್‌, ಆರ್‌ಸಿಬಿಗೆ ಕಂಟಕವಾಗುವ ಸಾಧ್ಯತೆಯೂ ಇದೆ. ಜೋಸೆಫ್ ಅವರ ಬೌಲಿಂಗ್‌ಗೆ 25 ಎಸೆತಗಳಲ್ಲಿ 47 ರನ್ ಗಳಿಸಿದ್ದರೆ, ಫರ್ಗ್ಯುಸನ್ ವಿರುದ್ಧ ಅವರು 29 ಎಸೆತಗಳಲ್ಲಿ 56 ರನ್ ಗಳಿಸಿದ್ದಾರೆ. ಹೊಸ ಸವಾಲಿಗೆ ಹೇಗೆ ಸಜ್ಜಾಗಿದ್ದಾರೆ ಎಂಬುದು ತಮ್ಮ ಮೊದಲ ಪಂದ್ಯದಲ್ಲಿ ತಿಳಿದುಬರಲಿದೆ.

ವಿರಾಟ್ ಕೊಹ್ಲಿ

ಈವರೆಗಿನ ಎಲ್ಲಾ ಐಪಿಎಲ್‌ ಆವೃತ್ತಿಯಲ್ಲೂ ಆರ್‌ಸಿಬಿ ಪರ ಮಾತ್ರವೇ ಆಡಿರುವ ವಿರಾಟ್‌ ಕೊಹ್ಲಿಗೆ ಇದು ಮತ್ತೊಂದು ಐಪಿಎಲ್ ಸೀಸನ್. ಆದರೆ, ಈ ಬಾರಿ ವಿರಾಟ್ ಮುಂದೆಯೂ ಕೆಲವೊಂದು ಸವಾಲುಗಳಿವೆ. ಚೆನ್ನೈ ಮೈದಾನದಲ್ಲಿ ಸ್ಪಿನ್ ವಿರುದ್ಧ ಪವರ್‌ಪ್ಲೇನಲ್ಲಿ ಆರ್‌ಸಿಬಿ ಮಾಜಿ ನಾಯಕನ ದಾಖಲೆ ಅಷ್ಟು ಉತ್ತಮವಾಗಿಲ್ಲ. ಈವರೆಗೆ 23 ಎಸೆತಗಳಲ್ಲಿ ಅವರು ಕೇವಲ 15 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಔಟಾಗಿದ್ದಾರೆ. ಈ ಬಾರಿಯೂ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಹೀಗಾಗಿ ತಂಡಕ್ಕೆ ಉತ್ತಮ ಆರಂಭ ಕೊಡುವ ಸವಾಲು ವಿರಾಟ್‌ ಮುಂದಿದೆ. ಸಿಎಸ್‌ಕೆ ವಿರುದ್ಧ ಈವರೆಗೆ ಕೊಹ್ಲಿ 985 ರನ್ ಗಳಿಸಿದ್ದಾರೆ. ಅಲ್ಲದೆ ಸುದೀರ್ಘ ಅಂತರದ ಬಳಿಕ ಅವರು ಮೈದಾನಕ್ಕೆ ಇಳಿಯುತ್ತಿದ್ದು, ಫಾರ್ಮ್‌ ಪರೀಕ್ಷೆಯೂ ನಡೆಯಲಿದೆ.

ಎಂಎಸ್ ಧೋನಿ

ಋತುರಾಜ್‌ ಗಾಯಕ್ವಾಡ್‌ ಸಿಎಸ್‌ಕೆ ನಾಯಕನಾದರೂ, ಧೋನಿ ಮೇಲೆ ಹೆಚ್ಚಿನ ಜವಾಬ್ದಾರಿಗಳಿರಲಿವೆ. ಐಪಿಎಲ್ 2023ರ ನಂತರ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಧೋನಿ, ಸುಮಾರು ಒಂದು ವರ್ಷದ ನಂತರ ಮೈದಾನಕ್ಕೆ ಇಳಿಯುತ್ತಿದ್ದಾರೆ. ಗಾಯಕ್ವಾಡ್‌ಗೆ ನಾಯಕತ್ವ ನೀಡಿದ ಬಳಿಕ ಧೋನಿ ಮೇಲಿನ ಒತ್ತಡ ತುಸು ಕಡಿಮೆಯಾಗಿದೆ. ಹೀಗಾಗಿ ಪ್ರಸಕ್ತ ಆವೃತ್ತಿಯಲ್ಲಿ ಅವರು ಬ್ಯಾಟಿಂಗ್‌ನಲ್ಲಿ ಸದ್ದು ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ