Ravi Shastri: ಧವನ್ ಫಿಟ್ ಆಗಿದ್ದರೆ, 2019ರ ವಿಶ್ವಕಪ್ ಗೆಲ್ಲುತ್ತಿದ್ದೆವು; ರವಿ ಶಾಸ್ತ್ರಿ
Aug 17, 2023 11:14 PM IST
ಶಿಖರ್ ಧವನ್ ಮತ್ತು ರವಿ ಶಾಸ್ತ್ರಿ.
- ಅಕ್ಟೋಬರ್ 5ರಿಂದ ಭಾರತದಲ್ಲಿ ಶುರುವಾಗುವ ಏಕದಿನ ವಿಶ್ವಕಪ್ ತಂಡದಲ್ಲಿ ಭಾರತ ತಂಡಕ್ಕೆ ಎಡಗೈ ಆಟಗಾರನ ಲಭ್ಯತೆ ಕುರಿತು ಮಾತನಾಡಿದ ಮಾಜಿ ಕೋಚ್ ರವಿ ಶಾಸ್ತ್ರಿ, 2019ರ ವಿಶ್ವಕಪ್ ಸೋಲಿಗೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.
2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2019) ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ಫಿಟ್ ಆಗಿದ್ದರೆ ಟ್ರೋಫಿ ಗೆಲ್ಲುತ್ತಿದ್ದೆವು ಎಂದು ಭಾರತ ಮಾಜಿ ಹೆಡ್ಕೋಚ್ ರವಿ ಶಾಸ್ತ್ರಿ (Ravi Shastri) ಹೇಳಿಕೆ ನೀಡಿದ್ದಾರೆ. ಅಂದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ (Team India) ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು ಸೋಲು ಕಂಡಿತ್ತು. ಶಿಖರ್ ಧವನ್ ಲೀಗ್ ಹಂತದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇಡೀ ಟೂರ್ನಿಯಿಂದಲೇ ಹೊರ ಬಿದ್ದಿದ್ದರು.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿರುವ ರವಿ ಶಾಸ್ತ್ರಿ ಭಾರತ ತಂಡಕ್ಕೆ ಎಡಗೈ ಆಟಗಾರ ಅವಶ್ಯಕತೆ ಎಷ್ಟಿದೆ ಎಂಬುದನ್ನು ವಿವರಿಸಿದ್ದಾರೆ. ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಿರುವ ಮಾಜಿ ಕೋಚ್, ಆದರೆ ಧವನ್ಗೆ ಮನ್ನಣೆ ನೀಡುವುದಿಲ್ಲ ಎಂಬುದು ತಿಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅವರಿಗೆ ಅವಕಾಶ ನೀಡದಿದ್ದರೆ, ಯುವ ಎಡಗೈ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡುವಂತೆ ತಿಳಿಸಿದ್ದಾರೆ.
ಧವನ್ ಇದ್ದಿದ್ದರೆ ಅದರ ಕತೆಯೇ ಬೇರೆ..!
ಅಕ್ಟೋಬರ್ 5ರಿಂದ ಭಾರತದಲ್ಲಿ ಶುರುವಾಗುವ ಏಕದಿನ ವಿಶ್ವಕಪ್ ತಂಡದಲ್ಲಿ ಭಾರತ ತಂಡಕ್ಕೆ ಎಡಗೈ ಆಟಗಾರನ ಲಭ್ಯತೆ ಕುರಿತು ಮಾತನಾಡಿದ ರವಿ ಶಾಸ್ತ್ರಿ, 2019ರ ವಿಶ್ವಕಪ್ ಸೋಲಿಗೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ವಿಶ್ವಕಪ್ ಮಧ್ಯದಲ್ಲಿ ಧವನ್ ಗಾಯವಾಗಿದ್ದು ತಂಡದ ಮೇಲೆ ಪರಿಣಾಮ ಬೀರಿತು ಎಂದ ರವಿ ಶಾಸ್ತ್ರಿ, ಅವರು ಉಳಿದುಕೊಂಡಿದ್ದರೆ, ಅದರ ಕತೆಯೇ ಬೇರೆಯಾಗುತ್ತಿತ್ತು ಎಂದರು.
ಒಂದು ಶಿಖರ್ ಧವನ್ ಗಾಯಗೊಳ್ಳದೆ ಉಳಿದುಕೊಂಡಿದ್ದರೆ, ನಾವು ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಿದ್ದೆವು. ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಇದ್ದರೆ ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಲಿದೆ. ಹಾಗಾಗಿ ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಅವರನ್ನು ತಂಡದಲ್ಲಿ ಆಡಿಸಬೇಕು ಎಂದು ಟೀಮ್ ಮ್ಯಾನೇಜ್ಮೆಂಟ್ಗೆ ಸೂಚಿಸಿದ್ದಾರೆ.
ಎಡಗೈ ಆಟಗಾರನಿಗೆ ಅವಕಾಶ
ಧವನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕು ಎಂದ ರವಿಶಾಸ್ತ್ರಿ, ಒಂದು ವೇಳೆ ಧವನ್ಗೆ ಅವಕಾಶ ನೀಡದಿದ್ದರೆ ಮತ್ತಿಬ್ಬರು ಎಡಗೈ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ. ಟಾಪ್-7 ಆಟಗಾರರ ಪೈಕಿ ರವೀಂದ್ರ ಜಡೇಜಾ ಜೊತೆಗೆ ಎಡಗೈ ಆಟಗಾರರು ತಂಡದಲ್ಲಿ ಅವಕಾಶ ಪಡೆದರೆ ಉತ್ತಮ. ಇದು ಬೌಲರ್ಗಳ ಮೇಲೆ ಒತ್ತಡ ಹೇರಲು ನೆರವಾಗುತ್ತದೆ. ವಿಕೆಟ್ ಕಾಪಾಡಲು ಇದು ಸಹಾಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ
ಟಾಪ್ ಆರ್ಡರ್ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇಶನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರೆ, 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯಲಿದ್ದಾರೆ. ಶುಭ್ಮನ್ ಗಿಲ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿ ಎಂದಿರುವ ರವಿ ಶಾಸ್ತ್ರಿ, ಇಲ್ಲವಾದರೆ ಆರಂಭಿಕರಾಗಿ ಶಿಖರ್ ಧವನ್ ಅವರನ್ನು ಆಡಿಸಬೇಕು. ಅನುಭವಿ ಆಟಗಾರನ ಅಗತ್ಯ ಇಲ್ಲ ಎನಿಸಿದರೆ, ಯಶಸ್ವಿ ಜೈಸ್ವಾಲ್ ಅಥವಾ ತಿಲಕ್ ವರ್ಮಾ ಅವರಲ್ಲಿ ಒಬ್ಬರಿಗೆ ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧವನ್ಗೆ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ
ಟೀಮ್ ಇಂಡಿಯಾ ಏಕದಿನ ವಿಶ್ವಕಪ್ಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆಯ್ಕೆಗಾರರು, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ತಂಡದ ಆಯ್ಕೆಯಲ್ಲಿ ನಿರತವಾಗಿದೆ. ಮತ್ತೊಂದೆಡೆ ಆಯ್ಕೆಯಾಗುತ್ತೇವೆಯೇ ಇಲ್ಲವೇ ಎಂದು ಆಟಗಾರರ ಹೃದಯ ಢವಢವ ಎನ್ನುತ್ತಿದೆ. ಇದರ ನಡುವೆ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಆಯ್ಕೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಶುಭ್ಮನ್ ಗಿಲ್ ಮೊದಲ ಆಯ್ಕೆಯ ಅವಕಾಶ ಆಗಿರುವುದರಿಂದ ಧವನ್ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಧವನ್ ಕೊನೆಯದಾಗಿ 2022ರ ಡಿಸೆಂಬರ್ನಲ್ಲಿ ಏಕದಿನ ಆಡಿದ್ದಾರೆ.