logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗಂಭೀರ್ ಜೊತೆ ಜಗಳವಾಡದಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿತ್ತು; ಮನೋಜ್‌ ತಿವಾರಿ ಅಚ್ಚರಿಯ ಹೇಳಿಕೆ

ಗಂಭೀರ್ ಜೊತೆ ಜಗಳವಾಡದಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿತ್ತು; ಮನೋಜ್‌ ತಿವಾರಿ ಅಚ್ಚರಿಯ ಹೇಳಿಕೆ

Jayaraj HT Kannada

Feb 21, 2024 09:57 AM IST

google News

ಗಂಭೀರ್ ಜೊತೆ ಜಗಳವಾಡದಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿತ್ತು ಎಂದ ಮನೋಜ್‌ ತಿವಾರಿ

    • Manoj Tiwary: ಕೆಕೆಆರ್‌ ತಂಡದಲ್ಲಿರುವಾಗ ಗೌತಮ್ ಗಂಭೀರ್ ಅವರೊಂದಿಗೆ ದೊಡ್ಡ ಮಟ್ಟದ ಜಗಳವಾಡದಿದ್ದರೆ, ಕೋಲ್ಕತ್ತಾ ನೈಟ್‌ ರೈಡರ್ಸ್ ಪರ ಇನ್ನೂ ಒಂದೆರಡು ಆವೃತ್ತಿಗಳಲ್ಲಿ ಆಡುತ್ತಿದ್ದುದಾಗಿ‌ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ತನ್ನ ಬ್ಯಾಂಕ್‌ ಬ್ಯಾಲೆನ್ಸ್‌ ಕೂಡಾ ಹೆಚ್ಚಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ಗಂಭೀರ್ ಜೊತೆ ಜಗಳವಾಡದಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿತ್ತು ಎಂದ ಮನೋಜ್‌ ತಿವಾರಿ
ಗಂಭೀರ್ ಜೊತೆ ಜಗಳವಾಡದಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿತ್ತು ಎಂದ ಮನೋಜ್‌ ತಿವಾರಿ

ಇತ್ತೀಚೆಗಷ್ಟೇ ರಣಜಿ ಕ್ರಿಕೆಟ್‌ಗೂ ವಿದಾಯ ಹೇಳಿದ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary), 2010ರಿಂದ 2013ರವರೆಗೆ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಪರ ಆಡಿದ್ದರು. 2012ರಲ್ಲಿ ಕೆಕೆಆರ್‌ ತಂಡವು ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿತು. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ, ಡ್ವೇನ್ ಬ್ರಾವೋ ಎಸೆತದಲ್ಲಿ ಬೌಂಡರಿ ಬಾರಿಸಿದ ತಿವಾರಿ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ನೆರವಾದರು. ಆ ಬಳಿಕ 2013ರ ಆವೃತ್ತಿಯಲ್ಲೂ ಆಡಿದ ತಿವಾರಿ, ತಂಡದ ನಾಯಕ ಗೌತಮ್ ಗಂಭೀರ್ ಅವರೊಂದಿಗೆ ಡ್ರೆಸ್ಸಿಂಗ್ ಕೋಣೆಯಲ್ಲಿ ಜಗಳವಾಡಿದ್ದರಂತೆ. ಈ ಕುರಿತು ಖುದ್ದು ತಿವಾರಿ ಅವರೇ ಬಹಿರಂಗಪಡಿಸಿದ್ದಾರೆ.

ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಬಿಹಾರ ವಿರುದ್ಧದ ಪಂದ್ಯದಲ್ಲಿ ಗೆದ್ದ ನಂತರ ಬಂಗಾಳ ತಂಡದ ನಾಯಕನಾಗಿದ್ದ ತಿವಾರಿ ರಣಜಿ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದರು. ಇದಾದ ಕೆಲವೇ ದಿನಗಳಲ್ಲಿ ಗಂಭೀರ್‌ ಜೊತೆಗಿನ ಜಗಳದ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ | ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು; ಯಶಸ್ವಿ ಜೈಸ್ವಾಲ್ ಪ್ರಬುದ್ಧ ಮಾತು

ಆನಂದಬಜಾರ್ ಪತ್ರಿಕೆಯೊಂದಿಗೆ ಮಾತನಾಡಿದ 38 ವರ್ಷದ ಆಟಗಾರ, 2013ರಲ್ಲಿ ಕೆಕೆಆರ್‌ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಭೀರ್ ಅವರೊಂದಿಗೆ ದೊಡ್ಡ ಮಟ್ಟದ ಜಗಳವಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಒಂದು ವೇಳೆ ಆ ಘಟನೆ ಸಂಭವಿಸದಿದ್ದರೆ, ಅವರು ಕೆಕೆಆರ್‌ ಪರ ಇನ್ನೂ ಒಂದೆರಡು ಆವೃತ್ತಿಗಳಲ್ಲಿ ಆಡುತ್ತಿದ್ದುದಾಗಿ ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಹೆಚ್ಚು ಹಣ ಸಂಪಾದನೆಯೂ ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

“ನಾನು ಕೆಕೆಆರ್‌ ತಂಡದಲ್ಲಿ ಆಡುತ್ತಿದ್ದಾಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಭೀರ್ ಅವರೊಂದಿಗೆ ದೊಡ್ಡ ಜಗಳವಾಡಿದ್ದೆ. ಅದು ಎಂದಿಗೂ ಮುನ್ನೆಲೆಗೆ ಬರಲಿಲ್ಲ. ಅದಕ್ಕೂ ಹಿಂದೆ 2012ರಲ್ಲಿ ಕೆಕೆಆರ್ ಚಾಂಪಿಯನ್ ಆಗಿತ್ತು. ಆ ಸಮಯದಲ್ಲಿ ನಾನು ಫೋರ್ ಹೊಡೆಯುವಲ್ಲಿ ಯಶಸ್ವಿಯಾದೆ.‌ ಹೀಗಾಗಿ ತಂಡವು ಗೆದ್ದಿತು. ನನಗೆ ಇನ್ನೂ ಒಂದು ವರ್ಷ ಕೆಕೆಆರ್ ಪರ ಆಡುವ ಅವಕಾಶ ಸಿಕ್ಕಿತು. ನಾನು 2013 ರಲ್ಲಿ ಗಂಭೀರ್ ಅವರೊಂದಿಗೆ ಜಗಳ ಆಡದೇ ಇದ್ದಿದ್ದರೆ, ಬಹುಶಃ ನಾನು ಇನ್ನೂ ಎರಡು-ಮೂರು ವರ್ಷಗಳ ಕಾಲ ಆಡುತ್ತಿದ್ದೆ. ಒಪ್ಪಂದದ ಪ್ರಕಾರ ನಾನು ಪಡೆಯಬೇಕಿದ್ದ ಮೊತ್ತ ಕೂಡಾ ಹೆಚ್ಚಾಗುತ್ತಿತ್ತು. ನನ್ನ ಬ್ಯಾಂಕ್ ಬ್ಯಾಲೆನ್ಸ್ ದೊಡ್ಡದಾಗುತ್ತಿತ್ತು. ಆದರೆ ನಾನು ಆ ಬಗ್ಗೆ ಎಂದಿಗೂ ಯೋಚಿಸಿಲ್ಲ” ಎಂದು ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ | ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಭಾವುಕ

ಡೆಲ್ಲಿ ಡೇರ್ ಡೆವಿಲ್ಸ್ ಆಡುವ ಬಳಗವೇ ಸರಿ ಇರಲಿಲ್ಲ

2008 ಮತ್ತು 2009ರ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಫ್ರಾಂಚೈಸಿ ಪರ ಆಡುತ್ತಿದ್ದ ತಿವಾರಿ, ತಂಡದ ಆಡುವ ಬಳಗವನ್ನು ಆಯ್ಕೆ ಮಾಡುವ ವಿಷಯದಲ್ಲಿ ಫ್ರಾಂಚೈಸಿ ಕಾರ್ಯನಿರ್ವಹಿಸಿದ ರೀತಿಯಿಂದ ನಿರಾಶೆಗೊಂಡಿದ್ದೆ ಎಂದು ಬಹಿರಂಗಪಡಿಸಿದರು. ಉತ್ತಮ ಆಟಗಾರರನ್ನು ನಿರಂತರವಾಗಿ ನಿರ್ಲಕ್ಷಿಸಲಾಗುತ್ತದೆ ಎಂದು ಅವರು ಹೇಳಿದರು. ಅವಕಾಶಗಳ ಕೊರತೆಯಿಂದ ಹತಾಶರಾದ ತಿವಾರಿ, ತಮ್ಮನ್ನು ಬಿಡುಗಡೆ ಮಾಡುವಂತೆ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದರು. ಕೊನೆಗೆ ಅವರು ತಮ್ಮ ಒಪ್ಪಂದವನ್ನು ಕಳೆದುಕೊಂಡರು.‌

ಅರ್ಹ ಕ್ರಿಕೆಟಿಗರಿಗೆ ಆಡಲು ಅವಕಾಶ ಸಿಗುತ್ತಿರಲಿಲ್ಲ

“ನಾನು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾಗ ಗ್ಯಾರಿ ಕರ್ಸ್ಟನ್ ಕೋಚ್ ಆಗಿದ್ದರು. ಆಡುವ ಬಳಗದ ಸಂಯೋಜನೆ ಸರಿಯಾಗಿಲ್ಲ ಎಂಬುದನ್ನು ನಾನು ನನ್ನ ಕಣ್ಣಾರೆ ನೋಡುತ್ತಿದ್ದೆ. ಅರ್ಹ ಕ್ರಿಕೆಟಿಗರಿಗೆ ಆಡಲು ಅವಕಾಶ ಸಿಗುತ್ತಿರಲಿಲ್ಲ. ಇನ್ನೂ ಕೆಲವರು ಗಾಯಗಳಿಂದಾಗಿ ಹೊರಗುಳಿದಿದ್ದರು. ತಂಡದ ಫಲಿತಾಂಶಗಳು ಉತ್ತಮವಾಗಿರಲಿಲ್ಲ. ಹೀಗಾಗಿ ನಾನು ನೇರವಾಗಿ ಹೋಗಿ, ನೀವು ನನ್ನನ್ನು ಆಡುವ ಬಳಗದಲ್ಲಿ ಸೇರಿಸಲು ಸಾಧ್ಯವಾಗದಿದ್ದರೆ ನನ್ನನ್ನು ಬಿಟ್ಟುಬಿಡಿ ಎಂದು ಹೇಳಿದೆ. ಆಗ ನನ್ನ ಒಪ್ಪಂದ 2.8 ಕೋಟಿ ರೂಪಾಯಿ ಆಗಿತ್ತು. ನಾನು ಇದನ್ನು ಹೇಳಿದರೆ, ಅವರು ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ,” ಎಂದು ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ | Rishabh Pant: ಐಪಿಎಲ್‌ಗೂ ಮುನ್ನ ಮೊದಲ ಪೂರ್ಣ ಪಂದ್ಯ ಆಡಿದ ರಿಷಭ್ ಪಂತ್; ಟಿ20 ವಿಶ್ವಕಪ್ ಆಯ್ಕೆಗೆ ಸಿದ್ಧ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ