IND vs PAK: ಕಳಪೆ ಪ್ರದರ್ಶನ ನೀಡಿ ಭಾರತವೇ ಪಾಕಿಸ್ತಾನಕ್ಕೆ ನೆರವಾಯ್ತು, ಆದರೆ...; ರಮೀಜ್ ರಾಜಾ ಟೀಕೆ
Jun 11, 2024 05:44 PM IST
ಕಳಪೆ ಪ್ರದರ್ಶನ ನೀಡಿ ಭಾರತವೇ ಪಾಕಿಸ್ತಾನಕ್ಕೆ ನೆರವಾಯ್ತು ಎಂದು ಟೀಕಿಸಿದ ರಮೀಜ್ ರಾಜಾ
- ಭಾರತವು ಅನಗತ್ಯ ಹೊಡೆತಗಳಿಗೆ ಕೈ ಹಾಕಿ ಬ್ಯಾಟಿಂಗ್‌ನಲ್ಲಿ ದಿಢೀರ್ ಕುಸಿತ ಕಂಡಿಲ್ಲವಾಗಿದ್ದರೆ, ಪಂದ್ಯವು ಪಾಕಿಸ್ತಾನದ ಕೈಗೆಟುಕದಂತೆ ಕೊಂಡೊಯ್ಯಬಹುದಿತ್ತು ಎಂದು ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಹೇಳಿದ್ದಾರೆ.
ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ, ಭಾರತ ತಂಡವು ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿತು. ಸೋಲಿನ ಬಳಿಕ ಪಾಕ್ ಕ್ರಿಕೆಟ್ ತಂಡವು ವ್ಯಾಪಕ ಟೀಕೆಗೊಳಗಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ತಂಡದ ಕಳಪೆ ಪ್ರದರ್ಶನವನ್ನು ದೂರಿದ್ದಾರೆ. ಈ ನಡುವೆ, ಭಾರತ ತಂಡವು ತನ್ನ ಇನ್ನಿಂಗ್ಸ್‌ನ ದ್ವಿತಿಯಾರ್ಧದಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನಕ್ಕೆ ಉಪಕಾರ ಮಾಡಿತು ಎಂದು ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಹೇಳಿದ್ದಾರೆ. ಆದರೆ ಬಾಬರ್ ಅಜಮ್ ನೇತೃತ್ವದ ತಂಡವು ಅದರ ಲಾಭ ಪಡೆಯಲು ವಿಫಲವಾಯ್ತು ಎಂದು ಅವರು ಟೀಕಿಸಿದ್ದಾರೆ.
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದ ನಿಧಾನಗತಿಯ ಪಿಚ್‌ನಲ್ಲಿ, ಈವರೆಗೆ ನಡೆದ ಎಲ್ಲಾ ಪಂದ್ಯಗಳು ರೋಚಕ ಅಂತ್ಯ ಕಂಡಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕೂಡಾ ಇದೇ ರೀತಿಯ ಫಲಿತಾಂಶಕ್ಕೆ ಸಾಕ್ಷಿಯಾಯ್ತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತ್ತು. ಆ ಬಳಿಕ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ರಿಷಭ್ ಪಂತ್ ಒಬ್ಬರ ನಂತರ ಮತ್ತೊಬ್ಬರಂತೆ ಬೇಗನೆ ಔಟಾದಾಗ ಪಂದ್ಯದ ಚಿತ್ರಣವೇ ಬದಲಾಯ್ತು.
ನಿಧಾನಗತಿಯ ಪಿಚ್‌ನಲ್ಲಿ ಭಾರತದ ಬ್ಯಾಟರ್‌ಗಳ ಕಳಪೆ ಶಾಟ್ ಆಯ್ಕೆ ಮಾಡಿ ವಿಕೆಟ್ ಕಳೆದುಕೊಂಡರು. ಈ ಕುರಿತು ಮಾತನಾಡಿದ ರಾಜಾ, “ಕಳಪೆ ಪ್ರದರ್ಶನ ನೀಡುವ ಮೂಲಕ ಭಾರತವು ಪಾಕಿಸ್ತಾನಕ್ಕೆ ಉಪಕಾರ ಮಾಡಿದೆ. ವಾಸ್ತವವಾಗಿ ಅವರು ಉತ್ತಮವಾಗಿ ಆಡುತ್ತಿದ್ದರು. ನಡುವೆ ವಿಕೆಟ್ ಕಳೆದುಕೊಳ್ಳದಿದ್ದಿದ್ದರೆ ಅವರು ಸುಲಭವಾಗಿ 140ರಿಂದ 150 ರನ್ ಗಳಿಸುತ್ತಿದ್ದರು. ಆದರೆ ಅವರ ದೋಷಪೂರಿತ ಶಾಟ್‌ನಿಂದಾಗಿ ಹಾಗೂ ಪಾಕ್‌ನ ಉತ್ತಮ ಬೌಲಿಂಗ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ. ಆಗ ಪಾಕಿಸ್ತಾನವು ಮೇಲುಗೈ ಸಾಧಿಸಿತು,” ಎಂದು ರಮೀಜ್ ರಾಜಾ ಕ್ರಿಕ್‌ಬಜ್ ಜೊತೆಗೆ ಮಾತನಾಡಿದ್ದಾರೆ.
ಪಂದ್ಯದಲ್ಲಿ ಅಂತಿಮವಾಗಿ ಭಾರತ 19 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 119 ರನ್ ಮಾತ್ರ ಗಳಿಸಿತು. ಆ ಬಳಿಕ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮಾರಕ ಬೌಲಿಂಗ್ ದಾಳಿಗೆ ಪಾಕ್ ನಲುಗಿತು. ಪಾಕಿಸ್ತಾನವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 113 ರನ್ ಗಳಿಸಲಷ್ಟೇ ಸಾಧ್ಯವಾಯ್ತು.
ರಿಜ್ವಾನ್ ವಿಕೆಟ್ ಪಂದ್ಯದ ಟರ್ನಿಂಗ್ ಪಾಯಿಂಟ್
ಈ ಕುರಿತು ಮಾತನಾಡಿದ ರಮೀಜ್, ಮೊಹಮ್ಮದ್ ರಿಜ್ವಾನ್ ಅವರ ವಿಕೆಟ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು ಎಂದು ಹೇಳಿದರು. “ಮೊಹಮ್ಮದ್ ರಿಜ್ವಾನ್ ಅವರನ್ನು ಜಸ್ಪ್ರೀತ್ ಬುಮ್ರಾ ಔಟ್ ಮಾಡಿದರು. ಅವರ ಎರಡು ಓವರ್‌ಗಳು ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಎಂಬಂತಿದ್ದವು. ನಮಗೆಲ್ಲರಿಗೂ ತಿಳಿದಿರುವಂತೆ ಬುಮ್ರಾ ಒಬ್ಬ ಕ್ಲಾಸಿಕ್ ಬೌಲರ್. ಯಾವುದೇ ಬಿಕ್ಕಟ್ಟಿನ ಕ್ಷಣದಲ್ಲಿ ಚೆಂಡನ್ನು ನೀಡಿದರೆ ಅವರು ತಂಡಕ್ಕೆ ಬೇಕಾದ ಫಲಿತಾಂಶ ತಂದುಕೊಡುತ್ತಾರೆ. ಅದು ನಿಜವಾಗಿಯೂ ನಿರ್ಣಾಯಕ ಕ್ಷಣವಾಗಿತ್ತು,” ಎಂದು ಅವರು ಹೇಳಿದರು.
ರಿಜ್ವಾನ್ 31 ರನ್ ಗಳಿಸಿ ಔಟಾದರು. ಆಗ ಪಾಕಿಸ್ತಾನಕ್ಕೆ 36 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿತ್ತು. ರಿಜ್ವಾನ್ ಔಟಾದ ನಂತರ, ಪಾಕ್ ಭಾರಿ ಕುಸಿತ ಕಂಡಿತು.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪಾಕಿಸ್ತಾನ vs ಕೆನಡಾ ಮಾಡು ಇಲ್ಲವೇ ಮಡಿ ಪಂದ್ಯ; ಸಂಭಾವ್ಯ ತಂಡ, ನ್ಯೂಯಾರ್ಕ್ ಪಿಚ್ ಹಾಗೂ ಹವಾಮಾನ ವರದಿ