ಕೆಣಕಿದ ಜಾನ್ಸೆನ್ಗೆ ನಗುತ್ತಾ ತಿರುಗೇಟು ಕೊಟ್ಟ ರಾಹುಲ್; ಕೊಹ್ಲಿ ಇದ್ದಿದ್ರೆ ಕಥೆಯೇ ಬೇರೆ ಆಗ್ತಿತ್ತು ಎಂದ ಫ್ಯಾನ್ಸ್
Dec 27, 2023 10:09 AM IST
ಕೆಣಕಿದ ಜಾನ್ಸನ್ಸ್ಗೆ ನಗುತ್ತಾ ತಿರುಗೇಟು ಕೊಟ್ಟ ರಾಹುಲ್.
- KL Rahul: ತನ್ನ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಕೆಎಲ್ ರಾಹುಲ್ ಅವರನ್ನು ಸೌತ್ ಆಫ್ರಿಕಾದ ವೇಗಿ ಮಾರ್ಕೋ ಜಾನ್ಸೆನ್ ಕೆಣಕಿದರು. ಆದರೆ ರಾಹುಲ್, ನಗುತಲೇ ತಿರುಗೇಟು ಕೊಟ್ಟರು.
ಸೆಂಚುರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ, ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪ್ರಮುಖರೇ ನಿರಾಸೆ ಮೂಡಿಸಿದರು. ಆದರೆ ಅಜೇಯ 70 ರನ್ ಸಿಡಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಕೆಎಲ್ ರಾಹುಲ್ ಆಸರೆಯಾದರು. ಇದು ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾಯಿತು. ಇದೀಗ ರಾಹುಲ್ ಕ್ರೀಸ್ನಲ್ಲಿದ್ದು, ಇನ್ನಷ್ಟು ನೆರವಾಗುವ ಭರವಸೆ ಮೂಡಿಸಿದ್ದಾರೆ.
ಕೆಎಲ್ ರಾಹುಲ್ ಸೊಗಸಾದ ಇನ್ನಿಂಗ್ಸ್ ಕಟ್ಟುತ್ತಿದ್ದ ಅವಧಿಯಲ್ಲಿ ಆಫ್ರಿಕಾದ ವೇಗದ ಬೌಲರ್ ಮಾರ್ಕೋ ಜಾನ್ಸೆನ್, ಕೆಣಕಿದ್ದಾರೆ. ಏಕೆಂದರೆ ಜಾನ್ಸೆನ್ ಬೌಲಿಂಗ್‌ನಲ್ಲಿ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. ಅಗತ್ಯವಿದ್ದಾಗೆಲ್ಲಾ ಬೌಂಡರಿ ಸಿಡಿಸುತ್ತಿದ್ದರು. ತಾನೆಸೆದ ಬೌನ್ಸ್, ಯಾರ್ಕರ್, ಸ್ವಿಂಗ್ ಹೀಗೆ ಯಾವುದೇ ಎಸೆತವನ್ನಾದರೂ ಉತ್ತಮವಾಗಿ ಎದುರಿಸುತ್ತಿದ್ದರು. ಡೆಡ್ಲಿ ಬೌಲಿಂಗ್ ನಡೆಸಿದರೂ ವಿಕೆಟ್ ಒಪ್ಪಿಸಿದ ರನ್ ಗಳಿಸುತ್ತಿದ್ದ ಕಾರಣಕ್ಕೆ ಜಾನ್ಸೆನ್ ಕೋಪಿಸಿಕೊಂಡರು.
ನಗುತ್ತಲೇ ಉತ್ತರಿಸಿದ ರಾಹುಲ್
45ನೇ ಓವರ್‌ನಲ್ಲಿ ಸ್ವೀಪರ್ ಕವರ್ನಲ್ಲಿ ಸತತ ಬೌಂಡರಿ-ಸಿಕ್ಸರ್ ಚಚ್ಚಿದ್ದ ರಾಹುಲ್ ಅವರ ಮೇಲೆ ತಾಳ್ಮೆ ಕಳೆದುಕೊಂಡ ಜಾನ್ಸೆನ್, ಕೋಪದಲ್ಲಿ ಮಾತುಗಳನ್ನು ಹಸ್ತಾಂತರಿಸಿದರು. ರಾಹುಲ್ಗೆ ಏನೋ ಹೇಳುವ ಮೂಲಕ ಅವರ ಬ್ಯಾಟಿಂಗ್ ಗಮನ ಬೇರೆಡೆ ಸೆಳೆಯಲು ಯತ್ನಿಸಿದರು. ಆದರೆ ಇದ್ಯಾವುದನ್ನೂ ತಲೆ ಕೆಡಿಸಿಕೊಳ್ಳದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಕೇವಲ ನಗುವ ಮೂಲಕವೇ ಸರಿಯಾಗಿ ತಿರುಗೇಟು ನೀಡಿದರು. ಒಂಚೂರು ಕೋಪ ಮಾಡಿಕೊಳ್ಳದೆ ತಾಳ್ಮೆ ಮತ್ತು ಸಹನೆಯಿಂದಿದ್ದರು.
ಜಾನ್ಸೆನ್, ರಾಹುಲ್ ವಿರುದ್ಧ ಸ್ಲೆಡ್ಜಿಂಗ್ ನಡೆಸಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ತದನಂತರ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು, ರಾಹುಲ್ ಸುಮ್ಮನಿದ್ದಾರೆ. ಆದರೆ ರಾಹುಲ್ ಜಾಗದಲ್ಲಿ ವಿರಾಟ್ ಕೊಹ್ಲಿ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಮತ್ತೆಂದು ಸ್ಲೆಡ್ಜಿಂಗ್ ಮಾಡಲು ಪ್ರಯತ್ನಿಸದಂತೆ ಮಾಡುತ್ತಿದ್ದರು. ನೀನು (ಮಾರ್ಕೋ ಜಾನ್ಸನ್) ಬಚಾವ್ ಆದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್
ಟೀಮ್ ಇಂಡಿಯಾ ಸತತ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. 200 ರೊಳಗೆ ಕುಸಿಯುವ ಭೀತಿ ಸೃಷ್ಟಿಯಾಗಿತ್ತು. ಆದರೆ ರಾಹುಲ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟುವ ಮೂಲಕ ಗಮನ ಸೆಳೆದರು. ಅಲ್ಲದೆ ವಿಕೆಟ್ ಕಾಪಾಡುವ ಮೂಲಕ ತಂಡದ ಮೊತ್ತವನ್ನೂ 200ರ ಗಡಿ ದಾಟಿಸಿದ್ದಾರೆ. ಸದ್ಯ ಅವರು 105 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 70 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಅವರು ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪಂದ್ಯದಲ್ಲೇ ಅರ್ಧಶತಕ ಬಾರಿಸಿದರು.
ಭಾರತ ಕುಸಿತ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, 24 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡಿತು. ಬಳಿಕ ವಿರಾಟ್ ಕೊಹ್ಲಿ (38) ಮತ್ತು ಶ್ರೇಯಸ್ ಅಯ್ಯರ್ (31) ಅವರು 68 ರನ್ ಗಳ ಜೊತೆಯಾಟದ ಮೂಲಕ ಕೆಲಹೊತ್ತು ಆಸರೆಯಾದರು. ರೋಹಿತ್ ಶರ್ಮಾ 5, ಯಶಸ್ವಿ ಜೈಸ್ವಾಲ್ 17, ಶುಭ್ಮನ್ ಗಿಲ್ 2, ಶಾರ್ದೂಲ್ ಠಾಕೂರ್ 23, ಜಸ್ಪ್ರೀತ್ ಬುಮ್ರಾ 1 ರನ್ ಗಳಿಸಿ ನಿರಾಸೆ ಮೂಡಿಸಿದರು.
ರಬಾಡಗೆ ಐದು ವಿಕೆಟ್
ಸೌತ್ ಆಫ್ರಿಕಾ ವೇಗಿ ಕಗಿಸೋ ರಬಾಡ ಐದು ವಿಕೆಟ್ ಕಬಳಿಸಿ ಭಾರತಕ್ಕೆ ಆಘಾತ ನೀಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ 14ನೇ ಐದು ವಿಕೆಟ್‌ಗಳ ಗುಚ್ಛ ಎಂಬುದು ವಿಶೇಷ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್ ಅವರನ್ನು ಔಟ್ ಮಾಡಿದರು. ನಾಂಡ್ರಿಯಾ ಬರ್ಗರ್ ಎರಡು ವಿಕೆಟ್ ಉರುಳಿಸಿದರೆ, ಮಾರ್ಕೋ ಜಾನ್ಸನ್ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಸದ್ಯ ಭಾರತ 59 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿದೆ.