ಅಫ್ರಿದಿಯಂತಹ ವಿಶ್ವಶ್ರೇಷ್ಠ ಬೌಲರ್ ಎದುರು ಅರಿತು ಆಡಬೇಕು; ಲೈವ್ ಕಾಮೆಂಟರಿಯಲ್ಲೇ ಕೊಹ್ಲಿಯನ್ನು ಟೀಕಿಸಿದ ಗಂಭೀರ್
Sep 03, 2023 09:00 AM IST
ಲೈವ್ ಕಾಮೆಂಟರಿಯಲ್ಲೇ ಕೊಹ್ಲಿಯನ್ನು ಟೀಕಿಸಿದ ಗಂಭೀರ್
- Gautam Gambhir-Virat Kohli: ಪಾಕಿಸ್ತಾನ ಎದುರಿನ ಏಷ್ಯಾಕಪ್ ಪಂದ್ಯದಲ್ಲಿ ವಿರಾಟ್ ಔಟಾದ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ, ಗೌತಮ್ ಗಂಭೀರ್, ಲೈವ್ ಕಾಮೆಂಟರಿಯಲ್ಲೇ ಕೊಹ್ಲಿಯನ್ನು ಟೀಕಿಸಿದ್ದಾರೆ.
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯಲ್ಲಿ (Asia Cup 2023) ನಡೆದ ಭಾರತ-ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಮಳೆಯಿಂದ ರದ್ದುಗೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ಇಶಾನ್ ಕಿಶನ್ (82) ಮತ್ತು ಹಾರ್ದಿಕ್ ಪಾಂಡ್ಯ (87) ಅವರ ಅರ್ಧಶತಕದ ನೆರವಿನಿಂದ ಭಾರತ 266 ರನ್ ಗಳಿಸಿತ್ತು. ಆದರೆ ಈ ಗುರಿ ಬೆನ್ನಟ್ಟಲು ಸಿದ್ಧಗೊಂಡ ಪಾಕಿಸ್ತಾನಕ್ಕೆ ವರುಣ ಅಡ್ಡಿಪಡಿಸಿತು. ಪಂದ್ಯ ಫಲಿತಾಂಶ ಕಾಣದೆ ಅಂತ್ಯಗೊಂಡ ಕಾರಣ ಪಾಕ್ ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಿತು.
ಲೈವ್ ಕಾಮೆಂಟರಿಯಲ್ಲಿ ಕೊಹ್ಲಿ ಟೀಕಿಸಿದ ಗಂಭೀರ್
ಹೆಚ್ಚಿನ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಭಾರಿ ನಿರಾಸೆ ಮೂಡಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಬೇಗನೇ ಔಟಾಗಿದ್ದು ಮತ್ತಷ್ಟು ನಿರಾಸೆ ಮೂಡಿಸಿತು. 6ನೇ ಓವರ್ನ 3ನೇ ಎಸೆತದಲ್ಲಿ ಶಾಹೀನ್ ಶಾ ಅಫ್ರಿದಿ ಬೌಲಿಂಗ್ನಲ್ಲಿ ಇನ್ಸೈಡ್ ಎಡ್ಜ್ ಮೂಲಕ ಕ್ಲೀನ್ ಬೋಲ್ಡ್ ಆದರು. ಆದರೆ ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಗೌತಮ್ ಗಂಭೀರ್ (Gautam Gambhir), ಲೈವ್ ಕಾಮೆಂಟರಿಯಲ್ಲೇ ಕೊಹ್ಲಿಯನ್ನು ಟೀಕಿಸಿದ್ದಾರೆ.
ಲೈವ್ ಕಾಮೆಂಟರಿಯಲ್ಲಿ ಕೊಹ್ಲಿಯನ್ನು ಮನಬಂದಂತೆ ಟೀಕಿಸಿರುವ ಗಂಭೀರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾರ್ಸ್ಪೋರ್ಟ್ಸ್ ಕಾಮೆಂಟೇಟರ್ಗಳಲ್ಲಿ ಗಂಭೀರ್ ಕೂಡ ಒಬ್ಬರು. ಆದರೆ ತಮ್ಮ ನೆಚ್ಚಿನ ಆಟಗಾರರನ್ನು ಟೀಕಿಸಿದ್ದಕ್ಕೆ ಕೊಹ್ಲಿ ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. ಒಂದು ಪಂದ್ಯದಲ್ಲಿ ಔಟಾಗುತ್ತಿದ್ದಂತೆ ಅದೇ ದೊಡ್ಡ ತಪ್ಪು ಎನ್ನುವಂತೆ ಬಿಂಬಿಸುವಂತೆ ಮಾತನಾಡುವುದು ಎಷ್ಟು ಸರಿ. ಐಪಿಎಲ್ ಸೇಡು ತೀರಿಸಿಕೊಳ್ಳಲು ಬರಬೇಡಿ ಎಂದು ಗಂಭೀರ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ಗಂಭೀರ್ ಹೇಳಿದ್ದೇನು?
ಕಾಮೆಂಟರಿ ಪ್ಯಾನಲ್ನಲ್ಲಿದ್ದ ಗಂಭೀರ್, ಕೊಹ್ಲಿ ಔಟಾದ ತಕ್ಷಣವೇ ಈ ಎಸೆತವನ್ನು ಆಡುವ ಅವಶ್ಯಕತೆಯೇ ಇರಲಿಲ್ಲ ಎಂದು ಹೇಳಿದ್ದರು. ಈ ಬಾಲ್ಗೆ ಬೀಸುವ ಅವಶ್ಯಕತೆಯೇ ಇರಲಿಲ್ಲ. ವಿಕೆಟ್ನಿಂದ ಹೊರ ಭಾಗದಲ್ಲಿ ಇತ್ತು. ಅದರಲ್ಲೂ ವಿಶ್ವಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿಯಂತಹ ಬೌಲರ್ಗಳ ಎದುರು ಮುಂದೆ ಹೋಗಬೇಕೋ ಬೇಡವೋ ಎಂಬುದನ್ನು ಅರಿತಿರಬೇಕು ಎಂದು ಹೇಳಿ ಕೊಹ್ಲಿಯನ್ನು ಟೀಕಿಸಿದ್ದಾರೆ.
ಐಪಿಎಲ್ನಲ್ಲೂ ಇಬ್ಬರ ನಡುವೆ ಜಗಳ
16ನೇ ಆವೃತ್ತಿಯ ಐಪಿಎಲ್ನ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲೂ ಕೊಹ್ಲಿ-ಗಂಭೀರ್ ಗಲಾಟೆ ಮಾಡಿಕೊಂಡಿದ್ದರು. ಲಕ್ನೋ ತಂಡದ ಮೆಂಟರ್ ಆಗಿದ್ದ ಗಂಭೀರ್, ಕೊಹ್ಲಿ ನಡುವೆ ವಾಕ್ಸಮರ ತೀವ್ರವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಹಾಗಾಗಿ ಇಬ್ಬರಿಗೂ ದಂಡ ವಿಧಿಸಲಾಗಿತ್ತು. ಕೊಹ್ಲಿ ಶೇಕಡಾ 100ರಷ್ಟು, ಗಂಭೀರ್ಗೆ 75ರಷ್ಟು ದಂಡ ಬಿದ್ದಿತ್ತು.
ಅಂದು ಏನಾಗಿತ್ತು?
ಐಪಿಎಲ್ ಲೀಗ್ನ ಪಂದ್ಯದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಜರುಗಿದ್ದ ಪಂದ್ಯದಲ್ಲಿ ಲಕ್ನೋ ಗೆದ್ದಿತ್ತು. ಆವೇಶ್ ಖಾನ್ ಹೆಲ್ಮೆಟ್ ಬಿಸಾಕಿ ಗೆಲುವನ್ನು ಸಂಭ್ರಮಿಸಿದ್ದರು. ಹಾಗಾಗಿ ಅಭಿಮಾನಿಗಳು ಜೋರಾಗಿ ಕಿರುಚಿದ್ದರು. ಈ ವೇಳೆ ಗಂಭೀರ್, ಸುಮ್ಮನಿರುವಂತೆ ಕೈ ಸನ್ನೆ ಮೂಲಕ ಎಚ್ಚರಿಸಿದ್ದರು. ಬಳಿಕ ಮೇ 1ರಂದು ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಜಯಿಸಿತ್ತು. ಲಕ್ನೋ ಆಟಗಾರರ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಆದರೀದು ಗಂಭೀರ್ ಕೋಪಕ್ಕೆ ಕಾರಣವಾಗಿತ್ತು.
ಪಂದ್ಯದ ಬಳಿಕ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡುವ ಸಂದರ್ಭದಲ್ಲಿ ನವೀನ್ ಉಲ್ ಹಕ್ ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಕೈಲ್ ಮೇಯರ್ಸ್ ಮತ್ತು ಕೊಹ್ಲಿ ನಡುವೆ ವಾಕ್ಸಮರ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಗಂಭೀರ್, ನಮ್ಮ ಆಟಗಾರರನ್ನು ಗುರಾಯಿಸಿ ನೋಡುವುದೇಕೆ ಎಂದು ಕೋಪದಲ್ಲಿ ಮಾತನಾಡಿದ್ದರು.
ಇದು ನನ್ನ ಕುಟುಂಬ. ಅವರಿಗೆ ಏನೆ ಅಂದರೂ ನನಗೆ ಅಂದಂತೆ ಎಂದು ಗಂಭೀರ್ ಹೇಳಿದ್ದರು. ನಿಮ್ಮ ಕುಟುಂಬ ಹುಷಾರಾಗಿ ನೋಡಿಕೊಳ್ಳಿ ಎಂದು ಗಂಭೀರ್ಗೆ ಕೊಹ್ಲಿ ಕೌಂಟರ್ ಕೊಟ್ಟಿದ್ದರು. ಇದು ದೊಡ್ಡ ವಾಕ್ಸಮರಕ್ಕೆ ಕಾರಣವಾಗಿತ್ತು. ಬಳಿಕ ಸಹ ಆಟಗಾರರ ಇಬ್ಬರನ್ನು ಸಮಾಧಾನಗೊಳಿಸಿದರು. ಮುಂದಿನ ಹಂತಕ್ಕೆ ಹೋಗುತ್ತಿದ್ದ ಗಲಾಟೆಯನ್ನು ನಿಲ್ಲಿಸಿದ್ದರು. ಆದರೆ ಇವರಿಬ್ಬರ ಗಲಾಟೆ ಇಂದು ನಿನ್ನೆಯದ್ದಲ್ಲ, ಹಲವು ವರ್ಷಗಳಿಂದ ನಡೆಯುತ್ತಲೇ ಇದೆ.