logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗಿಲ್-ಸುದರ್ಶನ್ ಅಜೇಯ ಆಟ; ಡೆಲ್ಲಿ ಮಣಿಸಿ ಐಪಿಎಲ್ 2025ರ ಪ್ಲೇಆಫ್ ಪ್ರವೇಶಿದ ಗುಜರಾತ್‌ ಟೈಟನ್ಸ್, ಆರ್‌ಸಿಬಿ-ಪಂಜಾಬ್‌ ಕೂಡಾ ಕ್ವಾಲಿಫೈ

ಗಿಲ್-ಸುದರ್ಶನ್ ಅಜೇಯ ಆಟ; ಡೆಲ್ಲಿ ಮಣಿಸಿ ಐಪಿಎಲ್ 2025ರ ಪ್ಲೇಆಫ್ ಪ್ರವೇಶಿದ ಗುಜರಾತ್‌ ಟೈಟನ್ಸ್, ಆರ್‌ಸಿಬಿ-ಪಂಜಾಬ್‌ ಕೂಡಾ ಕ್ವಾಲಿಫೈ

Jayaraj HT Kannada

Published May 18, 2025 11:15 PM IST

google News

ಮೊದಲ ತಂಡವಾಗಿ ಐಪಿಎಲ್ 2025ರ ಪ್ಲೇಆಫ್ ಪ್ರವೇಶಿದ ಗುಜರಾತ್‌ ಟೈಟನ್ಸ್

  • ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಗೆಲುವಿನೊಂದಿಗೆ ಗುಜರಾತ್‌ ಟೈಟನ್ಸ್ ಪ್ಲೇಆಫ್‌ ಪ್ರವೇಶಿಸಿದೆ. ಇದರೊಂದಿಗೆ ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕೂಡಾ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಇನ್ನೊಂದು ತಂಡ ಇನ್ನಷ್ಟೇ ಅಂತಿಮವಾಗಬೇಕಿದೆ.
ಮೊದಲ ತಂಡವಾಗಿ ಐಪಿಎಲ್ 2025ರ ಪ್ಲೇಆಫ್ ಪ್ರವೇಶಿದ ಗುಜರಾತ್‌ ಟೈಟನ್ಸ್
ಮೊದಲ ತಂಡವಾಗಿ ಐಪಿಎಲ್ 2025ರ ಪ್ಲೇಆಫ್ ಪ್ರವೇಶಿದ ಗುಜರಾತ್‌ ಟೈಟನ್ಸ್ (AFP)

ಗುಜರಾತ್‌ ಟೈಟನ್ಸ್‌ ತಂಡವು ಐಪಿಎಲ್‌ 2025ರ ಆವೃತ್ತಿಯಲ್ಲಿ ಮೊದಲ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅದರದ್ದೇ ತವರಿನಲ್ಲಿ ಮಣಿಸಿದ ಶುಭ್ಮನ್‌ ಗಿಲ್‌ ನೇತೃತ್ವದ ಜಿಟಿ, ಪ್ರಸಕ್ತ ಆವೃತ್ತಿಯಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದೆ. 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಜಿಟಿ ಪ್ಲೇಆಫ್‌ ಪ್ರವೇಶಿಸಿದ್ದು ಮಾತ್ರವಲ್ಲದೆ, ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡವನ್ನು ಕೂಡಾ ಪ್ಲೇಆಫ್‌ಗೆ ಅರ್ಹತೆ ಪಡೆಯುವಂತೆ ಮಾಡಿದೆ. ಈ ಬಾರಿಯ ಟೂರ್ನಿಯಲ್ಲಿ ಈವರೆಗೆ ಆಡಿದ 12 ಪಂದ್ಯಗಳಲ್ಲಿ ಇದು ತಂಡದ 9ನೇ ಗೆಲುವಾಗಿದೆ. ಒಟ್ಟು‌ 18 ಅಂಕಗಳೊಂದಿಗೆ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅತ್ತ ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ಲೇಆಫ್‌ ಲೆಕ್ಕಾಚಾರ ತುಸು ಚಿಂತಾಜನಕವಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌, ಕೆಎಲ್‌ ರಾಹುಲ್‌ ಆಕರ್ಷಕ ಶತಕದ ನೆರವಿಂದ 199 ರನ್‌ ಗಳಿಸಿತು. 200 ರನ್‌ಗಳ ಬೃಹತ್‌ ಗುರಿ ಪಡೆದ ಟೈಟನ್ಸ್‌, ಹೆಚ್ಚು ಶ್ರಮ ಹಾಕದೆ ಸುಲಭವಾಗಿ ಗೆದ್ದು ಬೀಗಿತು. 19 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೆ 205 ರನ್‌ ಗಳಿಸಿ ಗುರಿ ತಲುಪಿತು.

ಆರಂಭಿಕ ಆಟಗಾರರಾದ ಶುಭ್ಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌, ಐಪಿಎಲ್‌ನಲ್ಲಿ 7 ನೇ ಬಾರಿಗೆ ಶತಕದ ಜೊತೆಯಾಟವಾಡುವ ಮೂಲಕ ತಂಡಕ್ಕೆ ದಾಖಲೆಯ ಜಯ ತಂದುಕೊಟ್ಟರು. ಪಂದ್ಯದಲ್ಲಿ ಅಜೇಯ ದ್ವಿಶತಕದ ಜೊತೆಯಾಟವಾಡಿದ ಈ ಇಬ್ಬರು, ತಂಡಕ್ಕೆ 10 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಪರ, ಆರಂಭಿಕ ಆಟಗಾರ ಫಾಫ್‌ ಡುಪ್ಲೆಸಿಸ್‌ 5 ರನ್ ಮಾತ್ರ ಗಳಿಸಿದರು. ಈ ವೇಳೆ ಕನ್ನಡಿಗ ಕೆಎಲ್‌ ರಾಹುಲ್‌ ಹಾಗೂ ಅಭಿಷೇಕ್‌ ಪೊರೆಲ್‌ ಆಕರ್ಷಕ ಜೊತೆಯಾಟವಾಡಿದರು. ಪೊರೆಲ್‌ 30 ರನ್‌ ಗಳಿಸಿ ಔಟಾದರೆ, ಅಕ್ಷರ್‌ ಪಟೇಲ್‌ 25 ರನ್‌ ಸಿಡಿಸಿದರು. ಅಬ್ಬರದಾಟವಾಡಿದ ಕನ್ನಡಿಗ ಕೆಎಲ್‌ ರಾಹುಲ್‌, ಅರ್ಧಶತಕದ ಬೆನ್ನಲ್ಲೇ ಶತಕ ಸಿಡಿಸಿದರು.‌

ಕೆಎಲ್‌ ರಾಹುಲ್‌ ದಾಖಲೆ

65 ಎಸೆತಗಳನ್ನು ಎದುರಿಸಿದ ರಾಹುಲ್‌ 14 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 112 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದರ ನಡುವೆ ಟಿ20 ಕ್ರಿಕೆಟ್‌ನಲ್ಲಿ 8000 ರನ್‌ ಪೂರೈಸಿದರು. ಅಲ್ಲದೆ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಎನಿಸಿಕೊಂಡರು.

ಬೈಹತ್‌ ಗುರಿ ಬೆನ್ನಟ್ಟಿದ ಗುಜರಾತ್‌ ಟೈಟನ್ಸ್‌ ಪರ ಸಾಯಿ ಸುದರ್ಶನ್‌ ಹಾಗೂ ಶುಭ್ಮನ್‌ ಗಿಲ್‌ ಇಬ್ಬರೇ ದಾಖಲೆಯ ಚೇಸಿಂಗ್‌ ಮಾಡಿದರು. ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಇವರು, ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ಇಬ್ಬರ ಬ್ಯಾಟಿಂಗ್‌ ವೈಭವಕ್ಕೆ ಡೆಲ್ಲಿ ಬೌಲರ್‌ಗಳ ಬಳಿ ಉತ್ತರವಿರಲಿಲ್ಲ.

ಆರಂಭಿಕರಿಬ್ಬರ ಸ್ಫೋಟಕ ಬ್ಯಾಟಿಂಗ್

ಸಾಯಿ ಸುದರ್ಶನ್‌ 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 108 ರನ್‌ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಅವರ ಎರಡನೇ ಶತಕ. ಅತ್ತ ನಾಯಕ ಗಿಲ್‌ 53 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ನೆರವಿಂದ ಅಜೇಯ 93 ರನ್‌ ಸಿಡಿಸಿದರು. ಇವರಿಬ್ಬರೂ ಪ್ರಸಕ್ತ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಟೂರ್ನಿಯ ಅತ್ಯುತ್ತಮ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು