logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್‌ಗೆ ದಂಡದ ಬಿಸಿ; ಗುಜರಾತ್‌ ಟೈಟಾನ್ಸ್‌ ಯುವ ನಾಯಕನಿಗೆ‌ 12 ಲಕ್ಷ ರೂ ಫೈನ್

ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್‌ಗೆ ದಂಡದ ಬಿಸಿ; ಗುಜರಾತ್‌ ಟೈಟಾನ್ಸ್‌ ಯುವ ನಾಯಕನಿಗೆ‌ 12 ಲಕ್ಷ ರೂ ಫೈನ್

Jayaraj HT Kannada

Mar 27, 2024 03:42 PM IST

google News

ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್‌ಗೆ ದಂಡದ ಬಿಸಿ

    • Shubman Gill: ಸಿಎಸ್‌ಕೆ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್‌ಗೆ ದಂಡ ವಿಧಿಸಲಾಗಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2024ರಲ್ಲಿ ಫೈನ್‌ ವಿಧಿಸಿದ ಮೊದಲ ನಿದರ್ಶನ ಇದಾಗಿದೆ.
ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್‌ಗೆ ದಂಡದ ಬಿಸಿ
ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್‌ಗೆ ದಂಡದ ಬಿಸಿ (AFP)

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಾರ್ಚ್‌ 26ರ ಮಂಗಳವಾರ ನಡೆದ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ (CSK vs GT) ತಂಡ ಹೀನಾಯ ಸೋಲು ಕಂಡಿತು. ಪಂದ್ಯದಲ್ಲಿ ಸೋಲಿನ ಬೆನ್ನಲ್ಲೇ ಗುಜರಾತ್‌ ತಂಡದ ನೂತನ ನಾಯಕ ಶುಭ್ಮನ್ ಗಿಲ್ ಅವರಿಗೆ ದಂಡದ ಹೊಡೆತ ಬಿದ್ದಿದೆ. ಇನ್ನಿಂಗ್ಸ್‌ ವೇಳೆ ನಿಧಾನಗತಿಯ ಓವರ್‌ ರೇಟ್‌ ಕಾಯ್ದುಕೊಂಡದ್ದಕ್ಕಾಗಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ತಂಡವೊಂದಕ್ಕೆ ದಂಡ ವಿಧಿಸಿದ ಮೊದಲ ನಿರ್ದರ್ಶನ ಇದಾಗಿದೆ.

“ಮಾರ್ಚ್ 26ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್‌ ತಪ್ಪಿಗೆ ಸಂಬಂಧಿಸಿದ ಐಪಿಎಲ್‌ ನೀತಿ ಸಂಹಿತೆಯ ಅಡಿಯಲ್ಲಿ ಇದು ತಂಡದ ಮೊದಲ ಅಪರಾಧವಾಗಿರುವುದರಿಂದ, ಗಿಲ್‌ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ ತಂಡವನ್ನು ಗಿಲ್‌ ಮುನ್ನಡೆಸುತ್ತಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ತಂಡ ಸತತ ಎರಡೂ ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿತ್ತು. ಹಾರ್ದಿಕ್‌ ಈ ಬಾರಿ ಮುಂಬೈ ಇಂಡಿಯನ್ಸ್‌ ತಂಡ ಸೇರಿಕೊಂಡ ಕಾರಣದಿಂದಾಗಿ, ಗಿಲ್ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದೆ.

ಗುಜರಾತ್‌ ಟೈಟಾನ್ಸ್‌ಗೆ ಸೋಲು

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಸೋಲಿಸುವ ಮೂಲಕ, ಯುವ ನಾಯಕನ ಸಾರಥ್ಯದಲ್ಲಿ ತಂಡವು ಗೆಲುವಿನ ಆರಂಭ ಪಡೆಯಿತು. ಆದರೆ, ಮಂಗಳವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ತಂಡವು ಸೋಲನುಭವಿಸಿತು. ಋತುರಾಜ್‌ ಪಡೆ 63 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಇದನ್ನೂ ಓದಿ | ಪಾಂಡ್ಯ-ಕಮಿನ್ಸ್‌ ನಾಯಕತ್ವಕ್ಕೆ ಗೆಲುವಿನ ಸವಾಲು; ಎಸ್ಆರ್‌ಎಚ್ vs ಮುಂಬೈ ಇಂಡಿಯನ್ಸ್ ಪಂದ್ಯದ ಪಿಚ್, ಹವಾಮಾನ ವರದಿ

ಪಂದ್ಯದಲ್ಲಿ ಶಿವಂ ದುಬೆ ಅಬ್ಬರಿಸಿದರು. ಸ್ಫೋಟಕ ಅರ್ಧಶತಕದೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ರಚಿನ್ ರವೀಂದ್ರ ಸ್ಫೋಟಕ 46 ರನ್ ಗಳಿಸಿದರು.

ಚೊಚ್ಚಲ ಐಪಿಎಲ್ ಋತುವಿನಲ್ಲಿ ಎಡಗೈ ಬ್ಯಾಟರ್‌ ರಚಿನ್ ರವೀಂದ್ರ 20 ಎಸೆತಗಳಲ್ಲಿ ರನ್ ಗಳಿಸಿದರೆ, ನಾಯಕ ಋತುರಾಜ್ ಗಾಯಕ್ವಾಡ್ 46 ರನ್ ಗಳಿಸಿದರು. ಚೆನ್ನೈ ನೀಡಿದ ಬೃಹತ್‌ 206 ರನ್‌ಗಳ ಗುರಿ ಮುಟ್ಟಲು ಗುಜರಾತ್‌ ತಂಡದಿಂದ ಸಾಧ್ಯವಾಗಲಿಲ್ಲ. ಚೆನ್ನೈ ಪರ ಮುಸ್ತಾಫಿಜುರ್ ರೆಹಮಾನ್, ದೀಪಕ್ ಚಹಾರ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಕಬಳಿಸಿದರು.

ಈ ಬಾರಿ ಚೆನ್ನೈ ತಂಡವನ್ನು ಗಾಯಕ್ವಾಡ್ ಮುನ್ನಡೆಸುತ್ತಿದ್ದಾರೆ. ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ, ಟೂರ್ನಿಯ ಆರಂಭಕ್ಕೂ ಮುನ್ನ ನಾಯಕತ್ವವನ್ನು ರುತುರಾಜ್‌ಗೆ ವಹಿಸಿದ್ದಾರೆ. ಅತ್ತ ಗುಜರಾತ್‌ ತಂಡದಿಂದ ಪಾಂಡ್ಯ ಹೊರಹೋದ ಬಳಿಕ, ಶುಭ್ಮನ್‌ ಗಿಲ್‌ಗೆ ತಂಡದ ನಾಯಕತ್ವ ವಹಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ