logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈಗೆ ಹಾರ್ದಿಕ್, ಗುಜರಾತ್​ಗೆ ರೋಹಿತ್​? ಅದಲು ಬದಲಿಗೆ ಫ್ರಾಂಚೈಸಿಗಳ ನಡುವೆ ನಡೀತಿದೆ ಮಾತುಕತೆ!

ಮುಂಬೈಗೆ ಹಾರ್ದಿಕ್, ಗುಜರಾತ್​ಗೆ ರೋಹಿತ್​? ಅದಲು ಬದಲಿಗೆ ಫ್ರಾಂಚೈಸಿಗಳ ನಡುವೆ ನಡೀತಿದೆ ಮಾತುಕತೆ!

Prasanna Kumar P N HT Kannada

Nov 23, 2023 07:47 PM IST

google News

ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ.

    • Hardik Pandya: ಹಾರ್ದಿಕ್ ಪಾಂಡ್ಯ ಐಪಿಎಲ್​ 2024ರ ಮೊದಲು ತನ್ನ ಮಾಜಿ ತಂಡವಾದ ಮುಂಬೈ ಇಂಡಿಯನ್ಸ್​ಗೆ ಹಿಂತಿರುಗಬಹುದು ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ.
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ.

2024ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ (IPL 2024) ಮುನ್ನ ಡಿಸೆಂಬರ್​ 19ರಂದು ದುಬೈನಲ್ಲಿ ಮಿನಿ ಹರಾಜು ನಡೆಯಲಿದೆ. ಆದರೆ ಐಪಿಎಲ್‌ ಮಿನಿ ಹರಾಜಿಗೂ (IPL Mini Auction) ಮುನ್ನ 10 ತಂಡಗಳು ನವೆಂಬರ್​ 26ರೊಳಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಿದೆ. ಈಗಾಗಲೇ ಹಲವು ಫ್ರಾಂಚೈಸಿಗಳು ಆಟಗಾರರ ಅದಲು ಬದಲು ಮಾಡಿಕೊಳ್ಳುವ ಟ್ರೇಡಿಂಗ್ ಪ್ರಕ್ರಿಯೆ ಆರಂಭಿಸಿವೆ.

ಈಗಾಗಲೇ ರಾಜಸ್ಥಾನ ರಾಯಲ್ಸ್​ ತಂಡದ ದೇವದತ್ ಪಡಿಕ್ಕಲ್ (Devdutt Padikkal) ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಆವೇಶ್​ ಖಾನ್​ರನ್ನು (Avesh Khan) ಎರಡೂ ತಂಡಗಳು ಅದಲು ಬದಲು ಮಾಡಿಕೊಂಡಿವೆ. ಅದರಂತೆ ಗುಜರಾತ್‌ ಟೈಟನ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗಳು ನಡುವೆ ದೊಡ್ಡ ಡೀಲ್ ನಡೀತಿದೆ ಎಂದು ವರದಿಗಳು ತಿಳಿಸಿವೆ. ಮುಂಬೈ ತನ್ನ ಮಾಜಿ ಆಟಗಾರರನ್ನು ತೆಕ್ಕೆಗೆ ಹಾಕಿಕೊಳ್ಳಲು ಯತ್ನಿಸುತ್ತಿದೆ.

ಹಾರ್ದಿಕ್ ಪಾಂಡ್ಯ ಐಪಿಎಲ್​ 2024ರ ಮೊದಲು ತನ್ನ ಮಾಜಿ ತಂಡವಾದ ಮುಂಬೈ ಇಂಡಿಯನ್ಸ್​ಗೆ ಹಿಂತಿರುಗಬಹುದು ಎಂದು ವರದಿಯಾಗಿದೆ. ನ್ಯೂಸ್​​ 18ರ ಪ್ರಕಾರ, ರೋಹಿತ್​ ಶರ್ಮಾ ಅಥವಾ ಜೋಫ್ರಾ ಆರ್ಚರ್​ ಇಬ್ಬರಲ್ಲಿ ಒಬ್ಬರನ್ನು ನೇರ ವಿನಿಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಸೇರಬಹುದು. 2021ರಲ್ಲಿ ಮುಂಬೈ ತೊರೆದಿದ್ದ ಹಾರ್ದಿಕ್, ಮತ್ತೆ ಮರಳುವ ಸಾಧ್ಯತೆ ಇದೆ.

ಹಾರ್ದಿಕ್ ಮೇಲೇಕೆ ಕಣ್ಣು?

ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂಬೈ ದೊಡ್ಡ ಪ್ರಯತ್ನ ನಡೆಸುತ್ತಿದೆ. ಪ್ಲೇಯರ್ಸ್‌ ಟ್ರೇಡಿಂಗ್ ವಿಂಡೋ ಮೂಲಕ ಗುಜರಾತ್ ಟೈಟನ್ಸ್‌ ಫ್ರಾಂಚೈಸಿ ನಾಯಕ ಹಾರ್ದಿಕ್​ರನ್ನೇ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಅದಕ್ಕೆ ನಿಖರವಾದ ಕಾರಣ ಇದೆ. ಆದರೆ ತಮ್ಮ ನಾಯಕನನ್ನು ತಂಡದಿಂದ ಬಿಟ್ಟುಕೊಡಲು ಟೈಟನ್ಸ್ ಹಲವು ಷರತ್ತುಗಳನ್ನು ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾರ್ದಿಕ್ ಪಾಂಡ್ಯ ಗುಜರಾತ್ ಸೇರಿದ ಮೊದಲ ವರ್ಷದಲ್ಲೇ ಟ್ರೋಫಿ ಗೆದ್ದಿತ್ತು. 2023ರ ಐಪಿಎಲ್​ನಲ್ಲೂ ತಂಡವನ್ನು ಫೈನಲ್​ಗೇರಿಸಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲನುಭವಿಸಿ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ನಾಯಕನಾದ ಎರಡು ವರ್ಷಗಳಲ್ಲೇ ಎರಡು ಬಾರಿಯೂ ತಂಡವನ್ನು ಫೈನಲ್​ಗೇರಿಸಿ ಅತ್ಯಂತ ಯಶಸ್ವಿ ನಾಯಕ ಎಂಬ ಪಟ್ಟ ಅಲಂಕರಿಸಿದರು ಹಾರ್ದಿಕ್.

ಮುಂಬೈ ಇಂಡಿಯನ್ಸ್​ ಭವಿಷ್ಯದ ನಾಯಕನ ಹುಡುಕಾಟದಲ್ಲಿದೆ. ಸದ್ಯ ನಾಯಕ ರೋಹಿತ್ ಶರ್ಮಾ ಹೆಚ್ಚೆಂದರೂ 2 ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇದರಿಂದಾಗಿ ಸೂಕ್ತ ನಾಯಕನ ಹುಡುಕಾಟಕ್ಕೆ ಮುಂಬೈ ಕೈ ಹಾಕಿದೆ. ಹಾಗಾಗಿ ಅಂಬಾನಿ ಬ್ರಿಗೇಡ್, ಹಾರ್ದಿಕ್ ಪಾಂಡ್ಯ ಮೇಲೆ ಕಣ್ಣಾಕಿದೆ. ಹಾರ್ದಿಕ್, 2014ರಿಂದ 2021ರವರೆಗೂ ಮುಂಬೈ ಪರ ಆಡಿದ್ದು, 5 ಟ್ರೋಫಿ ಗೆದ್ದಿದ್ದಾರೆ.

ಗುಜರಾತ್ ಷರತ್ತುಗಳೇನು?

ಹಾರ್ದಿಕ್ ಪಾಂಡ್ಯ ಬಿಟ್ಟುಕೊಡಲು ಮುಂಬೈಗೆ ಗುಜರಾತ್ ಫ್ರಾಂಚೈಸಿ ಬಿಟ್ಟುಕೊಡಲು ಕೆಲವು ಷರತ್ತುಗಳನ್ನು ಹಾಕಿದೆ. ಹಾರ್ದಿಕ್​ರನ್ನು ತೆಗೆದುಕೊಳ್ಳಲು ಬಯಸಿದರೆ ರೋಹಿತ್‌ ಶರ್ಮಾ ಅಥವಾ ಜೋಫ್ರಾ ಆರ್ಚರ್‌ ಇಬ್ಬರಲ್ಲಿ ಒಬ್ಬರನ್ನು ತಮಗೆ ನೀಡಬೇಕು ಎಂದು ಗುಜರಾತ್ ಷರತ್ತು ಹಾಕಿದೆ ಎಂದು ನ್ಯೂಸ್‌ 18 ವರದಿ ಮಾಡಿದೆ. ಅದರಲ್ಲೂ ರೋಹಿತ್ ಶರ್ಮಾನೇ ಬೇಕೆಂದು ಟೈಟನ್ಸ್ ಪಟ್ಟು ಹಿಡಿದಿದೆ.

ಆದರೆ, ರೋಹಿತ್​ರನ್ನು ಬಿಟ್ಟುಕೊಡುವುದಕ್ಕಿಂತ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್​ರನ್ನು ಗುಜರಾತ್​ಗೆ ಒಪ್ಪಿಸುವ ಸಾಧ್ಯತೆ ಇದೆ. ಏಕೆಂದರೆ ರೋಹಿತ್ ಮುಂಬೈ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದು, 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಆದರೆ ಈ ಎಲ್ಲಾ ವದಂತಿಗಳಿಗೆ ನವೆಂಬರ್ 26ರಂದು ತೆರೆ ಬೀಳಲಿದೆ.

ಹಾರ್ದಿಕ್​ರನ್ನು ಬಿಡುವುದು ಕಷ್ಟ

ಆಶಿಶ್‌ ನೆಹ್ರಾ ಅವರ ಅದ್ಭುತ ಮಾರ್ಗದರ್ಶನ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದಿಂದ ಟೈಟನ್ಸ್‌ ಅತ್ಯಂತ ಬಲಿಷ್ಠ ತಂಡವಾಗಿದೆ. ಮುಂಬರುವ ಆವೃತ್ತಿಯಲ್ಲೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದೆ. ಹೀಗಾಗಿ ಯಶಸ್ವಿ ನಾಯಕನನ್ನು ಬೇರೆ ತಂಡಕ್ಕೆ ಬಿಟ್ಟುಕೊಡುವುದು ಅನುಮಾನ. ಒಂದು ವೇಳೆ ರೋಹಿತ್​ರನ್ನು ಬಿಟ್ಟುಕೊಟ್ಟರೆ ಆಗ ಚಿಂತಿಸುವ ಸಾಧ್ಯತೆ ಇದೆ ಎಂದು ಟೈಟನ್ಸ್​ ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ