logo
ಕನ್ನಡ ಸುದ್ದಿ  /  ಕ್ರಿಕೆಟ್  /  Aakash Chopra: ಧೋನಿಯನ್ನು ಆರಾಧಿಸ್ತಾರೆ ಎಂದ ಮಾತ್ರಕ್ಕೆ ಅವರಂತೆ ಹಾರ್ದಿಕ್ ಇರಬೇಕಿಲ್ಲ; ಎಬಿಡಿ, ಭೋಗ್ಲೆ ಬಳಿಕ ಪಾಂಡ್ಯಗೆ ಚೋಪ್ರಾ ಬೆಂಬಲ

Aakash Chopra: ಧೋನಿಯನ್ನು ಆರಾಧಿಸ್ತಾರೆ ಎಂದ ಮಾತ್ರಕ್ಕೆ ಅವರಂತೆ ಹಾರ್ದಿಕ್ ಇರಬೇಕಿಲ್ಲ; ಎಬಿಡಿ, ಭೋಗ್ಲೆ ಬಳಿಕ ಪಾಂಡ್ಯಗೆ ಚೋಪ್ರಾ ಬೆಂಬಲ

Prasanna Kumar P N HT Kannada

Aug 12, 2023 05:41 PM IST

google News

ಹಾರ್ದಿಕ್ ಪಾಂಡ್ಯ ಮತ್ತು ಆಕಾಶ್ ಚೋಪ್ರಾ

    • Hardik Pandya-Tilak Varma: ಎಡಗೈ ಬ್ಯಾಟ್ಸ್​ಮನ್​ ತಿಲಕ್ ವರ್ಮಾ ಅವರ ವಿವಾದಕ್ಕೆ ಸಂಬಂಧಿಸಿ ಭಾರತದ ಮಾಜಿ ಕ್ರಿಕೆಟಿಗ, ಕಾಮೆಂಟೇಟೆರ್ ಆಕಾಶ್ ಚೋಪ್ರಾ ಅವರು ತೀವ್ರ ಟೀಕೆಗೆ ಗುರಿಯಾಗಿರುವ ಹಾರ್ದಿಕ್ ಪಾಂಡ್ಯ ಬೆಂಬಲಕ್ಕೆ ನಿಂತಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ಆಕಾಶ್ ಚೋಪ್ರಾ
ಹಾರ್ದಿಕ್ ಪಾಂಡ್ಯ ಮತ್ತು ಆಕಾಶ್ ಚೋಪ್ರಾ

ವೆಸ್ಟ್​ ಇಂಡೀಸ್ ಎದುರಿನ 3ನೇ ಟಿ20 ಪಂದ್ಯದಲ್ಲಿ 49 ರನ್ ಗಳಿಸಿದ್ದ ತಿಲಕ್ ವರ್ಮಾ ಅವರಿಗೆ 50 ರನ್ ಗಳಿಸಲು ಅವಕಾಶ ನೀಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ಇನ್ನೂ ಟೀಕೆಗಳು ನಿಂತಿಲ್ಲ. ನೀನೇ ಮ್ಯಾಚ್​ ಮುಗಿಸು ಎಂದು ತಿಲಕ್​ಗೆ ಹಾರ್ದಿಕ್​ ಹೇಳಿರುವ ಆಡಿಯೋ ಮೈಕ್​​ ಸ್ಟಂಪ್​​ನಲ್ಲಿ ರೆಕಾರ್ಡ್​ ಆಗಿದೆ. ಇದರ ನಡುವೆಯೂ ಹಾರ್ದಿಕ್​​, ಇನ್ನೂ ಎರಡು ಓವರ್​ಗಳು ಕೈಯಲಿದ್ದರೂ ತಿಲಕ್​ಗೆ ಅರ್ಧಶತಕ ಪೂರೈಸಲು ಅವಕಾಶ ನೀಡಲಿಲ್ಲ. ನೀನು ಸ್ವಾರ್ಥಿ ಎಂಬ ಮಾತುಗಳು ಹರಿದಾಡುತ್ತಿವೆ. ಇದರ ನಡುವೆ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್​ ಆಕಾಶ್ ಚೋಪ್ರಾ ಬರೋಡಾದ ಆಟಗಾರನಿಗೆ ಬೆಂಬಲ ಸೂಚಿಸಿದ್ದಾರೆ.

ಹಾರ್ದಿಕ್​​ ಹಲವು ಬಾರಿ ನಾನು ಧೋನಿ ಅವರ ಅನುಯಾಯಿ. ಅವರೇ ಆರಾಧ್ಯ ದೈವ ಎಂದೆಲ್ಲಾ ಹೇಳಿದ್ದಾರೆ. ಅವರ ನಡೆ-ನುಡಿ ಎಲ್ಲವನ್ನೂ ಅನುಕರಿಸುತ್ತೇನೆ ಎಂದು ಹಾರ್ದಿಕ್​ ಹೇಳಿರುವ ಮಾತುಗಳನ್ನು ಆಗಾಗೆ ಸಂದರ್ಶನಗಳು, ಪಂದ್ಯದ ಸಂದರ್ಭದಲ್ಲಿ ಕೇಳಿದ್ದೇವೆ. ಆದರೆ ಇದೇ ವಿಚಾರವನ್ನು ಇಟ್ಟುಕೊಂಡು ಆಕಾಶ್​ ಚೋಪ್ರಾ, ಚುಟುಕು ಕ್ರಿಕೆಟ್ ತಂಡದ ನಾಯಕನಿಗೆ ಬೆಂಬಲ ಹೊರ ಹಾಕಿದ್ದಾರೆ. ಅವರು ಧೋನಿ ಅವರನ್ನು ಆರಾಧಿಸಿದ ಮಾತ್ರಕ್ಕೆ ಧೋನಿ ಆಗಬೇಕೆಂದೇನಿಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಹಾರ್ದಿಕ್ ನಡೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಮಾಜಿ ಕ್ರಿಕೆಟರ್ಸ್ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.

ಕೊಹ್ಲಿ-ಧೋನಿ ಕ್ಷಣ ಉಲ್ಲೇಖಿಸಿದ ಫ್ಯಾನ್ಸ್

ಅಭಿಮಾನಿಗಳು ಹಾರ್ದಿಕ್​ಗೆ ಚಾಟಿ ಬೀಸುವಂತೆ 2016ರಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಕ್ಷಣವನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಇದರ ಹೊರತಾಗಿಯೂ ಚೋಪ್ರಾ ಹಾರ್ದಿಕ್ ಕಡೆಗೆ ಹೆಚ್ಚು ಬೆಂಬಲವನ್ನು ತೋರುತ್ತಿದ್ದಾರೆ. ಅದು ಸೌತ್​ ಆಫ್ರಿಕಾ ಎದುರಿನ ಪಂದ್ಯ. ವಿರಾಟ್ ಅದ್ಭುತವಾದ ಇನ್ನಿಂಗ್ಸ್​ ಕಟ್ಟಿದ್ದರು. ಧೋನಿ ಆಗಷ್ಟೇ ಕ್ರೀಸ್​​ಗೆ ಬಂದಿದ್ದರು. ರನ್​ ಚೇಸ್​ ವೇಳೆ ಪಂದ್ಯದ ಗೆಲುವಿಗೆ 7 ಎಸೆತಗಳಲ್ಲಿ 1 ರನ್ ಅಗತ್ಯ ಇತ್ತು. ಆದರೆ ಧೋನಿ, 19ನೇ ಮುಕ್ತಾಯದ ಎಸೆತವನ್ನು ಕೇವಲ ರಕ್ಷಣಾತ್ಮಕ ಆಟವಾಡಿದರು. ಇದು ಕೊಹ್ಲಿಗೂ ಅಚ್ಚರಿಯಾಯಿತು. ಏಕೆ ಎಂದು ಕೊಹ್ಲಿ ಸನ್ಹೆ ಮಾಡಿದರೆ, ಧೋನಿ ಕಣ್ಣು ಸಲುಗೆಯಿಂದ ನೀನೇ ಫಿನಿಷ್ ಮಾಡುವಂತೆ ಸೂಚಿಸಿದ್ದರು.

ಅಭಿಮಾನಿಗಳಿಗೆ ತರಾಟೆ ತೆಗೆದುಕೊಂಡ ಚೋಪ್ರಾ

ಎಂಎಸ್​ ಧೋನಿ ಅವರ ನಡೆ ಈಗಲೂ ಎಲ್ಲರ ಹೃದಯ ಗೆಲ್ಲುತ್ತಿದೆ. ಆದರೆ ಹಾರ್ದಿಕ್ ಸ್ವಾರ್ಥಿ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನೂ ಎರಡು ಓವರ್​​ಗಳು ಬಾಕಿ ಇತ್ತು. ಕೇವಲ ಆ ಎಸೆತವನ್ನು ರಕ್ಷಣಾತ್ಮಕ ಆಟವಾಡಿದರೆ ಪಂದ್ಯಕ್ಕೇನು ನಷ್ಟವಾಗುತ್ತಿರಲಿಲ್ಲ. ನೆಟ್​ರನ್​ರೇಟ್​ ಮೇಲೆ ಪೆಟ್ಟು ಬೀಳುತ್ತದೆ ಎನ್ನಲು ಇದು ಐಸಿಸಿ ಟೂರ್ನಿ ಕೂಡ ಅಲ್ಲ. ಹಾಗಿದ್ದರೂ, ಯುವ ಆಟಗಾರನಿಗೆ ಅರ್ಧಶತಕ ವಂಚಿಸಿದರು. ಹೀಗೆ ಸಾಕಷ್ಟು ಟೀಕೆಗೆ ಒಳಗಾಗುತ್ತಿರುವ ಹಾರ್ದಿಕ್​ ಬೆಂಬಲಕ್ಕೆ ಆಕಾಶ್ ಚೋಪ್ರಾ ಬಂದಿದ್ದಾರೆ.

ಧೋನಿಯಂತೆಯೇ ಆಗಬೇಕಿಲ್ಲ

ಹಾರ್ದಿಕ್ ಪಾಂಡ್ಯ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದಾರೆ. ಟೀಕೆಗೆ ಗುರಿಯಾಗಿದ್ದಾರೆ. ಆದರೆ ನಂತರವೂ ಒಂದು ಆಲೋಚನೆ ಮಾಡುವುದು ಉತ್ತಮ. ಇಲ್ಲಿ ಹೆಚ್ಚು ಮಾತನಾಡುತ್ತಿರುವುದೇ ತಿಲಕ್ ಅರ್ಧಶತಕದ ಮೈಲಿಗಲ್ಲಿನ ಬಗ್ಗೆ. ನೀವು ಟಿ20 ಕ್ರಿಕೆಟ್‌ನಲ್ಲಿ ಮೈಲಿಗಲ್ಲುಗಳ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಧೋನಿ-ಕೊಹ್ಲಿ ನಡುವಿನ ಕ್ಷಣವನ್ನು ಉಲ್ಲೇಖಿಸಿದ ಚೋಪ್ರಾ, ಹಾರ್ದಿಕ್ ಪಾಂಡ್ಯ, ಧೋನಿಯನ್ನು ಆರಾಧಿಸುತ್ತಾರೆ ಎಂದ ಮಾತ್ರಕ್ಕೆ ಅವರಂತೆ ಇರಬೇಕಾಗಿಲ್ಲ. ಅವರಂತೆಯೇ ನಡೆದುಕೊಳ್ಳಬೇಕಾಗಿಲ್ಲ ಎಂದು ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

ಹಾರ್ದಿಕ್​ಗೆ ಬೆಂಬಲ ಸೂಚಿಸಿದ ಹರ್ಷ ಭೋಗ್ಲೆ

ಆಕಾಶ್​ ಚೋಪ್ರಾ ಅವರಿಗೂ ಮುನ್ನ ಹರ್ಷಭೋಗ್ಲೆ ಅವರು ಹಾರ್ದಿಕ್​ಗೆ ಬೆಂಬಲ ಸೂಚಿಸಿದ್ದಾರೆ. ಹಾರ್ದಿಕ್ ಅವರಿಂದ ತಿಲಕ್ ಅರ್ಧಶತಕ ಸಿಡಿಸಲಿಲ್ಲ ಎಂಬ ಚರ್ಚೆಯಿಂದ ನಾನು ಗೊಂದಲಕ್ಕೊಳಗಾಗಿದ್ದೇನೆ. ಶತಕ ಹೊರತುಪಡಿಸಿ ಇದೊಂದು ಹೆಗ್ಗುರುತೇನಲ್ಲ. ಟಿ20 ಕ್ರಿಕೆಟ್​​ನಲ್ಲಿ ಹೆಗ್ಗುರುತುಗಳಿಲ್ಲ. ವೈಯಕ್ತಿಕ ಸಾಧನೆಯ ಬಗ್ಗೆ ತುಂಬಾ ಗೀಳು ಹೊಂದಿದ್ದೇವೆ. ಟಿ20 ಕ್ರಿಕೆಟ್​​ನಲ್ಲಿ 50 ರನ್​ ಗಳಿಸುವುದೇ ವೈಯಕ್ತಿಕ ದಾಖಲೆ ಎಂಬುದನ್ನು ನಾನು ನಂಬುವುದಿಲ್ಲ. ನೀವು ವೇಗವಾಗಿ ರನ್‌ಗಳನ್ನು ತ್ವರಿತವಾಗಿ ಮಾಡಿದರೆ (ಸರಾಸರಿ ಮತ್ತು ಸ್ಟ್ರೈಕ್​ರೇಟ್​), ಅದು ಮುಖ್ಯ ಎಂದು ಹರ್ಷಾ ಭೋಗ್ಲೆ ಟ್ವೀಟ್​ ಮೂಲಕ ಹೇಳಿದ್ದಾರೆ. ಇದಕ್ಕೆ ಎಬಿಡಿ ಕೂಡ ಬೆಂಬಲ ಸೂಚಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ