Explainer: ಗುಜರಾತ್ ಟೈಟಾನ್ಸ್ ಉಳಿಸಿಕೊಂಡರೂ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದು ಹೇಗೆ?
Nov 27, 2023 12:27 PM IST
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ
- ರಿಟೆನ್ಷನ್ ಪಟ್ಟಿ ಸಲ್ಲಿಕೆ ಬಳಿಕವೂ, ಹಾರ್ದಿಕ್ ಪಾಂಡ್ಯ ತಮ್ಮ ಹಳೆಯ ತಂಡವಾದ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಇದು ಹೇಗೆ ಸಾಧ್ಯ. ಇಲ್ಲಿದೆ ವಿವರ.
ಐಪಿಎಲ್ 2024ರ (IPL 2024) ಆವೃತ್ತಿಗೂ ಮುನ್ನ ನವೆಂಬರ್ 26ರ ಭಾನುವಾರ ಎಲ್ಲಾ ಫ್ರಾಂಚೈಸಿಗಳು ತನ್ನಲ್ಲಿ ಉಳಿಸಿಕೊಂಡ ಮತ್ತು ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದವು. ಅದರಂತೆಯೇ, ಗುಜರಾತ್ ಟೈಟನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ತಂಡದಲ್ಲೇ ಉಳಿದಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಹಳೆಯ ಊಹಾಪೋಹಗಳೇ ಸತ್ಯವಾಗಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಭಾರತದ ಪ್ರಮುಖ ಆಲ್‌ರೌಂಡರ್ ಪಾಂಡ್ಯ ಅವರನ್ನು ಮರಳಿ ತಂಡಕ್ಕೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಾಂಡ್ಯರನ್ನು ಮುಂಬೈ ಬಳಗಕ್ಕೆ ಮತ್ತೆ ಕರೆಸಿಕೊಳ್ಳಲು ಉಭಯ ಫ್ರಾಂಚೈಸಿಗಳ ನಡುವೆ 15 ಕೋಟಿ ರೂಪಾಯಿ ನಗದು ಒಪ್ಪಂದ ನಡೆದಿದೆ ಎಂದು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಟ್ರೇಡಿಂಗ್ ಕುದುರಿಸಲು ಮುಂಬೈ ತಂಡವು ಮತ್ತೊಂದು ಬದಲಾವಣೆ ಮಾಡಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ (17.5 ಕೋಟಿ ರೂಪಾಯಿ) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಿಟ್ಟುಕೊಟ್ಟಿದೆ ಎಂದು ತಿಳಿದುಬಂದಿದೆ.
ಭಾನುವಾರ ಗುಜರಾತ್ ಟೈಟಾನ್ಸ್ ಸಲ್ಲಿಸಿದ ರಿಟೆನ್ಷನ್ ಪಟ್ಟಿಯಲ್ಲಿ ಪಾಂಡ್ಯ ಹೆಸರು ಕಂಡು ಹಲವು ಅಭಿಮಾನಿಗಳಿಗೆ ಅಚ್ಚರಿಯಾಗಿತ್ತು. ಪಾಂಡ್ಯ ಅವರು ಮುಂಬೈ ತಂಡಕ್ಕೆ ಮರಳುತ್ತಾರೆ ಎಂದು ಅನೇಕ ವರದಿಗಳು ಹೇಳಿದ್ದರೂ, ಅವರು ಗುಜರಾತ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ನಗದು ಒಪ್ಪಂದದ ಭಾಗವಾಗಿ ಮುಂಬೈಗೆ ಹಾರ್ದಿಕ್ ಅವರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮೂಲಗಳು ದೃಢಪಡಿಸಿವೆ.
ರಟೆನ್ಷನ್ ಪಟ್ಟಿ ಸಲ್ಲಿಕೆ ಬಳಿಕವೂ ವರ್ಗಾವಣೆ ಹೇಗೆ ಸಾಧ್ಯ?
ರಿಟೆನ್ಷನ್ ಪಟ್ಟಿ ಸಲ್ಲಿಕೆಗೆ ನವೆಂಬರ್ 26ರ ಅಂತಿಮ ಗಡುವು ನೀಡಲಾಗಿದ್ದರೂ, ಟ್ರೇಡಿಂಗ್ ವಿಂಡೋ ಡಿಸೆಂಬರ್ 12ರ ವರೆಗೂ ತೆರೆದಿರುತ್ತದೆ. ಹೀಗಾಗಿ ಮುಂಬೈ ಪಾಂಡ್ಯರನ್ನು ಮತ್ತೆ ತಂಡ ಸೇರಿಸಿಕೊಂಡಿದೆ. ಟ್ರೇಡಿಂಗ್ ವಿಂಡೋ ಡಿಸೆಂಬರ್ 12ಕ್ಕೆ ಕೊನೆಯಾಗಲಿದೆ. ಈ ಅವಧಿಯಲ್ಲಿ ಐಪಿಎಲ್ ಫ್ರಾಂಚೈಸಿಗಳ ನಡುವಿನ ಎಲ್ಲಾ ವಹಿವಾಟುಗಳು ಮಾನ್ಯವಾಗಿರುತ್ತವೆ. ಹೀಗಾಗಿ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕವೂ, ಪಾಂಡ್ಯ ಅವರು ಗುಜರಾತ್ ತಂಡದಿಂದ ಮುಂಬೈಗೆ ಯಶಸ್ವಿಯಾಗಿ ಟ್ರೇಡಿಂಗ್ ಆಗಿದ್ದಾರೆ.
2022ರ ಐಪಿಎಲ್ ಆವೃತ್ತಿಗೆ ಕಾಲಿಟ್ಟ ಗುಜರಾತ್ ಟೈಟಾನ್ಸ್ ಪರ ಪಾಂಡ್ಯ ಅವರು ನಾಯಕರಾಗಿ ಸೇರಿಕೊಂಡರು. ಚೊಚ್ಚಲ ಋತುವಿನಲ್ಲೇ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದರು. ಆ ಬಳಿಕ ಐಪಿಎಲ್ 2023 ಫೈನಲ್‌ವರೆಗೂ ತಂಡ ಬಂತು. ಆದರೆ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಸೋತಿತು.
ಇದನ್ನೂ ಓದಿ | ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
ಐಪಿಎಲ್ 2024ರ ಮಿನಿ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಮಿನಿ ಹರಾಜಿನಲ್ಲಿ ಖಾಲಿಯಿರುವ ಒಟ್ಟು 77 ಆಟಗಾರರ ಸ್ಥಾನಗಳಿಗೆ ಫ್ರಾಂಚೈಸಿಗಳು ಬಿಡ್ ನಡೆಸಲಿವೆ. ಅವುಗಳಲ್ಲಿ 30 ವಿದೇಶಿ ಆಟಗಾರರಿಗೆ ಅವಕಾಶವಿದೆ.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ (ನಾಯಕ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಕ್ಯಾಮರೂನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆನ್ಡಾರ್ಫ್, ರೊಮಾರಿಯೊ ಶೆಫರ್ಡ್ (ಟ್ರೇಡಿಂಗ್).
ಬಿಡುಗಡೆ ಮಾಡಿದ ಆಟಗಾರರು: ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಟ್ರಿಸ್ಟಾನ್ ಸ್ಟಬ್ಸ್, ಡುವಾನ್ ಜಾನ್ಸೆನ್, ಜ್ಯೆ ರಿಚರ್ಡ್ಸನ್, ರಿಲೆ ಮೆರೆಡಿತ್, ಕ್ರಿಸ್ ಜೋರ್ಡಾನ್, ಸಂದೀಪ್ ವಾರಿಯರ್.
ರಿಟೆನ್ಷನ್ ಬಳಿಕ ಟ್ರೇಡಿಂಗ್: ಹಾರ್ದಿಕ್ ಪಾಂಡ್ಯ (ಟ್ರೇಡ್ ಇನ್, ಗುಜರಾತ್ ಟೈಟಾನ್ಸ್), ಕ್ಯಾಮರೂನ್ ಗ್ರೀನ್ (ಟ್ರೇಡ್ ಔಟ್, ಆರ್‌ಸಿಬಿ).