ಭರ್ಜರಿ 79 ರನ್ ಸಿಡಿಸಿ ಹಠಾತ್ ಮೈದಾನ ತೊರೆದ ಶುಭ್ಮನ್ ಗಿಲ್; ಏನಾಯ್ತು?
Nov 15, 2023 04:44 PM IST
ರಿಟೈರ್ಡ್ ಹರ್ಟ್ ಆಗಿ ಹೊರ ನಡೆದ ಶುಭ್ಮನ್ ಗಿಲ್.
- Shubman Gill: ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಸೆಂಚುರಿಯತ್ತ ಹೆಜ್ಜೆ ಹಾಕುತ್ತಿದ್ದ ಅವಧಿಯಲ್ಲಿ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾದರು. ಹೀಗಾಗಿ ನಡೆಯಲು ಸಾಧ್ಯವಾಗದೆ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದರು.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ODI World Cup 2023) ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ (India vs New Zealand Semi Final) ಎದುರು ಅದ್ಭುತ ಪ್ರದರ್ಶನ ನೀಡುತ್ತಿದ್ದ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill), ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಬ್ಯಾಟಿಂಗ್ ನಿವೃತ್ತಿ ಹೊಂದಿದ್ದಾರೆ. ಇದು ಭಾರತ ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ. ಭರ್ಜರಿ ಅರ್ಧಶತಕ ಸಿಡಿಸಿ ಸೆಂಚುರಿಯತ್ತ ಹೆಜ್ಜೆ ಹಾಕುತ್ತಿದ್ದ ಅವಧಿಯಲ್ಲಿ ಕಾಲಿನ ಸೆಳೆತಕ್ಕೆ ಒಳಗಾದರು. ಹೀಗಾಗಿ ನಡೆಯಲು ಸಾಧ್ಯವಾಗದೆ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದರು.
ಫಿಸಿಯೋ ಸಲಹೆಯಂತೆ ಮೈದಾನ ತೊರೆದ ಗಿಲ್
22 ಓವರ್ನ ನಾಲ್ಕನೇ ಎಸೆತದಲ್ಲಿ ವಿರಾಟ್ ಕೊಹ್ಲಿ, ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಒಂದು ರನ್ ಪಡೆದರು. ಆದರೆ ಗಿಲ್ ಓಡುವಾಗ ತೊಡೆಯ ಗಾಯದ ಸಮಸ್ಯೆಗೆ ಒಳಗಾದರು. ತಕ್ಷಣವೇ ಫಿಸಿಯೋ ಮೈದಾನಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರು. ಆದರೆ, ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ ಗಿಲ್ಗೆ ಮೈದಾನ ತೊರೆಯುವಂತೆ ಫಿಸಿಯೋ ಸೂಚಿಸಿದರು. ಅದರಂತೆ ಕುಂಟುತ್ತಾ ಮೈದಾನ ತೊರೆದರು. ಫಿಸಿಯೋ ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡ ಕೈ ಸನ್ನೆಯ ಮೂಲಕ ಪೆವಿಲಿಯನ್‌ಗೆ ಮರಳುವಂತೆ ಸೂಚಿಸಿದರು.
79 ರನ್ ಸಿಡಿಸಿದ ಗಿಲ್
ರೋಹಿತ್ ಶರ್ಮಾ ಜೊತೆಗೆ 71 ರನ್ಗಳ ಜೊತೆಯಾಟವಾಡಿದ ಗಿಲ್, ಮಹತ್ವದ ಪಂದ್ಯದಲ್ಲಿ 65 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಿತಿ 79 ರನ್ ಗಳಿಸಿ ಶತಕದತ್ತ ಹೆಜ್ಜೆ ಹಾಕುತ್ತಿದ್ದರು. ಆದರೆ, ಹಠಾತ್ ನಿರ್ಗಮಿಸುವಂತಾಯಿತು. ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಹಠಾತ್ ಪೆವಿಲಿಯನ್‌ಗೆ ಮರಳಿರುವ ಗಿಲ್ ಚೇತರಿಸಿಕೊಂಡರೆ ಮತ್ತೆ ಬ್ಯಾಟಿಂಗ್ ಮಾಡಬಹುದು. ರೋಹಿತ್ ಶರ್ಮಾ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಗಿಲ್ ಗಾಯಗೊಳ್ಳಲು ಕಾರಣ ಹೀಗಿದೆ
ಮುಂಬೈನ ವಾಂಖೆಡೆ ಮೈದಾನವು ಅರಬ್ಬಿ ಸಮುದ್ರದ ಸಮೀಪದಲ್ಲಿರುವ ಕಾರಣ ಇಲ್ಲಿನ ಹವಾಮಾನ ಬ್ಯಾಟಿಂಗ್ ಮಾಡಲು ತುಂಬಾ ಕಷ್ಟಕರವಾಗುತ್ತದೆ. ಮುಂಬೈನಲ್ಲಿ 35 ಡಿಗ್ರಿ ಉಷ್ಣಾಂಶವಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಆಡುವುದು ಕಷ್ಟಕರ. ಈ ಕಾರಣದಿಂದ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳು ಸ್ನಾಯು ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದೀಗ ವಿಶ್ವಕಪ್ನಲ್ಲಿ ಚೊಚ್ಚಲ ಶತಕ ಸಿಡಿಸುವ ಭರವಸೆಯಲ್ಲಿದ್ದ ಗಿಲ್ಗೆ ನಿರಾಸೆಯಾಗಿದೆ.
ನ್ಯೂಜಿಲೆಂಡ್ ಆಡುವ 11ರ ಬಳಗ
ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಭಾರತ ಆಡುವ 11 ಬಳಗ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.