logo
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ವಿಶ್ವಕಪ್‌ 2023 ಸೆಮಿಫೈನಲ್‌ ಪ್ರವೇಶಿಸಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು

Explainer: ವಿಶ್ವಕಪ್‌ 2023 ಸೆಮಿಫೈನಲ್‌ ಪ್ರವೇಶಿಸಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು

Jayaraj HT Kannada

Oct 24, 2023 08:46 PM IST

google News

ಭಾರತದ ವಿಶ್ವಕಪ್‌ ಸೆಮಿಫೈನಲ್‌ ಹಾದಿ ಸುಲಭ

    • Cricket World Cup 2023: ವಿಶ್ವಕಪ್‌ 2023ರಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತ ತಂಡವು, ಮುಂದೆ ಟ್ರೋಫಿ ಗೆಲ್ಲುವ ಮೆಚ್ಚಿನ ತಂಡವಾಗಿ ಮುನ್ನುಗ್ಗುತ್ತಿದೆ. ಲೀಗ್‌ ಹಂತದಲ್ಲಿ ಟೀಮ್‌ ಇಂಡಿಯಾ ಇನ್ನೂ ನಾಲ್ಕು ಪಂದ್ಯಗಳನ್ನು ಆಡಲಿದ್ದು, ಸೆಮಿಫೈನಲ್‌ ಅರ್ಹತೆಗೆ ಗೆಲ್ಲಬೇಕಾದ ಪಂದ್ಯಗಳ ಸಂಖ್ಯೆ ಹೀಗಿದೆ.
ಭಾರತದ ವಿಶ್ವಕಪ್‌ ಸೆಮಿಫೈನಲ್‌ ಹಾದಿ ಸುಲಭ
ಭಾರತದ ವಿಶ್ವಕಪ್‌ ಸೆಮಿಫೈನಲ್‌ ಹಾದಿ ಸುಲಭ (PTI)

ಭಾರತದ ಆತಿಥ್ಯದಲ್ಲಿಯೇ ನಡೆಯುತ್ತಿರುವ ವಿಶ್ವಕಪ್‌ 2023ರಲ್ಲಿ (ICC ODI World Cup 2023) ಟೀಮ್‌ ಇಂಡಿಯಾವು ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅದಕ್ಕೆ ತಕ್ಕನಾಗಿ ಈವರೆಗೆ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರೊಂದಿಗೆ ಸುಲಭವಾಗಿ ಸೆಮಿಫೈನಲ್‌ ತಲುಪುವ ಗುರಿ ಹೊಂದಿದೆ.

ಧರ್ಮಶಾಲಾದಲ್ಲಿ ನಡೆದ ನ್ಯೂಜಿಲ್ಯಾಂಡ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ನಿರ್ಣಾಯಕ ಗೆಲುವು ಸಾಧಿಸಿದ ತಂಡವು, ಸದ್ಯ ಟೂರ್ನಿಯಲ್ಲಿ ಏಕೈಕ ಅಜೇಯ ತಂಡವಾಗಿದೆ. ಸತತ ಐದು ಗೆಲುವುಗಳ ಬಳಿಕ ಒಟ್ಟು 10 ಪಾಯಿಂಟ್‌ಗಳೊಂದಿಗೆ ಅಜೇಯ ಓಟ ಮುಂದುವರೆಸಿದೆ. ಅತ್ತ ಭಾರತದ ವಿರುದ್ಧ ಟೂರ್ನಿಯಲ್ಲಿ ಮೊದಲ ಸೋಲು ಕಂಡ ನ್ಯೂಜಿಲ್ಯಾಂಡ್ ಪ್ರಸ್ತುತ ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಸತತ ಐದು ಗೆಲುವುಗಳನ್ನು ಕಂಡ ಭಾರತವು ಟೂರ್ನಿಯಲ್ಲಿ ಸೆಮಿಫೈನಲ್‌ ಲಗ್ಗೆ ಇಡುವುದು ಬಹುತೇಕ ಖಚಿತ. ಹೀಗಾಗಿ ಭಾರತದ ನಾಕೌಟ್‌ ಪ್ರವೇಶಕ್ಕೆ ಮುಂದೆ ಎಷ್ಟು ಗೆಲುವುಗಳು ಬೇಕು ಎಂಬುದನ್ನು ನೋಡೋಣ.

2019ರಲ್ಲಿ ಏನಾಗಿತ್ತು?

ಭಾರತದ ಸೆಮಿಫೈನಲ್‌ ಪ್ರವೇಶಕ್ಕೆ ಬೇಕಾದ ಗೆಲುವಿನ ಲೆಕ್ಕಾಚಾರ ಹಾಕುವ ಮುನ್ನ 2019ರ ವಿಶ್ವಕಪ್‌ನ ಆವೃತ್ತಿಯನ್ನು ಒಂದು ಬಾರಿ ನೆನಪಿಸಿಕೊಳ್ಳೋಣ. ಕಳೆದ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ತಂಡವು ಒಟ್ಟು ಐದು ಗೆಲುವುಗಳೊಂದಿಗೆ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಆದರೆ, ಆ ಆವೃತ್ತಿಯಲ್ಲಿ ಮಳೆಯಿಂದಾಗಿ ಒಂದು ಪಂದ್ಯವನ್ನು‌ ಕಳೆದುಕೊಂಡಿದ್ದ ಕಿವೀಸ್‌ ಒಂದು ಹೆಚ್ಚುವರಿ ಅಂಕಗಳೊಂದಿಗೆ ಒಟ್ಟು 11 ಅಂಕಗಳನ್ನು ಪಡೆದಿತ್ತು. ಅಷ್ಟೇ ಅಂಕಗಳನ್ನು ಹೊಂದಿದ್ದ ಪಾಕಿಸ್ತಾನವು ಟೂರ್ನಿಯಿಂದ ಹೊರಬಿದ್ದಿತ್ತು. ಇದಕ್ಕೆ ಕಾರಣ ನೆಟ್ ರನ್ ರೇಟ್. ಒಂದೇ ರೀತಿಯ ಅಂಕಗಳನ್ನು ಹೊಂದಿದ್ದರೂ ಕಿವೀಸ್‌ಗಿಂತ ಕಡಿಮೆ ರನ್‌ ರೇಟ್‌ ಹೊಂದಿದ್ದ ಪಾಕ್‌ ಟೂರ್ನಿಯಿಂದ ಹೊರನಡೆಯಬೇಕಾಯ್ತು. ಹೀಗಾಗಿ ಗೆಲುವಿನಷ್ಟೇ ರನ್‌ ರೇಟ್‌ ಕೂಡಾ ಮುಖ್ಯ.

ಹೀಗಾಗಿ, ಸದ್ಯ ಸೆಮಿಫೈನಲ್‌ ಹಾದಿ ಸುಗಮವಾಗಬೇಕಾದರೆ ಪ್ರತಿ ತಂಡಗಳು ಕನಿಷ್ಠ ಆರು ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ. ಒಂದು ಸೋಲು ಹೆಚ್ಚಾದರೂ ಮತ್ತೊಂದು ತಂಡದ ಗೆಲುವು ಆ ತಂಡಕ್ಕೆ ಮಾರಕವಾಗಲಿದೆ. ಹೀಗಾಗಿ ಸೆಮಿ ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳನ್ನು ಗಟ್ಟಿಗೊಳಿಸಲು ಕನಿಷ್ಠ ಆರು ಪಂದ್ಯಗಳನ್ನು ಗೆಲ್ಲಬೇಕು. ಆ ಸಂಖ್ಯೆ ಏಳಕ್ಕೆ ಏರಿದರೆ, ತಂಡವು ನಾಕೌಟ್‌ ಹಂತ ಪ್ರವೇಶಿಸುವುದು ಖಚಿತವಾಗಲಿದೆ.

ಭಾರತಕ್ಕೆ ಬೇಕು ಕೇವಲ ಒಂದು ಗೆಲುವು

ಅಗ್ರ ನಾಲ್ಕರಲ್ಲಿ ಒಂದು ತಂಡವಾಗಿ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ರೋಹಿತ್‌ ಶರ್ಮಾ ಬಳಗಕ್ಕೆ ಸದ್ಯ ಕೇವಲ ಒಂದು ಗೆಲುವಿನ ಅಗತ್ಯವಿದೆ. ಭಾರತವು ಮುಂದೆ ಒಟ್ಟು ನಾಲ್ಕು ಪಂದ್ಯಗಳಲ್ಲಿ ಆಡಲಿದೆ. ಅದರಲ್ಲಿ ಒಂದು ಗೆಲುವು ಕಂಡರೂ, ಮುಂದಿನ ಹಾದಿ ಸುಗಮವಾಗಲಿದೆ. ಒಂದು ವೇಳೆ ಮುಂದೆ ಇಂಗ್ಲೆಂಡ್‌ ವಿರುದ್ಧ ಅಕ್ಟೋಬರ್‌ 29ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಗೆದ್ದರೆ, ಸೆಮಿಫೈನಲ್‌ನಲ್ಲಿ ಸ್ಥಾನ ಸಿಗಲಿದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಆ ಬಳಿಕ ನಡೆಯಲಿರುವ ಮೂರು ಪಂದ್ಯಗಳಲ್ಲಿ ಒಂದು ಗೆಲುವು ತಂಡಕ್ಕೆ ಸಾಕಾಗಲಿದೆ.

ಭಾರತದ ಮುಂದಿನ ಪಂದ್ಯಗಳು

ಭಾರತವು ಅಕ್ಟೋಬರ್ 29ರಂದು ಲಖನೌನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆ ಬಳಿಕ ನವೆಂಬರ್ 2ರಂದು ಶ್ರೀಲಂಕಾ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ. ನವೆಂಬರ್ 5ರಂದು ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ ಸೆಣಸಲಿದೆ. ನವೆಂಬರ್ 12ರಂದು ನಡೆಯಲಿರುವ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ