Explainer: ಹೀಗಾದರೆ ಸೆಮೀಸ್ನಲ್ಲಿ ಮತ್ತೆ ಮುಖಾಮುಖಿಯಾಗಲಿವೆೆ ಭಾರತ-ಪಾಕಿಸ್ತಾನ; ಇದಕ್ಕೇನು ಪವಾಡ ನಡೆಯಬೇಕಿಲ್ಲ!
Nov 03, 2023 12:23 PM IST
ಭಾರತ-ಪಾಕಿಸ್ತಾನ.
- India Vs Pakistan: ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಲೆಕ್ಕಾಚಾರಗಳು ಜೋರಾಗಿದೆ. ಯಾವ ತಂಡಗಳು ಹೊರಬೀಳಲಿವೆ, ಯಾವ ತಂಡಗಳು ಸೆಮೀಸ್ ಪ್ರವೇಶಿಸಲಿವೆ ಎನ್ನುವುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಆದರೆ ಹೀಗಾದರೆ, ಮತ್ತೊಮ್ಮೆ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯೂ ಇದೆ.
ಏಕದಿನ ವಿಶ್ವಕಪ್ (ICC ODI World Cup 2023) ಸೆಮಿಫೈನಲ್ಗೆ ಟೀಮ್ ಇಂಡಿಯಾ (Team India) ಪ್ರವೇಶಿಸಿದೆ. ವಿಶ್ವಕಪ್ನಲ್ಲಿ ಮೊದಲ ತಂಡವಾಗಿ ಸೆಮೀಸ್ಗೆ ಕಾಲಿಟ್ಟಿದೆ. ಉಳಿದ ಮೂರು ಸ್ಥಾನಗಳಿಗೆ ಇನ್ನೂ ಹೊರಬಿದ್ದಿರುವ ಬಾಂಗ್ಲಾದೇಶ ಹೊರತುಪಡಿಸಿ 8 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾವನ್ನು ಮಣಿಸಿದ ಭಾರತ, ಸತತ 7ನೇ ಗೆಲುವು ದಕ್ಕಿಸಿಕೊಂಡಿತು.
ಸದ್ಯ ಸೆಮಿಫೈನಲ್ ಲೆಕ್ಕಾಚಾರಗಳು ಜೋರಾಗಿದೆ. ಆದರೆ ಹೀಗಾದರೆ, ಮತ್ತೊಮ್ಮೆ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯೂ ಇದೆ. ಹೌದು, ಸೆಮಿಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಇಂಡೋ-ಪಾಕ್ ಎದುರಾಗುವ ಸಾಧ್ಯತೆ ಇದೆ. ಇದಕ್ಕೆ ಪವಾಡಗಳು ನಡೆಯಬೇಕಿಲ್ಲ. ಉಳಿದ ತಂಡಗಳ ಸೋಲು, ತನ್ನ ತಂಡದ ಗೆಲುವಿನ ಮೇಲೆ ಪಾಕ್ ಭವಿಷ್ಯ ನಿರ್ಧಾರವಾಗಲಿದೆ.
ಪಾಕ್ ಸೆಮೀಸ್ ಲೆಕ್ಕಾಚಾರ ಹೇಗಿದೆ?
ಭಾರತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ನವೆಂಬರ್ 5ರಂದು ತನ್ನ ಮುಂದಿನ ಪಂದ್ಯದಲ್ಲಿ 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಬೇಕು. ಆಗ ಮೆನ್ ಇನ್ ಬ್ಲೂ ಹೆಚ್ಚು ಕಡಿಮೆ ಅಗ್ರಸ್ಥಾನದಲ್ಲೇ ಉಳಿಯಲಿದೆ. ನವೆಂಬರ್ 15ರಂದು ವಾಂಖೆಡೆ ಮೈದಾನದಲ್ಲಿ ನಡೆಯುವ ಮೊದಲ ಸೆಮಿಫೈನಲ್ನಲ್ಲಿ ಅಗ್ರಸ್ಥಾನಿ ತಂಡವು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿರುವ ತಂಡವನ್ನು ಎದುರಿಸಲಿದೆ.
ಅಫ್ಘಾನಿಸ್ತಾನವೂ ಸೋಲಬೇಕು
ಪ್ರಸ್ತುತ ಪಾಕಿಸ್ತಾನ 7 ಪಂದ್ಯಗಳಲ್ಲಿ 4 ಸೋಲು, 3 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಪಾಕ್ ನಾಲ್ಕನೇ ಸ್ಥಾನ ಭದ್ರಪಡಿಸಿಕೊಳ್ಳಲು ಉಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಆಗ 10 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಲಗ್ಗೆ ಇಡಲಿದೆ. ಪಾಕ್ ಗೆಲುವು ಸಾಧಿಸುವುದರ ಜೊತೆಗೆ ಉಳಿದ ತಂಡಗಳ ಫಲಿತಾಂಶ ಮೇಲೂ ಅವಲಂಬಿತವಾಗಬೇಕು. ರೇಸ್ನಲ್ಲಿರುವ ಅಫ್ಘಾನಿಸ್ತಾನ ತನ್ನ ಮುಂದಿನ 3 ಪಂದ್ಯಗಳಲ್ಲಿ ಕನಿಷ್ಠ ಎರಡನ್ನಾದರೂ ಸೋಲಬೇಕು.
ಕಿವೀಸ್-ಇಂಗ್ಲೆಂಡ್ ಎದುರು ಪಾಕ್ ಗೆಲ್ಲಬೇಕು
ಮತ್ತೊಂದೆಡೆ ನ್ಯೂಜಿಲೆಂಡ್ ತಂಡವು ತನ್ನ ಉಳಿದ ಎರಡೂ ಪಂದ್ಯಗಳನ್ನೂ ಕಳೆದುಕೊಳ್ಳಬೇಕು. ಮತ್ತೊಂದೆಡೆ ಪಾಕ್ಗೆ ಉತ್ತಮ ಅವಕಾಶ ಕೂಡ ಇದೆ. ಏಕೆಂದರೆ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಅವಕಾಶ ಪಾಕಿಸ್ತಾನಕ್ಕೆ ಸಿಕ್ಕಿದೆ. ನವೆಂಬರ್ 4ರಂದು ನ್ಯೂಜಿಲೆಂಡ್ - ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗಾಗಿ ಈ ಪಂದ್ಯದಲ್ಲಿ ಕಿವೀಸ್ ತಂಡವನ್ನು ಪಾಕ್ ಮಣಿಸಲೇಬೇಕು.
ಭಾರಿ ಅಂತರದ ಗೆಲುವು ಅನಿವಾರ್ಯ
ಈ ಪಂದ್ಯವನ್ನು ಸೋಲಿಸಿದರೆ, ಉತ್ತಮ ನೆಟ್ ರನ್ ರೇಟ್ ಪಡೆಯಲು ಸಾಧ್ಯವಾಗುತ್ತದೆ. ಆ ಬಳಿಕ ತನ್ನ ಕೊನೆಯ ಪಂದ್ಯದಲ್ಲಿ ಬಾಬರ್ ಪಡೆ, ಕಳಪೆ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ ತಂಡವನ್ನು ಮಣಿಸಬೇಕು. ಭಾರಿ ಅಂತರದ ಗೆಲುವು ದಾಖಲಿಸಿ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು. ಮತ್ತೊಂದೆಡೆ ನ್ಯೂಜಿಲೆಂಡ್ ತನ್ನ ಕೊನೆ ಪಂದ್ಯದಲ್ಲಿ ಲಂಕಾವನ್ನು ಎದುರಿಸಲಿದೆ. ಆದರೆ, ಕಿವೀಸ್ ಗೆಲ್ಲುವ ಸಾಧ್ಯತೆ ಇದೆ.
ಹೀಗಲೂ ಆಗಬಹುದು
ಒಂದು ವೇಳೆ ಪಾಕ್ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ 10 ಅಂಕ ಪಡೆಯಲಿದೆ. ಕಿವೀಸ್ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ, ಅದು ಕೂಡ 10 ಅಂಕ ಪಡೆಯಲಿದೆ. ಇದರೊಂದಿಗೆ ನೆಟ್ ರನ್ ರೇಟ್ ಆಧಾರದ ಮೇಲೆ ಉಭಯ ತಂಡಗಳಲ್ಲಿ ಒಂದು ಸೆಮೀಸ್ಗೆ ಅರ್ಹತೆ ಪಡೆಯುವುದು ಖಾಯಂ. ಒಂದು ಪಾಕಿಸ್ತಾನಕ್ಕೆ ಈ ಅವಕಾಶ ಸಿಕ್ಕರೆ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಲಿದೆ.
ಇದೆಲ್ಲಾ ಸಾಧ್ಯವಾದರೆ, ಸೆಮೀಸ್ನಲ್ಲಿ ಇಂಡೋ-ಪಾಕ್ ಮುಖಾಮುಖಿ ಖಚಿತ
ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಮತ್ತು ಪಾಕಿಸ್ತಾನ 4ನೇ ಸ್ಥಾನ ಗಳಿಸಿದರೆ, ನವೆಂಬರ್ 15ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಉಭಯ ತಂಡಗಳು ಮೊದಲ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಕದನಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ. 2011ರ ಏಕದಿನ ವಿಶ್ವಕಪ್ನಲ್ಲಿ ಈ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಕೊನೆಯದಾಗಿ ಎದುರಾಗಿದ್ದವು. ಈ ಪಂದ್ಯದಲ್ಲಿ ಗೆದ್ದ ಭಾರತ ಫೈನಲ್ ಪ್ರವೇಶಿಸಿತ್ತು. ಇನ್ನು ಈ ಲೀಗ್ನಲ್ಲಿ ಪಾಕ್ ತಂಡವನ್ನು ಭಾರತ ಮಣಿಸಿತ್ತು.