logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೌರವಿದ್ಯುತ್‌, ಸಬ್‌ ಏರ್‌ ವ್ಯವಸ್ಥೆ; ದೇಶದಲ್ಲೇ ಸುಸಜ್ಜಿತ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶ್ವಕಪ್‌ ಪಂದ್ಯಗಳು

ಸೌರವಿದ್ಯುತ್‌, ಸಬ್‌ ಏರ್‌ ವ್ಯವಸ್ಥೆ; ದೇಶದಲ್ಲೇ ಸುಸಜ್ಜಿತ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶ್ವಕಪ್‌ ಪಂದ್ಯಗಳು

Jayaraj HT Kannada

Sep 21, 2023 07:00 AM IST

google News

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ

    • M Chinnaswamy Stadium Bengaluru: ಹಲವು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಭಾರತದ ಅತ್ಯಂತ ಸುಸಜ್ಜಿತ ಕ್ರಿಕೆಟ್‌ ಮೈದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್‌ನ ಐದು ವಿಶ್ವಕಪ್ ಪಂದ್ಯಗಳು ನಡೆಯಲಿವೆ. ರಾಜ್ಯದ ಏಕೈಕ ಅಂತಾರಾಷ್ಟ್ರೀಯ ಕ್ರೀಡಾಂಗಣ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ

ಕರ್ನಾಟಕದಲ್ಲಿರುವ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ (M Chinnaswamy Stadium). ಭಾರತದ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂಗಳ ಪೈಕಿ ಉದ್ಯಾನ ನಗರಿಯ ಚಿನ್ನಸ್ವಾಮಿ ಮೈದಾನಕ್ಕೆ ಅಗ್ರಪಟ್ಟ. ಸದ್ಯ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್‌ (ICC ODI World Cup 2023) ಪಂದ್ಯಗಳನ್ನು ಆಯೋಜಿಸಲು ಈ ಕ್ರೀಡಾಂಗಣ ಸಜ್ಜಾಗುತ್ತಿದೆ. ವಿಶ್ವಕಪ್‌ನ ಒಟ್ಟು 5 ಪಂದ್ಯಗಳು ಇದೇ ಮೈದಾನದಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಮತ್ತಷ್ಟು ನವೀಕರಣ ಕಾರ್ಯ ನಡೆದಿವೆ.

ಭಾರತದ ಅತ್ಯಂತ ಸುಸಜ್ಜಿತ ಕ್ರಿಕೆಟ್‌ ಮೈದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಐದು ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಇದರಲ್ಲಿ ಒಂದು ಪಂದ್ಯದಲ್ಲಿ ಭಾರತ ಕೂಡಾ ಆಡಲಿದೆ. ಉಳಿದಂತೆ ಪಾಕಿಸ್ತಾನ, ನ್ಯೂಜಿಲ್ಯಾಂಡ್‌ ಮತ್ತು ಶ್ರೀಲಂಕಾ ತಂಡಗಳು ಎರಡು ಪಂದ್ಯಗಳನ್ನು ಉದ್ಯಾನ ನಗರಿಯಲ್ಲಿ ಆಡಿದರೆ, ಆಸ್ಟ್ರೇಲಿಯಾ, ನೆದರ್ಲೆಂಡ್ಸ್‌ ಹಾಗೂ ಇಂಗ್ಲೆಂಡ್‌ ತಂಡಗಳು ತಲಾ ಒಂದು ಪಂದ್ಯವನ್ನು ಬೆಂಗಳೂರಿನಲ್ಲಿ ಆಡುತ್ತಿವೆ.

ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯಗಳು

  • ಅಕ್ಟೋಬರ್​ 20 :ಪಾಕಿಸ್ತಾನ vs ಆಸ್ಟ್ರೇಲಿಯ
  • ಅಕ್ಟೋಬರ್​ 26 : ಇಂಗ್ಲೆಂಡ್ vs​ ಶ್ರೀಲಂಕಾ
  • ನವೆಂಬರ್ 4 : ನ್ಯೂಜಿಲ್ಯಾಂಡ್​ vs ಪಾಕಿಸ್ತಾನ ​
  • ನವೆಂಬರ್​ 9 : ನ್ಯೂಜಿಲ್ಯಾಂಡ್​ vs ಶ್ರೀಲಂಕಾ
  • ನವೆಂಬರ್​ 12 : ಭಾರತ vs ನೆದರ್ಲೆಂಡ್ಸ್

ಸರಿಸುಮಾರು 40 ಸಾವಿರ ಪ್ರೇಕ್ಷಕರಿಗೆ ಈ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ವೀಕ್ಷಿಸಲು ಅವಕಾಶವಿದೆ. ಈ ಮೈದಾನದ ಬೌಂಡರಿಗಳು ಸಣ್ಣದಾಗಿದ್ದು, ಬ್ಯಾಟರ್‌ಗಳ ಸ್ವರ್ಗ ಎಂದು ಬಿಂಬಿತವಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಪಿಚ್‌ ವೇಗಿಗಳಿಗೆ ನೆರವಾಗುತ್ತದೆ.

  • ಸ್ಟೇಡಿಎಂ ಹೆಸರು: ಎಂ ಚಿನ್ನಸ್ವಾಮಿ ಸ್ಟೇಡಿಎಂ
  • ಮತ್ತೊಂದು ಹೆಸರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ
  • ಸ್ಥಳ : ಬೆಂಗಳೂರು
  • ವಿಳಾಸ: ಕಬ್ಬನ್ ರಸ್ತೆ, ಶಿವಾಜಿ ನಗರ, ಬೆಂಗಳೂರು
  • ಸ್ಥಾಪನೆ :1969
  • ಪ್ರೇಕ್ಷಕರ ಸಾಮರ್ಥ್ಯ: 40,000
  • ಎಂಡ್ಸ್ : ಪೆವಿಲಿಯನ್ ಎಂಡ್, ಬಿಇಎಂಎಲ್ ಎಂಡ್
  • ಕ್ಯುರೇಟರ್ ಹೆಸರು: ನಾರಾಯಣರಾಜು

ದೇಶದಲ್ಲಿ ಚಿನ್ನಸ್ವಾಮಿ ಮೈದಾನ ವಿಶೇಷ

ಬೆಂಗಳೂರಿನ ಚನ್ನಸ್ವಾಮಿ ಮೈದಾನದಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾದರೂ, ಮಳೆ ನಿಂತ ಕೇವಲ 15ರಿಂದ 20 ನಿಮಿಷದಲ್ಲಿ ಮೈದಾನವು ಪಂದ್ಯ ನಡೆಸಲು ಸಜ್ಜಾಗುತ್ತದೆ. ಇಲ್ಲಿನ ಸಬ್‌ಏರ್‌ ವ್ಯವಸ್ಥೆ ಮತ್ತು ನಿರ್ವಾತ ಚಾಲಿತ(vacuum-powered) ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ಬೇಗನೆ ತೆರವಾಗುತ್ತದೆ. ಅಂದರೆ, ಸಾಮಾನ್ಯವಾಗಿ ಮೈದಾನಕ್ಕೆ ಬೀಳುವ ನೀರು ತೆರವಾಗಲು ತೆಗೆದುಕೊಳ್ಳುವ ಸಮಯಕ್ಕಿಂತ 36 ಪಟ್ಟು ವೇಗವಾಗಿ ಈ ವ್ಯವಸ್ಥೆಯು ನೀರನ್ನು ತೆರವುಗೊಳಿಸುತ್ತದೆ. ನಿಮಿಷಕ್ಕೆ ಬರೋಬ್ಬರಿ 10,000 ಲೀಟರ್‌ ನೀರನ್ನು ಈ ವಿಧಾನದ ಮೂಲಕ ಹೊರಹಾಕಬಹುದು.

ಮಳೆ ಬಂದರೆ ಚಿಂತೆಯಿಲ್ಲ

ಬೆಂಗಳೂರು ಕ್ರೀಡಾಂಗಣದ ಔಟ್‌ಫೀಲ್ಡ್ ಮಳೆ ನಿಂತ ಬೆನ್ನಲ್ಲೇ ತುಂಬಾ ವೇಗವಾಗಿ ಒಣಗುತ್ತದೆ. ಇದಕ್ಕೆ ಹೆಚ್ಚುವರಿ ಒಣಗಿಸುವ ಪ್ರಕ್ರಿಯೆ ಅಗತ್ಯವಿಲ್ಲ. ಮೈದಾನದ ಪಿಚ್ ಮತ್ತು ಬೌಲರ್‌ಗಳು ಓಡಿಬರುವ ಸ್ಥಳವನ್ನು ಉತ್ತಮ ಗುಣಮಟ್ಟದ ಕವರ್‌ಗಳಿಂದ ಮುಚ್ಚಲ್ಪಟ್ಟಿರುವುದರಿಂದ, ಈ ಪ್ರದೇಶ ಸಾಮಾನ್ಯವಾಗಿ ಶುಷ್ಕವಾಗಿರುತ್ತದೆ. ಈ ಪ್ರದೇಶಗಳಲ್ಲಿ ಮಳೆ ನಿಂತ ಬೆನ್ನಲೇ ಸ್ವಲ್ಪ ರೋಲಿಂಗ್ ಮಾಡಿದರೆ ಸಾಕಾಗುತ್ತದೆ. ಸದ್ಯ ದೇಶದಲ್ಲಿಯೇ ಎರಡು ಮೈದಾನಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಅದು ಚಿನ್ನಸ್ವಾಮಿ ಮೈದಾನವನ್ನು ಹೊರತುಪಡಿಸಿದರೆ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾತ್ರ. ಇಲ್ಲಿನ ಮೈದಾನಗಳ ಸಿಬ್ಬಂದಿಗೆ ಮಳೆ ನಿಂತ ಬಳಿಕ ಹೆಚ್ಚು ಕೆಲಸಗಳಿರುವುದಿಲ್ಲ.

ವಿಶ್ವದ ಮೊದಲ ಕ್ರೀಡಾಂಗಣ

ಸಬ್‌ ಏರ್‌ ಸಿಸ್ಟಮ್‌ ತಂತ್ರಜ್ಞಾನವನ್ನು ಅಳವಡಿಸಿದ ವಿಶ್ವದ ಮೊದಲ ಕ್ರಿಕೆಟ್‌ ಮೈದಾನ ಎಂಬ ಖ್ಯಾತಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಪಾತ್ರವಾಗಿದೆ. ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಮುಂದುವರೆದ ರಾಷ್ಟ್ರಗಳ ಗಾಲ್ಫ್ ಮೈದಾನಗಳಲ್ಲಿ ಇಂತಹ ಅತ್ಯಾಧುನಿಕ ವ್ಯವಸ್ಥೆ ಇವೆ. ಕ್ರಿಕೆಟ್‌ನಲ್ಲಿ, ಅದರಲ್ಲೂ ಭಾರತದಲ್ಲಿ ಈ ವ್ಯವಸ್ಥೆ ಮೊದಲ ಬಾರಿ ಅಳವಡಿಸಿದ ಹಿರಿಮೆ ಚಿನ್ನಸ್ವಾಮಿ ಮೈದಾನದ್ದು.

ಸೌರ ವಿದ್ಯುತ್‌ ವ್ಯವಸ್ಥೆ

ಸಬ್‌ ಏರ್‌ ಸಿಸ್ಟಮ್‌ ತಂತ್ರಜ್ಞಾನ ಮಾತ್ರವಲ್ಲದೆ ಇನ್ನೂ ಕೆಲವು ವಿಶೇಷ ವ್ಯವಸ್ಥೆಗಳು ಚಿನ್ನಸ್ವಾಮಿ ಮೈದಾನದಲ್ಲಿವೆ. ಸೌರ ವಿದ್ಯುತ್‌ ವ್ಯವಸ್ಥೆ, ಮಳೆ ನೀರಿನ ಕೊಯ್ಲು, ವಿಶೇಷ ಚೇತನರಿಗೆ ನೆರವಾಗಲು ವಿದ್ಯುತ್‌ ಚಾಲಿತ ಕುರ್ಚಿ ಒದಗಿಸುವ ಸೌಲಭ್ಯ ಕೂಡಾ ಇಲ್ಲಿದೆ.

ಸದ್ಯ ಬೆಂಗಳೂರು ಸೇರಿದಂತೆ ದೇಶದ ಹಲವು ಕ್ರಿಕೆಟ್‌ ಮೈದಾನಗಳಲ್ಲಿ ನವೀಕರಣ ಕಾರ್ಯ ನಡೆಯುತ್ತಿವೆ. ಬೆಂಗಳೂರಿನಲ್ಲೂ ನವೀಕರಣ ಕಾಮಗಾರಿ ನಡೆದಿದೆ. ವಿಶ್ವಕಪ್‌ ಪಂದ್ಯಗಳು ಸಮೀಪಿಸುತ್ತಿದ್ದು, ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವನ್ನು ಸಲವಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ