ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದಲ್ಲಿ ವಿಶ್ವಕಪ್ ನಿರ್ಣಾಯಕ ಪಂದ್ಯಗಳು; ಗಿನ್ನೆಸ್ ದಾಖಲೆ ಬರೆದ ಕ್ರೀಡಾಂಗಣದ ವೈಶಿಷ್ಟ್ಯ
Sep 24, 2023 08:05 AM IST
ನರೇಂದ್ರ ಮೋದಿ ಕ್ರೀಡಾಂಗಣ
- Narendra Modi Stadium: ವಿಶ್ವಕಪ್ ಪಂದ್ಯಾವಳಿಗೆ ಭಾರತದ ಕ್ರಿಕೆಟ್ ಮೈದಾಗಳು ಸಿದ್ಧಗೊಳ್ಳುತ್ತಿವೆ. ಇದೇ ವೇಳೆ ಟೂರ್ನಿಯ ಉದ್ಘಾಟನಾ ಮತ್ತು ಫೈನಲ್ ಪಂದ್ಯ ನಡೆಯಲಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಕೂಡಾ ಸಜ್ಜಾಗಿದೆ. ಈ ಮೈದಾನದ ವೈಶಿಷ್ಟ್ಯಗಳನ್ನೊಮ್ಮೆ ನೋಡೋಣ.
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂದು ಗುರುತಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು (Narendra Modi Stadium) ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ. ವಿಶೇಷವೆಂದರೆ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಪಂದ್ಯ ಎರಡೂ ಇದೇ ಮೈದಾನದಲ್ಲಿ ನಡೆಯಲಿದೆ. ಫೈನಲ್ ಸೇರಿದಂತೆ ಪಂದ್ಯಾವಳಿಯ ಒಟ್ಟು 5 ಪಂದ್ಯಾವಳಿಗೆ ಈ ಸುಂದರ ಹಾಗೂ ದೊಡ್ಡ ಕ್ರೀಡಾಂಗಣವು ಸಿದ್ಧಗೊಂಡಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸೇರಿದಂತೆ ಕೆಲವೊಂದು ನವೀಕರಣ ಕಾರ್ಯಗಳು ಕೂಡಾ ಇಲ್ಲಿ ನಡೆದಿದೆ. ಹಾಗಿದ್ರೆ ವಿಶ್ವಕಪ್ ಆರಂಭಕ್ಕೂ ಮುನ್ನ ಈ ಮೈದಾನದ ವಿಶೇಷತೆಗಳ ಕುರಿತು ನೋಡೋಣ.
ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳು
ಅಕ್ಟೋಬರ್ 5, 2023: ಇಂಗ್ಲೆಂಡ್ vs ನ್ಯೂಜಿಲೆಂಡ್
ಅಕ್ಟೋಬರ್14, 2023: ಭಾರತ vs ಪಾಕಿಸ್ತಾನ
ನವೆಂಬರ್ 4, 2023: ಇಂಗ್ಲೆಂಡ್ vs ಆಸ್ಟ್ರೇಲಿಯಾ
ನವೆಂಬರ್ 10, 2023: ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ
ನವೆಂಬರ್ 19, 2023: ಫೈನಲ್
ಹಲವು ಕಾರಣಗಳಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ವಿಶೇಷ. ಗುಜರಾತ್‌ನ ಅತಿ ದೊಡ್ಡ ನಗರವಾದ ಅಹಮದಾಬಾದ್‌ನಲ್ಲಿ ಸಬರಮತಿ ನದಿಯ ದಡದ ಸುಂದರ ಪ್ರದೇಶದಲ್ಲಿ ಈ ಸ್ಟೇಡಿಯಂಂ ನಿರ್ಮಾಣಗೊಂದಿದೆ. ಈಗಾಗಲೇ ಗಿನ್ನೆಸ್ ಪುಸ್ತಕದಲ್ಲೂ ಈ ಕ್ರೀಡಾಂಗಣದ ಹೆಸರು ದಾಖಲಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಹಾಗೂ ಭಾರತದ ಅತಿದೊಡ್ಡ ಹಾಗೂ ವಿಶೇಷ ವ್ಯವಸ್ಥೆಗಳಿರುವ ಕ್ರೀಡಾಂಗಣ ಎಂಬ ಹೆಗ್ಗುರುತು ಈ ಮೈದಾನದ್ದು. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.
- ಕ್ರೀಡಾಂಗಣದ ಈಗಿನ ಹೆಸರು: ನರೇಂದ್ರ ಮೋದಿ ಕ್ರೀಡಾಂಗಣ
- ಹಳೆಯ ಹೆಸರು: ಮೊಟೆರಾ ಸ್ಟೇಡಿಯಂ, ಸರ್ದಾರ್ ಪಟೇಲ್ ಸ್ಟೇಡಿಯಂ
- ಸ್ಥಾಪನೆ : 1982 (1983ರಲ್ಲಿ ಉದ್ಘಾಟನೆ)
- ನವೀಕರಣ: 2020
- ಸ್ಥಳ :ಅಹಮದಾಬಾದ್
- ಕ್ಯುರೇಟರ್ ಹೆಸರು: ಬಗೀರಾ ಠಾಕೂರ್
- ಪ್ರೇಕ್ಷಕರ ಸಾಮರ್ಥ್ಯ: 132,000
- ಪೆವಿಲಿಯನ್ ಎಂಡ್‌ಗಳು: ಅದಾನಿ ಪೆವಿಲಿಯನ್ ಎಂಡ್, ಜಿಎಂಡಿಸಿ ಎಂಡ್
ಕೆಲವು ವರ್ಷಗಳ ಹಿಂದಷ್ಟೇ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಂಡ ಈ ಕ್ರೀಡಾಂಗಣವನ್ನು, ಅದಕ್ಕೂ ಹಿಂದೆ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. 1983ರಲ್ಲಿ ಈ ಕ್ರೀಡಾಂಗಣವನ್ನು ಮೊಟೇರಾ ಸ್ಟೇಡಿಯಂ ಎಂಬ ಹೆಸರಿನಿಂದ ತೆರೆಯಲಾಯ್ತು. ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕ್ರೀಡಾಂಗಣವು ಆತಿಥ್ಯ ವಹಿಸಿತ್ತು. ಆ ಬಳಿಕ 2020ರಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ನವೀಕರಿಸಲಾಯ್ತು. ಅದರ ಬೆನ್ನಲ್ಲೇ, ಗುಜರಾತ್ ರಾಜ್ಯ ಕ್ರಿಕೆಟ್ ಸಂಸ್ಥೆಯು ಕ್ರೀಡಾಂಗಣದ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಳಿಸಿತು.
ನರೇಂದ್ರ ಮೋದಿ ಸ್ಟೇಡಿಯಂನ ವಿಶೇಷತೆಗಳೇನು?
1983ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ ಎಂದು ಉದ್ಘಾಟನೆಗೊಂಡ ಈ ಕ್ರೀಡಾಂಗಣವನ್ನು, ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ನವೀಕರಿಸಲಾಯ್ತು. ಆ ಬಳಿಕ 2020ರ ಫೆಬ್ರವರಿ ತಿಂಗಳಲ್ಲಿ ಮತ್ತೆ ತೆರೆಯಲಾಯಿತು. ಆ ಬಳಿಕ ಮೈದಾನದ ಹೆಸರನ್ನು ಬದಲಾಯಿಸಲಾಯ್ತು. ಪ್ರಸ್ತುತ ಗುಜರಾತ್ ಕ್ರಿಕೆಟ್ ಸಂಸ್ಥೆ(Gujarat Cricket Association) ಕ್ರೀಡಾಂಗಣದ ಜವಾಬ್ದಾರಿ ಹೊಂದಿದೆ. ಇಲ್ಲಿ ಟೆಸ್ಟ್, ಏಕದಿನ, ಟಿ20 ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
ಐಶಾರಾಮಿ ಸೌಲಭ್ಯ
ಮೈದಾನಕ್ಕೆ ಮೂರು ಪ್ರವೇಶ ದ್ವಾರಗಳಿದ್ದು, ಅನೇಕ ಐಷಾರಾಮಿ ಸೌಲಭ್ಯಗಳು ಕೂಡಾ ಇವೆ. 55 ಕೊಠಡಿಗಳ ಕ್ಲಬ್‌ಹೌಸ್, ಒಲಿಂಪಿಕ್ ಗಾತ್ರದ ಈಜುಕೊಳ, ನಾಲ್ಕು ಡ್ರೆಸ್ಸಿಂಗ್ ಕೊಠಡಿಗಳಿವೆ. ಫ್ಲಡ್‌ಲೈಟ್‌ಗಳ ಬದಲಿಗೆ ಮೈದಾನದ ಚಾವಣಿಯ ಮೇಲೆ ಗುಣಮಟ್ಟದ ಎಲ್‌ಇಡಿ ದೀಪಗಳ ವಿಶಿಷ್ಟವಾದ ಸೆಟ್ ಅಳವಡಿಸಲಾಗಿದೆ. ಅದನ್ನು ಚಾವಣಿಯ ಸುತ್ತಲೂ ಕಾಣಬಹುದು.
ಮೆಟ್ರೋ ಸಂಪರ್ಕ
ಈ ಕ್ರೀಡಾಂಗಣವು ಅಹಮದಾಬಾದ್ ಮೆಟ್ರೋ ಮಾರ್ಗಕ್ಕೆ ನೇರ ಸಂಪರ್ಕ ಹೊಂದಿದೆ. ರಸ್ತೆ ಸಂಚಾರವನ್ನು ಕಡಿಮೆ ಮಾಡಲು ಸ್ಕೈವಾಕ್ ಮೂಲಕ ಕ್ರೀಡಾಂಗಣಕ್ಕೆ ಮೆಟ್ರೋ ನಿಲ್ದಾಣದಿಂದ ಸಂಪರ್ಕ ಕಲ್ಪಿಸಲಾಗಿದೆ.
ಪ್ರೇಕ್ಷಕರ ಸಾಮರ್ಥ್ಯ
ಈ ಕ್ರೀಡಾಂಗಣದ ಪ್ರೇಕ್ಷಕರ ಸಾಮರ್ಥ್ಯ ಬರೋಬ್ಬರಿ 132,000. ಹೀಗಾಗಿ ಇದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಎಂಸಿಜಿಯು ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ, ನರೇಂದ್ರ ಮೋದಿ ಕ್ರೀಡಾಂಗಣವು ಅದನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ.
ಪಾರ್ಕಿಂಗ್ ವ್ಯವಸ್ಥೆ
ಕ್ರೀಡಾಂಗಣಕ್ಕೆ ಬರುವವರಿಗಾಗಿ 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಮೈದಾನಕ್ಕೆ ಬರುವವರಿಗಾಗಿ ಈ ವ್ಯವಸ್ಥೆ ಅಗತ್ಯ.
ಗಿನ್ನೆಸ್ ದಾಖಲೆ
ನರೇಂದ್ರ ಮೋದಿ ಕ್ರೀಡಾಂಗಣವು 2022ರ ಐಪಿಎಲ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದಾಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಯ್ತು. ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಆತಿಥ್ಯ ವಹಿಸಿದ ಹಿನ್ನೆಲೆಯಲ್ಲಿ ಈ ದಾಖಲೆ ನಿರ್ಮಾಣವಾಯ್ತು. ಆ ಪಂದ್ಯವನ್ನು ನೋಡಲು ಬರೋಬ್ಬರಿ 101,566 ಪ್ರೇಕ್ಷಕರು ಸೇರಿದ್ದರು.