ಮೊಹಮ್ಮದ್ ಶಮಿ ಸಾಧನೆಯ ಹಿಂದಿರುವ ಶಿಲ್ಪಿ ಯಾರು? ರಣಜಿ ಸ್ನೇಹಿತ ಶ್ರೀವತ್ಸ ಗೋಸ್ವಾಮಿ ಹೇಳಿದ ಸತ್ಯವಿದು
Nov 06, 2023 07:00 AM IST
ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 5 ವಿಕೆಟ್ ಪಡೆದಾಗ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದು ಹೀಗೆ
ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಕೇವಲ 3 ಪಂದ್ಯಗಳಿಂದ ಮೊಹಮ್ಮದ್ ಶಮಿ 14 ವಿಕೆಟ್ ಪಡೆದಿದ್ದಾರೆ. ಭಾರತದ ಪರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿರುವ ಶಮಿ ಅವರ ಹಿಂದಿರುವ ಶಿಲ್ಪಿಯ ಬಗ್ಗೆ ಚರ್ಚೆಯಾಗುತ್ತಿದೆ.
ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಟೀಂ ಇಂಡಿಯಾ (Team India) ಆಡಿರುವ 8 ಪಂದ್ಯಗಳಲ್ಲೂ ಅಮೋಘ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಭದ್ರವಾಗಿದೆ. ಈಗಾಗಲೇ ಸೆಮಿ ಫೈನಲ್‌ಗೆ ಪ್ರವೇಶ ಪಡೆದಿದ್ದರೂ ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ತನ್ನ ಎಂಟನೇ ಪಂದ್ಯದಲ್ಲಿ 243 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ 2 ವಿಕೆಟ್ ಪಡೆದಿದ್ದಾರೆ.
ಭಾರತ ಪರ ವೇಗಿ ಮೊಹಮ್ಮದ್ ಶಮಿ (Mohammed Shami) ಭಾರಿ ಸುದ್ದು ಮಾಡುತ್ತಿದ್ದಾರೆ. ಕೇವಲ ಮೂರು ಪಂದ್ಯಗಳಿಂದಲೇ ಬರೋಬ್ಬರಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಶಮಿ 14 ಇನ್ನಿಂಗ್ಸ್‌ಗಳಲ್ಲಿ 45 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಜಾಹೀರ್ ಖಾನ್ (44) ಮತ್ತು ಕನ್ನಡಿಗ ಜಾವಗಲ್ ಶ್ರೀನಾಥ್ (44) ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದಾರೆ.
ಈ ನಡುವೆ ವೇಗಿ ಮೊಹಮ್ಮದ್ ಶಮಿ ಅವರ ಯಶಸ್ಸಿನ ಹಿಂದಿನ ಶಿಲ್ಪಿ ಯಾರು, ಯಾರ ಮಾರ್ಗದರ್ಶನ ಅವರಿಗೆ ಸಿಕ್ಕಿತ್ತು ಎಂಬುದರ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಲೆ ಬಿಸಿ ಮಾಡಿಕೊಳ್ಳುತ್ತಿದ್ದ ಬೆನ್ನಲ್ಲೇ ಶಮಿ ಅವರ ಸ್ನೇಹಿತ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಪಶ್ಚಿಮ ಬಂಗಾಳ ರಣಜಿ ತಂಡದಲ್ಲಿರುವ ಮೊಹಮ್ಮದ್ ಶಮಿ ಅವರ ಸ್ನೇಹಿತ ಹಾಗೂ ಸಹ ಆಟಗಾರ ಶ್ರೀವತ್ಸ್ ಗೋಸ್ವಾಮಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇವತ್ತು ಶಮಿ ಏನಾಗಿದ್ದಾರೋ ಅದು ವಾಸಿ ಅಕ್ರಂ (Wasim Akram) ಅವರು ಕೊಟ್ಟಿರುವ ಉಡುಗೊರೆ ಎಂದು ಹೇಳಿದ್ದಾರೆ. ಆದರೆ ಶಮಿ ಅವರ ಯಶಸ್ಸಿನ ಹಿಂದೆ ಅವರದ್ದೇ ಪರಿಶ್ರಮವೂ ದೊಡ್ಡದಿದೆ ಅಂತಲೂ ತಿಳಿಸಿದ್ದಾರೆ.
ಶಮಿಗೆ ಬೌಲಿಂಗ್ ಕೌಶಲ್ಯಗಳನ್ನು ಕಲಿಸಿದ್ರಾ ವಾಸಿಂ ಅಕ್ರಮ್?
ಪಾಕಿಸ್ತಾನ ಮಾಜಿ ಕ್ರಿಕೆಟರ್ ವಾಸಿಂ ಅಕ್ರಮ್ ಅವರು ಶಮಿ ಅವರ ಮೇಲೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರ ಮಣಿಕಟ್ಟಿನ ಸ್ಥಾನವು ತುಂಬಾ ಚೆನ್ನಾಗಿತ್ತು. ಆದರೆ ವಾಸಿಂ ಭಾಯ್ ಅವರಿಗೆ ಚೆಂಡನ್ನು ಬಿಡುಗಡೆ ಮಾಡುವ ಕಲೆಯನ್ನು ಕಲಿಸಿದರು. ಆ ಸಮಯದಲ್ಲಿ ಶಮಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಲು ಹೆಚ್ಚು ಅವಕಾಶಗಳನ್ನು ಪಡೆದಿರಲಿಲ್ಲ. ಆದರೂ ಅವರು ಯಾವಾಗಲೂ ವಾಸಿಂ ಅಕ್ರಮ್ ಅವರ ಸುತ್ತ ಇರುತ್ತಿದ್ದರು. ಶಮಿ ಅವರು ಉತ್ತಮ ಬೌಲರ್ ಆಗಿ ರೂಪಗೊಳ್ಳಲು ವಾಸಿಂ ಅಕ್ರಮ್ ಅವರ ಪಾತ್ರವೂ ಇದೆ. ಆದರೆ ಈ ಸ್ಥಾನಕ್ಕೆ ಬರಲು ಅವರ ಶ್ರಮವೂ ಹೆಚ್ಚಿದೆ ಎಂದಿದ್ದಾರೆ.
ಹಾರ್ದಿಕ್ ಬದಲು ಸಿಕ್ಕ ಅವಕಾಶದಿಂದಲೇ ಗಮನ ಸೆಳೆಯುವಂಥ ಸಾಧನೆ
ಕುತೂಹಲಕಾರಿ ಅಂಶವೆಂದರೆ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಿರುವ ಟೀಂ ಇಂಡಿಯಾದ ಆಡುವ 11ರ ಬಳಗದಲ್ಲಿ ಶಮಿ ಮೊದಲು ಆಯ್ಕೆಯಾಗಿರಲಿಲ್ಲ. ಇವರನ್ನ ಆರನೇ ಬೌಲರ್ ಆಗಿ ಟೀಂ ಇಂಡಿಯಾದಲ್ಲಿ ಸೇರಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ, ರೋಹಿತ್ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲೂ ಇವರಿಗೆ ಆಡುವ 11ರ ಬಳಗದಲ್ಲಿ ಅವಕಾಶವೇ ಸಿಕ್ಕಿರಲಿಲ್ಲ. ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಶಮಿಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿತ್ತು. ಅವಕಾಶವನ್ನು ಸದುಪಯೋಗಪಡಿಸಿಕೊಂಡ ವೇಗಿ ಶಮಿ ಮೂರನೇ ಪಂದ್ಯದಲ್ಲಿ 14 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.