Pakistan Cricket Team: ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡಕ್ಕೆ ಇನ್ನೂ ಸಿಗದ ಭಾರತದ ವೀಸಾ; ಅಭ್ಯಾಸ ಪಂದ್ಯಕ್ಕೆ ಅಡ್ಡಿ ಸಾಧ್ಯತೆ
Sep 23, 2023 12:55 PM IST
ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್‌ನ ಸೂಪರ್ 4 ಸುತ್ತಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೌಲಿಂಗ್ ವೇಳೆ ಜಮಾನ್ ಖಾನ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು. ಶ್ರೀಲಂಕಾ ದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು.
ಐಸಿಸಿ ಏಕದಿನ ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇದ್ದರೂ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇನ್ನೂ ಭಾರತದ ವೀಸಾ ಸಿಕ್ಕಿಲ್ಲ. ಇದರಿಂದ ಆ ತಂಡ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಲು ಅಡ್ಡಿಯಾಗುವ ಸಾಧ್ಯತೆ ಇದೆ.
ಮುಂಬೈ: ಇಡೀ ಜಗತ್ತೇ ಅತ್ಯಂತು ಕಾತುರದಿಂದ ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2023) ಮಹಾ ಸಮರಕ್ಕೆ ಇನ್ನ ಕೆಲವೇ ಕೆಲವು ದಿನಗಳು ಬಾಕಿ ಇವೆ. ಟೂರ್ನಿಯಲ್ಲಿ ಭಾಗವಹಿಸಲಿರುವ 10 ತಂಡಗಳು ಭಾರತಕ್ಕೆ (India) ಬರಲು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. 2011ರ ಬಳಿಕ ಭಾರತದ ನೆಲದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದೆ.
ವಿಶ್ವಕಪ್‌ನ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29 ರಿಂದ ಪ್ರಾರಂಭವಾಗಲಿವೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ (Team India), ಆಸ್ಟ್ರೇಲಿಯಾ (Australia), ಇಂಗ್ಲೆಂಡ್ (England), ನ್ಯೂಜಿಲೆಂಡ್ (New zealand) ಹಾಗೂ ಪಾಕಿಸ್ತಾನ (Pakistan) ಕಪ್ ಗೆಲ್ಲಬಹುದಾದ ನೆಚ್ಚಿನ ತಂಡಗಳಾಗಿವೆ.
ಭಾರತದಂದ ವೀಸಾ ವಿಳಂಬ- ಪಾಕಿಸ್ತಾನ ಪ್ಲಾನ್ ಊಲ್ಟಾ ಪಲ್ಟಾ
ಭಾರತಕ್ಕೆ ಬರುವ ಎಲ್ಲಾ ತಂಡಗಳಿಗೆ ಈಗಾಗಲೇ ವೀಸಾಗಳನ್ನು ಅನುಮೋದಿಸಲಾಗಿದೆ. ಆದರೆ ನೆರೆಯ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತ ಸರ್ಕಾರದಿಂದ ಇನ್ನೂ ವೀಸಾ ಸಿಕ್ಕಿಲ್ಲ. ಹೀಗಾಗಿ ದುಬೈಗೆ ತೆರಳಿ ಆಟಗಾರರೊಂದಿಗೆ ಶಿಬಿರ ನಡೆಸುವ ಪಾಕಿಸ್ತಾನ ಕ್ರಿಕೆಟ್ ತಂಡದ ಯೋಜನೆ ರದ್ದಾಗಿದೆ. ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನಕ್ಕೆ ಇದು ದೊಡ್ಡ ಹೊಡೆತ ಅಂತಲೇ ಹೇಳಲಾಗುತ್ತಿದೆ.
ಇಎಸ್‌ಪಿಎನ್ ವರದಿ ಪ್ರಕಾರ, ಪಾಕಿಸ್ತಾನ ತಂಡದ ಮ್ಯಾನೇಜ್‌ಮೆಂಟ್ ತಮ್ಮ ಎಲ್ಲಾ ಆಟಗಾರರನ್ನು ವಿಶ್ವಕಪ್ ಪೂರ್ವ ಶಿಬಿರಕ್ಕಾಗಿ ದುಬೈಗೆ ಹೋಗಲು ಪ್ಲಾನ್ ಮಾಡಿತ್ತು. ಅಲ್ಲಿಂದ ಅವರೆಲ್ಲರೂ ಹೈದರಾಬಾದ್‌ಗೆ ಬರುವ ಯೋಜನೆ ಹಾಕಿಕೊಂಡಿದ್ದರು.
ಇದಕ್ಕಾಗಿ ಬಾಬರ್ ಅಜಮ್ ಅಂಡ್ ಟೀಂ ಯುಎಇಗೆ ಹೋಗಿ ಅಲ್ಲಿ ಕೆಲವು ದಿನಗಳವನ್ನು ಕಳೆದು ಭಾರತಕ್ಕೆ ಬರಬೇಕಿತ್ತು. ಆದರೆ ಈ ಅವರ ಪ್ಲಾನ್ ವಿಫಲವಾಗಿದೆ. ಏಕೆಂದರೆ ಭಾರತಕ್ಕೆ ಬರಲು ಪಾಕಿಸ್ತಾನ ತಂಡಕ್ಕೆ ಇನ್ನೂ ವೀಸಾ ನೀಡಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ವಾರದ ಹಿಂದೆಯೇ ವೀಸಾಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಇದಕ್ಕೆ ಭಾರತ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ.
ಸೆಪ್ಟೆಂಬರ್ 29ಕ್ಕೆ ಭಾರತಕ್ಕೆ ಆಗಮಿಸಲಿರುವ ಪಾಕ್ ತಂಡ
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇನ್ನೂ ವೀಸಾ ಸಿಗದ ಕಾರಣ ಪಾಕಿಸ್ತಾನ ಕ್ರಿಕೆಟ್ ತಂಡ ಲಾಹೋರ್‌ನಲ್ಲಿ ಉಳಿದುಕೊಂಡಿದ್ದು, ಸೆಪ್ಟೆಂಬರ್ 27 ರಂದು ದುಬೈಗೆ ತೆರಳಲಿದೆ. ಅಲ್ಲಿಂದ ಸೆಪ್ಟೆಂಬರ್ 29 ರಂದು ಹೈದರಾಬಾದ್‌ಗೆ ಬರಲಿದೆ. ಬಳಿಕ ನ್ಯೂಜಿಲೆಂಡ್ ವಿರುದ್ಧ ತನ್ನ ಅಭ್ಯಾಸ ಪಂದ್ಯವನ್ನು ಆಡಲಿದೆ. ತಮ್ಮ ತಂಡಕ್ಕೆ ಸಕಾಲದಲ್ಲಿ ವೀಸಾ ಸಿಗಲಿದೆ ಎಂದು ಪಾಕಿಸ್ತಾನದ ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ 10 ತಂಡಗಳ ಪೈಕಿ 9 ತಂಡಗಳಿಗೆ ಈಗಾಗಲೇ ವೀಸಾವನ್ನು ನೀಡಲಾಗಿದೆ. ಪಾಕಿಸ್ತಾನಕ್ಕೆ ಮಾತ್ರ ಇನ್ನೂ ವೀಸಾ ಸಿಕ್ಕಿಲ್ಲ. ವೀಸಾ ವಿಳಂಬ ಆ ತಂಡದ ಸಿದ್ಧತೆಗಳ ಮೇಲೆ ಪರಿಣಾಮ ಬೀರಬಹುದು. 2016ರಲ್ಲಿ ಟಿ20 ವಿಶ್ವಕಪ್ ಆಡಲು ಪಾಕಿಸ್ತಾನ ಭಾರತಕ್ಕೆ ಆಗಮಿಸಿತ್ತು. ಆದಾದ ಬಳಿಕ 2023ರ ವಿಶ್ವಕಪ್‌ಗಾಗಿ ಇಂಡಿಯಾಗೆ ಕಾಲಿಡುತ್ತಿದೆ. ಅಕ್ಟೋಬರ್ 5 ರಿಂದ ಬಹು ನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ 2023 ಆರಂಭವಾಗಲಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 6 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ಆಡಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.