ಬೇಸ್‌ಬಾಲ್ ಪ್ರಿಯರ ನಾಡಲ್ಲಿ ಟಿ20 ವಿಶ್ವಕಪ್ ಕಲರವ; ಅಮೆರಿಕದಲ್ಲಿ ಬೇರೂರುತ್ತಾ ಕ್ರಿಕೆಟ್?
May 29, 2024 06:20 AM IST
ಬೇಸ್‌ಬಾಲ್ ಪ್ರಿಯರ ನಾಡಲ್ಲಿ ಟಿ20 ವಿಶ್ವಕಪ್ ಕಲರವ; ಅಮೆರಿಕದಲ್ಲಿ ಬೇರೂರುತ್ತಾ ಕ್ರಿಕೆಟ್?
- ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕದಲ್ಲಿ ಟಿ20 ವಿಶ್ವಕಪ್ ಹಬ್ಬ ಕಳೆಗಟ್ಟಿದೆ. ಹತ್ತು ಹಲವು ಸವಾಲುಗಳನ್ನು ಹೊತ್ತು ಯುಎಸ್ ಜನರತ್ತ ಕ್ರಿಕೆಟ್ ಕ್ರೀಡೆ ಅಕರ್ಷಿಸುವಂತೆ ಮಾಡಲು ಐಸಿಸಿ ಸರ್ಕಸ್ ಮಾಡುತ್ತಿದೆ. ಇದು ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸ ಕ್ರಿಕೆಟ್ ಮಂಡಳಿಗಿದೆ. ಅದು ಹೇಗೆ? ಇಲ್ಲಿದೆ ವಿವರ…
ಬೇಸ್‌ಬಾಲ್, ಫುಟ್ಬಾಲ್‌ನಂಥ ಕ್ರೀಡೆಯೇ ಹೆಚ್ಚಾಗಿ ಆಡುವ ವಿಶ್ವದ ದೊಡ್ಡಣ್ಣನ ಮಡಿಲಲ್ಲಿ ಕ್ರಿಕೆಟ್ ಕಲರವಕ್ಕೆ ದಿನಗಣನೆ ಆರಂಭವಾಗಿದೆ. ಯುಎಸ್‌ಎ ನೆಲದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಭಿನ್ನ ಪ್ರಯತ್ನ ಮಾಡಿದ್ದು, ಒಂದಷ್ಟು ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಸಜ್ಜಾಗಿದೆ. 2024ರ ಟಿ20 ವಿಶ್ವಕಪ್ ಪಂದ್ಯಾವಳಿಗೆ (ICC T20 World Cup 2024) ಯುಎಸ್‌ಎ ಸಹ ಅತಿಥೇಯ ದೇಶ ಎಂಬುದಾಗಿ ಐಸಿಸಿ ಘೋಷಿಸಿದಾಗ, ಕ್ರಿಕೆಟ್ ಲೋಕಕ್ಕೆ ಅಚ್ಚರಿಯಾಗಿದ್ದು ಸುಳ್ಳಲ್ಲ. ಏಕೆಂದರೆ, ಅಮೆರಿಕದಲ್ಲಿ ಕ್ರಿಕೆಟ್ ಅಷ್ಟೊಂದು ಜನಪ್ರಿಯವಾಗಿಲ್ಲ. ಯುಎಸ್‌ಎ ಕ್ರಿಕೆಟ್ ತಂಡ ಇದ್ದರೂ, ಶ್ರೇಯಾಂಕದಲ್ಲಿ ಹಿಂದೆ ಬಿದ್ದಿದೆ. ಏನೇ ಇದ್ದರೂ ಯುಎಸ್‌ಎಯಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಿಯೇ ತೀರುವುದಾಗಿ ಐಸಿಸಿ ನಿರ್ಧರಿಸಿದೆ. ಅದಕ್ಕಾಗಿ ಕೋಟಿ ಕೋಟಿ ಹೂಡಿಕೆಯನ್ನೂ ಮಾಡಿದೆ. ಇದಕ್ಕೆ ಪ್ರತಿಯಾಗಿ ದೊಡ್ಡ ಮಟ್ಟದ ಲಾಭ ಪಡೆಯುವ ನಿರೀಕ್ಷೆಯೂ ಇದೆ.
ಕ್ರಿಕೆಟ್‌ಗೂ ಅಮೆರಿಕಕ್ಕೂ ನಂಟೇ ಇಲ್ಲ ಎಂದಲ್ಲ. 1800ರ ದಶಕದ ಮಧ್ಯಭಾಗದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕ್ರಿಕೆಟ್ ಮನ್ನಣೆ ಪಡೆದಿತ್ತು. ಆ ಬಳಿಕ, ಇತರ ಕ್ರೀಡೆಗಳ ಪ್ರಾಧಾನ್ಯತೆ ನಡುವೆ ಮೂಲೆಗುಂಪಾಯಿತು. ಕ್ರಿಕೆಟ್‌ನಲ್ಲಿ ವಿವಿಧ ದೇಶಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆ, ಅಮೆರಿಕದ ಪ್ರಾಬಲ್ಯ ಕುಗ್ಗಿತು. ಆದರೆ, ಜಾಗತಿಕವಾಗಿ ಅಮೆರಿಕ ಎಂದರೆ ಈಗಲೂ ದೊಡ್ಡಣ್ಣನೆ. ಇದೀಗ ಟಿ20 ವಿಶ್ವಕಪ್ ಮೂಲಕ ಸಪ್ತಸಾಗರದಾಚೆ ಕ್ರಿಕೆಟ್ ಆಟ ಶುರುವಾಗಿದೆ. ಉತ್ತರ ಅಮೆರಿಕದ ಮೈದಾನಗಳಲ್ಲಿ ಜಂಟಲ್‌ಮೆನ್ ಗೇಮ್‌ಗೆ ಅಂತಿಮ ಸಿದ್ಧತೆ ನಡೆಯುತ್ತಿದೆ.
ಅಮೆರಿಕದ ನ್ಯೂಯಾರ್ಕ್, ಡಲ್ಲಾಸ್ ಮತ್ತು ಲಾಡರ್‌ಹಿಲ್‌ನಲ್ಲಿ ಒಟ್ಟು 16 ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ನಾಕೌಟ್ ಸೇರಿದಂತೆ ವೆಸ್ಟ್ ಇಂಡೀಸ್‌ನಲ್ಲಿ 55 ಪಂದ್ಯಗಳು ನಡೆಯಲಿವೆ.
ಅಮೆರಿಕದಲ್ಲಿ 3 ಕೋಟಿಗೂ ಹೆಚ್ಚು ಅಭಿಮಾನಿಗಳು
ಜಾಗತಿಕವಾಗಿ ಕ್ರಿಕೆಟ್‌ಗೆ ಭಾರತವೇ ದೊಡ್ಡಣ್ಣ. ಜಂಟಲ್‌ಮೆನ್ ಗೇಮ್‌ಗೆ ಭಾರತವೇ ಅತಿ ದೊಡ್ಡ ಮಾರುಕಟ್ಟೆ. ಆದರೆ ಕ್ರೀಡೆಯ ಮೂಗುದಾರ ಇರುವುದು ಐಸಿಸಿ ಬಳಿ. ಇದೀಗ ಅಮೆರಿಕದ ಮಾರುಕಟ್ಟೆಯಲ್ಲಿ ದೊಡ್ಡ ಸಕ್ಸಸ್ ಕಾಣುವ ನಿರೀಕ್ಷೆ ಐಸಿಸಿಯದ್ದು. ವಿಶ್ವದಲ್ಲೇ ಮೂರನೇ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಅಮೆರಿಕದಲ್ಲಿ 30 ಮಿಲಿಯನ್‌ಗೂ (3 ಕೋಟಿ) ಹೆಚ್ಚು ಅಭಿಮಾನಿಗಳು ಕ್ರಿಕೆಟ್ ಆಟವನ್ನು ಅನುಸರಿಸುತ್ತಿದ್ದಾರೆ ಎಂದು ಐಸಿಸಿ ಹೇಳಿಕೊಂಡಿದೆ.
ಒಲಿಂಪಿಕ್ಸ್ ಯಶಸ್ಸಿಗೆ ಮೊದಲ ಹೆಜ್ಜೆ
2028ರ ಒಲಿಂಪಿಕ್ಸ್ ಅಮೆರಿಕದ ನಗರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದ್ದು, ಟಿ20 ಟೂರ್ನಿ ಕೂಡಾ ಒಲಿಂಪಿಕ್ಸ್‌ಗೆ ಮರಳಲಿದೆ. ಇದಕ್ಕೆ ಈ ಬಾರಿಯ ವಿಶ್ವಕಪ್ ಟೂರ್ನಿ ಪ್ರಮುಖ ಮೆಟ್ಟಿಲಾಗಲಿದೆ.
1860ರ ದಶಕದ ನಂತರ ಅಮೆರಿಕದಲ್ಲಿ ಬೇಸ್ ಬಾಲ್ ವೇಗವಾಗಿ ಜನಪ್ರಿಯತೆ ಪಡೆಯಿತು. ಅದಕ್ಕೂ ಮೊದಲು ಕ್ರಿಕೆಟ್ ಕ್ರೀಡೆಯನ್ನು ಅಮೆರಿಕದಾದ್ಯಂತ ವ್ಯಾಪಕವಾಗಿ ಆಡಲಾಗುತ್ತಿತ್ತು.
ಈ ಬಾರಿಯ ಟೂರ್ನಿಗೆ ಯುಎಸ್‌ಎ ತಂಡ ಕೂಡಾ ಪದಾರ್ಪಣೆ ಮಾಡುತ್ತಿದ್ದು, ಇದು ಅಮೆರಿಕನ್ನರ ಬೆಂಬಲ ಹೆಚ್ಚಿಸುವ ನಿರೀಕ್ಷೆ ಇದೆ. ಅಮೆರಿಕ ತಂಡದಲ್ಲಿ ಮುಖ್ಯವಾಗಿ ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಹಾಗೂ ಕೆರಿಬಿಯನ್ ಪರಂಪರೆಯ ಆಟಗಾರರೇ ತುಂಬಿದ್ದಾರೆ.
ಆತ್ಮವಿಶ್ವಾಸದಲ್ಲಿ ಐಸಿಸಿ
ಎಂಟು ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತ ಓಟಗಾರ ಉಸೇನ್ ಬೋಲ್ಟ್ ಅವರನ್ನು, ವಿಶ್ವಕಪ್ ರಾಯಭಾರಿಯಾಗಿ ಐಸಿಸಿ ನೇಮಿಸಿದೆ. ಇದರೊಂದಿಗೆ ಅಮೆರಿಕದ ಜನರಿಗೆ ಕ್ರಿಕೆಟ್ ಕ್ರೀಡೆಯನ್ನು ಹತ್ತಿರವಾಗಿಸಲು ಐಸಿಸಿ ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ನ್ಯೂಯಾರ್ಕ್‌ನಲ್ಲಿ ತಾತ್ಕಾಲಿಕ ಕ್ರೀಡಾಂಗಣ ಕೂಡಾ ಎದ್ದು ನಿಂತಿದ್ದು, ಅದನ್ನು ಬೋಲ್ಟ್ ಇತ್ತೀಚೆಗೆ ಉದ್ಘಾಟಿಸಿದ್ದಾರೆ. ಒಂದು ಪಂದ್ಯಾವಳಿಗಾಗಿ ಬರೋಬ್ಬರಿ 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿ ತಾತ್ಕಾಲಿಕ ಕ್ರೀಡಾಂಗಣ ನಿರ್ಮಿಸುತ್ತದೆ ಎಂದರೆ, ಇದರಿಂದ ಐಸಿಸಿ ಎಷ್ಟು ಲಾಭದ ನಿರೀಕ್ಷೆ ಇಟ್ಟುಕೊಂಡಿದೆ ಎಂಬುದನ್ನು ನೀವೇ ಲೆಕ್ಕ ಹಾಕಿ. ಅಷ್ಟೊಂದು ಜನಪ್ರಿಯತೆ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಮಂಡಳಿಗಿದೆ.
ಬೋಲ್ಟ್ ಬೋಲ್ಡ್ ಹೇಳಿಕೆ
“ಯುಎಸ್ಎಯಲ್ಲಿ ಕ್ರಿಕೆಟ್ ಬೆಳೆಯಬಹುದು ಎಂದು ಖಂಡಿತವಾಗಿಯೂ ಅನಿಸುತ್ತಿದೆ. ಒಂದು ದೇಶದಲ್ಲಿ ಆ ಕ್ರೀಡೆಯನ್ನು ಆಡಿದಾಗ ಮಾತ್ರ ಜನರು ಅದರತ್ತ ಆಕರ್ಷಿತರಾಗುತ್ತಾರೆ. ಕ್ರಮೇಣ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ” ಎಂದು ಬೋಲ್ಟ್ ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದರು.
ಯುಎಸ್ಎ ಕ್ರಿಕೆಟ್ ಮುಖ್ಯಸ್ಥರಾದ ವೇಣು ಪಿಸಿಕೆ ಕೂಡಾ, ಐಸಿಸಿ ಟೂರ್ನಿ ಖಂಡಿತಾ ಯಶಸ್ಸು ಪಡೆಯುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. “ಇಲ್ಲಿಯವರೆಗೆ ಕ್ರಿಕೆಟ್ ಮುಖ್ಯವಾಗಿ ವಲಸಿಗರ ಆಟವಾಗಿತ್ತು. ಆದರೆ ವಿಶ್ವಕಪ್ ಸಮಯದಲ್ಲಿ ಮಾರ್ಕೆಟಿಂಗ್ ಮತ್ತು ಪ್ರಚಾರ ಚಟುವಟಿಕೆ ಹೆಚ್ಚುತ್ತದೆ. ವಿಶ್ವಕಪ್ ಖಂಡಿತವಾಗಿಯೂ ಯುಎಸ್ಎಯಲ್ಲಿ ಆಟದ ವಿಸ್ತರಣೆಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಇದು ಖಂಡಿತವಾಗಿಯೂ ದೊಡ್ಡ ಸಮುದಾಯವನ್ನು ಆಕರ್ಷಿಸುತ್ತದೆ. ಏಕೆಂದರೆ ಯುಎಸ್ ಕ್ರೀಡಾಪ್ರಿಯರ ದೇಶವಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ವಿವಿಧ ನಗರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ ಸಾಕಷ್ಟಿದೆ. ಭಾರತ ಮಾತ್ರವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಪ್ರಮುಖ ಕ್ರಿಕೆಟ್ ತಂಡಗಳ ದೇಶದ ಜನರಿದ್ದಾರೆ. ಅವರಿಂದ ಕ್ರೀಡೆಗೆ ಬೆಂಬಲ ಸಿಕ್ಕೇ ಸಿಗಲಿದೆ. ಭಾರತ ಪಂದ್ಯಗಳಿಗೆ ಮೈದಾನದಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರುವುದು ಖಚಿತ. ಅಲ್ಲಿನ ಮೂಲನಿವಾಸಿಗಳ ಬೆಂಬಲ ಸಿಗದಿದ್ದರೂ, ಕ್ರಿಕೆಟ್ ಪ್ರಿಯ ವಲಸಿಗರ ಬೆಂಬಲ ಸಿಗಲಿದೆ. ಇದು ಐಸಿಸಿಗೂ ಗೊತ್ತಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)