ಭಾರತ ಆಡದಿದ್ದರೆ ನಯಾಪೈಸೆ ಸಿಗಲ್ಲ; ಹೈಬ್ರಿಡ್ ಮಾದರಿ ಒಪ್ಪಿಕೊಳ್ಳಿ, ಪಾಕಿಸ್ತಾನ ಇಲ್ಲದೆಯೂ ಚಾಂಪಿಯನ್ಸ್ ಟ್ರೋಫಿ ನಡೆಯುತ್ತೆ ಎಂದ ಐಸಿಸಿ
Nov 30, 2024 10:55 AM IST
ಪಾಕಿಸ್ತಾನ ಇಲ್ಲದೆಯೂ ಚಾಂಪಿಯನ್ಸ್ ಟ್ರೋಫಿ ನಡೆಯುತ್ತೆ ಎಂದ ಐಸಿಸಿ
- ಚಾಂಪಿಯನ್ಸ್ ಟ್ರೋಫಿ ಆಯೋಜನೆ ಸಂಬಂಧ ಪಿಸಿಬಿಗೆ ಐಸಿಸಿ ಅಂತಿಮ ಸಲಹೆ ನೀಡಿದೆ. ಒಂದಾ 'ಹೈಬ್ರಿಡ್ ಮಾದರಿ'ಯನ್ನು ಒಪ್ಪಿಕೊಳ್ಳಿ. ಇಲ್ಲವಾದಲ್ಲಿ ಪಾಕಿಸ್ತಾನ ಇಲ್ಲದೆಯೂ ಟೂರ್ನಿ ನಡೆಯುತ್ತದೆ. ಆದರೆ, ಭಾರತ ಆಡದಿದ್ದರೆ ಪ್ರಸಾರಕರಿಂದ ನಯಾಪೈಸೆಯೂ ಸಿಗಲ್ಲ ಎಂದು ಹೇಳಿದೆ.
ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲಿರುವ ಪಾಕಿಸ್ತಾನ, ಹೇಗಾದರೂ ಮಾಡಿ ಭಾರತ ತಂಡವನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಬೇಕು ಎಂಬ ಲೆಕ್ಕಾಚಾರ ಹಾಕುತ್ತಿದೆ. ಆದರೆ, ಭಾರತವಂತೂ ಪಾಕಿಸ್ತಾನಕ್ಕೆ ಪ್ರಯಾಣಿಸಲು ಎಳ್ಳಷ್ಟೂ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಪಾಕ್‌ಗೆ ಮತ್ತೆ ಮತ್ತೆ ಹಿನ್ನಡೆಯಾಗುತ್ತದೆ. ಅತ್ತ, ಉಭಯ ದೇಶಗಳಿಗೂ ಸಮಸ್ಯೆಯಾಗದಂತೆ 'ಹೈಬ್ರಿಡ್' ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆಗೆ ಒಪ್ಪಿಕೊಳ್ಳುವಂತೆ ಐಸಿಸಿ ಸಲಹೆ ನೀಡಿದೆ. ಭಾರತ ಕೂಡಾ ತಟಸ್ಥ ಸ್ಥಳದಲ್ಲಿ ತನ್ನ ಪಂದ್ಯಗಳನ್ನು ಆಡಲು ಒಪ್ಪಿಕೊಂಡಿದ್ದು, ಇದಕ್ಕೆ ಪಾಕ್ ಒಪ್ಪುತ್ತಲ್ಲ. ಹೀಗಾಗಿ ಐಸಿಸಿ ಖಡಕ್ ಸೂಚನೆ ನೀಡಿದೆ. “ಒಂದಾ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಿ. ಇಲ್ಲವಾದಲ್ಲಿ ಟೂರ್ನಿಯಿಂದ ಹೊರಗುಳಿಯಲು ಸಿದ್ಧರಾಗಿ” ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪಾಕಿಸ್ತಾನಕ್ಕೆ ಸೂಚಿಸಿದೆ.
ಮುಂದಿನ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಪಂದ್ಯಾವಳಿ ನಡೆಯಬೇಕಿದ್ದು, ವೇಳಾಪಟ್ಟಿಯನ್ನು ನಿರ್ಧರಿಸಲು ಶುಕ್ರವಾರ (ನವೆಂಬರ್ 29) ತುರ್ತು ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಭಾರತ ಕಡ್ಡಿ ಮುರಿದಂತೆ ಹೇಳಿದೆ. ಅತ್ತ ಪಾಕಿಸ್ತಾನ ಕೂಡಾ ಮತ್ತೊಮ್ಮೆ 'ಹೈಬ್ರಿಡ್' ಮಾದರಿಯನ್ನು ತಿರಸ್ಕರಿಸಿದೆ. ಹೀಗಾಗಿ ಒಮ್ಮತದ ನಿರ್ಧಾರ ಸಾಧ್ಯವಾಗಿಲ್ಲ. ಮುಂದುವರಿದ ಸಂಭೆ ಇಂದು (ನ.30) ನಡೆಯಲಿದೆ.
ಐಸಿಸಿ ಮಂಡಳಿಯ ಹೆಚ್ಚಿನ ಸದಸ್ಯರು ಪಾಕಿಸ್ತಾನದ ಪರಿಸ್ಥಿತಿಯ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಗೆ ಪ್ರಸ್ತುತ ಬಿಕ್ಕಟ್ಟಿಗೆ ಇರುವ ಏಕೈಕ ಸಮರ್ಥನೀಯ ಪರಿಹಾರವಾಗಿ 'ಹೈಬ್ರಿಡ್' ಮಾದರಿಯನ್ನು ಸ್ವೀಕರಿಸಲು ಸಲಹೆ ನೀಡಲಾಯಿತು. ಒಂದು ವೇಳೆ ಪಾಕಿಸ್ತಾನವು 'ಹೈಬ್ರಿಡ್' ಮಾದರಿಯನ್ನು ಅಳವಡಿಸಿಕೊಂಡರೆ, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಪಾಕ್‌ನಲ್ಲಿಯೇ ನಡೆಯಲಿದೆ. ಆದರೆ, ಭಾರತದ ಪಂದ್ಯಗಳು ಮಾತ್ರ ಯುಎಇಯಲ್ಲಿ ನಡೆಯಲಿದೆ.
ಭಾರತ ಆಡದಿದ್ದರೆ ಒಂದು ರೂಪಾಯಿಯೂ ಸಿಗಲ್ಲ
“ನೋಡಿ, ಭಾರತ ತಂಡ ಇಲ್ಲದ ಐಸಿಸಿ ಟೂರ್ನಿಗೆ ಯಾವುದೇ ಪ್ರಸಾರಕರು ನಯಾ ಪೈಸೆಯೂ ಕೊಡಲ್ಲ. ಇದು ಪಾಕಿಸ್ತಾನಕ್ಕೂ ತಿಳಿದಿದೆ. ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಗೆ ಒಪ್ಪಿದರೆ ಮಾತ್ರ ಶನಿವಾರ ಐಸಿಸಿ ಸಭೆ ನಡೆಯಲಿದೆ” ಎಂದು ಐಸಿಸಿ ಮಂಡಳಿಯ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ. ಒಂದು ವೇಳೆ ಪಿಸಿಬಿ ಒಪ್ಪದಿದ್ದರೆ, ಐಸಿಸಿ ಮಂಡಳಿಯು ಪಂದ್ಯಾವಳಿಯನ್ನು ಸಂಪೂರ್ಣವಾಗಿ ಬೇರೆ ದೇಶಕ್ಕೆ ಸ್ಥಳಾಂತರಿಸಬೇಕಾಗಬಹುದು. ಅದು ಪಾಕಿಸ್ತಾನವಿಲ್ಲದೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಭದ್ರತಾ ಕಾರಣಗಳಿಂದಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂಬ ಬಿಸಿಸಿಐ ನಿಲುವನ್ನು, ಶುಕ್ರವಾರ ಭಾರತೀಯ ವಿದೇಶಾಂಗ ಸಚಿವಾಲಯ ಕೂಡಾ ಪುನರುಚ್ಚರಿಸಿದೆ. “ಪಾಕ್‌ನಲ್ಲಿ ಭದ್ರತಾ ಕಾಳಜಿಗಳಿವೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ. ಆದ್ದರಿಂದ ಭಾರತ ತಂಡವು ಅಲ್ಲಿಗೆ ಹೋಗುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ” ಎಂದು ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.
ಐಸಿಸಿಗೆ ಭಾರಿ ನಷ್ಟ
ಪಾಕಿಸ್ತಾನದ ನಿಲುವನ್ನು ಸ್ಪಷ್ಟಪಡಿಸಲು ದುಬೈನಲ್ಲಿ ನಡೆದ ಸಭೆಯಲ್ಲಿ ನಖ್ವಿ ಭಾಗವಹಿಸಿದ್ದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು. ಅಮಿತ್ ಶಾ ಅವರು ಡಿಸೆಂಬರ್ 1ರಂದು ಐಸಿಸಿಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಒಂದು ವೇಳೆ ಪಂದ್ಯಾವಳಿ ಮರುನಿಗದಿಪಡಿಸಿದರೆ, ಪಿಸಿಬಿ ಆರು ಮಿಲಿಯನ್ ಡಾಲರ್ ಆತಿಥ್ಯ ಶುಲ್ಕವನ್ನು ಕಳೆದುಕೊಳ್ಳಲಿದೆ. ಇದು ಕ್ರಿಕೆಟ್ ಮಂಡಳಿಯ ವಾರ್ಷಿಕ ಆದಾಯದಲ್ಲಿ ಗಮನಾರ್ಹ ಕಡಿತಕ್ಕೆ ಕಾರಣವಾಗಬಹುದು. ಅತ್ತ 'ಹೈಬ್ರಿಡ್ ಮಾದರಿ'ಯನ್ನು ಜಾರಿಗೆ ತರದಿದ್ದರೆ, ಟೂರ್ನಿಯ ಅಧಿಕೃತ ಪ್ರಸಾರಕ ಸ್ಟಾರ್ ಸಂಸ್ಥೆಯೊಂದಿಗಿನ ಬಹು ಶತಕೋಟಿ ಡಾಲರ್ ಒಪ್ಪಂದದಲ್ಲಿ ವ್ಯತ್ಯಾಸವಾಗಬಹುದು. ಆಗ ಐಸಿಸಿ ಕೂಡ ತೊಂದರೆಗೆ ಸಿಲುಕುತ್ತದೆ.