logo
ಕನ್ನಡ ಸುದ್ದಿ  /  ಕ್ರಿಕೆಟ್  /  Icc World Cup 2023: ಏಕದಿನ ವಿಶ್ವಕಪ್ ಪಿಚ್‌ಗಳ ಮೇಲೆ ವಿಶೇಷ ಗಮನ ಹರಿಸಿದ ಐಸಿಸಿ; ಕಾರಣ ಇದೇ

ICC World Cup 2023: ಏಕದಿನ ವಿಶ್ವಕಪ್ ಪಿಚ್‌ಗಳ ಮೇಲೆ ವಿಶೇಷ ಗಮನ ಹರಿಸಿದ ಐಸಿಸಿ; ಕಾರಣ ಇದೇ

Raghavendra M Y HT Kannada

Sep 21, 2023 09:09 AM IST

google News

ಐಸಿಸಿ ವಿಶ್ವಕಪ್ ಪ್ರಮುಖ ಪಂದ್ಯಗಳು ನಡೆಯಲಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (ICC)

  • ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ-ಐಸಿಸಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ ಭಾರತದ ಸ್ಟೇಡಿಯಂಗಳ ಪಿಚ್‌ಗಳ ಮೇಲೆ ವಿಶೇಷ ಗಮನ ಹರಿಸಿದೆ. ಯಾಕೆ ಅನ್ನೋದನ್ನು ಇಲ್ಲಿ ತಿಳಿಯಿರಿ

ಐಸಿಸಿ ವಿಶ್ವಕಪ್ ಪ್ರಮುಖ ಪಂದ್ಯಗಳು ನಡೆಯಲಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (ICC)
ಐಸಿಸಿ ವಿಶ್ವಕಪ್ ಪ್ರಮುಖ ಪಂದ್ಯಗಳು ನಡೆಯಲಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (ICC)

ಮುಂಬೈ: ಐಸಿಸಿ ವಿಶ್ವಕಪ್ (ICC World Cup 2023) ಮಹಾ ಸಮರಕ್ಕೆ ಕೇವಲ 13 ದಿನಗಳು ಮಾತ್ರ ಬಾಕಿ ಇವೆ. ಬಹು ನಿರೀಕ್ಷಿತ ಮೆಗಾ ಟೂರ್ನಿಯಲ್ಲಿ ಭಾಗವಹಿಸಲು ಜಗತ್ತಿನ ಬಲಿಷ್ಠ ಕ್ರಿಕೆಟ್ ತಂಡಗಳು ಸಕಲ ರೀತಿಯಲ್ಲಿ ಸಜ್ಜಾಗುತ್ತಿವೆ. ಅದೇ ರೀತಿ ಪಂದ್ಯಗಳು ನಡೆಯಲಿರುವ ಸ್ಟೇಡಿಯಂಗಳು ಕೂಡ ಸಿದ್ಧವಾಗಿವೆ.

ಭಾರತವು (India) ಈ ಮೆಗಾ ಟೂರ್ನಮೆಂಟ್ ಅನ್ನು ಆಯೋಜಿಸಿದ್ದು, ಇದು ಅಕ್ಟೋಬರ್ 5 ರಿಂದ ವಿಶ್ವಕಪ್ ಪಂದ್ಯಗಳು ಆರಂಭವಾಗಲಿವವೆ. ಆದರೆ ಭಾರತ ಮತ್ತು ಏಷ್ಯಾದ ಇತರ ದೇಶಗಳ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿವೆ ಎಂಬ ಮಾತುಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ.

ಟಾಸ್ ನಂತರ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲ?

ಅದರಲ್ಲೂ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಿಮದ ಪ್ರಭಾವ ಭಾರತದಲ್ಲಿ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ವಿಶ್ವಕಪ್ ನಡೆಯುತ್ತಿರುವುದು ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಲಿದೆ ಎಂಬುದು ಹಲವು ಮಾಜಿ ಕ್ರಿಕೆಟರ್‌ಗಳ ಅಭಿಪ್ರಾಯವಾಗಿದೆ. ಟಾಸ್ ನಿರ್ಣಾಯಕವಾಗಲಿದ್ದು, ಟಾಸ್ ನಂತರ ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ತಂಡಗಳಿಗೆ ಗೆಲುವಿನ ಅವಕಾಶ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ.

ಪಿಚ್ ಕ್ಯುರೇಟರ್‌ಗಳಿಗೆ ಐಸಿಸಿ ಮಾರ್ಗಸೂಚಿಗಳೇನು?

ಅಲ್ಲದೆ ಈ ಬಾರಿಯ ವಿಶ್ವಕಪ್‌ನಲ್ಲಿ ವೇಗಿಗಳು ದೊಡ್ಡ ಮಟ್ಟದ ಪ್ರಭಾವ ಬೀರದಿರಬಹುದು ಎನ್ನಲಾಗುತ್ತಿದೆ. ಆದ್ದರಿಂದ ವಿಶ್ವಕಪ್ ಆತಿಥ್ಯ ವಹಿಸಿರುವ ಭಾರತದ ಸ್ಟೇಡಿಯಂಗಳ ಪಿಚ್‌ಗಳತ್ತ ಐಸಿಸಿ ವಿಶೇಷ ಗಮನ ಹರಿಸಿದೆ ಎಂದು ವರದಿಯಾಗಿದೆ. ಬೌಂಡರಿ ಅಂತರವನ್ನು ಹೆಚ್ಚಿಸಿ ಪಿಚ್‌ಗಳಲ್ಲಿ ಹೆಚ್ಚು ಹುಲ್ಲು ಇರುವಂತೆ ನೋಡಿಕೊಳ್ಳಲು ಕ್ಯುರೇಟರ್‌ಗಳಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಪ್ರಸ್ತುತ ಭಾರತದಲ್ಲಿನ ಕ್ರೀಡಾಂಗಣಗಳಲ್ಲಿ ಬೌಂಡರ್ ಗಡಿ ಅಂತರ 65 ಮೀಟರ್ ಇದೆ. ಈ ದೂರವನ್ನು ಐದು ಮೀಟರ್ ನಿಂದ 70 ಮೀಟರ್‌ಗೆ ಹೆಚ್ಚಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ-ಐಸಿಸಿ, ಕ್ಯುರೇಟರ್‌ಗಳಿಗೆ ತಿಳಿಸಿದೆ ಎಂದು ಹೇಳಲಾಗುತ್ತಿದೆ.

ಪಿಚ್‌ನಲ್ಲಿ ಹುಲ್ಲು ಹೆಚ್ಚಿಸುವ ಮೂಲಕ ಸ್ಪಿನ್ನರ್‌ಗಳಿಗೆ ಹಾಗೂ ವೇಗಿಗಳಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಅವಕಾಶವಿದೆ ಎಂದು ಐಸಿಸಿ ಈ ನಿರ್ಧಾರ ಕೈಗೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ಸೂಕ್ತವಾದ ಪಿಚ್‌ಗಳನ್ನು ಮಾಡಲು ಐಸಿಸಿ ಕ್ಯುರೇಟರ್‌ಗಳೊಂದಿಗೆ ಚರ್ಚಿಸುತ್ತಿದೆ ಎಂದು ವರದಿಯಾಗಿದೆ.

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಕ್ರೀಡಾಂಗಣದ ಔಟ್‌ಫೀಲ್ಡ್‌ನಲ್ಲಿ ಫಂಗಸ್ ಕಾಣಿಸಿಕೊಂಡಿತ್ತು. ಇದು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಪಂದ್ಯಗಳ ಆತಿಥ್ಯ ವಹಿಸುತ್ತಿರುವ ಕ್ರೀಡಾಂಗಣಗಳು ಇನ್ನೂ ಸಂಪೂರ್ಣವಾಗಿ ಸಿದ್ಧಗೊಳ್ಳದಿರುವ ಬಗ್ಗೆ ಐಸಿಸಿ ಅಸಮಾಧಾನ ವ್ಯಕ್ತಪಡಿಸಿತ್ತು. ಕೂಡಲೇ ಎಚ್ಚೆತ್ತ ಬಿಸಿಸಿಐ ಈ ಬಗ್ಗೆ ಗಮನ ಹರಿಸಿದೆ.

ಅಕ್ಟೋಬರ್ 5ಕ್ಕೆ ಐಸಿಸಿ ವಿಶ್ವಕಪ್ ಉದ್ಘಾಟನಾ ಪಂದ್ಯ

ಅಕ್ಟೋಬರ್ 5 ರಂದು ಐಸಿಸಿ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ (2019) ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಇದಕ್ಕೆ ಜಗತ್ತಿನ ಅತಿ ದೊಡ್ಡ ಸ್ಟೇಡಿಯಂಗಳಲ್ಲಿ ಒಂದಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ವೇದಿಕೆ ಕಲ್ಪಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ.

ಆ ಬಳಿಕ ಅಕ್ಟೋಬರ್ 11 ದೆಹಲಿಯಲ್ಲಿ ಅಫ್ಘಾನಿಸ್ತಾನ್ ವಿರುದ್ಧ, ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪೈಪೋಟಿ ನಡೆಸಲಿದೆ. ಗುಂಪು ಹಂತದಲ್ಲಿ ಟೀಂ ಇಂಡಿಯಾ 9 ಪಂದ್ಯಗಳನ್ನು ಆಡಲಿದೆ. ನವೆಂಬರ್ 12 ರಂದು ಗುಂಪು ಹಂತದ ತನ್ನ ಕೊನೆಯ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಆಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ