ನಾನು ಹೆಮ್ಮೆಯ ಭಾರತೀಯ ಮುಸ್ಲಿಂ; ಪಾಕಿಸ್ತಾನ ಟ್ರೋಲಿಗರ ಸಜ್ದಾ ವಿವಾದಕ್ಕೆ ಮೊಹಮ್ಮದ್ ಶಮಿ ತಿರುಗೇಟು
Dec 15, 2023 06:29 AM IST
ಸಜ್ದಾ ವಿವಾದಕ್ಕೆ ಮೊಹಮ್ಮದ್ ಶಮಿ ತಿರುಗೇಟು.
- Mohammed Shami: ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ಎದುರಿನ ಲೀಗ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ನಂತರ ಪ್ರಾರ್ಥನೆ ಮಾಡಿದ್ದಾರೆ ಎಂದು ಟ್ರೋಲ್ ಮಾಡಿದ್ದವರಿಗೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಿರುಗೇಟು ನೀಡಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami), ಮೈದಾನದಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದರು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಐದು ವಿಕೆಟ್ ಕಿತ್ತ ನಂತರ ಮೊಣಕಾಲೂರಿ ಕೆಳಗೆ ಎರಡೂ ಕೈಗಳನ್ನು ನೆಲಕ್ಕೆ ತಾಗಿಸಿದ್ದರು. ತಕ್ಷಣವೇ ಆ ಚಿತ್ರವನ್ನು ಸಜ್ದಾ (ಮುಸ್ಲಿಂ ಪ್ರಾರ್ಥನೆ) ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬಗೆಬಗೆಯ ಪೋಸ್ಟ್ ಹಾಕಿದ್ದರು.
ಆದರೀಗ ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ತನಗೆ ಕೇಳಿ ಬಂದ ಸಜ್ದಾ ಕುರಿತ ಪ್ರಶ್ನೆಗೆ ಶಮಿ ತಿರುಗೇಟು ನೀಡಿದ್ದಾರೆ. ಅಂದು ನೆಟ್ಸ್ನಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಂತೆ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅವರು ಈ ರೀತಿ ಮುಸ್ಲಿಂ ಪ್ರಾರ್ಥನೆ ಸಲ್ಲಿಸಿದ್ದರು ಎಂದು ಸುದ್ದಿ ಹರಡಲಾಗಿತ್ತು. ಇದೆಲ್ಲದಕ್ಕೂ ಉತ್ತರ ಕೊಟ್ಟಿರುವ ವೇಗಿ, ನಾನು ಹೆಮ್ಮೆಯ ಮುಸ್ಲಿಂ ಮತ್ತು ಭಾರತೀಯ ಎಂದು ಹೇಳಿದ್ದಾರೆ.
‘ನಾನು ಹೆಮ್ಮೆಯ ಭಾರತೀಯ ಮುಸ್ಲಿಂ’
ಈ ಬಗ್ಗೆ ಮಾತಾಡಿದ ಶಮಿ, ಟ್ರೋಲಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ. ನಾನು ಪ್ರಾರ್ಥನೆ ಮಾಡಬೇಕೆಂದು ಬಯಸಿದರೆ, ನನ್ನನ್ನು ಯಾರೂ ತಡೆಯುವುದಿಲ್ಲ. ನಾನು ಮುಸ್ಲಿಂ ಮತ್ತು ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಸ್ಟಾರ್ ವೇಗಿ ಸ್ಪಷ್ಟಪಡಿಸಿದ್ದಾರೆ. ಇದು ವಿವಿಧ ವಲಯಗಳಿಂದ ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಮತ್ತು ನಕಾರಾತ್ಮಕ ಟೀಕೆ ಸೃಷ್ಟಿಯಾದ ಕುರಿತ ಆಜ್ ತಕ್ ನಿರೂಪಕ ಕೇಳಿದ ಪ್ರಶ್ನೆಗೆ ಶಮಿ ಹೀಗೆ ಉತ್ತರಿಸಿದ್ದಾರೆ.
‘ನನಗೆ ಅನಿಸಿದರೆ ಪ್ರಾರ್ಥನೆ ಮಾಡುತ್ತೇನೆ’
ನಾನು ಪ್ರಾರ್ಥಿಸಲು ಬಯಸಿದರೆ, ಯಾರು ನನ್ನನ್ನು ತಡೆಯಬಹುದು? ನಾನು ಯಾರನ್ನೂ ಪ್ರಾರ್ಥಿಸುವುದನ್ನು ತಡೆಯುವುದಿಲ್ಲ. ನನಗೆ ಪ್ರಾರ್ಥನೆ ಮಾಡಬೇಕೆಂದು ಅನಿಸಿದರೆ ನಾನು ಪ್ರಾರ್ಥನೆ ಮಾಡುತ್ತೇನೆ. ಇದರಲ್ಲಿ ಸಮಸ್ಯೆ ಏನಿದೆ? ನಾನು ಮುಸ್ಲಿಂ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅದರಲ್ಲಿ ಸಮಸ್ಯೆ ಏನು? ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿ ಹೇಳಿದ್ದಾರೆ. ಅಲ್ಲದೆ, ತನ್ನ ಸ್ವಂತ ದೇಶದಲ್ಲಿ ಪ್ರಾರ್ಥನೆಗೆ ಅನುಮತಿ ಪಡೆಯುವ ಅಗತ್ಯವನ್ನು ಪ್ರಶ್ನಿಸಿದ್ದಾರೆ.
ನಿಮ್ಮ ಅನುಮತಿ ಪಡೆಯಬೇಕೇ?
ಮೈದಾನದಲ್ಲಿ ಯಾವುದೇ ಧಾರ್ಮಿಕ ಸನ್ನೆಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಶಮಿ, ಪ್ರಾರ್ಥನೆ ಸಲ್ಲಿಸಲು ಯಾರ ಬಳಿಯಾದರೂ ಅನುಮತಿ ಕೇಳಬೇಕು ಎಂದಾದರೆ ನಾನು ದೇಶದಲ್ಲಿ ಏಕೆ ಇರಬೇಕು ಎಂದು ಧಾರ್ಮಿಕ ಸ್ವಾತಂತ್ರ್ಯದ ತನ್ನ ಹಕ್ಕನ್ನು ಒತ್ತಿಹೇಳಿದ್ದಾರೆ. ನಾನು ಇದೇ ಮೊದಲ ಬಾರಿಗೆ 5 ವಿಕೆಟ್ ಪಡೆದು ಪ್ರಾರ್ಥನೆ ಮಾಡಿದ್ದೇನೆಯೇ? 5 ವಿಕೆಟ್ಗಳ ಗುಚ್ಛವನ್ನು ಅನೇಕ ಬಾರಿ ಪಡೆದಿದ್ದೇನೆ. ನಾನು ಎಲ್ಲಿ ಪ್ರಾರ್ಥಿಸಬೇಕು ಎಂಬುದನ್ನು ನೀವೇ ಹೇಳಿ. ನಾನು ಅಲ್ಲಿಗೇ ಹೋಗಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಮಂಡಿಯೂರಿದ್ದಕ್ಕೆ ಬೇರೆಯೇ ಅರ್ಥ ಕೊಟ್ಟಿದ್ದಾರೆ’
ಹೀಗೆ ಟ್ರೋಲ್ ಮಾಡುವ ಜನರು ಯಾರ ಪರವಾಗಿಯೂ ಇಲ್ಲ. ಅವರು ಕೇವಲ ಗದ್ದಲ ಸೃಷ್ಟಿಸಲು ಬಯಸುತ್ತಾರೆ. ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ನಾನು ಶೇ 200ರಷ್ಟು ತೀವ್ರತೆಯಿಂದ ಬೌಲಿಂಗ್ ಮಾಡಿದೆ. ಬೇಗನೇ 3 ವಿಕೆಟ್ ಪಡೆದ ನಂತರ ನಾನು 5 ವಿಕೆಟ್ ಕಬಳಿಸಬೇಕೆಂದು ಬಯಸಿದೆ. ಅದರಂತೆ ನಾನು 5 ವಿಕೆಟ್ಗಳ ಗುಚ್ಛ ಪಡೆದ ಖುಷಿಯಲ್ಲಿ ನೆಲಕ್ಕೆ ಕುಸಿದು ಮಂಡಿಯೂರಿದೆ. ಆದರೆ ಜನರು ಅದಕ್ಕೆ ಬೇರೆಯೇ ಅರ್ಥ ಕೊಟ್ಟಿದ್ದಾರೆ. ಈ ವಿಷಯಗಳನ್ನು ತಪ್ಪಾಗಿ ತಿಳಿಯುವ ಜನರಿಗೆ ಬೇರೆ ಯಾವುದೇ ಕೆಲಸ ಇಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ವಿಶ್ವಕಪ್ನಲ್ಲಿ ಶಮಿ ಪ್ರದರ್ಶನ
ಶಮಿ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್ಗಳೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲೀಗ್ನಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ, ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು 5 ವಿಕೆಟ್ಗಳ ಗುಚ್ಛ ಪಡೆದಿದ್ದರು. ಸೆಮೀಸ್ನಲ್ಲಿ 7 ವಿಕೆಟ್ ಪಡೆದರು. ಅಲ್ಲದೆ, ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದರು. ಅಲ್ಲದೆ, ವಿಶ್ವಕಪ್ ಇತಿಹಾಸದಲ್ಲಿ ವೇಗದ 50 ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.